ಮೆನೋಪಾಸ್‌ಗೂ ಮುನ್ನವೇ ಶುರುವಾಗುತ್ತೆ ಪೆರಿಮೆನೋಪಾಸ್; ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳೇ ಮೊದಲ ಸೂಚನೆ!
ಋತುಬಂಧ ಅಥವಾ ಮೆನೋಪಾಸ್ ಬರುವ ಮುನ್ನ, ಪೆರಿಮೆನೋಪಾಸ್ ಕಂಡುಬರುತ್ತದೆ. ಹಾಗಾಗಿ ಮಹಿಳೆಯರು ಅದರ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಪೆರಿಮೆನೋಪಾಸ್ ಒಂದು ಸಹಜ ಜೀವನ ಹಂತವಾದರೂ ಅದರಿಂದ ಉಂಟಾಗುವ ಲಕ್ಷಣಗಳನ್ನು ಸಹಿಸಿಕೊಳ್ಳುವುದೇ ಪರಿಹಾರವಲ್ಲ. ಸರಿಯಾದ ಮಾಹಿತಿ, ಅಗತ್ಯ ತಪಾಸಣೆ, ಆರೋಗ್ಯಕರ ಜೀವನಶೈಲಿ ಮತ್ತು ವೈದ್ಯರ ಮಾರ್ಗದರ್ಶನದೊಂದಿಗೆ ಈ ಹಂತವನ್ನು ಹೆಚ್ಚು ಆರಾಮವಾಗಿ ನಿರ್ವಹಿಸಬಹುದು.

ಮಹಿಳೆಯರ ಜೀವನದಲ್ಲಿ ಮೆನೋಪಾಸ್ ಒಂದು ಸಹಜ ಹಾರ್ಮೋನಲ್ ಬದಲಾವಣೆ. ಆದರೆ ಮೆನೋಪಾಸ್ ಏಕಾಏಕಿ ಆರಂಭವಾಗುವುದಿಲ್ಲ. ಅದಕ್ಕೂ ಮೊದಲು ಅಂದರೆ ಹಲವು ವರ್ಷಗಳ ಮುನ್ನವೇ ದೇಹದಲ್ಲಿ ಹಾರ್ಮೋನ್‌ಗಳ ಏರಿಳಿತ ಶುರುವಾಗಬಹುದು. ಈ ಹಂತವನ್ನೇ ಪೆರಿಮೆನೋಪಾಸ್ (Perimenopause) ಎಂದು ಕರೆಯಲಾಗುತ್ತದೆ. ಪಿರಿಯಡ್ಸ್ ಅನಿಯಮಿತವಾಗುವುದು, ಹಾಟ್ ಫ್ಲ್ಯಾಶ್, ರಾತ್ರಿ ಬೆವರು, ನಿದ್ರೆಯ ಸಮಸ್ಯೆ, ಮೂಡ್ ಬದಲಾವಣೆ ಸೇರಿದಂತೆ ಹಲವು ಲಕ್ಷಣಗಳು ಈ ಅವಧಿಯಲ್ಲಿ ಕಾಣಿಸಿಕೊಳ್ಳಬಹುದು. ಬಹುತೇಕ ಮಹಿಳೆಯರು ಈ ಬದಲಾವಣೆಗಳನ್ನು ವಯಸ್ಸಿಗನುಗುಣವಾಗಿ ನಡೆಯುತ್ತಿರುವುದು ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರುಚಿ ಭಂಡಾರಿ ಅವರು ಹೇಳುವ ಪ್ರಕಾರ ಪೆರಿಮೆನೋಪಾಸ್ ಅವಧಿಯಲ್ಲಿ ದೇಹದಲ್ಲಿ ಹಲವು ಹಾರ್ಮೋನಲ್ ಬದಲಾವಣೆಗಳು ಸಂಭವಿಸುತ್ತವೆ. ಹಾಗಾಗಿ ಮಹಿಳೆಯರು ಈ ಬಗ್ಗೆ ತಿಳಿದು ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಪೆರಿಮೆನೋಪಾಸ್ ಎಂದರೇನು, ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪೆರಿಮೆನೋಪಾಸ್ ಎಂದರೇನು?
ಮೆನೋಪಾಸ್‌ಗೂ ಮುನ್ನ ಮಹಿಳೆಯ ದೇಹದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಮಟ್ಟದಲ್ಲಿ ಏರಿಳಿತ ಆರಂಭವಾಗುತ್ತದೆ. ಈ ಹಂತವನ್ನು ಪೆರಿಮೆನೋಪಾಸ್ ಎಂದು ಕರೆಯಲಾಗುತ್ತದೆ. ಮೆನೋಪಾಸ್ ಎಂದರೆ ಸತತ 12 ತಿಂಗಳ ಕಾಲ ಪಿರಿಯಡ್ಸ್ ಆಗದಿರುವ ಸ್ಥಿತಿ. ಅದಕ್ಕೂ ಮುನ್ನದ ಪರಿವರ್ತನಾ ಅವಧಿಯೇ ಪೆರಿಮೆನೋಪಾಸ್.
- ಪಿರಿಯಡ್ಸ್ ಸರಿಯಾಗಿ ಬರುವುದಿಲ್ಲ
- ಪೆರಿಮೆನೋಪಾಸ್‌ನ ಸಾಮಾನ್ಯ ಲಕ್ಷಣಗಳಲ್ಲಿ ಪಿರಿಯಡ್ಸ್‌ನಲ್ಲಿ ಬದಲಾವಣೆ ಪ್ರಮುಖವಾದದ್ದು.
- ಪಿರಿಯಡ್ಸ್ ಬೇಗ ಅಥವಾ ತಡವಾಗಿ ಬರಬಹುದು.
- ಎರಡು ಪಿರಿಯಡ್ಸ್‌ಗಳ ನಡುವೆ ಹೆಚ್ಚು ದಿನಗಳ ಅಂತರ ಇರಬಹುದು.
- ಕೆಲವು ತಿಂಗಳು ಪಿರಿಯಡ್ಸ್ ಆಗದಿರಬಹುದು.
- ಬ್ಲೀಡಿಂಗ್ ಪ್ರಮಾಣ ಕಡಿಮೆ ಅಥವಾ ಹೆಚ್ಚಾಗಬಹುದು.
- ಆದರೆ ಅನಿಯಮಿತ ಪಿರಿಯಡ್ಸ್ ಎಂದರೆ ಯಾವಾಗಲೂ ಪೆರಿಮೆನೋಪಾಸ್ ಎಂದರ್ಥವಲ್ಲ. ಬೇರೆ ಆರೋಗ್ಯ ಕಾರಣಗಳೂ ಇರಬಹುದು.
ಹಠಾತ್ ದೇಹದಲ್ಲಿ ಬಿಸಿ ಹೆಚ್ಚಾಗುವುದು
ಯಾವುದೇ ಕಾರಣವಿಲ್ಲದೆ ದೇಹದಲ್ಲಿ ಏಕಾಏಕಿ ಬಿಸಿ ಹೆಚ್ಚಾದಂತೆ ಅನಿಸುವುದು ಹಾಟ್ ಫ್ಲ್ಯಾಶ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಮುಖ, ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಬಿಸಿ ಹೆಚ್ಚಾಗಿ, ನಂತರ ಬೆವರು ಕಾಣಿಸಿಕೊಳ್ಳಬಹುದು.
ರಾತ್ರಿ ವೇಳೆ ಹೆಚ್ಚು ಬೆವರು
ಸಾಮನ್ಯವಾಗಿ ರಾತ್ರಿ ನಿದ್ರೆಯಲ್ಲಿರುವಾಗ ಅತಿಯಾಗಿ ಬೆವರುವುದು ಮತ್ತೊಂದು ಸಾಮಾನ್ಯ ಲಕ್ಷಣ. ಇದರಿಂದ ನಿದ್ರೆಯಲ್ಲಿ ಪದೇಪದೇ ಎಚ್ಚರವಾಗಿ ನಿದ್ರೆ ಸರಿಯಾಗಿ ಬಾರದಿರಬಹುದು ಮತ್ತು ಮರುದಿನ ದಣಿವು ಹೆಚ್ಚಾಗಬಹುದು.
ನಿದ್ರೆಯ ಸಮಸ್ಯೆ
ಪೆರಿಮೆನೋಪಾಸ್ ಅವಧಿಯಲ್ಲಿ ಕೆಲ ಮಹಿಳೆಯರಿಗೆ ನಿದ್ರೆ ಬರಲು ಕಷ್ಟವಾಗಬಹುದು. ಮಧ್ಯರಾತ್ರಿ ಎಚ್ಚರವಾಗುವುದು ಅಥವಾ ಬೇಗ ಎಚ್ಚರವಾಗುವುದು ಕೂಡ ಆಗಬಹುದು. ಹಾಟ್ ಫ್ಲ್ಯಾಶ್ ಮತ್ತು ರಾತ್ರಿ ಬೆವರು ಕೂಡ ನಿದ್ರೆಯ ಗುಣಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು. ಜೊತೆಗೆ ಮೂಡ್ ಬದಲಾವಣೆ ಮತ್ತು ಕಿರಿಕಿರಿ, ಆತಂಕ, ಮೂಡ್ ಸ್ವಿಂಗ್ ಕಾಣಿಸಿಕೊಳ್ಳಬಹುದು.
ಸದಾ ದಣಿದಿರುವ ಅನುಭವ
ಸಾಕಷ್ಟು ನಿದ್ರೆ ಮಾಡಿದರೂ ದೇಹದಲ್ಲಿ ಶಕ್ತಿ ಇಲ್ಲದಂತೆ ಅನಿಸುವುದು ಅಥವಾ ದಿನವಿಡೀ ಆಯಾಸವಾದ ಅನುಭವ ಕಂಡುಬರಬಹುದು. ನಿದ್ರೆಯ ಕೊರತೆ ಮತ್ತು ಹಾರ್ಮೋನಲ್ ಬದಲಾವಣೆಗಳು ಇದಕ್ಕೆ ಕಾರಣವಾಗಬಹುದು.
ಗಮನ ಕೇಂದ್ರೀಕರಿಸಲು ಕಷ್ಟವಾಗುವುದು
ಕೆಲ ಮಹಿಳೆಯರಲ್ಲಿ ಪೆರಿಮೆನೋಪಾಸ್ ಅವಧಿಯಲ್ಲಿ ಬ್ರೇನ್ ಫಾಗ್ ರೀತಿಯ ಅನುಭವವಾಗಬಹುದು. ಅಂದರೆ ಯಾವುದಾದರೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ವಿಷಯಗಳನ್ನು ನೆನಪಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಮುಂತಾದ ಬದಲಾವಣೆಗಳು ಕಾಣಿಸಬಹುದು.
ಯೋನಿ ಒಣತನ ಮತ್ತು ಅಸಹಜತೆ
ಈಸ್ಟ್ರೋಜನ್ ಮಟ್ಟದಲ್ಲಿ ಬದಲಾವಣೆ ಉಂಟಾದಾಗ ಕೆಲವು ಮಹಿಳೆಯರಲ್ಲಿ ಯೋನಿ ಒಣತನ ಕಂಡುಬರಬಹುದು. ಇದರಿಂದ ಅಸಹಜತೆ ಅಥವಾ ಲೈಂಗಿಕ ಸಂಪರ್ಕದ ಸಮಯದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಈ ಸಮಸ್ಯೆ ಕಂಡುಬಂದರೆ ಮುಜುಗರಪಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ತೂಕ ಮತ್ತು ದೇಹದಲ್ಲಿ ಬದಲಾವಣೆ:
ಪೆರಿಮೆನೋಪಾಸ್ ಸಮಯದಲ್ಲಿ ಹಾರ್ಮೋನಲ್ ಬದಲಾವಣೆಗಳ ಜೊತೆಗೆ ವಯಸ್ಸು, ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಮತ್ತು ನಿದ್ರೆಯಂತಹ ಅಂಶಗಳಿಂದ ತೂಕದಲ್ಲಿ ಬದಲಾವಣೆ ಕಾಣಿಸಬಹುದು.
ಹೃದಯ ಮತ್ತು ಮೂಳೆಗಳ ಆರೋಗ್ಯದ ಮೇಲೂ ಗಮನ ಇರಲಿ:
ಮಿಡ್‌ಲೈಫ್ ನಂತರ ಮಹಿಳೆಯರು ಕೇವಲ ಪಿರಿಯಡ್ಸ್ ಬದಲಾವಣೆಗಳತ್ತ ಮಾತ್ರ ಗಮನ ಕೊಡದೆ ಮೂಳೆಗಳ ಆರೋಗ್ಯ, ರಕ್ತದೊತ್ತಡ, ತೂಕ ಮತ್ತು ಹೃದಯದ ಆರೋಗ್ಯದ ಮೇಲೂ ಗಮನ ಹರಿಸಬೇಕು. ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಯುಕ್ತ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗಗಳಾಗಿವೆ. 35-40ರ ವಯಸ್ಸಿನಲ್ಲೇ ಆರೋಗ್ಯದ ಬಗ್ಗೆ ಜಾಗರೂಕರಾಗಿ.
ತುಂಬಾ ಅಧಿಕ ಬ್ಲೀಡಿಂಗ್, ಅಸಹಜ ರಕ್ತಸ್ರಾವ, ದೀರ್ಘಕಾಲ ಪಿರಿಯಡ್ಸ್ ನಿಂತ ನಂತರ ಮತ್ತೆ ರಕ್ತಸ್ರಾವವಾಗುವುದು ಅಥವಾ ಲಕ್ಷಣಗಳು ದಿನನಿತ್ಯದ ಜೀವನಕ್ಕೆ ತೀವ್ರ ತೊಂದರೆ ನೀಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಪೆರಿಮೆನೋಪಾಸ್ ಅಥವಾ ಮೆನೋಪಾಸ್‌ಗೆ ಸಂಬಂಧಿಸಿದ ಯಾವುದೇ ಲಕ್ಷಣಗಳಿಗೆ ವೈಯಕ್ತಿಕ ಚಿಕಿತ್ಸೆ ಪಡೆಯುವ ಮೊದಲು ಅರ್ಹ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




