ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಎಐ: ಮಣ್ಣಿಲ್ಲದೆ ನೀರಿನಲ್ಲೇ ಬಾಲ್ಕನಿ, ಟೆರಸ್ ಮೇಲೆ ಬೆಳೆಯಬಹುದು ಸೊಪ್ಪು-ತರಕಾರಿ!
Bengaluru Tech Summit 2024, ಬೆಂಗಳೂರು ಟೆಕ್ ಸಮಿಟ್ 2024: ಪ್ರತಿ ಬಾರಿಯಂತೆ ಈ ವರ್ಷವೂ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಸಾಕಷ್ಟು ತಂತ್ರಜ್ಞಾನಗಳ ಪರಿಚಯ, ವಿನಿಮಯ ಆಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಎದುರಾಗಿರುವ ಕಸ ವಿಲೇವಾರಿ ಸಮಸ್ಯೆಗೆ ಸಂಶೋಧನಾ ವಿದ್ಯಾರ್ಥಿಗಳು ಹೊಸ ಐಡಿಯಾ ಹುಡುಕಿದ್ದಾರೆ. ಮತ್ತೊಂದೆಡೆ ಕೃಷಿಕ ಮಹಿಳೆಯರ ವ್ಯವಸಾಯಕ್ಕೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಟ್ರಿಕೊಟ್ಟಿದೆ.
ಬೆಂಗಳೂರು, ನವೆಂಬರ್ 20: ಈ ವರ್ಷದ ಬೆಂಗಳೂರು ಟೆಕ್ ಸಮ್ಮಿಟ್ ಸಾಕಷ್ಟು ವೈವಿಧ್ಯಮಯವಾಗಿದೆ. ಐಟಿ-ಬಿಟಿ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಕೃಷಿ ಕ್ಷೇತ್ರದಲ್ಲೂ ಈಗ ಆಧುನಿಕ ತಂತ್ರಜ್ಞಾನದ ಪರ್ವ ಶುರುವಾಗಿದೆ. ತಂತ್ರಜ್ಞಾನ ಬೆಳೆದಂತೆ, ಬೇಸಾಯ ಮಾಡುವ ವ್ಯವಸ್ಥೆಯೂ ಆಧುನಿಕ ಮಾದರಿಯತ್ತ ಸಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದರೆ, ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಕಂಡು ಬಂದ ಈ ದೃಶ್ಯ.
ಕೃಷಿ ಕ್ಷೇತ್ರಕ್ಕೂ AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಕಾಲಿಟ್ಟಿದೆ. ಎಐ ಮೂಲಕ ಇನ್ಮುಂದೆ ಬೆಳೆಗಳ ನಿರ್ವಹಣೆ ಮತ್ತಷ್ಟು ಸುಲಭವಾಗಲಿದೆ. ತುಂತುರು ನೀರಾವರಿ, ಹನಿ ನೀರಾವರಿಗಿಂತ ಭಿನ್ನವಾದ ತಂತ್ರಜ್ಞಾನವನ್ನು ಸಂಶೋಧನಾ ವಿದ್ಯಾರ್ಥಿಗಳು ಪರಿಚಯಿಸಿದ್ದಾರೆ. ಇದರ ಮೂಲಕ ಮಣ್ಣಿನಲ್ಲಿ ಬೆಳೆಯುವ ಬೆಳೆಗಳಿಗೆ AI ತಂತ್ರಜ್ಞಾನ ಅಳವಡಿಕೆ ಮಾಡಬಹುದು. ಸುಮಾರು ಕಾಲು ಎಕರೆ ಕೃಷಿ ಭೂಮಿಗೆ ಕೇವಲ 2 ಸಾವಿರ ಲೀಟರ್ನಲ್ಲಿ ನೀರಾವರಿ ಮಾಡಿ ಫಸಲು ಪಡೆಯಬಹುದು.
ಮಣ್ಣು, ಗೊಬ್ಬರ ಇಲ್ಲದೆ ನೀರಿನಲ್ಲೇ ಸೊಪ್ಪು-ತರಕಾರಿ!
ಹೈಡ್ರೋಪೋನಿಕ್ಸ್ ಮೂಲಕ ಕೇವಲ ನೀರಿನಲ್ಲೇ ಸೊಪ್ಪು, ತರಕಾರಿ ಬೆಳೆಯಬಹುದು. 3 ತಿಂಗಳ ಅವಧಿಯಲ್ಲಿ ಬೆಳೆಯುವ ಪದಾರ್ಥಗಳಿಗೆ ಮಾತ್ರ ಇದು ಸಹಕಾರಿಯಾಗಲಿದೆ. ಈ ಬೇಸಾಯಕ್ಕೆ ಮಣ್ಣು ಹಾಗೂ ಯಾವುದೇ ರೀತಿಯ ಗೊಬ್ಬರ, ರಾಸಾಯನಿಕ ಸಾಮಾಗ್ರಿ ಬಳಸದೆಯೇ ಫಸಲು ಗಳಿಸಬಹುದಾಗಿದೆ. ಅದರಲ್ಲೂ ಕೃಷಿಕ ಮಹಿಳೆಯರಿಗೆ ಈ ತಂತ್ರಜ್ಞಾನ ಹೆಚ್ಚು ಸಹಕಾರಿ ಆಗಲಿದೆ. ಇಂತಹದೊಂದು ವಿನೂತನ ತಂತ್ರಜ್ಞಾನವನ್ನ IIITB (Indian Institute of Information Technology) ಪರಿಚಯಿಸಿದೆ.
ಮತ್ತೊಂದೆಡೆ, ಕೇವಲ 2 ಸಾವಿರ ಲೀಟರ್ ನೀರಿದ್ದರೆ ಸಾಕು, ಮಣ್ಣಿನಲ್ಲಿ ಒಂದು ಬೆಳೆ ಸುಲಭವಾಗಿ ಬೆಳೆಯಬಹುದು. ಸುಮಾರು 10 ಗುಂಟೆಗೆ 50 ಸಾವಿರ ರೂಪಾಯಿ ಖರ್ಚು ಮಾಡಿದರೆ ಸಾಕು, ಕಡಿಮೆ ನೀರಲ್ಲಿ ಬೆಳೆ ಬೆಳೆಯಲು ಸಹಾಯಕವಾಗಲಿದೆ. ಕೇವಲ ಕೃಷಿ ಜಮೀನು ಮಾತ್ರವಲ್ಲದೇ ಬಾಲ್ಕನಿ, ಮನೆಯ ಟೆರಸ್ ಮೇಲೆಯೂ ವರ್ಕೌಟ್ ಆಗಲಿದೆ ಈ ಟೆಕ್ನಾಲಜಿ. ಸದ್ಯ ಇದು ಸಂಶೋಧನಾ ಕೇಂದ್ರದಲ್ಲಿ ಮಾತ್ರ ಬಳಕೆ ಆಗುತ್ತಿದೆ ಎಂದು ಉಪನ್ಯಾಸಕ ರಮೇಶ್ ಕ್ಯಾಸ್ತೂರು ತಿಳಿಸಿದ್ದಾರೆ.
ಕಸ ವಿಲೇವಾರಿ ಸಮಸ್ಯೆಗೆ ಸಂಶೋಧನಾ ವಿದ್ಯಾರ್ಥಿಗಳ ಫುಲ್ ಸ್ಟಾಪ್
ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ, ಅತ್ತ ಕಸ ವಿಲೇವಾರಿಯೂ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಷ್ಟೇ ದಂಡ ವಿಧಿಸಿದರೂ ಯಾಮಾರಿಸಿ ರಸ್ತೆಗಳಲ್ಲೇ ಜನ ಕಸ ಸುರಿದು ಹೋಗ್ತಾ ಇರುತ್ತಾರೆ. ಇದೀಗ ಬೆಂಗಳೂರಿನ ಜನ ಸ್ವಲ್ಪ ಈ ಮಾದರಿಯನ್ನು ಅಳವಡಿಕೆ ಮಾಡಿಕೊಂಡರೆ ಕಸದ ಸಮಸ್ಯೆಗೆ ಫುಲ್ ಸ್ಟಾಪ್ ಇಡಬಹುದು. ಕಸದಿಂದ ತಯಾರಾದ ಗೊಬ್ಬರವನ್ನು ತಮ್ಮ ಮನೆಯ ಗಿಡಗಳಿಗೆ ಬಳಕೆ ಮಾಡಬಹುದು. ಹೌದು, ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ IIITB ಸಂಶೋಧನಾ ವಿಧ್ಯಾರ್ಥಿಗಳು ಮುಂದಾಗಿದ್ದಾರೆ.
ಮನೆಯಲ್ಲಿ IIITB ಸಂಶೋಧನಾ ವಿಧ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಮಾದರಿಯ ಅದೊಂದು ಮಷಿನ್ ಇದ್ದರೆ ಸಾಕು, ಕಸವನ್ನು ಅವರವರೇ ವಿಲೇವಾರಿ ಮಾಡಬಹುದು. ಅದಷ್ಟೇ ಅಲ್ಲದೆ ಅಪಾರ್ಟ್ಮೆಂಟ್, ಹೋಟೆಲ್ ಸೇರಿದಂತೆ ಇತರೆ ಮನೆಗಳಿಗೂ ಈ ತಂತ್ರಜ್ಞಾನ ಹೆಚ್ಚು ಅನುಕೂಲವಾಗಲಿದೆ. ಈ ತಂತ್ರಜ್ಞಾನ ಮೂಲಕ ಒಂದು ಬಾರಿ 800 ಕೆಜಿ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಒಂದು ತಿಂಗಳಿನಲ್ಲಿ ನೀವು ಶೇಖರಿಸಿದ ಕಸ ಗೊಬ್ಬರವಾಗಿ ಪರಿವರ್ತನೆ ಮಾಡಬಹುದು. 10 ಸಾವಿರ ಹೂಡಿಕೆ ಮಾಡಿದರೆ ಸಾಕು, ಕಸ ಸಮಸ್ಯೆಗೆ ಮುಕ್ತಿ ಸಿಗುತ್ತೆ.
ಕಸ ವಿಲೇವಾರಿಯ ನಿಯಂತ್ರಣ ಮೊಬೈಲ್ನಲ್ಲೇ ಮಾಡಿ!
ಈ ತಂತ್ರಜ್ಞಾನದ ಮೂಲಕ, ಕಸ ವಿಲೇವಾರಿ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಮೊಬೈಲ್ನಲ್ಲಿಯೇ ಪಡೆಯಬಹುದು. ಸದ್ಯ ಕಂಪ್ಯೂಟರ್ ಮೂಲಕ ದತ್ತಾಂಶಗಳನ್ನ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಆಪ್ ಮೂಲಕವೂ ಕಸ ವಿಲೇವಾರಿ ಹಂತ ವೀಕ್ಷಿಸಬಹುದು. ಸಣ್ಣ ಡಸ್ಟ್ ಬಿನ್ನಿಂದ ದೊಡ್ಡ ಪ್ರಮಾಣದ ಡ್ರಮ್ಗಳಲ್ಲೂ ಕಸ ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಬಹುದು. ಕಸ ಬಿಸಾಡುವುದಕ್ಕಿಂತ ಮನೆಯಲ್ಲೇ ಕಾಂಪೋಸ್ಟ್ ಮಾಡಿ ಪರಿಸರಸ್ನೇಹಿ ಗೊಬ್ಬರ ತಯಾರಿಸಬಹುದು. ಸದ್ಯ ಸಂಶೋದನಾ ಕೇಂದ್ರದಲ್ಲಿ ಮಾತ್ರ ಈ ವಿಧಾನ ಬಳಕೆ ಮಾಡಲಾಗುತ್ತಿದೆ. ಮದುವೆ ಮನೆ, ಹೋಟೆಲ್, ಪಾರ್ಕ್, ಅಪಾರ್ಟ್ಮೆಂಟ್, ಮನೆ, ರಸ್ತೆ ಬದಿ ಸಂಗ್ರಹವಾಗುವ ಕಸಕ್ಕೂ ಈ ಯಂತ್ರ ಅಳವಡಿಸಿ ಗೊಬ್ಬರ ತಯಾರಿಸುವ ದಿನ ಬರಬಹುದು.
ಒಟ್ಟಾರೆ, ದಿನ ಕಳೆದಂತೆ ಎಲ್ಲಾ ಕ್ಷೇತ್ರಗಳಲ್ಲೂ ವಿಭಿನ್ನ ತಂತ್ರಜ್ಞಾನಗಳ ಪರಿಚಯವಾಗುತ್ತಿದೆ. ಆದರೆ ಕೃಷಿ ಕ್ಷೇತ್ರದಲ್ಲೂ ಈ ರೀತಿಯ ಹೊಸ ಹೊಸ ತಂತ್ರಜ್ಞಾನಗಳು ಅನಾವರಣಗೊಳ್ಳುತ್ತಿರುವುದರಿಂದ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರೆ ತಪ್ಪಾಗಲಾರದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ