ಕೆಎಂಎಫ್ ಬ್ಯಾಂಕ್ ಅಸ್ತಿತ್ವಕ್ಕೆ ಬಂದರೆ ಸರ್ಕಾರದಿಂದ 100 ಕೋಟಿ ಬಂಡವಾಳ: ಬೊಮ್ಮಾಯಿ ಭರವಸೆ
ಸಹಕಾರ ರಂಗದ ಶಕ್ತಿ ಏನು ಎಂಬುದು ಹಾಲು ಉತ್ಪಾದಕರ ಸಂಘಗಳಲ್ಲಿ ಕಾಣಿಸುತ್ತದೆ. ಪೈಪೋಟಿ ನಡೆಸಿ ಈ ನಿಯಂತ್ರಣ ಪಡೆಯಲು ಅವಕಾಶ ಇರೋದು ಹೈನುಗಾರಿಕೆಯಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಮನವಿ ಮಾಡಿದೆ. ಅವರ ವಿನಂತಿ ನನ್ನ ಗಮನದಲ್ಲಿದೆ. ಈ ಬಗ್ಗೆ ತಕ್ಷಣಕ್ಕೆ ಅಥವಾ ಮುಂದೆಯೂ ಯಾವುದೇ ಆಶ್ವಾಸನೆ ಕೊಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿಗೆ ಪೂರಕವಾಗಿ ಹೈನುಗಾರಿಕೆ ಕೆಲಸ ಮಾಡುತ್ತಿದೆ. ರೈತರ ಆದಾಯ ದ್ವಿಗುಣ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಹೈನುಗಾರಿಕೆಯ ಆದಾಯವನ್ನೂ ಗಮನದಲ್ಲಿರಿಸಿಕೊಂಡು ಮೋದಿ ಈ ಆಶಯ ವ್ಯಕ್ತಪಡಿಸಿದ್ದರು. 130 ಕೋಟಿ ಜನಕ್ಕೆ ಆಹಾರ ಒದಗಿಸುವ ಸ್ವಾವಲಂಬಿ ದೇಶ ನಮ್ಮದು ಎಂದು ತಿಳಿಸಿದರು.
ಎಷ್ಟೋ ವರ್ಷಗಳಿಂದ ಅನ್ನದಾತ ಎಲ್ಲಿದ್ದಾನೋ ಅಲ್ಲಿಯೇ ಇದ್ದಾನೆ. ಭಾರತದಲ್ಲಿ ಕೃಷಿ ಕ್ಷೇತ್ರ ಬೆಳೆದಿದೆ, ಆದರೆ ರೈತ ಬೆಳೆದಿಲ್ಲ. ರೈತರ ಅಭಿವೃದ್ಧಿಗೆ ಎಲ್ಲರೂ ಗಮನಹರಿಸಬೇಕಾಗಿದೆ. ಜಾಗತೀಕರಣದ ಬಳಿಕ ಎಲ್ಲ ವ್ಯವಹಾರಗಳು ಮಾರುಕಟ್ಟೆ ಆಧಾರಿತವಾಗುತ್ತವೆ. ಈಗ ಮಾರುಕಟ್ಟೆ ಬೇರೆಯವರ ನಿಯಂತ್ರಣದಲ್ಲಿದೆ ಎಂದು ಕೆಎಂಎಫ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಹಕಾರ ರಂಗದ ಶಕ್ತಿ ಏನು ಎಂಬುದು ಹಾಲು ಉತ್ಪಾದಕರ ಸಂಘಗಳಲ್ಲಿ ಕಾಣಿಸುತ್ತದೆ. ಪೈಪೋಟಿ ನಡೆಸಿ ಈ ನಿಯಂತ್ರಣ ಪಡೆಯಲು ಅವಕಾಶ ಇರೋದು ಹೈನುಗಾರಿಕೆಯಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಗೋಶಾಲೆಗಳಲ್ಲಿರುವ ಗೋವುಗಳಿಗೆ ಮೇವು ಮತ್ತು ಚಿಕಿತ್ಸೆ ಕೊಡಲು ಕೆಎಂಎಫ್ ಮುಂದೆ ಬರಬೇಕು. ಇದು ನೊ ಪ್ರಾಫಿಟ್ ನೊ ಲಾಸ್ ಕಾರ್ಯಕ್ರಮ. ಗೋವಿನಿಂದಾಗಿ ಕೆಎಂಎಫ್ ಬೆಳೆಯುತ್ತಿದೆ, ಆ ಮೂಲಕ ಗೋವಿನ ಋಣ ತೀರಿಸಿದಂತಾಗುತ್ತದೆ. ಹಾಲು ಕೊಡುವುದು ನಿಲ್ಲಿಸಿದ ಹಸುಗಳ ರಕ್ಷಣೆ ಬಗ್ಗೆ ಯೋಚಿಸಬೇಕು. ಜಿಲ್ಲಾಮಟ್ಟದಲ್ಲಿ ಗೋಶಾಲೆ ನಿರ್ಮಾಣ ಮಾಡುತ್ತೇವೆ ಎಂದು ಬೊಮ್ಮಾಯಿ ಕೆಎಂಎಫ್ಗೆ ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರನ್ನು ಬೊಮ್ಮಾಯಿ ಹೊಗಳಿದರು. ಕೆಎಂಎಫ್ ಕಷ್ಟ ಅನುಭವಿಸುತ್ತಿದ್ದಾಗ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅಗತ್ಯ ಪ್ರೋತ್ಸಾಹ ನೀಡಿದರು. ಹಾಲಿನ ಪುಡಿ ತಯಾರಿಕೆಗೆ ನಮ್ಮ ನಾಯಕರು ₹ 50 ಕೋಟಿ ಕೊಟ್ಟು, ಉದಾರವಾಗಿ ಸಹಾಯ ಮಾಡಿದರು. ಅವರ ದಾರಿಯಲ್ಲೇ ನಾವೂ ನಡೆಯುತ್ತೇವೆ ಅಭಿವೃದ್ಧಿ ಮಾಡುತ್ತೇವೆ. ಅವರು ಎಲ್ಲ ರಂಗಕ್ಕೂ ಸಹಾಯ ಮಾಡಿದ್ದಾರೆ. ಅವರ ಹಾದಿಯಲ್ಲೇ ಮುನ್ನಡೆಯುತ್ತೇನೆ, ಅವರೇ ನನ್ನ ಮಾರ್ಗದರ್ಶಕರು. ದೇಶದಲ್ಲಿ ಕೆಎಂಎಫ್ ಮೊದಲ ಸ್ಥಾನಕ್ಕೆ ಬರಬೇಕು ಎನ್ನುವುದು ನನ್ನ ಆಶಯ ಎಂದು ನೆನಪಿಸಿಕೊಂಡರು.
ಸಹಕಾರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದೇನೆ. ಸಹಕಾರ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಜತೆ ಸಂಸ್ಥೆಗಳನ್ನೂ ಬೆಳೆಸಬೇಕಿದೆ. ಪದಾಧಿಕಾರಿಗಳು ಆರ್ಥಿಕವಾಗಿ ಸಬಲರಾಗಿದ್ದಾರೆ, ಆದರೆ ಸಹಕಾರ ಸಂಘಗಳು ಎಲ್ಲಿವೆಯೋ ಅಲ್ಲೇ ಇವೆ. ಸಹಕಾರಿ ಸಂಸ್ಥೆಗಳು ಶ್ರೀಮಂತವಾಗಬೇಕು. ಆಗ ಅವುಗಳನ್ನು ಅವಲಂಬಿಸಿದವರು ಸಾಹುಕಾರರಾಗುತ್ತಾರೆ. ಈ ಮೂಲಕ ಸಹಕಾರ ರಂಗದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಬೊಮ್ಮಾಯಿ ವಿಶ್ಲೇಷಿಸಿದರು.
ಕರ್ನಾಟಕದ 14 ಸಾವಿರ ಸಹಕಾರ ಸಂಸ್ಥೆಗಳಲ್ಲಿ 25 ಲಕ್ಷ ಸದಸ್ಯರಿದ್ದಾರೆ. ಇವರೆಲ್ಲ ನಿತ್ಯ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸ್ತಿದ್ದಾರೆ. ಹಾಲು ಉತ್ಪಾದಕರೇ ಬ್ಯಾಂಕ್ ತೆರೆಯುವಂತಾಗಬೇಕು ಎನ್ನುವುದು ನನ್ನ ಮತ್ತು ಬಾಲಚಂದ್ರ ಜಾರಕಿಹೊಳಿಯವರ ಆಶಯ. ಆರ್ಥಿಕ ವ್ಯವಸ್ಥೆ ಇದೆ, ಬಂಡವಾಳವೂ ಹರಿದು ಬರುತ್ತೆ. ಹಾಲು ಉತ್ಪಾದಕರು ಬ್ಯಾಂಕ್ ಮಾಡಿದರೆ ಸರ್ಕಾರ ₹ 100 ಕೋಟಿ ಆರಂಭಿಕ ಬಂಡವಾಳ ಕೊಡಲಿದೆ ಎಂದು ಭರವಸೆ ನೀಡಿದರು.
ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಹಕಾರ ರಂಗವು ಸರ್ಕಾರವನ್ನು ಆಳುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಸರ್ಕಾರವು ಸಹಕಾರವನ್ನು ಆಳುತ್ತಿದೆ. ಇದು ಬದಲಾಗಬೇಕು, ಬದಲಿಸುವುದು ನಮ್ಮ ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ. ಅಗತ್ಯ ಕ್ರಮಗಳನ್ನೂ ತೆಗೆದುಕೊಳ್ಳುತ್ತೇನೆ. ನಮಗೆ ಸಹಕಾರಿ ಬಂಡವಾಳಶಾಹಿ ವ್ಯವಸ್ಥೆ ಬೇಡ. ಆದರೆ ಸಹಕಾರ ವಲಯ ಸಮೃದ್ಧವಾಗುವುದು ಮುಖ್ಯ ಎಂದರು.
ಇದನ್ನೂ ಓದಿ: ಬಿರುಸಿನ ನಡಿಗೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ; ಸಿಎಂ ನಡಿಗೆ ಕಂಡು ವಾಕರ್ಸ್ ಫುಲ್ ಖುಷ್
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಂದಿನಿ ಆಯುರ್ವೇದಿಕ್ ಹಾಲು; ಕೆಎಂಎಫ್ನಿಂದ ಹೊಸ ಉತ್ಪನ್ನಗಳ ಬಿಡುಗಡೆ
(CM Basavaraj Bommai Assures 100 Crore Capital for Milk Producers if They Start KMF Bank)