ಗೃಹಲಕ್ಷ್ಮಿಯರಿಗೆ ಭರ್ಜರಿ ಶಾಕ್ ಕೊಟ್ಟ ಸರ್ಕಾರ: ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಫಲಾನುಭವಿಗಳಿಗೆ ಕೊಕ್
ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ಕಂಡುಬಂದ ಹಿನ್ನೆಲೆ ಪರಿಷ್ಕರಣೆ ನಡೆಸಿರುವ ರಾಜ್ಯ ಸರ್ಕಾರ ಆದಾಯ ತೆರಿಗೆ ಪಾವತಿದಾರರು ಹಾಗೂ ಮೃತಪಟ್ಟವರು ಸೇರಿದಂತೆ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಕೈಬಿಟ್ಟಿದೆ. ಇದರಿಂದ ತಿಂಗಳಿಗೆ 77 ಕೋಟಿ ರೂ. ಉಳಿತಾಯವಾಗಲಿದ್ದು, ಅನರ್ಹರಿಗೆ ಹಣ ಪಾವತಿಯಾಗುವುದನ್ನು ತಡೆಯುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೀಘ್ರದಲ್ಲೇ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲೂ ಸಿದ್ಧತೆ ನಡೆಸಿದೆ.

ಬೆಂಗಳೂರು, ಜೂನ್ 15: 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಯೋಜನೆಯ ದುರುಪಯೋಗ ಕಂಡು ಬಂದಿರುವ ಹಿನ್ನೆಲೆ ಪರಿಷ್ಕರಣೆ ನಡೆದಿದ್ದು, ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕೆಂದು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಈಗಾಗಲೇ ಮಾಹಿತಿ ನೀಡಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ 1.30 ಕೋಟಿ ಗೃಹಲಕ್ಷ್ಮಿಯರ ಪೈಕಿ 3.89 ಲಕ್ಷ ಫಲಾನುಭವಿಗಳಿಗೆ ಭರ್ಜರಿ ಶಾಕ್ ಕೊಟ್ಟಿದೆ.
ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ ಬಳಿಕ ಅನರ್ಹ ಫಲಾನುಭವಿಗಳನ್ನು ಗುರುತಿಸಿರುವ ಇಲಾಖೆ, ಅವರ ಖಾತೆಗಳಿಗೆ ಹಣ ವರ್ಗಾವಣೆ ಸ್ಥಗಿತಗೊಳಿಸಿದೆ. ಇಲಾಖೆಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಮತ್ತು GST ಪಾವತಿಸುವ 1.94 ಲಕ್ಷ ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ. ಜೊತೆಗೆ, ಮೃತಪಟ್ಟ 1.95 ಲಕ್ಷ ಫಲಾನುಭವಿಗಳ ಹೆಸರಿನಲ್ಲಿದ್ದ ಖಾತೆಗಳಿಗೂ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಅಂತಹ ಖಾತೆಗಳಿಗೆ ಸಹ ಹಣ ವರ್ಗಾವಣೆ ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ; ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ
ಅನರ್ಹ ಗೃಹಲಕ್ಷ್ಮಿಯರಿಗೆ ಶಾಕ್
| ಜಿಲ್ಲೆ | ಐಟಿ/ಜಿಎಸ್ಟಿ ಪಾವತಿದಾರರು | ಮರಣ ಹೊಂದಿದವರು | ಒಟ್ಟು |
| ಬೆಂಗಳೂರು ನಗರ | 33,833 | 14,038 | 47,871 |
| ಬೆಳಗಾವಿ | 16,432 | 15,850 | 32,282 |
| ದಕ್ಷಿಣ ಕನ್ನಡ | 10,495 | 6,159 | 16,654 |
| ಮೈಸೂರು | 9,139 | 11,541 | 20,680 |
| ತುಮಕೂರು | 7,898 | 12,139 | 20,037 |
| 31 ಜಿಲ್ಲೆಗಳಿಂದ | 1,94,560 | 1,95,224 | 3,89,784 |
ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಅನರ್ಹ ಫಲಾನುಭವಿಗಳ ಪೈಕಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 47,871 ಗೃಹಲಕ್ಷ್ಮಿಯರನ್ನ ಕೈಬಿಡಲಾಗಿದೆ. ತದನಂತರ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆ ಅನರ್ಹರ ಪರಿಷ್ಕರಣೆಯಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆದಿವೆ.
ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯ
ಮಾರ್ಚ್ ತಿಂಗಳಲ್ಲೇ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿರುವ ಇಲಾಖೆ, ವಿವಿಧ ಸರ್ಕಾರಿ ದತ್ತಾಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಈ ಪರಿಷ್ಕರಣೆ ಕೈಗೊಂಡಿದೆ. ಅನರ್ಹರಿಗೆ ಹಣ ಪಾವತಿಯಾಗುವುದನ್ನು ತಡೆಯುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೀಘ್ರದಲ್ಲೇ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲೂ ಸಿದ್ಧತೆ ನಡೆಸಿದೆ. ಈ ಕ್ರಮದಿಂದ ತಾಂತ್ರಿಕ ಲೋಪಗಳು ಮತ್ತು ನಕಲಿ ಫಲಾನುಭವಿಗಳ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಈ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದೆ.
ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:53 am, Mon, 15 June 26




