AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ವಿತರಣೆ: ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್​​ ಆರೋಪ ಮಾಡಿದ ಅಶೋಕ್​

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ-ಸಾಕ್ಸ್ ವಿತರಿಸಿರುವುದರ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಯೋಜನೆಯಲ್ಲೂ ಶೇ.40 ಕಮಿಷನ್ ಹೊಡೆಯಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾವೇರಿ 6ನೇ ಹಂತದ ಹೆಸರಿನಲ್ಲಿ 7,000 ಕೋಟಿ ಹೊಸ ಲೂಟಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಸೋರಿಕೆ ಮತ್ತು ಅಕ್ರಮ ಸಂಪರ್ಕ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದವರು ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ವಿತರಣೆ: ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್​​ ಆರೋಪ ಮಾಡಿದ ಅಶೋಕ್​
ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್​​ ಆರೋಪ ಮಾಡಿದ ಅಶೋಕ್​ Image Credit source: Tv9 Kannada
Anil Kalkere
| Edited By: |

Updated on: Sep 07, 2026 | 1:31 PM

Share

ಬೆಂಗಳೂರು, ಸೆಪ್ಟೆಂಬರ್​​ 07: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗಿರು ಶೂ-ಸಾಕ್ಸ್​​ಗಳು ಕಳಪೆ ಗುಣಮಟ್ಟದ್ದು ಎಂಬ ಆರೋಪದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್​​. ಅಶೋಕ್​​ ಗಂಭೀರ ಆರೋಪ ಮಾಡಿದ್ದಾರೆ. ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗಾಗಿ ನೀಡುವ ಉಚಿತ ಶೂ-ಸಾಕ್ಸ್ ಯೋಜನೆಯಲ್ಲೂ ಶೇ. 40 ಕಮಿಷನ್ ಹೊಡೆದು ಕಳಪೆ ಸಾಮಗ್ರಿ ಪೂರೈಸಿರುವುದು ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಿರ್ಲಜ್ಜತನಕ್ಕೆ ಮತ್ತೊಂದು ಉದಾಹರಣೆ ಎಂದವರು ಕಿಡಿ ಕಾರಿದ್ದಾರೆ.

‘ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಧೈರ್ಯವಿದೆಯೇ?’

ಧಾರವಾಡ, ರಾಯಚೂರು, ತುಮಕೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರ ವಿತರಿಸಿದ ಶೂಗಳ ಅಡಿಭಾಗ (ಸೋಲ್) ಕಿತ್ತುಹೋಗಿವೆ, ಹೊಲಿಗೆಗಳು ಬಿಟ್ಟುಕೊಂಡಿವೆ. ಒಂದು ವಾರವೂ ಬಾಳಿಕೆ ಬಾರದ ಇಂತಹ ಕಳಪೆ ಬೂಟುಗಳನ್ನು ವಿತರಿಸಿ ಮಕ್ಕಳ ಭಾವನೆಗಳ ಜೊತೆ ಆಟವಾಡುತ್ತಿದ್ದೀರಾ? ಮತ್ತೆ ಪೋಷಕರೇ ಕೈಯಿಂದ ಹಣ ಹಾಕಿ ಖರೀದಿಸಬೇಕಾದರೆ ಈ ಯೋಜನೆಯ ನೈಜ ಉದ್ದೇಶವೇನು? ಪೂರೈಕೆದಾರರ ಜೊತೆ ಶಾಮೀಲಾಗಿ, ಯಾವುದೇ ಗುಣಮಟ್ಟದ ಪರಿಶೀಲನೆ (Quality Check) ನಡೆಸದೆ ಕಳಪೆ ಶೂಗಳನ್ನು ಶಾಲೆಗಳಿಗೆ ಸರಬರಾಜು ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಧೈರ್ಯವಿದೆಯೇ? ಎಂದು ಅಶೋಕ್​​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ: ಒಂದೇ ವಾರದಲ್ಲಿ ಬಯಲಾಯ್ತು ಅಸಲಿ ಗುಣಮಟ್ಟ!

ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಮುಖ್ಯಮಂತ್ರಿಗಳೇ, ಸರ್ಕಾರಿ ಶಾಲೆಗಳ ಬಡ ಮಕ್ಕಳ ಪಾದರಕ್ಷೆಯಲ್ಲೂ ಕಮಿಷನ್ ಹೊಡೆಯುವ ದರಿದ್ರ ಸ್ಥಿತಿಗೆ ನಿಮ್ಮ ಸರ್ಕಾರ ತಲುಪಿರುವುದು ತೀರಾ ನಾಚಿಕೆಗೇಡು. ಕೂಡಲೇ ಈ ಕಳಪೆ ಶೂ ಪೂರೈಸಿದ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ, ತನಿಖೆ ನಡೆಸಿ, ಬಡ ಮಕ್ಕಳಿಗೆ ತಕ್ಷಣವೇ ಅತ್ಯುತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಕಾವೇರಿ 6ನೇ ಹಂತದ ಹೆಸರಿನಲ್ಲಿ 7,000 ಕೋಟಿ ಹೊಸ ಲೂಟಿಗೆ ಸಿದ್ಧತೆ

ಕಾವೇರಿ 6ನೇ ಹಂತದ ಹೆಸರಿನಲ್ಲಿ 7,000 ಕೋಟಿ ಹೊಸ ಲೂಟಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಸೋರಿಕೆ ಮತ್ತು ಅಕ್ರಮ ಸಂಪರ್ಕ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಹಳೆಯ ಜಾಲ ಸರಿಪಡಿಸದೆ 7,000 ಕೋಟಿ ಹೊಸ ಯೋಜನೆ ಏಕೆ? ಜನರಿಗೆ ನೀರಿನ ಸಮಸ್ಯೆಯಾದರೆ, ಸರ್ಕಾರಕ್ಕೆ ಕಮಿಷನ್ ಚಿಂತೆಯಾಗಿದೆ. ಮೊದಲು ಸೋರಿಕೆ ತಡೆಯಿರಿ, ಬಳಿಕ ಹೊಸ ಯೋಜನೆ ಮಾಡಿ ಎಂದವರು ಕಿಡಿಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us