ಗಣೇಶ ಹಬ್ಬ ಹಿನ್ನೆಲೆ ಸಾಲು ಸಾಲು ರಜೆ: ಖಾಸಗಿ ಸೇರಿದಂತೆ ಸರ್ಕಾರಿ ಬಸ್ಗಳಿಗೂ ಫುಲ್ ಡಿಮ್ಯಾಂಡ್!
ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ ತಯಾರಿ ಜೋರಾಗಿದೆ. ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇರುವುದರಿಂದ ಜನರು ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಪ್ರಯಾಣಿಕರಿಂದ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಖಾಸಗಿ ಬಸ್‌ಗಳು ಮಾತ್ರವಲ್ಲದೇ, ಸರ್ಕಾರಿ ಬಸ್ಗಳಿಗೂ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ.

ಬೆಂಗಳೂರು, ಸೆಪ್ಟೆಂಬರ್ 11: ಗೌರಿ ಗಣೇಶ ಹಬ್ಬ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ರಾಜಧಾನಿ ಬೆಂಗಳೂರಿನಿಂದ ತಮ್ಮ ಸ್ವಂತ ಊರುಗಳಿಗೆ ಪ್ರಯಾಣಿಕರು ತೆರಳುತ್ತಿದ್ದಾರೆ. ರಾಜ್ಯದ ಪ್ರಮುಖ ಜಿಲ್ಲೆಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಬಸ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್‌ಆರ್‌ಟಿಸಿ ಟರ್ಮಿನಲ್ 1 ಮತ್ತು 2 ರಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಖಾಸಗಿ ಬಸ್‌ಗಳ ದರ ಶೇ. 100ರಷ್ಟು ಹೆಚ್ಚಳ: ಆರ್‌ಟಿಒ ವಿರುದ್ಧ ಆಕ್ರೋಶ
ಸಾಲು ಸಾಲು ರಜೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಆಪರೇಟರ್‌ಗಳು ಎಸಿ ಮತ್ತು ನಾನ್ ಎಸಿ ಸ್ಲೀಪರ್ ಕೋಚ್‌ಗಳ ದರವನ್ನು ಶೇಕಡಾ 40 ರಿಂದ 100 ರಷ್ಟು ಏರಿಕೆ ಮಾಡಿದ್ದಾರೆ. ‘ನೂರು-ಇನ್ನೂರು ರೂ ಹೆಚ್ಚಳವಾದರೆ ಭರಿಸಬಹುದು, ಆದರೆ 1 ರಿಂದ 2 ಸಾವಿರ ರೂಪಾಯಿಗಳಷ್ಟು ದರ ಏರಿಸಿದರೆ ಪ್ರಯಾಣಿಸುವುದು ಹೇಗೆ’ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದರೂ ಟಿಕೆಟ್ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದ ಆರ್‌ಟಿಒ ಅಧಿಕಾರಿಗಳ ಕಾರ್ಯವೈಖರಿಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಸ್‌ಆರ್‌ಟಿಸಿಯಿಂದ 2,400 ಹೆಚ್ಚುವರಿ ಬಸ್‌ಗಳ ಸಂಚಾರ
ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ದೃಷ್ಟಿಯಿಂದ ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರ ಜೊತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳನ್ನೂ ಹೊರರಾಜ್ಯಗಳಿಗೆ ಸೇವೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಗಣೇಶ ಚತುರ್ಥಿ ಹಬ್ಬದ ವಿಶೇಷ: ಯಶವಂತಪುರ ಹಾಗೂ ಬೀದರ್ ನಡುವೆ ವಿಶೇಷ ರೈಲು ಸಂಚಾರ
- ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಹಾಗೂ ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್ ಮಾರ್ಗಗಳಿಗೆ ಇಲ್ಲಿಂದ ವಿಶೇಷ ಬಸ್‌ಗಳು ಹೊರಡಲಿವೆ.
- ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿ ಮಾರ್ಗದ ಬಸ್‌ಗಳು ಇಲ್ಲಿಂದ ಸಂಚರಿಸಲಿವೆ.
- ಶಾಂತಿನಗರ ಬಿಎಂಟಿಸಿ ನಿಲ್ದಾಣ: ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಯಿಕೋಡ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಬಸ್‌ಗಳು ಶಾಂತಿನಗರದಿಂದ ಸಂಚರಿಸಲಿವೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಕೊಲ್ಕತ್ತಾ ಕಲಾವಿದರ ಕೈಚಳಕ: 20 ಅಡಿ ಎತ್ತರದ ರಾಧಾಕೃಷ್ಣ ಮಾದರಿ ಗಣಪತಿಗಳಿಗೆ ಫುಲ್ ಡಿಮ್ಯಾಂಡ್
ಮುಂಗಡ ಬುಕಿಂಗ್‌ಗೆ ರಿಯಾಯಿತಿ ಸೌಲಭ್ಯ
ಇನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಲ್ಲಿ ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಬುಕಿಂಗ್ ಮಾಡಿದರೆ ಶೇಕಡಾ 5 ರಷ್ಟು ರಿಯಾಯಿತಿ ಸಿಗಲಿದೆ. ಹಾಗೆಯೇ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಮರಳಿ ಬರುವ ಪ್ರಯಾಣ ದರದಲ್ಲಿ ಶೇಕಡಾ 10 ರಷ್ಟು ವಿಶೇಷ ರಿಯಾಯಿತಿ ದೊರೆಯಲಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




