ಜಿಬಿಎ ನಿಮಯದಿಂದ ಪತ್ತೆಯಾಯ್ತು ಕೊಲೆ ಪ್ರಕರಣ: ಸೈಟ್ ಕ್ಲೀನ್ ಮಾಡಲು ಹೋದಾಗ ಕೊಳೆತ ಶವ ಪತ್ತೆ!
ಖಾಲಿ ಸೈಟ್ ಸ್ವಚ್ಛಗೊಳಿಸುವಂತೆ ಜಿಬಿಎ ನೀಡಿದ ನೋಟಿಸ್ ಭೀಕರ ಕೊಲೆ ಪ್ರಕರಣವನ್ನು ಬಯಲಿಗೆಳೆದಿದೆ. ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಸೈಟ್ ಕ್ಲೀನ್ ಮಾಡುವಾಗ ಹಾಸಿಗೆಯಲ್ಲಿ ಸುತ್ತಿ ಎಸೆಯಲಾಗಿದ್ದ ಒಡಿಶಾ ಮೂಲದ ಅನುಸೂಯ ಅವರ ಕೊಳೆತ ಶವ ಪತ್ತೆಯಾಗಿದೆ. ಬಟ್ಟೆಯ ಮೇಲಿದ್ದ ವಿಶಾಲ್ ಮಾರ್ಟ್ ಟ್ಯಾಗ್ ಆಧಾರದ ಮೇಲೆ ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು, ಕೊಲೆ ಮಾಡಿದ ಆರೋಪಿ ಪತಿ ಸಾಗರ್ ಚಂದ್ರ ರಾವತ್‌ನನ್ನು ಬಂಧಿಸಿದ್ದಾರೆ.

ಮುಖ್ಯಾಂಶಗಳು
- ಜಿಬಿಎ ನೋಟಿಸ್‌ನಿಂದ ಸೈಟ್ ಕ್ಲೀನ್ ಮಾಡುವಾಗ ಪತ್ತೆಯಾಯ್ತು ಮಹಿಳೆಯ ಕೊಳೆತ ಶವ.
- ಹಣಕಾಸಿನ ಗಲಾಟೆಯಿಂದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಒಡಿಶಾ ಮೂಲದ ಪತಿ.
- ಬಟ್ಟೆಯ ಮೇಲಿದ್ದ ಮಾರ್ಟ್ ಟ್ಯಾಗ್‌ನಿಂದ ಆರೋಪಿ ಪತ್ತೆಹಚ್ಚಿದ ಸಂಪಿಗೆಹಳ್ಳಿ ಪೊಲೀಸರು.
ಬೆಂಗಳೂರು, ಸೆಪ್ಟೆಂಬರ್ 25: ಖಾಲಿ ಜಾಗಗಳನ್ನು ಸ್ವಚ್ಛವಾಗಿಡದಿದ್ದರೆ ದಂಡ ವಿಧಿಸುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೀಡಿದ ನೋಟಿಸ್, ವಾರಗಳಿಂದ ಮುಚ್ಚಿಹೋಗಿದ್ದ ಭೀಕರ ಕೊಲೆ ಪ್ರಕರಣವೊಂದನ್ನು ಹೊರಗೆಳೆದಿದೆ. ಜಿಬಿಎ ನಿಯಮಕ್ಕೆ ಹೆದರಿ ಮಾಲೀಕರು ಸೈಟ್ ಕ್ಲೀನ್ ಮಾಡಿಸಲು ಹೋದಾಗ, ಹಾಸಿಗೆಯಲ್ಲಿ ಸುತ್ತಿ ಎಸೆಯಲಾಗಿದ್ದ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಪತಿಯನ್ನು ಕಟಾಂಚಣಕ್ಕೆ ತಳ್ಳಿದ್ದಾರೆ.
ಕೌಟುಂಬಿಕ ಕಲಹಕ್ಕೆ ಬಲಿಯಾಗಿದ್ದ ಮಹಿಳೆ
ಒಡಿಶಾ ಮೂಲದ ಸಾಗರ್ ಚಂದ್ರ ರಾವತ್ (32) ಬಂಧಿತ ಆರೋಪಿ. ಈತ ತನ್ನ ಪತ್ನಿ ಅನುಸೂಯ (28) ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ಬೆಂಗಳೂರಿನ ಪ್ರತ್ಯೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ವಿಚಾರವಾಗಿ ಹಾಗೂ ಪತಿಯ ಸಂಬಳದ ವಿಷಯದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಆಗಸ್ಟ್ 11ರಂದು ಮನೆಗೆ ಬಂದಾಗ ಮತ್ತೆ ಜಗಳ ವಿಕೋಪಕ್ಕೆ ತಿರುಗಿ, ಸಾಗರ್ ಪತ್ನಿಯನ್ನು ಕೊಲೆ ಮಾಡಿದ್ದ.
ಶವವನ್ನು ಹಾಸಿಗೆಯಲ್ಲಿ ಸುತ್ತಿ ಬಿಸಾಡಿದ್ದ ಆರೋಪಿ!
ಕೊಲೆ ಮಾಡಿದ ನಂತರ ಆರೋಪಿ ಮೂರು ದಿನಗಳ ಕಾಲ ಶವದ ಜೊತೆಯಲ್ಲೇ ಮನೆಯಲ್ಲಿದ್ದ. ಬಳಿಕ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ, ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ಸೈಟ್‌ನಲ್ಲಿ ಎಸೆದು ಬಂದಿದ್ದ. ಯಾರಿಗೂ ಅನುಮಾನ ಬಾರದಂತೆ ಪ್ರತಿದಿನ ಅದೇ ಜಾಗದ ಬಳಿ ಬಂದು ಶವ ಪತ್ತೆಯಾಗಿದೆಯೇ ಎಂದು ಗಮನಿಸಿ ಹೋಗುತ್ತಿದ್ದ.
ಆದರೆ, ಜಿಬಿಎ ಖಾಲಿ ಸೈಟ್‌ಗಳನ್ನು ಸ್ವಚ್ಛಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ, ಸೈಟ್ ಮಾಲೀಕರು ಕಾರ್ಮಿಕರನ್ನು ಕಳುಹಿಸಿ ಕ್ಲೀನ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ, ನಾಯಿಗಳು ಎಳೆದೊಯ್ದಿದ್ದ ಶವ ಕಂಡುಬಂದಿದೆ. ಸೈಟ್ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಪೊಲೀಸರ ಪಾಲಿಗೆ ಮುಖ್ಯ ಸುಳಿವಾಯಿತು ಆ ಬ್ಯಾಗ್!
ಶವದ ಮೇಲಿದ್ದ ‘ವಿಶಾಲ್ ಮಾರ್ಟ್’ ಬಟ್ಟೆಯ ಟ್ಯಾಗ್ ಪೊಲೀಸರ ಪಾಲಿಗೆ ಮುಖ್ಯ ಸುಳಿವಾಯಿತು. ಆ ಬಿಲ್ ಆಧಾರದ ಮೇಲೆ ಮೃತರ ಸಂಪರ್ಕ ಸಂಖ್ಯೆ ಪತ್ತೆಹಚ್ಚಿದ ಪೊಲೀಸರಿಗೆ ಅನುಸೂಯ ಗುರುತು ಸಿಕ್ಕಿತು. ಬಳಿಕ ಹೋಟೆಲ್‌ನಲ್ಲಿ ವಿಚಾರಿಸಿದಾಗ ದಂಪತಿಯ ಗಲಾಟೆ ವಿಷಯ ತಿಳಿದುಬಂದಿದೆ. ಸಾಗರ್ ಚಂದ್ರ ರಾವತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಟಾಬಯಲಾಗಿದೆ. ಶವ ಪತ್ತೆಯಾದ ಕೇವಲ ಒಂದು ವಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




