AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಸ್ ಅಕ್ರಮ ನಿವೇಷನ ಹಂಚಿಕೆ: ಸಿಎಂ ಡಿ.ಕೆ. ಶಿವಕುಮಾರ್‌ಗೆ ದೇವೇಗೌಡರ ಸುದೀರ್ಘ ಪತ್ರ

ನೈಸ್ ಸಂಸ್ಥೆಗೆ ಸಂಬಂಧಿಸಿದಂತೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟ ನೀಡಿರುವ ಅನುಮತಿಯನ್ನು ವಿರೋಧಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ನಿರ್ಧಾರವು ಸುಪ್ರೀಂ ಕೋರ್ಟ್ ತೀರ್ಪಿಗೆ ಹಾಗೂ ಕಾನೂನಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿರುವ ಅವರು, ಇದರಿಂದ ರೈತರಿಗಿಂತ ನೈಸ್ ಸಂಸ್ಥೆಗೆ ಹೆಚ್ಚಿನ ಲಾಭವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ನೈಸ್ ಅಕ್ರಮ ನಿವೇಷನ ಹಂಚಿಕೆ: ಸಿಎಂ ಡಿ.ಕೆ. ಶಿವಕುಮಾರ್‌ಗೆ ದೇವೇಗೌಡರ ಸುದೀರ್ಘ ಪತ್ರ
ಸಿಎಂ ಡಿಕೆಶಿಗೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರಿಂದ ಪತ್ರ
ಸುನಿಲ್​ ಎಮ್​ ಹೆಚ್​
| Edited By: |

Updated on: Sep 07, 2026 | 1:09 PM

Share

ಮುಖ್ಯಾಂಶಗಳು

  • ನೈಸ್ ನಿವೇಶನ ಹಂಚಿಕೆ ನಿರ್ಧಾರ ವಿರೋಧಿಸಿ ಸಿಎಂಗೆ ದೇವೇಗೌಡರ ಸುದೀರ್ಘ ಬಹಿರಂಗ ಪತ್ರ.
  • ಸುಪ್ರೀಂ ಕೋರ್ಟ್ ಆದೇಶ ಮೀರಿ ನಿವೇಶನ ನೀಡುತ್ತಿರುವುದಕ್ಕೆ ಮಾಜಿ ಪ್ರಧಾನಿ ತೀವ್ರ ಆಕ್ಷೇಪ.
  • ನಿಜವಾದ ಫಲಾನುಭವಿಗಳು ರೈತರೋ ಅಥವಾ ನೈಸ್ ಸಂಸ್ಥೆಯೋ ಎಂದು ಗೌಡರ ಪ್ರಶ್ನೆ.

ಬೆಂಗಳೂರು, ಸೆಪ್ಟೆಂಬರ್ 07: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICEL) ನೈಸ್ ಸಂಸ್ಥೆಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ವಿರೋಧಿಸಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸೆಪ್ಟೆಂಬರ್ 4ರಂದು ಸಚಿವ ಸಂಪುಟವು ಜಮೀನು ಕಳೆದುಕೊಂಡವರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ನೈಸ್ ಸಂಸ್ಥೆಗೆ ಅನುಮತಿ ನೀಡಿರುವುದನ್ನು ದೇವೇಗೌಡರು ತೀವ್ರವಾಗಿ ಖಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ

1997ರ ಚೌಕಟ್ಟು ಒಪ್ಪಂದದ ಕುರಿತು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ದೇವೇಗೌಡರು, ರಸ್ತೆ ಮತ್ತು ಮೂಲಸೌಕರ್ಯಕ್ಕಾಗಿ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಲು ಅವಕಾಶವಿಲ್ಲ ಎಂದು 2016ರಲ್ಲಿ ಕಾಂಗ್ರೆಸ್ ಸರ್ಕಾರವೇ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು ಎಂಬುದನ್ನು ನೆನಪಿಸಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಸಹ ಇಂಟರ್‌ಚೇಂಜ್ ಜಾಗಗಳಲ್ಲಿ ನಿವೇಶನ ನಿರ್ಮಾಣ ಮಾಡುವುದನ್ನು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿವೆ. ಹೀಗಿದ್ದರೂ ಸಚಿವ ಸಂಪುಟ ಹಂಚಿಕೆಗೆ ಅಂಕಿತ ಹಾಕಿರುವುದು ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಯಾರ ಲಾಭಕ್ಕಾಗಿ ಈ ನಿರ್ಧಾರ?

ಮಾದಾವರ, ಕೆಂಗೇರಿ, ಕೊಮಘಟ್ಟ, ಸೋಂಪುರ, ಪಾಂತರಪಾಳ್ಯ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳು ರಸ್ತೆ ಮೂಲಸೌಕರ್ಯ ವ್ಯಾಪ್ತಿಗೆ ಬರುತ್ತವೆ. ಜುಲೈ 2026ರ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಉಲ್ಲೇಖಿಸಿರುವ ಅವರು, ಕಂಪನಿಯು ಸಾರ್ವಜನಿಕ ಹಿತಾಸಕ್ತಿಯನ್ನು ಗಾಳಿಗೆ ತೂರಿ ವೈಯಕ್ತಿಕ ಲಾಭ ಮಾಡಿಕೊಂಡಿದೆ ಎಂದು ವೀಕ್ಷಿಸಿದೆ ಎಂದಿದ್ದಾರೆ. ಸಂಸ್ಥೆಯ ಖಾತೆಗಳ ಫೋರೆನ್ಸಿಕ್ ಆಡಿಟ್ ನಡೆಸಲು ಕೋರ್ಟ್ ಸೂಚಿಸಿರುವುದನ್ನು ಉಲ್ಲೇಖಿಸಿ, “ನಿಜವಾದ ಫಲಾನುಭವಿಗಳು ಸಂತ್ರಸ್ತ ರೈತರೋ ಅಥವಾ ನೈಸ್ ಸಂಸ್ಥೆ ಮತ್ತು ಅದರ ಹೂಡಿಕೆದಾರರೋ? ನಿಮ್ಮ ಸಂಪುಟದಲ್ಲೂ ಹೂಡಿಕೆದಾರರಿದ್ದಾರೆಯೇ?” ಎಂದು ದೇವೇಗೌಡರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us