ಬೆಂಗಳೂರು ಪಿಜಿಗಳಿಗೆ ಕನ್ನ ಹಾಕಿದ ಖದೀಮ: 12 ಮೊಬೈಲ್, 7 ಲ್ಯಾಪ್‌ಟಾಪ್ ಕದ್ದು ಎಸ್ಕೇಪ್!
ಬೆಂಗಳೂರಿನ ಮಂಡೂರು ಹಾಗೂ ಚಿಕ್ಕಗುಬ್ಬಿ ವ್ಯಾಪ್ತಿಯ ಪಿಜಿಗಳಲ್ಲಿ ಸರಣಿ ಕಳವು ಎಸಗುತ್ತಿದ್ದ ಆಂಧ್ರಪ್ರದೇಶ ಮೂಲದ ಬಿ. ಶಿವಾಜಿ ಎಂಬ ಆರೋಪಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂದಿತನಿಂದ ₹10 ಲಕ್ಷ ಮೌಲ್ಯದ 12 ಮೊಬೈಲ್ ಫೋನ್‌ಗಳು ಹಾಗೂ 7 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಮುಖ್ಯಾಂಶಗಳು
- ಬೆಂಗಳೂರಿನ ಪಿಜಿಗಳಲ್ಲಿ ಕಳವು ಮಾಡುತ್ತಿದ್ದ ಆಂಧ್ರ ಮೂಲದ ಖದೀಮ ಬಂಧನ.
- ಉದ್ಯೋಗಿಗಳ 12 ಮೊಬೈಲ್ ಹಾಗೂ 7 ಲ್ಯಾಪ್‌ಟಾಪ್ ಕದ್ದು ಪರಾರಿಯಾಗಿದ್ದ ಕಳ್ಳ.
- 10 ಲಕ್ಷ ರೂ. ಮೌಲ್ಯದ ಡಿವೈಸ್‌ಗಳನ್ನು ವಶಪಡಿಸಿಕೊಂಡ ಆವಲಹಳ್ಳಿ ಪೊಲೀಸ್ ಸಿಬ್ಬಂದಿ.
ಬೆಂಗಳೂರು, ಸೆಪ್ಟೆಂಬರ್ 27: ನಗರದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ನಿಲಯಗಳನ್ನು ಗುರಿಯಾಗಿಸಿಕೊಂಡು ಸಸ್ಯಾಹಾರ ಹಾಗೂ ತಂತ್ರಜ್ಞಾನ ಪ್ರಿಯ ಖದೀಮನೊಬ್ಬ ಭಾರಿ ಕಳವು ಎಸಗಿರುವ ಘಟನೆ ಮಂಡೂರು ಮತ್ತು ಚಿಕ್ಕಗುಬ್ಬಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪಿಜಿಯೊಳಗೆ ರಹಸ್ಯವಾಗಿ ನುಗ್ಗಿದ ಕಳ್ಳ, ಅಲ್ಲಿ ವಾಸವಿದ್ದ ಉದ್ಯೋಗಿಗಳ ಬರೋಬ್ಬರಿ 12 ಕಾಸ್ಟ್ಲಿ ಮೊಬೈಲ್ ಫೋನ್‌ಗಳು ಹಾಗೂ 7 ಲ್ಯಾಪ್‌ಟಾಪ್‌ಗಳನ್ನು ಎಗರಿಸಿ ಪರಾರಿಯಾಗಿದ್ದಾನೆ.
10 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತು ವಶ
ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಬಿ. ಶಿವಾಜಿ (24) ಎಂದು ಗುರುತಿಸಲಾಗಿದೆ. ಆವಲಹಳ್ಳಿ ಮತ್ತು ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಿಜಿಗಳಲ್ಲಿ ಸರಣಿ ಕಳವು ಮಾಡುತ್ತಿದ್ದ ಈತನನ್ನು ಆವಲಹಳ್ಳಿ ಪೊಲೀಸರು ತನಿಖೆ ನಡೆಸಿ ಸೆರೆಹಿಡಿದಿದ್ದಾರೆ. ಬಂದಿತನಿಂದ ಸುಮಾರು 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಲ್ಯಾಪ್‌ಟಾಪ್ ಹಾಗೂ ಐಫೋನ್ ಸೇರಿದಂತೆ ವಿವಿಧ ಅತ್ಯಾಧುನಿಕ ಮೊಬೈಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಗಿಲು ತೆರೆದ ಕೊಠಡಿಗಳೇ ಟಾರ್ಗೆಟ್
ಆರೋಪಿ ಶಿವಾಜಿ ತಡರಾತ್ರಿ ಅಥವಾ ಮುಂಜಾನೆ ವೇಳೆ ಪಿಜಿಗಳ ಆವರಣಕ್ಕೆ ನುಗ್ಗುತ್ತಿದ್ದ. ಬಾಗಿಲು ಪೂರ್ತಿ ಲಾಕ್ ಮಾಡದೆ ವಿಶ್ರಾಂತಿ ಪಡೆಯುತ್ತಿದ್ದ ಐಟಿ/ಬಿಟಿ ಉದ್ಯೋಗಿ ಹಾಗೂ ವಿದ್ಯಾರ್ಥಿಗಳ ಕೊಠಡಿಗಳನ್ನು ಗುರಿಯಾಗಿಸಿಕೊಂಡು ಕ್ಷಣಮಾತ್ರದಲ್ಲಿ ಟೇಬಲ್ ಮತ್ತು ಚಾರ್ಜಿಂಗ್‌ಗೆ ಹಾಕಿದ್ದ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಎಗರಿಸಿ ಪರಾರಿಯಾಗುತ್ತಿದ್ದ.
ಸಂತ್ರಸ್ತರು ನೀಡಿದ ಸರಣಿ ದೂರುಗಳ ಆಧಾರದ ಮೇಲೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಆವಲಹಳ್ಳಿ ಪೊಲೀಸರು ಆರೋಪಿಯ ಸುಳಿವು ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಪಿಜಿ ನಿವಾಸಿಗಳು ಕೊಠಡಿಯ ಬಾಗಿಲುಗಳನ್ನು ಸರಿಯಾಗಿ ಲಾಕ್ ಮಾಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




