AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಗ್ರೇನ್ ಬಿಪಿಯನ್ನು ಹೆಚ್ಚಿಸುತ್ತದೆಯೇ? ಮಹಿಳೆಯರೇ… ಈ ವಿಷಯಗಳ ಬಗ್ಗೆ ಗಮನ ಕೊಡಿ

ಮೈಗ್ರೇನ್ ಅನ್ನು ಜನರು ಸಾಮಾನ್ಯವಾಗಿ ತೀವ್ರ ತಲೆನೋವು ಎಂದು ಕಡೆಗಣಿಸುತ್ತಾರೆ, ಆದರೆ ಈ ಸಮಸ್ಯೆಯು ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದರೆ ನಂಬುತ್ತೀರಾ? ಹೌದು, ಪದೇ ಪದೇ ಬರುವ ಮೈಗ್ರೇನ್ ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ, ಇದು ರಕ್ತದೊತ್ತಡವನ್ನು ಅಡ್ಡಿಪಡಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಹೃದಯ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಅಪಾಯವನ್ನು ಕೂಡ ಹೆಚ್ಚಿಸಬಹುದು. ಹಾಗಾಗಿ ಸಮಯೋಚಿತ ಎಚ್ಚರಿಕೆ ಮತ್ತು ಸರಿಯಾದ ಆರೈಕೆ ಬಹಳ ಮುಖ್ಯವಾಗುತ್ತದೆ.

ಮೈಗ್ರೇನ್ ಬಿಪಿಯನ್ನು ಹೆಚ್ಚಿಸುತ್ತದೆಯೇ? ಮಹಿಳೆಯರೇ... ಈ ವಿಷಯಗಳ ಬಗ್ಗೆ ಗಮನ ಕೊಡಿ
Migraine And High Bp RiskImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Feb 11, 2026 | 8:36 PM

Share

ಇತ್ತೀಚಿನ ದಿನಗಳಲ್ಲಿ, ಮೈಗ್ರೇನ್ (Migraine) ಮತ್ತು ಅಧಿಕ ರಕ್ತದೊತ್ತಡದ (High BP) ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿರುವುದನ್ನು ಗಮನಿಸಿರಬಹುದು. ಮೈಗ್ರೇನ್ ಒಂದು ನರವೈಜ್ಞಾನಿಕ ಸಮಸ್ಯೆಯಾಗಿದ್ದು, ತಲೆಯ ಒಂದು ಭಾಗದಲ್ಲಿ ನೋವು ಕಂಡುಬರುತ್ತದೆ. ಇದರ ಜೊತೆಗೆ, ವಾಕರಿಕೆ, ವಾಂತಿ, ತಲೆತಿರುಗುವಿಕೆ ಮತ್ತು ಬೆಳಕು ಮತ್ತು ಶಬ್ದಕ್ಕೆ ಸೂಕ್ಷ್ಮತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾರ್ಮೋನುಗಳ ಬದಲಾವಣೆಯಿಂದಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿ ಪದೇ ಪದೇ ಬರುವ ಮೈಗ್ರೇನ್ ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ, ರಕ್ತದೊತ್ತಡವನ್ನು ಅಡ್ಡಿಪಡಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಹೃದಯ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಅಪಾಯವನ್ನು ಕೂಡ ಹೆಚ್ಚಿಸಬಹುದು. ಮಾತ್ರವಲ್ಲ, ದೀರ್ಘಕಾಲದ ವರೆಗೆ ಮೈಗ್ರೇನ್‌ಗಳನ್ನು ನಿರ್ಲಕ್ಷಿಸುವುದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸಮಯೋಚಿತ ಎಚ್ಚರಿಕೆ ಮತ್ತು ಸರಿಯಾದ ಆರೈಕೆ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೈಗ್ರೇನ್ ಹೈಬಿಪಿ ಗೆ ಕಾರಣವಾಗುತ್ತದೆಯೇ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಮಹಿಳೆಯರಲ್ಲಿ ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡದ ನಡುವಿನ ನೇರ ಸಂಬಂಧವು ಹಾರ್ಮೋನುಗಳ ಬದಲಾವಣೆಗಳಿಗೆ ಸಂಬಂಧಿಸಿದೆ. ಮುಟ್ಟಿನ ಸಮಯ, ಗರ್ಭಾವಸ್ಥೆಯಲ್ಲಿ ಮತ್ತು ಋತುಬಂಧದ ಸಮಯದಲ್ಲಿ, ಈಸ್ಟ್ರೊಜೆನ್ ಹಾರ್ಮೋನ್‌ನಲ್ಲಿನ ಏರಿಳಿತಗಳು ಮೈಗ್ರೇನ್‌ಗೆ ಕಾರಣವಾಗಬಹುದು. ಮೈಗ್ರೇನ್ ಸಮಯದಲ್ಲಿ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಹಿಗ್ಗುತ್ತವೆ, ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗಬಹುದು. ಮೈಗ್ರೇನ್ ಬಹಳ ಸಮಯದವರೆಗೆ ಕಂಡುಬಂದರೆ, ಅದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇಅಲ್ಲ, ಮೈಗ್ರೇನ್ ನಿದ್ರೆಯ ಕೊರತೆ, ಮಾನಸಿಕ ಒತ್ತಡ ಮತ್ತು ಚಡಪಡಿಕೆಗೆ ಕಾರಣವಾಗಬಹುದು, ಇವು ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೋವು ನಿವಾರಣೆಗೆ ತೆಗೆದುಕೊಳ್ಳುವ ಕೆಲವು ಔಷಧಿಗಳು ಕೂಡ ರಕ್ತದೊತ್ತಡವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ವ್ಯತ್ಯಾಸವೇನು? ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ದೀರ್ಘಕಾಲದವರೆಗೆ ಮೈಗ್ರೇನ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಬೊಜ್ಜು, ಒತ್ತಡದ ಜೀವನಶೈಲಿ ಮತ್ತು ಅನಿಯಮಿತ ನಿದ್ರೆ ಕೂಡ ಈ ರೀತಿಯ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನ ಮಾಡುವ ಅಥವಾ ಬಹಳಷ್ಟು ಕೆಫೀನ್ ಸೇವಿಸುವ ಮಹಿಳೆಯರೂ ಸಹ ಅಪಾಯದಲ್ಲಿದ್ದಾರೆ. ಜೊತೆಗೆ ಕುಟುಂಬದ ಇತಿಹಾಸದಲ್ಲಿ ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದವಿದ್ದರೆ ಅಂತವರು ಬಹಳ ಎಚ್ಚರಿಕೆವಹಿಸುವುದು ಅಗತ್ಯ. ಅಷ್ಟೇಅಲ್ಲ, ಋತುಬಂಧ ಸಮೀಪಿಸುತ್ತಿರುವ ಮಹಿಳೆಯರಿಗೆ ಮೈಗ್ರೇನ್ ಜೊತೆಗೆ ಅಧಿಕ ರಕ್ತದೊತ್ತಡ ಬರುವ ಅಪಾಯ ಹೆಚ್ಚಾಗಿರಬಹುದು.

ತಡೆಗಟ್ಟುವುದು ಹೇಗೆ?

ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ 7- 8 ಗಂಟೆ ನಿದ್ರೆ ಮಾಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಉಪ್ಪು ಮತ್ತು ಕೆಫೀನ್ ಸೇವನೆಯನ್ನು ಸೀಮಿತಗೊಳಿಸಿ. ನಿಯಮಿತ ಯೋಗ, ನಡಿಗೆ ಮತ್ತು ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಮೈಗ್ರೇನ್‌ಗೆ ಕಾರಣವಾಗುವ ಆಹಾರಗಳನ್ನು ತಪ್ಪಿಸಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ನಿಮ್ಮ ರಕ್ತದೊತ್ತಡವನ್ನು ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳಿ. ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ