ಬಿರುಗಾಳಿಗೆ ಉರುಳುತ್ತಿವೆ ಮರಗಳು: ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಧಕ್ಕೆ
ಮರಗಳ ಭಾರಕ್ಕೆ ವಿದ್ಯುತ್ ಕಂಬಗಳು ನೆಲಕಚ್ಚಿದ ಕಾರಣ ಹಲವೆಡೆ ವಿದ್ಯುತ್ ಪೂರೈಕೆಗೆಂದು ಬೆಸ್ಕಾಂ (BESCOM) ರೂಪಿಸಿಕೊಂಡಿದ್ದ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಬೆಂಗಳೂರು: ಪ್ರಬಲ ಬಿರುಗಾಳಿಯ (Gusty Winds) ಕಾರಣದಿಂದ ನಗರದ ಹಲವೆಡೆ ಮರಗಳು ವಿದ್ಯುತ್ ವಿತರಣಾ ಕಂಬಗಳ (Power Distribution) ಮೇಲೆ ಬಿದ್ದಿವೆ. ಮರಗಳ ಭಾರಕ್ಕೆ ವಿದ್ಯುತ್ ಕಂಬಗಳು ನೆಲಕಚ್ಚಿದ ಕಾರಣ ಹಲವೆಡೆ ವಿದ್ಯುತ್ ಪೂರೈಕೆಗೆಂದು ಬೆಸ್ಕಾಂ (BESCOM) ರೂಪಿಸಿಕೊಂಡಿದ್ದ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮೇ ತಿಂಗಳ ಮೊದಲ 12 ದಿನಗಳಲ್ಲಿ ಬರೋಬ್ಬರಿ 93 ಟ್ರಾನ್ಸ್ಫಾರ್ಮರ್ಗಳು ಮತ್ತು 507 ಕಂಬಗಳಿಗೆ ಧಕ್ಕೆಯಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಗಾಳಿಯ ತೀವ್ರತೆ ಹೆಚ್ಚು. 2021ರಲ್ಲಿ ಇಡೀ ವರ್ಷ ಹಾಳಾಗಿದ್ದ ಕಂಬಗಳ ಸಂಖ್ಯೆ 332 ಮಾತ್ರ. ಕಳೆದ ವರ್ಷ (2021) ಮೇ ತಿಂಗಳಲ್ಲಿ ಕೇವಲ 33 ಕಂಬಗಳು ಮಾತ್ರ ಹಾಳಾಗಿದ್ದವು.
ಈ ವರ್ಷ ಮೇ ತಿಂಗಳಲ್ಲಿ ಆಗಿರುವ ಹಾನಿಯು ಕಳೆದ ವರ್ಷ ಒಂದಿಡೀ ವರ್ಷದಲ್ಲಿ ಆಗಿರುವ ಹಾನಿಗಿಂತಲೂ ದೊಡ್ಡದು ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಬಿರುಗಾಳಿಯ ಆರ್ಭಟಕ್ಕೆ ನಗರದ ವಿವಿಧೆಡೆ ಮರಗಳು ಉರುಳುತ್ತಿರುವುದು ಬೆಸ್ಕಾಂಗೆ ದೊಡ್ಡ ತಲೆನೋವಾಗಿದೆ. ‘ಬೇರು ಸಹಿತ ಉರುಳುವ ಮರ ವಿದ್ಯುತ್ ತಂತಿ ಅಥವಾ ಕಂಬದ ಮೇಲೆ ಬಿದ್ದಾಗ ಮಾತ್ರ ವಿದ್ಯುತ್ ಕಂಬಗಳು ಹಾಳಾಗುತ್ತವೆ. ಒಂದೇ ಮರ ಉರುಳಿಬಿದ್ದಾಗ ಹತ್ತಾರು ಕಂಬಗಳು ಹಾಳಾಗಿರುವ ಉದಾಹರಣೆಯೂ ಇದೆ. ನಾವು ದುರ್ಬಲ ಮರಗಳನ್ನು ಗುರುತಿಸಿ, ಕಡಿಯಲು ಗುರುತು ಮಾಡಿದರೂ ಸಾರ್ವಜನಿಕ ವಿರೋಧದ ಕಾರಣದಿಂದ ಮರ ತೆರವುಗೊಳಿಸಲು ಆಗುವುದಿಲ್ಲ. ಇಂಥ ಮರಗಳೇ ಮುಂದೆ ದೊಡ್ಡ ಸಮಸ್ಯೆ ತಂದೊಡ್ಡುತ್ತವೆ’ ಎಂದು ಅವರು ತಿಳಿಸುತ್ತಾರೆ.
ಮೇ 1ರಿಂದ 10ರ ನಡುವೆ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಏಳುವ ದೂಳು ಸಹಿತ ಬಿರುಗಾಳಿ (squalls) ಎರಡು ಬಾರಿ ವರದಿಯಾಗಿದೆ. ಮುಂಗಾರು ಪೂರ್ವ ಮಳೆಯಲ್ಲಿ ಬಿರುಗಾಳಿ ಸಾಮಾನ್ಯ ವಿದ್ಯಮಾನ ಎನಿಸಿದೆ. ಆದರೆ ಈ ವರ್ಷ ಗಾಳಿಯ ವೇಗ ಮತ್ತು ತೀವ್ರತೆ ಹೆಚ್ಚಾಗಿತ್ತು. ಬೆಂಗಳೂರು ನಗರದಲ್ಲಿ ಗಂಟೆಗೆ 48ರಿಂದ 61 ಕಿಮೀನಷ್ಟು ವೇಗವಾಗಿ ಬಿರುಗಾಳಿ ಬೀಸಿದೆ.
ಕಂಬಗಳು ಹಾಳಾಗುತ್ತಿರುವುದರಿಂದಲೇ ನಗರದ ವಿವಿಧೆಡೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಯಾವುದಾದರೂ ಉಪಕೇಂದ್ರದ ವ್ಯಾಪ್ತಿಯಲ್ಲಿ ಒಂದು ಕಂಬ ಮುರಿದರೆ ಅದನ್ನು ಸರಿಪಡಿಸಲು ಎರಡರಿಂದ ಮೂರು ಗಂಟೆ ಸಾಕು. ಆದರೆ ಟ್ರಾನ್ಸ್ಫಾರ್ಮರ್ ಸುಟ್ಟುಹೋದರೆ ಅಥವಾ ಕೆಟ್ಟರೆ ಅದನ್ನು ಸರಿಪಡಿಸಲು ಅಥವಾ ಬದಲಿಸಲು 12 ಗಂಟೆ ಬೇಕಾಗಬಹುದು ಎಂದು ಬೆಸ್ಕಾಂ ಮೂಲಗಳು ಹೇಳುತ್ತವೆ.
‘ವಿದ್ಯುತ್ ವಿತರಣಾ ಕೇಬಲ್ಗಳನ್ನು ಭೂಮಿಯ ಒಳಗೆ ಅಳವಡಿಸುವ ಕಾಮಗಾರಿಯನ್ನು ಬೆಸ್ಕಾಂ ಇದೀಗ ಆರಂಭಿಸಿದೆ. ಈಗಾಗಲೇ ವೈಟ್ಫೀಲ್ಡ್, ಎಚ್ಎಸ್ಆರ್ ಲೇಔಟ್, ಕೆಂಗೇರಿ ಸೇರಿದಂತೆ ಹಲವೆಡೆ ವಿದ್ಯುತ್ ಕೇಬಲ್ಗಳನ್ನು ಭೂಮಿಯೊಳಗೆ ಅಳವಡಿಸಲಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರಚೋಳನ್ ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಿಂದ ಬೆಸ್ಕಾಂ ದುರ್ಬಲ ಮರಗಳನ್ನು ಗುರುತಿಸುವ, ರೆಂಬೆಗಳನ್ನು ಕಡಿಯುವ ಕೆಲಸ ಚುರುಕುಗೊಳಿಸಿದೆ. ಈ ವರ್ಷ ಕಂಬಗಳು ಬಿದ್ದು, ತಂತಿ ತುಂಡಾಗಿದ್ದರಿಂದ ಆಗಿರುವ ನಷ್ಟವನ್ನು ಬೆಸ್ಕಾಂ ಇನ್ನೂ ಅಂದಾಜಿಸಬೇಕಿದೆ.
ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Mon, 16 May 22