ಬೆಂಗಳೂರು: ಸಂಪಿಗೆಹಳ್ಳಿ ಸೈಟ್‌ನಲ್ಲಿ ಮಹಿಳೆಯ ಶವ ಪತ್ತೆ ಕೇಸ್; ಪೊಲೀಸರು ಪ್ರಕರಣ ಭೇದಿಸಿದ್ದೇ ಒಂದು ರೋಚಕ ಕಥೆ!
ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಖಾಲಿ ಸೈಟ್ ಕ್ಲೀನ್ ಮಾಡುವಾಗ ಸಿಕ್ಕ ಕೊಳೆತ ಮಹಿಳೆಯ ಶವದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಶವದ ಬಳಿ ಸಿಕ್ಕ ಗಣೇಶ ಪೆಂಡೆಂಟ್ ನೀಡಿದ ಸುಳಿವಿನಿಂದ ಮೃತ ಮಹಿಳೆ ಒಡಿಶಾ ಮೂಲದ ಅನುಸೂಯ ಎಂದು ಪತ್ತೆಯಾಗಿದ್ದು, ಆಕೆಯ ಸಿಮ್ ಬಳಸಿ ನಾಟಕವಾಡುತ್ತಿದ್ದ ಪತಿ ಸಾಗರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು
- ಸಂಪಿಗೆಹಳ್ಳಿ ಸೈಟ್‌ನಲ್ಲಿ ಕೊಳೆತ ಮಹಿಳೆಯ ಶವ ಪತ್ತೆ ಪ್ರಕರಣ ಪೊಲೀಸರಿಂದ ಭೇದನೆ.
- ಶವದ ಬಳಿ ಸಿಕ್ಕ ಗಣೇಶ ಪೆಂಡೆಂಟ್ ಆಧಾರದಲ್ಲಿ ಕೊಲೆ ರಹಸ್ಯ ಪತ್ತೆ.
- ಪತ್ನಿಯನ್ನೇ ಕೊಲೆ ಮಾಡಿ ನಾಟಕವಾಡುತ್ತಿದ್ದ ಪತಿ ಸಾಗರ್ ವಶಕ್ಕೆ ಪಡೆದ ಪೊಲೀಸರು.
ಬೆಂಗಳೂರು, ಸೆಪ್ಟೆಂಬರ್ 26: ಜಿಬಿಎ ನಿಯಮದಂತೆ ಸಂಪಿಗೆಹಳ್ಳಿ ವ್ಯಾಪ್ತಿಯ ಖಾಲಿ ಸೈಟ್ ಕ್ಲೀನ್ ಮಾಡುವಾಗ ಮಹಿಳೆಯ ಕೊಳೆತ ಶವವೊಂದು ಪತ್ತೆಯಾಗಿತ್ತು. ಒಂದು ತಿಂಗಳ ಹಿಂದೆ ಕೌಟುಂಬಿಕ ಕಲಹಕ್ಕೆ ಬಲಿಯಾದ ಪತ್ನಿಯನ್ನು ಪತಿಯೇ ಕೊಂದು, ಹಾಸಿಗೆಯಲ್ಲಿ ಸುತ್ತಿ ಬಿಸಾಡಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ. ಆದರೆ ಸರಿಯಾಗಿ ಗುರುತು ಸಿಗದ, ಕೊಳೆತ ಶವವನ್ನಿಟ್ಟುಕೊಂಡು ಪೊಲೀಸರು ಕೊಲೆಗಾರನ ತನಕ ತಲುಪಿದ್ದೇ ಒಂದು ರೋಚಕ ಕಥೆ.
ಕೊಲೆ ಮಾಡಿ ಖಾಲಿ ಸೈಟ್‌ನಲ್ಲಿ ಶವ ಎಸೆದ ಪತಿ
ಒಡಿಶಾ ಮೂಲದ ಸಾಗರ್ ಚಂದ್ರ ರಾವತ್ (32), ತನ್ನ ಪತ್ನಿ ಅನುಸೂಯ (28) ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬೆಂಗಳೂರಿನಲ್ಲಿ ಪ್ರತ್ಯೇಕ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಹೀಗೆ ಆಗಸ್ಟ್ 11ರಂದು ಜಗಳ ವಿಕೋಪಕ್ಕೆ ತಿರುಗಿ, ಸಾಗರ್ ಪತ್ನಿಯನ್ನು ಕೊಲೆ ಮಾಡಿದ್ದ. ಕೊಲೆ ಮಾಡಿದ ನಂತರ ಮೂರು ದಿನಗಳವರೆಗೂ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಸಾಗರ್, ಕೊನೆಗೆ ಹಾಸಿಗೆಯಲ್ಲಿ ಸುತ್ತಿ, ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ಸೈಟ್‌ನಲ್ಲಿ ಎಸೆದು ಬಂದಿದ್ದ. ಅಷ್ಟೆ ಅಲ್ಲದೆ ಪ್ರತಿದಿನ ಅದೇ ಜಾಗಕ್ಕೆ ಹೋಗಿ ಶವವನ್ನು ಯಾರಾದರೂ ಪತ್ತೆ ಮಾಡಿದ್ದಾರೆಯೇ ಎಂದು ಕಣ್ಣಾಡಿಸಿಕೊಂಡು ಬರುತ್ತಿದ್ದ.
‘ಗಣೇಶ ಪೆಂಡೆಂಟ್’ ಒಂದೇ ತನಿಖೆಯ ಆಧಾರ
ಜಿಬಿಎ ನಿಯಮದಂತೆ ಖಾಲಿ ಸೈಟ್ ಮಾಲೀಕ ತನ್ನ ನೌಕರರನ್ನು ಕಳುಹಿಸಿ ಸೈಟ್ ಕ್ಲೀನ್ ಮಾಡಿಸಲು ಮುಂದಾದಾಗ ಶವ ಪತ್ತೆಯಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಬಂದರೂ ಸಂಪೂರ್ಣವಾಗಿ ಕೊಳೆತು ಕೇವಲ ಅಸ್ಥಿಪಂಜರದ ಸ್ಥಿತಿಯಲ್ಲಿದ್ದಿದ್ದರಿಂದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗಿತ್ತು. ಮಾನವೀಯತೆಯಿಂದ ಶವದ ಅಂತ್ಯಸಂಸ್ಕಾರ ನೆರವೇರಿಸಿದ್ದ ಸಂಪಿಗೆಹಳ್ಳಿ ಪೊಲೀಸರು, ಪ್ರಕರಣದ ತನಿಖೆ ಮುಂದುವರಿಸಿದ್ದರು. ಶವದ ಬಳಿ ಸಿಕ್ಕಿದ್ದ ಬಟ್ಟೆಯ ಟ್ಯಾಗ್, ಬಳೆಗಳು ಹಾಗೂ ಒಂದು ‘ಗಣೇಶ ಪೆಂಡೆಂಟ್’ ಪೊಲೀಸರಿಗೆ ಪ್ರಮುಖ ಆಧಾರವಾಗಿತ್ತು.
ಇದನ್ನೂ ಓದಿ ಜಿಬಿಎ ನಿಮಯದಿಂದ ಪತ್ತೆಯಾಯ್ತು ಕೊಲೆ ಪ್ರಕರಣ: ಸೈಟ್ ಕ್ಲೀನ್ ಮಾಡಲು ಹೋದಾಗ ಕೊಳೆತ ಶವ ಪತ್ತೆ!
ಬಟ್ಟೆಯ ಟ್ಯಾಗ್ ಆಧಾರದ ಮೇಲೆ ಮಾರ್ಟ್‌ನಿಂದ ಪಡೆದ ಮೊಬೈಲ್ ಸಂಖ್ಯೆ ಪಡೆದಿದ್ದರು. ಆದರೆ ಎಷ್ಟೇ ಪ್ರಯತ್ನಪಟ್ಟರೂ ಕಾಲ್ ಕನೆಕ್ಟ್ ಆಗುತ್ತಿರಲಿಲ್ಲ. ನಂತರ ಸಿಕ್ಕ ಗಣೇಶ ಪೆಂಡೆಂಟ್ ಒಡಿಶಾ ಮೂಲದವರು ಹೆಚ್ಚಾಗಿ ಧರಿಸುತ್ತಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ, ಪೊಲೀಸರು ಘಟನಾ ಸ್ಥಳದ 1.5 ಕಿ.ಮೀ ವ್ಯಾಪ್ತಿಯಲ್ಲಿ ವಾಸವಿದ್ದ ಒಡಿಶಾ ಮೂಲದವರ ಮಾಹಿತಿ ಕಲೆಹಾಕಿದ್ದರು. ಎಂ.ಎಸ್. ನಗರ ಸುತ್ತಮುತ್ತ 8 ಮಹಿಳೆಯರ ನಂಬರ್ ಪತ್ತೆಯಾಗಿದ್ದು, ಅದರಲ್ಲಿ ಅನುಸೂಯ ಎಂಬಾಕೆಯ ನಂಬರ್ಗೂ, ಮಾರ್ಟ್‌ನಿಂದ ದೊರೆತ ನಂಬರ್ಗೂ ಒಂದು ಅಂಕಿ ವ್ಯತ್ಯಾಸವಿತ್ತು.
ಪತ್ನಿ ಕಣ್ಮರೆಯಾಗಿದ್ದಾಳೆಂದಿದ್ದ ಆರೋಪಿ
ಸಂದೇಹಗೊಂಡ ಪೊಲೀಸರು ಟವರ್ ಡಂಪ್ ಮೂಲಕ ಅನುಸೂಯ ಅವರ ಪತಿ ಸಾಗರ್‌ನನ್ನು ಪತ್ತೆಹಚ್ಚಿ ವಿಚಾರಿಸಿದ್ದರು. ಪೊಲೀಸರು ಸಂಪರ್ಕಕ್ಕೆ ಬರುತ್ತಿದ್ದಂತೆ ಒಡಿಶಾಗೆ ಪರಾರಿಯಾಗಲು ಯತ್ನಿಸಿದ್ದ ಸಾಗರ್, ಪತ್ನಿ ಕಣ್ಮರೆಯಾಗಿದ್ದಾಳೆ, ಊರಿಗೆ ಹೋಗಿ ಆಕೆಯನ್ನು ಹುಡುಕಬೇಕು ಎಂದಿದ್ದ. ಕೊನೆಗೆ ಸಾಗರ್ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ದಂಪತಿಯ ಗಲಾಟೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆತನನ್ನು ವಶಕ್ಕೆ ಪಡೆದು ಕಠಿಣ ವಿಚಾರಣೆ ನಡೆಸಿದಾಗ ಪತ್ನಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:54 am, Sat, 26 September 26




