ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕ: ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್ ಬಂಧನ!
ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ನಂಟು ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್ ಸೈಯದ್ ಅಬೂಬಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಫೋನ್‌ನಲ್ಲಿ ಪಿಸ್ತೂಲ್ ಫೋಟೋಗಳು ಮತ್ತು ಶಂಕಿತ ದಾಖಲೆಗಳು ಪತ್ತೆಯಾಗಿದ್ದು, ಕೇಂದ್ರೀಯ ತನಿಖಾ ಸಂಸ್ಥೆಗಳು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿವೆ. ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು
- ಪಾಕಿಸ್ತಾನ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕವಿದ್ದ ದೊಡ್ಡಬಳ್ಳಾಪುರದ ಎಸಿ ಮೆಕ್ಯಾನಿಕ್ ಬಂಧನವಾಗಿದೆ.
- ಇನ್‌ಸ್ಟಾಗ್ರಾಮ್ ಮೂಲಕ ವಿಡಿಯೋ, ಐಡಿ ಕಾರ್ಡ್ ಹಾಗೂ ಪಿಸ್ತೂಲ್ ಫೋಟೋ ಹಂಚಿಕೊಳ್ಳುತ್ತಿದ್ದನು.
- ತನಿಖಾ ಸಂಸ್ಥೆಗಳಿಂದ ಆರೋಪಿಯ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.
ಬೆಂಗಳೂರು ಗ್ರಾಮಾಂತರ, ಆಗಸ್ಟ್ 24: ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ಗಳು ಹಾಗೂ ಉಗ್ರರ ಜಾಲದೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್ (AC Mechanic) ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಎಸ್. ಸೈಯದ್ ಅಬೂಬಕರ್ (28) ಬಂಧಿತ ಆರೋಪಿ.
ಇನ್‌ಸ್ಟಾಗ್ರಾಮ್ ಮೂಲಕ ಬೆಳೆದಿದ್ದ ನಂಟು
ಕೇಂದ್ರೀಯ ತನಿಖಾ ಸಂಸ್ಥೆಗಳು ನೀಡಿದ ಗೌಪ್ಯ ಮಾಹಿತಿಯನ್ನಾಧರಿಸಿ ದೊಡ್ಡಬಳ್ಳಾಪುರ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ. ಆರೋಪಿ ಸೈಯದ್ ಅಬೂಬಕರ್ ಕಳೆದ ಎರಡು ವರ್ಷಗಳಿಂದ ಇನ್‌ಸ್ಟಾಗ್ರಾಮ್ (sayedabudakar313) ಮೂಲಕ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳು ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ಜಾಲದ ಸದಸ್ಯರೊಂದಿಗೆ (Hammadmemon333) ನಿರಂತರ ಸಂಪರ್ಕದಲ್ಲಿದ್ದನು.
ಅಲ್ಲದೆ, ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ವೀಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೇಟಸ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ ಈತ, ಅವರಿಗೆ ತನ್ನ ಗುರುತಿನ ಚೀಟಿ ಮತ್ತು ಪ್ರಮುಖ ವಿವರಗಳನ್ನು ಕಳುಹಿಸಿಕೊಟ್ಟಿದ್ದ ಎನ್ನಲಾಗಿದೆ. ಈತನ ಮೊಬೈಲ್ ಫೋನ್ ತಪಾಸಣೆ ನಡೆಸಿದಾಗ ಪಿಸ್ತೂಲ್‌ಗಳ ಹಲವಾರು ಫೋಟೋಗಳು ಪತ್ತೆಯಾಗಿವೆ.
ತೀವ್ರ ವಿಚಾರಣೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು
ಪೊಲೀಸರ ಮಾಹಿತಿಯಂತೆ, ಆರೋಪಿ ಸೈಯದ್ ಅಬೂಬಕರ್ ದೆಹಲಿ ಮತ್ತು ಕೇರಳದಲ್ಲಿ ತರಬೇತಿ ಪಡೆದಿದ್ದು, ಮಸೀದಿಯೊಂದರಲ್ಲಿ ಪಾಠ ಕೂಡ ಮಾಡುತ್ತಿದ್ದನು. ಈತ ಸ್ಥಳೀಯವಾಗಿ ನೆಟ್‌ವರ್ಕ್ ಬೆಳೆಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳು ಅಥವಾ ಅಕ್ರಮ ಹಣಕಾಸು ವಹಿವಾಟು ನಡೆಸಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ಕಾರ್ಯಾಚರಣೆ ವೇಳೆ ಪೊಲೀಸರು ಈತನಿಂದ ಹಲವು ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಶಂಕಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳ (Central Intelligence Bureau) ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜ್ಯದಲ್ಲಿ ಅಥವಾ ದೇಶದ ಇನ್ಯಾವುದೇ ಭಾಗದಲ್ಲಿ ಈತನಿಗೆ ಸಹಾಯ ಮಾಡಿದವರು ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಬಂಧಿತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಉಗ್ರವಾದಿ ಕೃತ್ಯಗಳ ವಿಭಾಗ 113(3) ಹಾಗೂ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಕೃತ್ಯಗಳ ವಿಭಾಗ 197(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




