Health: ಒಳಾಂಗಣ ವಾಯುಮಾಲಿನ್ಯದಿಂದಾಗಿ ಭಾರತೀಯರ ಜೀವಿತಾವಧಿಯಲ್ಲಿ ಐದು ವರ್ಷ ಕಡಿತಗೊಳ್ಳುತ್ತಿದೆ
Indoor Air Quality : ಮನೆ, ಕಚೇರಿಯ ಒಳಾಂಗಣದಲ್ಲಿ ಉಂಟಾಗುವ ಕಲುಷಿತ ಗಾಳಿಯಿಂದಾಗಿ ಭಾರತದಲ್ಲಿ ಪ್ರತೀ ವರ್ಷ 4.5 ಮಿಲಿಯನ್ ಜನರು ಅಸುನೀಗುತ್ತಿದ್ದಾರೆ. WFH ಶುರುವಾದಾಗಿನಿಂದ ಇದು ಇನ್ನಷ್ಟು ಆತಂಕಕ್ಕೆ ತಳ್ಳಿದೆ. ಒಟ್ಟಾರೆಯಾಗಿ ಮನುಕುಲಕ್ಕೊಂದು ಎಚ್ಚರಿಕೆಯ ಗಂಟೆ.
Indoor Air Quality : ನಾವು ಸಾಮಾನ್ಯವಾಗಿ ಹೊರವಾತಾವರಣದಲ್ಲಿರುವ ವಾಯುಮಾಲಿನ್ಯದ ಬಗ್ಗೆ ಸದಾ ಚರ್ಚಿಸುತ್ತೇವೆ. ಆ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಮಾಲಿನ್ಯವನ್ನು ನಿಯಂತ್ರಣದಲ್ಲಿಡುವಲ್ಲಿ ಉಪಾಯಗಳನ್ನು ಹುಡುಕುತ್ತಲೇ ಇರುತ್ತೇವೆ. ಆದರೆ ನಮ್ಮ ಮನೆಯ ಒಳಾಂಗಣದ ವಾಯುಶುದ್ಧತೆಯ ಬಗ್ಗೆ ನಮಗೆಷ್ಟು ಅರಿವಿದೆ? ನಾವು ಉಸಿರಾಡುವ ಗಾಳಿಯ ಶುದ್ಧತೆ, ಗುಣಮಟ್ಟದ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ? ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ವರದಿಯ ಪ್ರಕಾರ, ‘ಒಳಾಂಗಣ ವಾಯುಮಾಲಿನ್ಯದಿಂದಾಗಿ ಭಾರತೀಯರ ಜೀವಿತಾವಧಿಯು ಐದು ವರ್ಷ ಕಡಿತಗೊಳ್ಳುತ್ತಿದೆ. ಏಕೆಂದರೆ ಹೊರಾಂಗಣದ ಗಾಳಿಗಿಂತ ಹತ್ತುಪಟ್ಟು ಹೆಚ್ಚು ಒಳಾಂಗಣದ ಗಾಳಿಯು ಕಲುಷಿತದಿಂದ ಕೂಡಿರುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರಲ್ಲೂ ವರ್ಕ್ ಫ್ರಂ ಹೋಂ ವ್ಯವಸ್ಥೆಯಿಂದ ಈ ಸಮಸ್ಯೆ ತೀವ್ರತರ ಆರೋಗ್ಯ ತೊಂದರೆಗಳನ್ನು ಉಂಟುಮಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಜನರಿಗೆ ತಿಳಿವಳಿಕೆ ಇಲ್ಲ. ಆದರೂ ಕೆಲ ಸುರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಒಳಾಂಗಣದ ವಾಯುಗುಮಟ್ಟವನ್ನು ಸುಧಾರಿಸಬಹುದಾಗಿದೆ’ ಎಂದಿದೆ. ಈ ನಿಟ್ಟಿನಲ್ಲಿ ಇಲ್ಲಿ ಕೆಲ ಸಲಹೆಗಳನ್ನು ಗಮನಿಸಬಹುದು.
ಮನೆ ಮತ್ತು ಕಚೇರಿ ಒಳಾಂಗಣದಲ್ಲಿರುವ ಕಲುಷಿತ ಗಾಳಿಯಿಂದಾಗಿ ಭಾರತದಲ್ಲಿ ಪ್ರತೀ ವರ್ಷ 4.5 ಮಿಲಿಯನ್ ಜನರು ಅಸುನೀಗುತ್ತಿದ್ದಾರೆ. ಇದು ಒಟ್ಟಾರೆಯಾಗಿ ಮನುಕುಲಕ್ಕೊಂದು ಎಚ್ಚರಿಕೆಯ ಗಂಟೆಯಾಗಿದೆ. ಮನೆಗಳಿಂದ ಕೆಲಸ ಮಾಡುವ ಕ್ರಮ (WFH) ಶುರುವಾದಾಗಿನಿಂದ ಸುಮಾರು ಹದಿನೈದು ಗಂಟೆಗಳಿಗಿಂತ ಹೆಚ್ಚೇ ಮನೆಯೊಳಗೇ ಕಾಲ ಕಳೆಯುವುದು ಅನಿವಾರ್ಯವಾಗಿದೆ. ಹೀಗಿದ್ದಾಗ ಅಡುಗೆ ಮಾಡುವುದರಿಂದ ಉಂಟಾಗುವ ಹೊಗೆ, ಸಿಗರೇಟಿನ ಹೊಗೆ, ಧೂಪದ್ರವ್ಯಗಳ ಹೊಗೆ, ಬಣ್ಣ, ವಾರ್ನಿಷ್ ವಾಸನೆ, ಸೊಳ್ಳೆ ಬತ್ತಿಗಳ ಹೊಗೆ, ಶುಚಿಗೊಳಿಸುವ ರಾಸಾಯನಿಗಳ ವಾಸನೆ ಮಾಲಿನ್ಯಕಾರಕವಾದ ವಾತಾವರಣವನ್ನು ಸೃಷ್ಟಿಸುತ್ತಿವೆ. ಈ ಪರಿಣಾಮವಾಗಿ ಉಸಿರಾಟ, ಹೃದಯರಕ್ತನಾಳದ ತೊಂದರೆ ಮತ್ತು ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ.
ಇದನ್ನೂ ಓದಿ : Health: ಕೈ, ಕಾಲುಗಳು ಮರಗಟ್ಟುವ ಅನುಭವವಾಗುತ್ತಿದೆಯೇ? ಹಾಗಿದ್ದರೆ ಈ ಸಮಸ್ಯೆ ಇರಬಹುದು
ಹಾಗಾಗಿ ತಾಜಾಗಾಳಿಯು ಮನೆಯ ಎಲ್ಲ ಭಾಗಗಳಿಗೂ ಹರಡುವಂತೆ ಮನೆಯ ಕಟ್ಟಡ ವಿನ್ಯಾಸ ರೂಪಿಸುವುದು ಬಹುಮುಖ್ಯ ಅಂಶ. ಇನ್ನು ಪೀಠೋಪಕರಣ, ಹೊದಿಕೆ, ನೆಲಹಾಸು, ಪರದೆಗಳು ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಇವುಗಳನ್ನು ಆವರಿಸುವ ದೂಳಿನ ಕಣಗಳೇ ಉಸಿರಿನ ಮೂಲಕ ನಮ್ಮ ದೇಹವನ್ನು ಒಳಸೇರಿ ಅನೇಕ ರೀತಿಯ ಅಲರ್ಜಿಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಉತ್ತಮ ಗುಣಮಟ್ಟದ ಏರ್ ಪ್ಯೂರಿಫೈಯರ್ ಅಳವಡಿಸಿ, ವಾತಾವರಣದ ತೇವಾಂಶ ಕಾಪಾಡುವುದು ಅತ್ಯವಶ್ಯವಾಗಿದೆ. ಆಯಾ ಋತುಮಾನಕ್ಕೆ ಅನುಗುಣವಾಗಿ ತಾಪಮಾನ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.
1. ತಾಜಾ ಗಾಳಿಯು ಒಳಬರಲು ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು. ಹವಾನಿಯಂತ್ರಿಕ ಕೊಠಡಿಗಳಲ್ಲಿಯೂ ಇದೇ ಕ್ರಮವನ್ನು ಅನುಸರಿಸಬೇಕು. ಪ್ರತೀ ದಿನ ಕೆಲ ಗಂಟೆಗಳ ಕಾಲ ಬಾಗಿಲು ಕಿಟಕಿ ತೆರೆದಿಡಬೇಕು. ಸಿಗರೇಟ್, ಅಗರ್ಬತ್ತಿಗಳ ಹೊಗೆ ಹೊರಹೋಗಲು ಅನುಕೂಲವಾಗುವಂತೆ ಕಿಟಕಿಗಳು ಆದಷ್ಟು ತೆರೆದಿಡಬೇಕು.
2. ಮನೆಯೊಳಗಿನ ಆಮ್ಲಜನಕದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಅನೇಕ ಒಳಾಂಗಣ ಸಸ್ಯಗಳನ್ನು ಬೆಳೆಸಬಹುದು. ಇವುಗಳು ಕಡಿಮೆ ಅಥವಾ ಕೃತಕ ಬೆಳಕಿನಲ್ಲಿ ಬೆಳೆಯುತ್ತ ಮನೆಯ ವಾತಾವರಣವನ್ನು ತಾಜಾಗೊಳಿಸುವಲ್ಲಿ ಸಹಕಾರಿಯಾಗಿವೆ. ಸ್ನೇಕ್ ಪ್ಲ್ಯಾಂಟ್, ಫಿಕಸ್, ಸ್ಪೈಡರ್ ಪ್ಲ್ಯಾಂಟ್, ಅಗ್ಲೋನೆಮಾ, ಡೆಫೆನ್ಬಾಚಿಯಾ, ಅರೆಕಾ ಪಾಮ್ಸ್ ಮತ್ತು ಅಲೊವೆರಾದಂತ ಸಸ್ಯಗಳು ಗಾಳಿಯನ್ನು ಶುದ್ಧಗೊಳಿಸುತ್ತವೆ.
ಇದನ್ನೂ ಓದಿ : Oral Health: ಹಲ್ಲು ಹುಳುಕಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣವಾಗಿರಬಹುದು
3. ಬಾಳೆ, ಅರಳೀಮರ, ನೆಲ್ಲಿಕಾಯಿ, ತೆಂಗು, ಚಂದನ, ಕಮಲ, ಮಲ್ಲಿಗೆ, ಅಶೋಕ, ತುಳಸಿ, ಪಾರಿಜಾತದಂಥ ಮರಗಳನ್ನು ಹೆಚ್ಚೆಚ್ಚು ಬೆಳೆಸಬೇಕು. ಇವು ಕೊಡುವ ಫಲಗಳ ಹೊರತಾಗಿಯೂ ವಿಶೇಷ ಪ್ರಯೋಜಗಳು ಇವೆ. ಬ್ರಿಟಿಷ್ ಇಂಡಿಯಾದ ಅಧಿಕಾರಿ ಎಸ್.ಎಮ್. ಎಡ್ವರ್ಡ್ ಅವರ ದಾಖಲೆಯ ಪ್ರಕಾರ, ‘ಭಾರತದ ವಿವಿಧ ಭಾಗಗಳಲ್ಲಿ ಸುಮಾರು 78 ಜಾತಿಯ ಮರಗಳನ್ನು ಪೂಜಿಸಲಾಗುತ್ತದೆ. ಈ ಕಾರಣಕ್ಕಾಗಿ ಜನರಿಂದ ಅವು ಸಂರಕ್ಷಣೆಗೊಂಡಿವೆ. ರಸ್ತೆ ಬದಿಗಳಲ್ಲಿ, ಕಾಲುದಾರಿಗಳಲ್ಲಿ, ಹಿತ್ತಲಿನಲ್ಲಿ ಅಥವಾ ಮುಂಭಾಗದ ಅಂಗಳದಲ್ಲಿ ಮರಗಳನ್ನು ನೆಡುವುದರಿಂದ ಮಾಲಿನ್ಯಕಾರಕಗಳನ್ನು ಕಡಿಮೆಗೊಳಿಸಬಹುದಾಗಿದೆ. ಆಗ ವಾತಾವರಣವು ತಾಜಾತನದಿಂದ ಕೂಡಿರುತ್ತದೆ.’
Published On - 5:42 pm, Tue, 21 June 22