AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮಹಿಳೆ ಅಪಹರಣ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪ: ಮೂವರ ಬಂಧನ

ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸಾಲದ ಹಣದ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಸದ್ಯ, ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.

ಬೆಂಗಳೂರಿನಲ್ಲಿ ಮಹಿಳೆ ಅಪಹರಣ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪ: ಮೂವರ ಬಂಧನ
ಸಾಂದರ್ಭಿಕ ಚಿತ್ರImage Credit source: TV9 Network
ಶಿವಪ್ರಸಾದ್​ ಬಿ.
| Edited By: |

Updated on:Sep 04, 2026 | 9:23 AM

Share

ಮುಖ್ಯಾಂಶಗಳು

  • ಮಹಿಳೆ ಅಪಹರಣ ಆರೋಪದಲ್ಲಿ ಮೂವರ ಬಂಧನ
  • ಸಾಲದ ಹಣದ ವಿಚಾರದಲ್ಲಿ ವಿವಾದ
  • ಪೊಲೀಸರಿಂದ ಸಂತ್ರಸ್ತ ಮಹಿಳೆಯ ರಕ್ಷಣೆ

ಬೆಂಗಳೂರು, ಸೆಪ್ಟೆಂಬರ್ 4: ಮಹಿಳೆಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ, ಆಕೆಯ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಆರೋಪಿಗಳಾಗಿದ್ದು, ರೇಷ್ಮಾ ಬಾನು, ನಝತ್ ಮತ್ತು ಸುಹೇಲ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ದೂರಿನ ಪ್ರಕಾರ, ಸಂತ್ರಸ್ತ ಮಹಿಳೆಗೆ ರೇಷ್ಮಾ ಬಾನು ಈ ಹಿಂದೆ ಪರಿಚಯವಿತ್ತು. ಸುಮಾರು ಎರಡು ವರ್ಷಗಳ ಹಿಂದೆ ರೇಷ್ಮಾ ಬಳಿ ಮಹಿಳೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ರೇಷ್ಮಾ ಮೂಲಕ ನಝತ್ ಎಂಬಾಕೆಯ ಪರಿಚಯವೂ ಸಂತ್ರಸ್ತೆಗೆ ಆಗಿತ್ತು. ಬಳಿಕ ನಝತ್ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಲ, ಬಡ್ಡಿ ವಿಚಾರಕ್ಕೆ ಶುರುವಾದ ತಕರಾರು

ನಝತ್‌ಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಯಂತೆ ಕಂತಿನಲ್ಲಿ ಹಣ ಪಾವತಿಸುತ್ತಿದ್ದ ಮಹಿಳೆ, ವೈಯಕ್ತಿಕ ಕಾರಣಗಳಿಂದ ಕಳೆದ ಆರು ತಿಂಗಳಿಂದ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ಪದೇಪದೆ ಸಂಪರ್ಕಿಸುತ್ತಿದ್ದ ನಝತ್‌ನ ಸಂಖ್ಯೆಯನ್ನು ಮಹಿಳೆ ಬ್ಲಾಕ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದ ನೆಪದಲ್ಲಿ ಮನೆಗೆ ಕರೆಸಿಕೊಂಡು ಹಲ್ಲೆ

ಮಹಿಳೆ ಮನೆ ಖಾಲಿ ಮಾಡಿಕೊಂಡು ತಾಯಿಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಕೆಲಸವೊಂದಿದೆ ಹಾಗೂ ಹಣ ಸಿಗಲಿದೆ ಎಂದು ಹೇಳಿ ನಝತ್ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಅಲ್ಲಿಗೆ ಸಂತ್ರಸ್ತೆ ತೆರಳಿದ ಬಳಿಕ ಆಕೆಯ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ವೇಳೆ ರೇಷ್ಮಾ ಬಾನು ಹಾಗೂ ಆಕೆಯ ಪತಿ ಸುಹೇಲ್ ಕೂಡ ಅಲ್ಲಿಗೆ ಬಂದಿದ್ದು, ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದು ಕುಂಬಳಗೋಡು ಸಮೀಪದ ಮನೆಯೊಂದರಲ್ಲಿ ಇರಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಆರೋಪ

ಮಹಿಳೆಯನ್ನು ಮನೆಯಲ್ಲಿ ಇರಿಸಿಕೊಂಡಿದ್ದ ವೇಳೆ ಆಕೆಯನ್ನು ಅವಮಾನಿಸಿ ವಿಡಿಯೋ ಮಾಡಲಾಗಿತ್ತು ಹಾಗೂ ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ. ಈ ನಡುವೆ ಮಹಿಳೆ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ತಾಯಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಸಂತ್ರಸ್ತೆಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ.

ಇದನ್ನೂ ಓದಿ: ಹಾಸನ: ಸಬ್ಸಿಡಿ ಆಸೆ ತೋರಿಸಿ ರೈತರಿಗೆ ಲಕ್ಷಾಂತರ ರೂ. ವಂಚನೆ!

ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಅವರನ್ನು ಬಂಧಿಸಿರುವ ಪೊಲೀಸರು, ಘಟನೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 am, Fri, 4 September 26

Follow Us