ಆಡಳಿತದ ಅವ್ಯವಸ್ಥೆ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಲಾಯಿಸಿದ್ದರ ಬಗ್ಗೆ ಸುರೇಶ್ ಕುಮಾರ್ ಆಕ್ರೋಶ
ಕಲಬುರಗಿ-ಚಿಂಚೋಳಿ ಮಾರ್ಗದ KKRTC ಬಸ್‌ನ ಹೆಡ್‌ಲೈಟ್ ಕೆಟ್ಟು, ಚಾಲಕ 84 ಕಿ.ಮೀ ದೂರ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕ್ರಮಿಸಿದ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಬಿಜೆಪಿ ಶಾಸಕ ಸುರೇಶ್ ಕುಮಾರ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಇದು ಆಡಳಿತದ ಸಂಪೂರ್ಣ ಅವ್ಯವಸ್ಥೆಯ ಸಂಕೇತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಮೊಬೈಲ್ ಟಾರ್ಚ್ ನೆರವಿನಿಂದ ಬಸ್ ಸಂಚಾರ!
- ಕೆಕೆಆರ್ಟಿಸಿ ಬಸ್ ಚಾಲಕನ ಸಾಹಸದ ವಿಡಿಯೋ ವೈರಲ್
- ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ರೋಶ
ಬೆಂಗಳೂರು, ಜುಲೈ 6: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ (KKRTC) ಸೇರಿದ ಬಸ್ಸೊಂದರ ಹೆಡ್‌ಲೈಟ್ ಕೈಕೊಟ್ಟ ಕಾರಣ ಚಾಲಕ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಚಲಾಯಿಸಿರುವ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಬಿಜೆಪಿ (BJP) ಶಾಸಕ ಎಸ್ ಸುರೇಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಆಡಳಿತದ ಅವ್ಯವಸ್ಥೆ ಎಂದು ಕಿಡಿಕಾರಿದ್ದಾರೆ. ಸಾಮಾಜಿಮ ಮಾಧ್ಯಮ ಫೇಸ್ಬುಕ್ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಆ ಚಾಲಕ ಮತ್ತು ಕಂಡಕ್ಟರ್ ಇಬ್ಬರಿಗೂ ಸಾರಿಗೆ ಸಚಿವರು ಹೆಚ್ಚು ಬೆಳಕು ನೀಡಬಲ್ಲ ಮೊಬೈಲ್ ಉಪಕರಣಗಳನ್ನು ನೀಡಿ ಸನ್ಮಾನ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯದ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಅಂದಿನ ಹಣಕಾಸು ಸಚಿವರು, ವಿಧಾನಸಭೆಯ ಸಿಬ್ಬಂದಿ ಹಿಡಿದ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಜೆಟ್ ಭಾಷಣ ಓದಿದ್ದನ್ನು ಇಡೀ ರಾಜ್ಯ ಗಮನಿಸಿತ್ತು. ವಿಧಾನಸಭೆಯಲ್ಲಿಯೇ ಈ ಸ್ಥಿತಿ ಬಂದದ್ದಕ್ಕೆ ಎಲ್ಲರೂ ಮರುಗಿದ್ದರು. ಇದೀಗ ಆ ವಿದ್ಯಮಾನಕ್ಕೆ ಸವಾಲೆಸಿದಿರುವ ಘಟನೆ ಕಲಬುರಗಿಯಿಂದ ಬಂದಿದೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.
‘ಕಲಬುರಗಿ ಯಿಂದ ಚಿಂಚೋಳಿಗೆ ರಾತ್ರಿ ಹೊರಟಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಬಸ್ಸೊಂದು, ಕಂಡಕ್ಟರ್ ಹಿಡಿದ ಮೊಬೈಲ್ ಟಾರ್ಚ್ ಬೆಳಕಲ್ಲೇ ಬರೋಬ್ಬರಿ 84 km ಚಲಿಸಿ ಚಿಂಚೋಳಿ ತಲುಪಿದೆಯೆಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಸರ್ಕಾರಿ ಬಸ್ ಗಳ ದುಸ್ಥಿತಿ ಕುರಿತು ಆಕ್ರೋಶ ವ್ಯಕ್ತವಾಗಿದೆ. ಎಲ್ಲ ಮಾಧ್ಯಮಗಳಲ್ಲಿ ಇದು ಭಾರಿ ಸದ್ದು ಮಾಡಿದೆ. ಕಲಬುರಗಿ ಯಿಂದ ಚಿಂಚೋಳಿಗೆ ಹೊರಟಿದ್ದ ಬಸ್ಸಿಗೆ ಹೆಡ್ ಲೈಟ್ ಇರಲಿಲ್ಲ. ಆಗ ರಾತ್ರಿ ಕಗ್ಗತ್ತಲಿನಲ್ಲಿ ರಸ್ತೆ ಕಾಣುವಂತೆ ಕಂಡಕ್ಟರ್ ತಾವಿರೋ ಬಸ್ಸಿನ ಡ್ರೈವರ್ ಪಕ್ಕ ಕುಳಿತು ತಮ್ಮ ಮೊಬೈಲ್ ಟಾರ್ಚ್ ಬೆಳಗಿಸಿ ಬಸ್ಸು ಓಡಿಸಲು ಸಹಕರಿಸಿದ್ದಾರೆ. ಈ ಟಾರ್ಚ್ ಬೆಳಕಿನಲ್ಲಿಯೇ ಚಾಲಕರು ಸಹ ಹರಸಾಹಸಪಟ್ಟು 84 ಕಿಲೋಮೀಟರ್ ಬಸ್ ಓಡಿಸಿ ಚಿಂಚೋಳಿ ತಲುಪಿದ್ದಾರೆ. ಇದನ್ನು ಸಾಹಸ ಎಂದು ಹೇಳಬೇಕೊ ಅಥವಾ ದುಸ್ಸಾಹಸ ಎಂದು ಬಣ್ಣಿಸಬೇಕು ಗೊತ್ತಾಗುತ್ತಿಲ್ಲ. ಆದರೆ ಆಡಳಿತದ ಅವ್ಯವಸ್ಥೆ ಎಂಬುದಂತೂ ಸ್ಪಷ್ಟವಾಗಿದೆ. ಆ 84 ಕಿಲೋಮೀಟರ್ ಬಸ್ ಚಲಿಸುತ್ತಿದ್ದಾಗ ಪ್ರಯಾಣಿಕರ ಮನಸ್ಥಿತಿ ಹೇಗಿದ್ದಿರಬಹುದು?’ ಎಂದು ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರೇಶ್ ಕುಮಾರ್ ಫೇಸ್ಬುಕ್ ಪೋಸ್ಟ್
‘ಆ ಚಾಲಕ ಮತ್ತು ಕಂಡಕ್ಟರ್ ಇಬ್ಬರಿಗೂ ಸಾರಿಗೆ ಸಚಿವರು ಹೆಚ್ಚು ಬೆಳಕು ನೀಡಬಲ್ಲ ಮೊಬೈಲ್ ಉಪಕರಣಗಳನ್ನು ನೀಡಿ ಸನ್ಮಾನ ಮಾಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಹಾಗೆಯೇ ಈ ಗ್ಯಾರಂಟಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸದಂತೆ ಕೋರಿಕೊಳ್ಳುತ್ತೇನೆ. ಅಂದ ಹಾಗೆ ಈ ಕುರಿತು ರಾಜ್ಯ ಗೃಹ ಸಚಿವರು ಅಂತಿಮ ತೀರ್ಪು ನೀಡುವುದು ಇನ್ನೂ ಬಾಕಿ ಇದೆ ಎಂದು ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಮೊಬೈಲ್ ಟಾರ್ಚ್ ನೆರವಿನಿಂದ ಬಸ್ ಚಲಾಯಿಸಿದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ




