ಮಳೆಗಾಲದಲ್ಲೇ ಕರ್ನಾಟಕದಲ್ಲಿ ಸುಡು ಬಿಸಿಲು: ಬೆಂಗಳೂರಿನಲ್ಲಿ ತಾಪಮಾನ ಏರಿಕೆ, ಸೆಪ್ಟೆಂಬರ್ ಉಷ್ಣಾಂಶ ಏರಿಕೆ
ಮಳೆಗಾಲದ ನಡುವೆಯೇ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಕಳೆದ ಒಂದು ವಾರದಿಂದ 31.7 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಎಲ್ ನಿನೊ ಪರಿಣಾಮ, ಮಳೆ ಮತ್ತು ಮೋಡಗಳ ಕೊರತೆಯಿಂದ ತಾಪಮಾನ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲೂ ಬಿಸಿಲು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 7: ಕರ್ನಾಟಕದಲ್ಲಿ ಮಳೆಗಾಲದಲ್ಲೇ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಮೂರು ವರ್ಷಗಳ ಬಳಿಕ 30 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಹವಾಮಾನ ತಜ್ಞ ಸಿಎಸ್ ಪಾಟೀಲ್ ಅವರು ನೀಡಿದ ಮಾಹಿತಿ ಪ್ರಕಾರ, ಮಳೆ ಮತ್ತು ಮೋಡಗಳ ಪ್ರಮಾಣ ಕಡಿಮೆಯಾಗಿರುವುದು ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. ಎಲ್ ನಿನೊ ಪರಿಣಾಮವೂ ವಾತಾವರಣದ ತಾಪಮಾನದಲ್ಲಿ ಏರಿಕೆಗೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ 31.7 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತಿದೆ. 2023ರ ಸೆಪ್ಟೆಂಬರ್‌ನಲ್ಲಿ 32.6 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಇದೀಗ ಮೂರು ವರ್ಷಗಳ ಬಳಿಕ ಸೆಪ್ಟೆಂಬರ್‌ನಲ್ಲಿ ಮತ್ತೆ 31.7 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಆಸುಪಾಸಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಮಳೆ, ಮೋಡಗಳ ಕೊರತೆಯಿಂದ ಬಿಸಿಲಿನ ಝಳ
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಮಳೆ, ಮೋಡ ಮತ್ತು ತಂಪಾದ ವಾತಾವರಣ ಕಂಡುಬರುತ್ತದೆ. ಆದರೆ ಈ ಬಾರಿ ಮಳೆಗಾಲದ ನಡುವೆಯೇ ಬಿಸಿಲಿನ ತಾಪ ಹೆಚ್ಚಾಗಿದೆ. ಮಳೆ ಮತ್ತು ಮೋಡಗಳ ಕೊರತೆಯಿಂದ ಸೂರ್ಯನ ಶಾಖ ನೇರವಾಗಿ ಹೆಚ್ಚಾಗುತ್ತಿರುವುದು ತಾಪಮಾನ ಏರಿಕೆಗೆ ಕಾರಣವಾಗಿದೆ.
ಬೆಂಗಳೂರಿಗೆ ಸಂಬಂಧಿಸಿದಂತೆ, ಭಾರತೀಯ ಹವಾಮಾನ ಇಲಾಖೆ ಕೂಡ ಗರಿಷ್ಠ 32 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ 16ರವರೆಗೆ ಇದೇ ವಾತಾವರಣ ಸಾಧ್ಯತೆ
ಮುಂದಿನ ದಿನಗಳಲ್ಲೂ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸೆಪ್ಟೆಂಬರ್ 16ರವರೆಗೆ ಇದೇ ರೀತಿಯ ವಾತಾವರಣ ಇರಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಒಳನಾಡಿನಲ್ಲೂ ತಾಪಮಾನ ಏರಿಕೆ
ಬೆಂಗಳೂರಿನ ಜೊತೆಗೆ ರಾಜ್ಯದ ಹಲವು ಭಾಗಗಳಲ್ಲೂ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳು, ಕಲಬುರಗಿ, ಉಡುಪಿ ಹಾಗೂ ಮಂಗಳೂರು ಭಾಗಗಳಲ್ಲಿ ತಾಪಮಾನ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಬಿಸಿಲಿನ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ ಈ ಬಾರಿ ಮಳೆ ಮತ್ತು ಬಿಸಿಲು ಎರಡೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಹವಾಮಾನದ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ಮುನ್ಸೂಚನೆ: ಮುಂಗಾರು ದುರ್ಬಲ, ಕರಾವಳಿ ಕರ್ನಾಟಕದಲ್ಲಿ ಸಾಧಾರಣೆ ಮಳೆ ಸಾಧ್ಯತೆ
ಸ್ವೆಟರ್ ಧರಿಸಿ ಮಳೆಯಿಂದ ರಕ್ಷಿಸಿಕೊಳ್ಳಬೇಕಿದ್ದ ಸೆಪ್ಟೆಂಬರ್‌ನಲ್ಲಿ, ಇದೀಗ ಸೆಕೆಯಿಂದ ತಪ್ಪಿಸಿಕೊಳ್ಳಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲೂ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಬಿಸಿಲು ಮುಂದುವರಿಯುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




