ನಾಳೆಯೇ ಪರಿಷತ್ ಚುನಾವಣೆ: 5ನೇ ಅಭ್ಯರ್ಥಿ ಗೆಲುವಿಗೆ ‘ಕೈ’ ತಂತ್ರ, ಏಕೈಕ ಕ್ಯಾಂಡಿಡೇಟ್ ವಿಜಯಕ್ಕೆ ಜೆಡಿಎಸ್ ಕಸರತ್ತು
ನಾಳೆ ಕರ್ನಾಟಕ ವಿಧಾನಪರಿಷತ್ ಚುನಾವಣೆ ನಡೆಯಲಿದ್ದು, ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರೆಸಾರ್ಟ್ ರಾಜಕೀಯ, ಅಡ್ಡಮತದಾನದ ಭೀತಿ ಮತ್ತು ಪಕ್ಷಗಳ ಕೊನೆಯ ಕ್ಷಣದ ಲೆಕ್ಕಾಚಾರದಿಂದಾಗಿ ಎಲೆಕ್ಷನ್ ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ.

ಬೆಂಗಳೂರು, ಜೂನ್ 17: ನಾಳೆ (ಜೂನ್ 18) ವಿಧಾನಪರಿಷತ್ ಚುನಾವಣೆ ನಡೆಯಲಿರುವ ಹಿನ್ನೆಲೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳಲ್ಲಿಯೂ ಆತಂಕ ಹೆಚ್ಚಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಈ ಎಲೆಕ್ಷನ್ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, ಗೆಲುವಿಗಾಗಿ ಭಾರೀ ಲೆಕ್ಕಾಚಾರ ಶುರುವಾಗಿದೆ.
ಕಾಂಗ್ರೆಸ್‌ನಿಂದ ಐವರು, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮೂವರು ಅಭ್ಯರ್ಥಿಗಳು ಅಖಾಡದಲ್ಲಿದ್ದು, ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ಮತ್ತು ಎನ್‌ಡಿಎ ಮೂರನೇ ಅಭ್ಯರ್ಥಿಯ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿದೆ. ಜೆಡಿಎಸ್ ಮತಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಶಾಸಕರನ್ನು ಹಿಡಿದಿಡಲು ದಳಪತಿಗಳು ತಂತ್ರ ರೂಪಿಸಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದೆ ಎಂಬ ಕಾರಣಕ್ಕೆ ಅಡ್ಡಮತದಾನದ ಭೀತಿಯಿಂದ ಈಗಾಗಲೇ ಕೈ ನಾಯಕರು ರೆಸಾರ್ಟ್ ವಾಸ್ತವ್ಯದಲ್ಲಿದ್ದಾರೆ. ಜೆಡಿಎಸ್ ಶಾಸಕರು ಕೂಡ ಇಂದು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಸ್ಥಳಾಂತರವಾಗುವ ಸಾಧ್ಯತೆ ಇದ್ದು, ಕೊನೆಯ ಕ್ಷಣದ ರಾಜಕೀಯ ಕಸರತ್ತು ಜೋರಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸಿಕ್ತು ವಿಶೇಷ ಸ್ಥಾನ
ಸಂಖ್ಯಾ ಬಲದ ಅಂತಿಮ ಲೆಕ್ಕಾಚಾರ
- ವಿಧಾನಸಭೆಯ ಹಾಲಿ ಬಲ- 222 ಶಾಸಕರು
- ಕಾಂಗ್ರೆಸ್ – 135
- ಬಿಜೆಪಿ – 62
- ಜೆಡಿಎಸ್ – 18
- ಪಕ್ಷೇತರರು – 2
- ಸರ್ವೋದಯ ಕರ್ನಾಟಕ ಪಕ್ಷ – 1
- ಬಿಜೆಪಿ ಉಚ್ಚಾಟಿತರು – 3
ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 28 ಮೊದಲ ಪ್ರಾಶಸ್ತ್ಯದ ಮತಗಳು ಅಗತ್ಯವಾಗಿವೆ. ಹೀಗಾಗಿ ಕಾಂಗ್ರೆಸ್ಗೆ 5 ಅಭ್ಯರ್ಥಿಗಳನ್ನು ಗೆಲ್ಲಿಸಲು ಕನಿಷ್ಠ 140 ಮತಗಳು ಬೇಕು. 135 ತನ್ನದೇ ಮತಗಳನ್ನು ಹೊಂದಿರುವ ಆಡಳಿತಾರೂಢ ಪಕ್ಷಕ್ಕೆ 2 ಪಕ್ಷೇತರರು ಹಾಗೂ 1 ಸರ್ವೋದಯ ಪಕ್ಷದ ಸದಸ್ಯರ ಬೆಂಬಲದಿಂದ ಬಲ 138ಕ್ಕೆ ಏರಿಕೆ ಆಗಲಿದೆ. ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬೆಂಬಲ ನೀಡಿದರೆ ಸಂಖ್ಯೆ 140 ತಲುಪಲಿದೆ. ಹೀಗಾಗಿ ಕಾಂಗ್ರೆಸ್ ಐದೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಲೆಕ್ಕಾಚಾರದಲ್ಲಿ ಇದೆ.
62 ಶಾಸಕರ ಬಲ ಹೊಂದಿರುವ ಬಿಜೆಪಿಯಿಂದ ಕಣದಲ್ಲಿರುವ 2 ಅಭ್ಯರ್ಥಿಗಳಿಗೆ ತಲಾ 28ರಂತೆ 56 ಮತಗಳು ಅಗತ್ಯವಿದೆ. ಹೀಗಾಗಿ 6 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಆದರೆ ಓರ್ವ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿರುವ ಜೆಡಿಎಸ್ ಬಳಿ ಇರೋದು ಕೇವಲ 18 ಶಾಸಕರು. ಹೀಗಿದ್ದರೂ ಬಿಜೆಪಿಯ 6 ಹೆಚ್ಚುವರಿ ಮತ, ಜನಾರ್ದನ ರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲ ಸೇರಿದರೆ ಒಟ್ಟು 26 ಮತಗಳ ಗಡಿ ತಲುಪಲಿದೆ. ಆದರೆ ಗೆಲುವಿಗೆ 28 ಮತಗಳು ಬೇಕಿರುವ ಹಿನ್ನೆಲೆ 2 ಮತಗಳ ಕೊರತೆ ಜೆಡಿಎಸ್‌ಗೆ ಆಗಲಿದೆ.
ಇಂದು ಬಿಎಲ್ಪಿ ಸಭೆ
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕರಿಗೆ ವಿಪ್ ಜಾರಿಯಾಗಲಿದ್ದು, ಮತದಾನ ಪ್ರಕ್ರಿಯೆ ಮತ್ತು ಮತ ಹಂಚಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



