AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣಿಯನಪುರ ಅರಣ್ಯವನ್ನು ಆನೆ ಕಾರಿಡಾರ್ ಎಂದು ಘೋಷಿಸುವಂತೆ ಎನ್‌ಟಿಸಿಎ ಶಿಫಾರಸು: ಪ್ರಸ್ತಾಪಕ್ಕೆ ಪರ-ವಿರೋಧ

ಬಂಡೀಪುರ ಸಮೀಪದ ಕಣಿಯನಪುರ ಅರಣ್ಯವನ್ನು ಆನೆ ಕಾರಿಡಾರ್ ಎಂದು ಘೋಷಿಸಲು ಎನ್‍ಟಿಸಿಎ ಶಿಫಾರಸು ಮಾಡಿದ್ದು, ಪ್ರಸ್ತಾಪದ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ. ಆನೆ ಕಾರಿಡಾರ್ ಘೋಷಣೆಯಿಂದ ಸ್ಥಳೀಯ ರೈತರು ಅಥವಾ ಅವರ ಜೀವನೋಪಾಯಕ್ಕೆ ಯಾವುದೇ ಹಾನಿಯಾಗಬಾರದು ಎಂದೂ ಶಿಫಾರಸಲ್ಲಿ ಎನ್‌ಟಿಸಿಎ ಉಲ್ಲೇಖಿಸಿದೆ.

ಕಣಿಯನಪುರ ಅರಣ್ಯವನ್ನು ಆನೆ ಕಾರಿಡಾರ್ ಎಂದು ಘೋಷಿಸುವಂತೆ ಎನ್‌ಟಿಸಿಎ ಶಿಫಾರಸು: ಪ್ರಸ್ತಾಪಕ್ಕೆ ಪರ-ವಿರೋಧ
ಸಾಂದರ್ಭಿಕ ಚಿತ್ರImage Credit source: PTI
ಪ್ರಸನ್ನ ಹೆಗಡೆ
|

Updated on:Nov 03, 2026 | 3:18 PM

Share

ಚಾಮರಾಜನಗರ, ನವೆಂಬರ್​​ 03: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (ಬಿಟಿಆರ್) ಸಮೀಪದಲ್ಲಿರುವ ಹಿನ್ನೆಲೆ ಕಣಿಯನಪುರ ಅರಣ್ಯವನ್ನು ಆನೆ ಕಾರಿಡಾರ್ ಎಂದು ಘೋಷಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸಿನಿಂದ ಪರಿಸರ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಭೂಹಕ್ಕುಗಳ ವಿಚಾರವಾಗಿ ವನ್ಯಜೀವಿ ಸಂರಕ್ಷಣಾಕಾರರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಚರ್ಚೆ ಆರಂಭವಾಗಿದೆ.

ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಸೆಗೂರು ಆನೆ ಕಾರಿಡಾರ್​​ನ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಕಾರಿಡಾರ್ ಮುದುಮಲೈ ರಾಷ್ಟ್ರೀಯ ಉದ್ಯಾನವನವನ್ನು ಬಂಡೀಪುರ-ವಯನಾಡು ಅರಣ್ಯ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ. ಕಾರಿಡಾರ್ ವ್ಯಾಪ್ತಿಯಲ್ಲಿ ಐಷಾರಾಮಿ ರೆಸಾರ್ಟ್‌ಗಳು ಮತ್ತು ಫಾರ್ಮ್‌ಹೌಸ್‌ಗಳ ನಿರ್ಮಾಣಕ್ಕೆ ಈ ಘೋಷಣೆಯ ಮೂಲಕ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಗರ್ಭಿಣಿ ಕಾಡಾನೆ ಕಳೇಬರ ಪತ್ತೆ; ಕಾಡಾನೆಗಳ ಕಾದಾಟದಿಂದ ಸಾವಾಗಿರುವ ಶಂಕೆ

ಮಾನವ-ಆನೆ ಸಂಘರ್ಷ ಹೆಚ್ಚಳದ ಎಚ್ಚರಿಕೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತ ಐಷಾರಾಮಿ ರೆಸಾರ್ಟ್‌ಗಳು ಮತ್ತು ಫಾರ್ಮ್‌ಹೌಸ್‌ಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಎನ್‌ಟಿಸಿಎ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಆನೆಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ವಿದ್ಯುತ್ ಬೇಲಿಗಳು ಮತ್ತು ಕಾಂಕ್ರೀಟ್ ಕಾಂಪೌಂಡ್ ಗೋಡೆಗಳ ಬಗ್ಗೆಯೂ ಪ್ರಾಧಿಕಾರ ಗಮನ ಸೆಳೆದಿದೆ. ವಾಣಿಜ್ಯ ಉದ್ದೇಶಗಳಿಗಾಗಿ, ವಿಶೇಷವಾಗಿ ರೆಸಾರ್ಟ್‌ಗಳು, ಹೋಟೆಲ್‌ಗಳು ಮತ್ತು ಫಾರ್ಮ್‌ಹೌಸ್‌ಗಳನ್ನು ನಿರ್ಮಿಸಲು ಹೊರಗಿನವರು ಸ್ಥಳೀಯ ರೈತರಿಂದ ಭೂಮಿ ಖರೀದಿಸುತ್ತಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆನೆಗಳ ಸಂಚಾರಕ್ಕೆ ಅಡ್ಡಿಪಡಿಸುವುದರಿಂದ ಮಾನವ-ಆನೆ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಕಾಡಾನೆಗಳಿಂದ ಬೆಳೆ ಹಾನಿಯೂ ಹೆಚ್ಚಬಹುದು ಎಂದು ವರದಿ ಎಚ್ಚರಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಲವು ಒತ್ತಾಯ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಕಣಿಯನಪುರ ಸೇರಿದಂತೆ ಇತರ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಆನೆ ಕಾರಿಡಾರ್‌ಗಳೆಂದು ಘೋಷಿಸುವಂತೆ ಎನ್‌ಟಿಸಿಎ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ. ಹೊರಗಿನವರಿಗೆ ಕೃಷಿ ಭೂಮಿ ಮಾರಾಟ ಮಾಡುವುದನ್ನು ನಿಯಂತ್ರಿಸುವುದು ಹಾಗೂ ವಾಣಿಜ್ಯ ನಿರ್ಮಾಣಗಳಿಗೆ, ಅದರಲ್ಲೂ ವಿಶೇಷವಾಗಿ ಐಷಾರಾಮಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಪ್ರಕಾಶಮಾನವಾದ ದೀಪಗಳು ಹಾಗೂ ಎತ್ತರದ ಕಾಂಪೌಂಡ್ ಗೋಡೆಗಳನ್ನು ಹೊಂದಿರುವ ಫಾರ್ಮ್‌ಹೌಸ್‌ಗಳ ನಿರ್ಮಾಣಕ್ಕೆ ನಿರ್ಬಂಧ ವಿಧಿಸುವಂತೆಯೂ ಶಿಫಾರಸು ಮಾಡಿದೆ.

ಆದರೆ, ಆನೆ ಕಾರಿಡಾರ್ ಘೋಷಣೆಯಿಂದ ಸ್ಥಳೀಯ ರೈತರು ಅಥವಾ ಅವರ ಜೀವನೋಪಾಯಕ್ಕೆ ಯಾವುದೇ ಹಾನಿಯಾಗಬಾರದು ಎಂದು ಎನ್‌ಟಿಸಿಎ ಶಿಫಾರಸು ಮಾಡಿದೆ. ಬಂಡೀಪುರ ಬಫರ್ ವಲಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಮತ್ತು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸುವುದನ್ನು ನಿಷೇಧಿಸಿ 2012ರಲ್ಲಿ ಹೊರಡಿಸಲಾದ ಸರ್ಕಾರಿ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಆಗ್ರಹಿಸಿದೆ.

ಪ್ರಸ್ತಾಪಕ್ಕೆ ಪರ-ವಿರೋಧ

ಪ್ರಸ್ತಾವಿತ ಆನೆ ಕಾರಿಡಾರ್ ಅನ್ನು ವನ್ಯಜೀವಿ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆಗೆ ಮತ್ತಷ್ಟು ಬಲ ಸಿಗಲಿದೆ ಎಂಬುದು ಅವರ ಅಭಿಪ್ರಾಯ. ಆದರೆ, ಈ ನಿರ್ಬಂಧಗಳಿಂದ ಹೊರಗಿನವರಿಗೆ ತಮ್ಮ ಭೂಮಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ರೈತರು ಮತ್ತು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಜಮೀನುಗಳಲ್ಲಿ ನಿರ್ಮಿಸುವ ಫಾರ್ಮ್‌ಹೌಸ್‌ಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಜೊತೆಗೆ ಆದಾಯಕ್ಕೂ ಪೂರಕವಾಗುತ್ತವೆ ಎಂದು ಅವರು ವಾದಿಸಿದ್ದಾರೆ ಎಂದು ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:18 pm, Tue, 3 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More