ಬೆಂಗಳೂರಿನ ತುರಹಳ್ಳಿ ಅರಣ್ಯ ಗಡಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ: 2 ಟನ್‌ಗೂ ಅಧಿಕ ಕಸ ತೆರವು, ಮಧ್ಯಪ್ರದೇಶದ ‘ಬಿಟ್ಟು ತಬಾಹಿ’ ಭಾಗಿ
ಬೆಂಗಳೂರಿನ ತುರಹಳ್ಳಿ ಅರಣ್ಯ ಗಡಿಭಾಗದಲ್ಲಿ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನ ನಡೆಯಿತು. ಪರಿಸರ ಹೋರಾಟಗಾರ ಬಿಟ್ಟು ತಬಾಹಿ ನೇತೃತ್ವದಲ್ಲಿ ಸ್ಥಳೀಯರು ಮತ್ತು ಸ್ವಯಂಸೇವಕರು 2 ಟನ್‌ಗೂ ಹೆಚ್ಚು ತ್ಯಾಜ್ಯ ತೆರವುಗೊಳಿಸಿದರು. ವೈದ್ಯಕೀಯ ತ್ಯಾಜ್ಯ, ಪ್ಲಾಸ್ಟಿಕ್ ರಾಶಿ ನೋಡಿ ಬಿಟ್ಟು ತಬಾಹಿ ನಾಗರಿಕ ಪ್ರಜ್ಞೆಯ ಕೊರತೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದು ನಮ್ಮ ಪರಿಸರದ ಸಂರಕ್ಷಣೆಯ ಮಹತ್ವವನ್ನು ಸಾರುತ್ತದೆ.

ಬೆಂಗಳೂರು, ಸೆ.14: ದೇಶಾದ್ಯಂತ ಸ್ವಚ್ಛತಾ ಜಾಗೃತಿ ಮೂಡಿಸುತ್ತಿರುವ ಮಧ್ಯಪ್ರದೇಶದ ಪ್ರಸಿದ್ಧ ಪರಿಸರ ಹೋರಾಟಗಾರ ಸುರೇಂದ್ರ ಸಿಂಗ್ ಚೌಧರಿ (ಜನಪ್ರಿಯ ಹೆಸರು ‘ಬಿಟ್ಟು ತಬಾಹಿ’), ಪ್ರಥಮ ಬಾರಿಗೆ ತಮ್ಮ ಅಭಿಯಾನವನ್ನು ರಾಜ್ಯದಿಂದ ಹೊರಗೆ ವಿಸ್ತರಿಸಿ ಬೆಂಗಳೂರಿನ ತುರಹಳ್ಳಿ ಅರಣ್ಯ ಗಡಿ ಭಾಗದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಬನಶಂಕರಿ 6ನೇ ಹಂತದಲ್ಲಿ ಶನಿವಾರ ಬೆಳಿಗ್ಗೆ ನಡೆದ ‘ಕ್ಲೀನ್ ಅಪ್ ತುರಹಳ್ಳಿ’ (Clean Up Turahalli) ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸ್ವಯಂಸೇವಕರೊಂದಿಗೆ ಕೈಜೋಡಿಸಿದ ಬಿಟ್ಟು ತಬಾಹಿ, ಅರಣ್ಯದ ಗಡಿಭಾಗದಲ್ಲಿದ್ದ ಬೃಹತ್ ಪ್ರಮಾಣದ ತ್ಯಾಜ್ಯವನ್ನು ಕಂಡು ಕಳವಳ ವ್ಯಕ್ತಪಡಿಸಿದರು.
ದಿ ಇಂಡಿಯನ್ ಗ್ಯಾರೇಜ್ ಕೋ (The Indian Garage Co) ಸಂಸ್ಥೆಯು ಇಂಡಸ್ ಹರ್ಬ್ಸ್ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಸಹಯೋಗದೊಂದಿಗೆ ಈ 4 ಗಂಟೆಗಳ ಬೃಹತ್ ಸ್ವಚ್ಛತಾ ಅಭಿಯಾನವನ್ನು ಬೆಳಿಗ್ಗೆ 8 ಗಂಟೆಗೆ ಆಯೋಜಿಸಿತ್ತು.ಅಭಿಯಾನದ ವೇಳೆ ಕೋಳಿ ತ್ಯಾಜ್ಯ, ವೈದ್ಯಕೀಯ (ಮೆಡಿಕಲ್) ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಮೃತ ಶ್ವಾನಗಳ ಕಳೇಬರಗಳು ಪತ್ತೆಯಾದವು. ಒಟ್ಟು 2 ಟನ್‌ಗೂ ಅಧಿಕ ತ್ಯಾಜ್ಯವನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
ವರ್ಷಗಳಿಂದ ಸಂಗ್ರಹವಾಗಿದ್ದ ಬೃಹತ್ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಲು ಕೊನೆಗೆ ಬ್ಯಾಕ್‌ಹೋ (ಜೆಸಿಬಿ) ಯಂತ್ರವನ್ನು ಬಳಸಬೇಕಾಯಿತು. ಹಿರಿಯ ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಹಾಗೂ ಇಂಡಿಯಾ ಪ್ಲಾಗ್ ರನ್‌ನ ರಾಮಕೃಷ್ಣ ಗಣೇಶನ್ ಸಕ್ರಿಯವಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: ರಾಜ್ಯದ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
“ಮರಗಳಿಗೆ ವೈಫೈ ಇದ್ದಿದ್ದರೆ ಜನರು ಹೀಗೆ ಮಾಡುತ್ತಿರಲಿಲ್ಲ”: ಬಿಟ್ಟು ತಬಾಹಿ ಆಕ್ರೋಶ
ಸ್ವಚ್ಛತಾ ಅಭಿಯಾನದ ಬಳಿಕ ಮಾತನಾಡಿದ ಬಿಟ್ಟು ತಬಾಹಿ, “ನಾವು ಎಲ್ಲೇ ಹೋದರೂ ನಮ್ಮಲ್ಲಿ ನಾಗರಿಕ ಪ್ರಜ್ಞೆಯ (Civic Sense) ಕೊರತೆಯಿದೆ. ಭಾರತದ ಟೆಕ್ ರಾಜಧಾನಿ ಬೆಂಗಳೂರಿನಲ್ಲಿ ಪರಿಸರ ಶಿಸ್ತು ಹೆಚ್ಚಿರುತ್ತದೆ ಎಂದು ಭಾವಿಸಿದ್ದೆ. ಆದರೆ ಪ್ಲಾಸ್ಟಿಕ್ ರಾಶಿಯ ಅಡಿಯಲ್ಲಿ ವೈದ್ಯಕೀಯ ತ್ಯಾಜ್ಯ ಹಾಗೂ ನಾಯಿಗಳ ಕಳೇಬರಗಳನ್ನು ನೋಡಿ ಆಘಾತವಾಯಿತು. ಒಂದು ವೇಳೆ ಈ ಗಿಡ-ಮರಗಳಿಗೆ ವೈಫೈ (Wi-Fi) ಅಥವಾ ಬ್ಲೂಟೂತ್ ಇರುತ್ತಿದ್ದರೆ, ಜನರು ಬಹುಶಃ ಇಷ್ಟೊಂದು ನಿರ್ಲಕ್ಷ್ಯದಿಂದ ಅರಣ್ಯವನ್ನು ನೋಡಿಕೊಳ್ಳುತ್ತಿರಲಿಲ್ಲವೇನೋ,” ಎಂದು ಬೇಸರ ವ್ಯಕ್ತಪಡಿಸಿದರು.
“4 ದಶಕಗಳ ಹಿಂದೆ ಜಲಮೂಲವಾಗಿದ್ದ ಪ್ರದೇಶ ಇಂದು ಕಸದ ರಾಶಿ”: ಯಲ್ಲಪ್ಪ ರೆಡ್ಡಿ
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ, “ಬಿಟ್ಟು ಅವರ ಶ್ರಮ ಯುವ ಪೀಳಿಗೆಗೆ (Gen Z) ದೊಡ್ಡ ಸ್ಪೂರ್ತಿಯಾಗಿದೆ. ಸುಮಾರು 4 ದಶಕಗಳ ಹಿಂದೆ ತುರಹಳ್ಳಿ ಪ್ರದೇಶವು 4 ಪ್ರಮುಖ ಬೃಹತ್ ಜಲಮೂಲಗಳ ಮೂಲವಾಗಿತ್ತು. ಆದರೆ ಇಂದು ಅದು ಕಸ ಚೆಲ್ಲುವ ಜಾಗವಾಗಿರುವುದು ದುರಂತ. ಅದೃಷ್ಟವಶಾತ್ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ತುರಹಳ್ಳಿ ಮೀಸಲು ಅರಣ್ಯದ ಒಳಗಿನ ಭಾಗ ಕಸ ಮುಕ್ತವಾಗುಳಿದಿದೆ,” ಎಂದರು.
ಇಡೀ ದೇಶದ ಗಮನ ಸೆಳೆದ ‘ಬಿಟ್ಟು ತಬಾಹಿ’ ಯಾರು?
ಸರ್ಕಾರಿ ಸಂಸ್ಥೆಗಳು ಹಾಗೂ ತನಿಖಾ ಕಚೇರಿಗಳ ಕಡೆಗೆ ಬೆರಳು ತೋರಿಸುವ ಕಾಲದಲ್ಲಿ, 21 ವರ್ಷದ ಯುವಕನೊಬ್ಬ ಸ್ವಂತ ಶ್ರಮದಿಂದ ಕಸದ ರಾಶಿಯಾಗಿದ್ದ ನದಿಯನ್ನೇ ಸ್ವಚ್ಛಗೊಳಿಸಿ ಇಡೀ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬಿಯಾವುರ ಪಟ್ಟಣದ ಬಿಎಸ್ಸಿ ವಿದ್ಯಾರ್ಥಿಯಾಗಿರುವ ಸುರೇಂದ್ರ ಸಿಂಗ್ ಚೌಧರಿ (ಸಾಮಾಜಿಕ ಜಾಲತಾಣಗಳಲ್ಲಿ ‘ಬಿಟ್ಟು ತಬಾಹಿ’ ಎಂದೇ ಪ್ರಸಿದ್ಧ), ಕಲುಷಿತಗೊಂಡಿದ್ದ ಅಜ್ಞಾರ್ ನದಿಯನ್ನು ಕಸ ಮುಕ್ತಗೊಳಿಸಿ ಸಾಹಸ ಮಾಡಿರುವುದು ಎಲ್ಲ ಕಡೆ ಭಾರೀ ಚರ್ಚೆಗೆ ಕಾರಣವಾಗಿದೆ. 2026ರ ಗಣರಾಜ್ಯೋತ್ಸವದ (ಜನವರಿ 26) ದಿನದಂದು ಸ್ಥಳೀಯ ದೇವಾಲಯದ ಬಳಿ ಹರಿಯುವ ಅಜ್ಞಾರ್ ನದಿಯು ಕಸದ ತೊಟ್ಟಿಯಾಗಿ ಬದಲಾಗಿರುವುದನ್ನು ಕಂಡು ಬಿಟ್ಟು ತಬಾಹಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ನದಿಯ ಸೌಂದರ್ಯ ಮರಳಿಸಲು ನಿರ್ಧರಿಸಿದರು. ಪ್ರಾರಂಭದಲ್ಲಿ ಕೆಲವು ಸ್ನೇಹಿತರು ಸಾಥ್ ನೀಡಿದರೂ, ನದಿಯ ದುರ್ನಾತ ಹಾಗೂ ವಿಷಕಾರಿ ತ್ಯಾಜ್ಯದ ರಾಶಿಯನ್ನು ನೋಡಿ ಅವರೆಲ್ಲರೂ ಹಿಂಜರಿದರು.ತನಗೆ ಈಜಲು ಬಾರದಿದ್ದರೂ ಹಾಗೂ ಯಾವುದೇ ಸುರಕ್ಷತಾ ಉಡುಪುಗಳಿಲ್ಲದಿದ್ದರೂ ಬಿಟ್ಟು ತಬಾಹಿ ಹಿಂಜರಿಯದೆ ನಿರಂತರವಾಗಿ ಕಲುಷಿತ ನೀರಿನಲ್ಲಿ ನಿಂತು ಕೆಲಸ ಮಾಡಿದರು. ಸಾಧಾರಣ ಪರಿಕರಗಳನ್ನು ಬಳಸಿ ನದಿಯಲ್ಲಿದ್ದ ವಿಷಕಾರಿ ಪಾಚಿ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯದ ರಾಶಿಯನ್ನು ತಿಂಗಳುಗಳ ಕಾಲ ಶ್ರಮಿಸಿ ತೆರವುಗೊಳಿಸಿದರು. ಬಿಟ್ಟು ತಬಾಹಿ ಅವರ ಈ ಭಗೀರಥ ಪ್ರಯತ್ನದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಭಾರತದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ, ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಯುವಕನ ಪರಿಸರ ಪ್ರೇಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




