ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ: ಬಿಜೆಪಿ ಬಗ್ಗೆ ಬಿಗ್ ಬಾಂಬ್ ಸಿಡಿಸಿದ ಉಚ್ಛಾಟಿತ ಶಾಸಕ ಸೋಮಶೇಖರ್
Political News: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನಕ್ಕೆ ಆಂತರಿಕ ಕಲಹವೇ ಕಾರಣ ಎಂದು ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಆರೋಪಿಸಿದ್ದಾರೆ. ಜೊತೆಗೆ ವಿಪಕ್ಷ ನಾಯಕರ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧವೂ ಹೊಸ ಬಾಂಬ್ ಸಿಡಿಸಿರುವ ಅವರು, ತಮ್ಮ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೂ ಕೌಂಟರ್ ಕೊಟ್ಟಿದ್ದಾರೆ.

ಮುಖ್ಯಾಂಶಗಳು
- ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ವಿಚಾರ
- ಬಿಗ್ ಬಾಂಬ್ ಸಿಡಿಸಿದ BJP ಉಚ್ಛಾಟಿತ ಶಾಸಕ ಎಸ್.ಟಿ. ಸೋಮಶೇಖರ್
- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೂ ಎಸ್ಟಿಎಸ್ ಕೌಂಟರ್
ಬೆಂಗಳೂರು, ಜೂನ್ 25: ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ವಿಚಾರವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಇತ್ತ ಪಕ್ಷಕ್ಕೆ ದ್ರೋಹ ಬಗೆದವರು ಯಾರೆಂಬ ಬಗ್ಗೆ ಪತ್ತೆಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಆದೇಶದ ಮೇರೆಗೆ ಸಿ.ಟಿ. ರವಿ ನೇತೃತ್ವದ ಸಮಿತಿಯೂ ಮಾಹಿತಿ ಕಲೆಹಾಕುತ್ತಿದೆ. ಈ ನಡುವೆ ಬಿಜೆಪಿ ಉಚ್ಛಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯೇಂದ್ರ ಕಡೆಯ ಅಭ್ಯರ್ಥಿ ಸೋಲಿಸಬೇಕೆಂದು ಆರ್.ಅಶೋಕ್, ಅಶೋಕ್ ಕಡೆ ಅಭ್ಯರ್ಥಿ ಸೋಲಿಸಲು ಬಿವೈವಿ ಅಡ್ಡ ಮತದಾನ ಮಾಡಿಸಿರಬೇಕು. ಹೀಗಾಗಿ ಇವರಿಬ್ಬರು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಿದರೆ ಸಾಕು ಎಂದಿದ್ದಾರೆ.
ಸೋಮಶೇಖರ್ ಹೇಳಿದ್ದೇನು?
ನಮ್ಮನ್ನು ಉಚ್ಛಾಟನೆ ಮಾಡಿ ಗೂಬೆ ಕೂರಿಸಲು ಹೊರಟಿದ್ದಾರೆ. ಇವರಿಬ್ರೂ 63 ಶಾಸಕರನ್ನು ಕರೆದು ಮಾತಾಡಿ ಬಿಗಿ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಶಾಸಕರಿಗೂ ಟ್ರೈನಿಂಗ್ ಕೊಟ್ಟಿದ್ದರು. ಏನಾಗುತ್ತೆ, ಏನಾಗಲ್ಲ ಅಂತಾ ಅವರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು. ಆದ್ರೆ ಬಿಜೆಪಿಯವರು ಶಾಸಕರಿಗೆ ವಿಪ್ ಕೂಡ ಜಾರಿ ಮಾಡಲಿಲ್ಲ. ಬೆಳಗ್ಗೆ 9ಕ್ಕೆ ಚುನಾವಣೆ ಇದೆ ಅಂದಾಗ 8 ಗಂಟೆಗೆ ಹೇಳಿದ್ರು. ಹೀಗಾಗಿ ಬಿಜೆಪಿಯವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದು ಸೋಮಶೇಖರ್ ಅರೋಪಿಸಿದ್ದಾರೆ.
ಇದನ್ನೂ ಓದಿ: ಆ ಶಾಸಕರಿಂದಲೇ ಅಡ್ಡಮತದಾನ? ಸತ್ಯಶೋಧನಾ ಸಮಿತಿ ವರದಿ ಬಗ್ಗೆ ಸಿಟಿ ರವಿ ಏನಂದ್ರು ನೋಡಿ
ಶೋಭಾ ಕರಂದ್ಲಾಜೆ ಹೇಳಿಕೆಗೂ ತಿರುಗೇಟು
ಸೋಮಶೇಖರ್, ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಲಿ ಎಂಬ ಕೇಂದ್ರ ಸಚಿವೆಎ ಶೋಭಾ ಕರಂದ್ಲಾಜೆ ಹೇಳಿಕೆಗೂ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದು, ಶೋಭಾಗೆ ಅಶೋಕ್ ಕಂಡ್ರೆ ಆಗಲ್ಲ, ವಿಜಯೇಂದ್ರ ಕಂಡ್ರೂ ಆಗಲ್ಲ. ಬಿಜೆಪಿಯಲ್ಲಿ ಇಷ್ಟೆಲ್ಲ ಅಲ್ಲೋಲ ಕಲ್ಲೋಲಕ್ಕೆ ಅವರೇ ಕಾರಣ. ಮೊದಲು ಈ ಕರಂದ್ಲಾಜೆ ಅವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ನಿಲ್ಲಿಸಲಿ. ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ, ನಾವು ಅವರಿಗೆ ಮತ ಹಾಕಿದ್ದೇವೆ. ಈ ಬಗ್ಗೆ ನಾವು ಓಪನ್ ಆಗಿಯೇ ಹೇಳಿದ್ದೇವೆ. ಬಿಜೆಪಿಯಲ್ಲಿ ಅಡ್ಡ ಮತ ಹಾಕಿದವರು ಯಾರೆಂದು ಕಂಡು ಹಿಡಿಯಲಿ. ಅದುಬಿಟ್ಟು ನನ್ನ ಕೆಣಕೋದು ಬೇಡ. ಕೆಣಕಿದರೆ ನಾವೂ ತಕ್ಕ ಉತ್ತರ ಕೊಡ್ತೇವೆ ಎಂದು ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:23 pm, Thu, 25 June 26



