ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ: ಬೀದರ್ ಕಲಾವಿದನ ಅಪ್ಪಟ ನೈಸರ್ಗಿಕ ಗಣಪನಿಗೆ ಭಾರಿ ಬೇಡಿಕೆ!
ಬೀದರ್ ತಾಲೂಕಿನ ಗುನ್ನಳ್ಳಿ ಗ್ರಾಮದ ಕಲಾವಿದ ಹಣಮಂತ ಮಲ್ಕಾಪುರೆ ತಯಾರಿಸುವ ಅಪ್ಪಟ ನೈಸರ್ಗಿಕ ಮಣ್ಣಿನ ಗಣಪತಿ ಮೂರ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ರಾಸಾಯನಿಕ ಬಣ್ಣಗಳಿಲ್ಲದೆ ಕೇವಲ ಕೆಂಪು ಮಣ್ಣಿನಿಂದ ತಯಾರಾಗುವ ಈ ಮೂರ್ತಿಗಳು ಜಲಮಾಲಿನ್ಯ ತಡೆಯಲು ನೆರವಾಗುತ್ತಿದ್ದು, ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಪ್ರೇರಣೆಯಾಗಿವೆ.

ಮುಖ್ಯಾಂಶಗಳು
- ಬೀದರ್‌ನಲ್ಲಿ ನೈಸರ್ಗಿಕ ಮಣ್ಣಿನ ಗಣಪತಿ ಮೂರ್ತಿಗಳಿಗೆ ಹೆಚ್ಚಿದ ಭಾರಿ ಬೇಡಿಕೆ.
- ಕಳೆದ ಎಂಟು ವರ್ಷಗಳಿಂದ ಪ್ರಕೃತಿ ಸ್ನೇಹಿ ಗಣಪತಿ ತಯಾರಿಸುತ್ತಿರುವ ಹಣಮಂತ.
- ರಾಸಾಯನಿಕ ಬಣ್ಣ ಬಳಸದೆ ಕೆಂಪು ಮಣ್ಣಿನಿಂದ ಕಲಾತ್ಮಕ ಮೂರ್ತಿಗಳ ನಿರ್ಮಾಣ.
ಬೀದರ್, ಸೆಪ್ಟೆಂಬರ್ 09: ಇನ್ನೈದು ದಿನಗಳಲ್ಲಿ ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಶುರುವಾಗಲಿದ್ದು, ಮಾರುಕಟ್ಟೆಗೆ ತರಹೇವಾರಿ ಮೂರ್ತಿಗಳು ಆಗಮಿಸಿವೆ. ಆದರೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಿಒಪಿ ಗಣೇಶ ಮೂರ್ತಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪೂಜಿಸುವ ಜಾಗೃತಿ ಜನರಲ್ಲೂ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೀದರ್ ತಾಲೂಕಿನ ಗುನ್ನಳ್ಳಿ ಗ್ರಾಮದ ಚಿತ್ರಕಲಾ ಶಿಕ್ಷಕ ಹಾಗೂ ಕಲಾವಿದ ಹಣಮಂತ ಮಲ್ಕಾಪುರೆ ಅವರು ತಯಾರಿಸುತ್ತಿರುವ ನೈಸರ್ಗಿಕ ಮಣ್ಣಿನ ಗಣೇಶ ವಿಗ್ರಹಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಅಪ್ಪಟ ನೈಸರ್ಗಿಕ ಮೂರ್ತಿಗಳನ್ನು ಮಾಡುವ ಹಣಮಂತ
ಕಳೆದ 8 ವರ್ಷಗಳಿಂದ ಪ್ರಕೃತಿ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರುವ ಹಣಮಂತ, ತಮ್ಮ ಊರಿನಲ್ಲೇ ಸಿಗುವ ಕೆಂಪು ಮಣ್ಣನ್ನು ತಂದು, ಹದಗೊಳಿಸಿ, ಕಲ್ಲುಗಳನ್ನು ಬೇರ್ಪಡಿಸಿ ಒಣಗಿಸಿದ ಪುಡಿಯಿಂದ ಸುಂದರ ಮೂರ್ತಿಗಳನ್ನು ರೂಪಿಸುತ್ತಾರೆ. ಇವರು ತಯಾರಿಸುವ ಗಣಪತಿಗೆ ಯಾವುದೇ ರಾಸಾಯನಿಕ ಬಣ್ಣ ಹಚ್ಚುವುದಿಲ್ಲ. ಕೇವಲ ಕಣ್ಣು ಹಾಗೂ ಕೊರಳಿಗೆ ಮಾತ್ರ ಸಾಂಕೇತಿಕವಾಗಿ ಬಣ್ಣ ಬಳಿಯುವುದರಿಂದ ಇವು ಅಪ್ಪಟ ನೈಸರ್ಗಿಕ ಮೂರ್ತಿಗಳಾಗಿವೆ. 4 ರಿಂದ 14 ಇಂಚಿನವರೆಗಿನ ಮೂರ್ತಿಗಳನ್ನು ತಯಾರಿಸುವ ಇವರಿಂದ ಈಗಾಗಲೇ 300ಕ್ಕೂ ಹೆಚ್ಚು ವಿಗ್ರಹಗಳನ್ನು ಸಾರ್ವಜನಿಕರು ಮುಂಗಡವಾಗಿ ಕಾಯ್ದಿರಿಸಿ ಖರೀದಿಸಿದ್ದಾರೆ.
ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ
“ಗಣೇಶನು ಮಣ್ಣಿನಿಂದಲೇ ಜನಿಸಿದ್ದಾನೆ ಎಂಬ ಪುರಾಣದ ಉಲ್ಲೇಖವಿದೆ. ಹೀಗಾಗಿ ಮಣ್ಣಿನ ಗಣಪತಿಯನ್ನು ಪೂಜಿಸುವುದು ಎಲ್ಲರಿಗೂ ಶ್ರೇಯಸ್ಕರ. ಮನೆಯಲ್ಲೇ ನೀರು ತುಂಬಿದ ಪಾತ್ರೆಯಲ್ಲಿ ವಿಲೇವಾರಿ ಮಾಡಬಹುದಾದ ಈ ಮೂರ್ತಿ ಕರಗಿದ ನಂತರ, ಆ ನೀರು ಮತ್ತು ಮಣ್ಣನ್ನು ತುಳಸಿ ಗಿಡಕ್ಕೆ ಹಾಕಬಹುದು. ಇದರಿಂದ ಜಲಮಾಲಿನ್ಯ ಹಾಗೂ ಜಲಚರಗಳಿಗೆ ಕಂಟಕ ಎದುರಾಗುವುದಿಲ್ಲ” ಎಂದು ಹಣಮಂತ್ ಮಲ್ಕಾಪುರೆ ಅಭಿಪ್ರಾಯಪಡುತ್ತಾರೆ. ಹಬ್ಬದ ಸಂಭ್ರಮದೊಂದಿಗೆ ಪರಿಸರ ಕಾಳಜಿ ಮೆರೆಯುತ್ತಿರುವ ಈ ಕಲಾವಿದನ ಪ್ರಯತ್ನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




