ಚೆಂಡು ಹೂ ಫ್ಯಾಕ್ಟರಿಯಿಂದ ಬರುತ್ತಿದೆ ದುರ್ವಾಸನೆ; ಉಸಿರಾಟದ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರಿಂದ ಆರೋಪ
ಪ್ರತಿನಿತ್ಯ 1050 ಕೆಜಿ ಕಲ್ಲಿದ್ದಲು ಸುಡುವುದರಿಂದ ಕಾರ್ಖಾನೆಯಿಂದ ಹೊರ ಬರುವ ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಚಾಮರಾಜನಗರ: ಚೀನಾ ಮೂಲದ ಕಂಪನಿಯೊಂದು ಕಳೆದ 3 ವರ್ಷಗಳ ಹಿಂದೆ ಚೆಂಡು ಮಲ್ಲಿಗೆ ಸಂಸ್ಕರಣ ಫ್ಯಾಕ್ಟರಿಯನ್ನು ಚಾಮರಾಜನಗರದಲ್ಲಿ ಆರಂಭಿಸಿತ್ತು. ಆರಂಭದಲ್ಲಿ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತಾದರೂ ರಾಜಕೀಯ ಪ್ರಭಾವ ಮತ್ತು ಸರ್ಕಾರಗಳ ಬೆಂಬಲದೊಂದಿಗೆ ಫ್ಯಾಕ್ಟರಿ ಆರಂಭಗೊಂಡಿತ್ತು. ಆದರೆ ಈ ಕಾರ್ಖಾನೆ ಆರಂಭವಾದಾಗಿನಿಂದ ಸುತ್ತಮುತ್ತ ಗ್ರಾಮಸ್ಥರು ಆನಾರೋಗ್ಯದಿಂದ ಬಳಲುವಂತಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೆ ಫ್ಯಾಕ್ಟರಿ ಮುಚ್ಚುವಂತೆ ರೈತರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಕೂಡ ಆರಂಭಸಿದ್ದರು. ಒಂದು ವಾರಗಳ ಕಾಲ ಮುಚ್ಚಲ್ಪಟ್ಟಿದ್ದ ಆ ಫ್ಯಾಕ್ಟರಿ ಪುನಃ ಆರಂಭವಾಗಿದ್ದು, ಇದು ಸಹಜವಾಗಿಯೇ ಸುತ್ತಮುತ್ತಲ ಗ್ರಾಮಸ್ಥರು ಮತ್ತು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಮರಾಜನಗರದಲ್ಲಿ ಚೆಂಡು ಮಲ್ಲಿಗೆ ಸಂಸ್ಕರಣ ಫ್ಯಾಕ್ಟರಿ ಪ್ರಾರಂಭ ಆಗಿರುವುದರಿಂದ ಗಂಭೀರ ಸಮಸ್ಯೆ ತಲೆದೋರಿದೆ. ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಬಳಿ ಸ್ಥಾಪನೆಗೊಂಡಿರುವ ಚೀನಾ ಮೂಲದ ಫ್ಯಾಕ್ಟರಿಯಿಂದ ಸ್ಥಳೀಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂದು ಫ್ಯಾಕ್ಟರಿ ಸುತ್ತಮುತ್ತಲ ಪ್ರದೇಶದ ಗ್ರಾಮಸ್ಥರು ಆರೋಪಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೆಂಡು ಮಲ್ಲಿಗೆ ಹೂ ಬೆಳೆಯಲಾಗುತ್ತಿದೆ. ಚೆಂಡು ಮಲ್ಲಿಗೆ ಬಳಸಿಕೊಂಡು ಬಣ್ಣ ತಯಾರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಚೀನಾ ಮೂಲದ ಚಿಯಾಂಗ್ ಎಂಬ ಖಾಸಗಿ ಕಂಪನಿಯೊಂದು ಕಳೆದ 3 ವರ್ಷಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಕಗ್ಗಳದ ಹುಂಡಿ ಬಳಿ ಸುಮಾರು 57 ಎಕರೆ ಪ್ರದೇಶದಲ್ಲಿ ಚೆಂಡು ಮಲ್ಲಿಗೆ ಸಂಸ್ಕರಣೆ ಮಾಡುವ ಫ್ಯಾಕ್ಟರಿ ಆರಂಭಿಸಿದೆ. ಆದರೆ ಈ ಕಾರ್ಖಾನೆಯಿಂದ ಹೊರ ಬರುತ್ತಿರುವ ದುರ್ನಾತ ಕಗ್ಗಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರ ಆರೋಗ್ಯ ಹದಗೆಡುವಂತೆ ಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಗ್ಗಳ, ಕಗ್ಗಳಹುಂಡಿ, ತೆರಕಣಾಂಬಿ, ದೇಪಾಪುರ, ಶೀಲವಂತಪುರ, ಪಾರ್ವತಿಪುರ, ಕೆಲಸೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ದುರ್ನಾತ ಬೀರುತ್ತಿದೆ. ಹೀಗಾಗಿ ಒಂದಷ್ಟು ಮಂದಿ ಪ್ರತಿನಿತ್ಯ ಆಸ್ಪತ್ರೆಗೆ ಹೋಗಿ ಬರುವಂತೆ ಆಗಿದೆ. ಇಷ್ಟೆ ಅಲ್ಲದೆ ಕಾರ್ಖಾನೆಯ ತ್ಯಾಜ್ಯವನ್ನು ಮಣ್ಣಿನಲ್ಲಿ ಹೂಳುತ್ತಿದ್ದರಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ಆರೋಪಿಸದ್ದಾರೆ.
ಪ್ರತಿನಿತ್ಯ 1050 ಕೆಜಿ ಕಲ್ಲಿದ್ದಲು ಸುಡುವುದರಿಂದ ಕಾರ್ಖಾನೆಯಿಂದ ಹೊರ ಬರುವ ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಫ್ಯಾಕ್ಟರಿ ಮುಚ್ಚುವಂತೆ ರೈತರು ನಡೆಸಿದ ಹೋರಾಟದ ಫಸಲವಾಗಿ ಕಳೆದ ಒಂದು ವಾರದ ಹಿಂದೆ ಕಾರ್ಖಾನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಈ ಕಾರ್ಖಾನೆ ಸದ್ದಿಲ್ಲದೆ ಮತ್ತೆ ಆರಂಭಗೊಂಡಿದೆ. ಕೊಳೆತ ಚೆಂಡು ಮಲ್ಲಿಗೆ ಹೂವುಗಳನ್ನು ಸಂಸ್ಕರಣ ಮಾಡುವ ವೇಳೆ ದುರ್ನಾತ ಹೊಡೆಯುತ್ತಿದೆ.
ದುರ್ನಾತ ಬಾರದಂತೆ ಕೆಮಿಕಲ್ ಬಳಕೆ ಮಾಡುತ್ತಿರುವುದರಿಂದ ಮತ್ತಷ್ಟು ದುರ್ವಾಸನೆ ಉಂಟಾಗಿ ಈ ಗಾಳಿ ಸೇವಿಸಿದ ಜನರಿಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಕಾರ್ಖಾನೆ ಹೊರಸೂಸುವ ದುರ್ನಾತ 8-10 ಕಿಲೋ ಮೀಟರ್ವರೆಗೂ ವ್ಯಾಪಿಸುತ್ತಿದೆ. ದುರ್ವಾಸನೆಯ ಪರಿಣಾಮ ರೈತರು ಜಮೀನುಗಳಲ್ಲಿ ಮೂಗುಮುಚ್ಚಿಕೊಂಡೆ ಕೆಲಸ ಮಾಡುವಂತಾಗಿದೆ. ಜಮೀಗಳಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಬರುತ್ತಿಲ್ಲ. ಇಷ್ಟೇ ಅಲ್ಲ ಐದು ಕಿಲೋ ಮೀಟರ್ ದೂರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗೂ ದುರ್ವಾಸನೆ ವ್ಯಾಪಿಸಿದ್ದು, ಮಕ್ಕಳು ಮೂಗು ಮುಚ್ಚಿಕೊಂಡೆ ಪಾಠ ಕೇಳ ಬೇಕಿದೆ ಎಂದು ಸ್ಥಳೀಯರಾ ಮಂಜು ಆರೋಪಿಸಿದ್ದಾರೆ.
ಈ ಬಗ್ಗೆ ಚಿಯಾಂಗ್ ಕಂಪನಿಯ ಜನರಲ್ ಮೆನೇಜರ್ ರಮೇಶ್ ಅವರನ್ನು ಕೇಳಿದರೆ ಚೆಂಡು ಮಲ್ಲಿಗೆ ಸಂಸ್ಕರಣ ಫ್ಯಾಕ್ಟರಿ ಆರಂಭ ಮಾಡುವುದರಿಂದ ಅಲ್ಪ ಪ್ರಮಾಣದ ದುರ್ವಾಸನೆ ಬರುತ್ತಿದೆ. ಆರಂಭದಲ್ಲಿ ಇದ್ದ ಸಮಸ್ಯೆ ಇಲ್ಲ. ರಾಜ್ಯದಲ್ಲಿ ಇರುವ 6 ಫ್ಯಾಕ್ಟರಿಗಳ ಪೈಕಿ ಹೈಟೆಕ್ ತಂತ್ರಜ್ಞಾನ ಬಳಸಿಕೊಂಡು ಫ್ಯಾಕ್ಟರಿ ನಡೆಸಲಾಗುತ್ತಿದೆ. ಬರುವ ದಿನಗಳಲ್ಲಿ ಮತ್ತಷ್ಟು ಸುಧಾರಣೆ ಕ್ರಮ ಅನುಸರಿಸಿ ದುರ್ವಾಸನೆ ತಡೆಯಲು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಫ್ಯಾಕ್ಟರಿ ಆರಂಭ ಆದಾಗಿನಿಂದ ಚೆಂಡು ಮಲ್ಲಿಗೆ ಬೆಳೆಯುವ ರೈತರಿಗೆ ತುಂಬ ಅನುಕೂಲ ಆಗಿದೆ. ಆದರೆ ಕೆಲವರು ನಮ್ಮ ಮೇಲೆ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಈ ಹಿಂದೆ ಇದೇ ಪ್ಯಾಕ್ಟರಿ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರೈತರೊಡನೆ ಪ್ರತಿಭಟನೆಯಲ್ಲು ಪಾಲ್ಗೊಂಡಿದ್ದರು. ಈಗ ಅವರೇ ಶಾಸಕರಾಗಿದ್ದಾರೆ. ಆದರೆ ಈಗ ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿದ್ದನ್ನು ಬಿಟ್ಟರೆ ಕಾರ್ಖಾನೆಯಿಂದ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಯಾವುದೇ ರೀತಿಯ ಗಂಭೀರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುವುದು ಗ್ರಾಮಸ್ಥರ ಆರೋಪ ಆಗಿದೆ. ಜಿಲ್ಲಾಡಳಿತ ಇನ್ನಾದರು ಎಚ್ಛೆತ್ತು ಕಾರ್ಖಾನೆಯಿಂದ ಆಗುತ್ತಿರುವ ದುರ್ವಾಸನೆ, ಅಂತರ್ಜಲ ಕಲುಷಿತ ಹಾಗು ಪರಿಸರ ಮಾಲಿನ್ಯ ತಡೆಗಟ್ಟಲು ಕ್ರಮ ಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಎಂ ಇ ಮಂಜುನಾಥ್
ಇದನ್ನೂ ಓದಿ: Explainer: ಕೆಟ್ಟವಾಸನೆಯ ದೈತ್ಯಾಕಾರದ ಈ ಅಪರೂಪದ ಹೂವು ನೋಡಲು ಜನ ಮುಗಿಬೀಳುತ್ತಿರುವುದೇಕೆ?
ತೆರಿಗೆ ವಂಚನೆ ಆರೋಪ: ನ್ಯೂಸ್ ಕ್ಲಿಕ್, ನ್ಯೂಸ್ ಲಾಂಡ್ರಿ ಕಚೇರಿಯಲ್ಲಿ ಐಟಿ ‘ಪರಿಶೀಲನೆ’
Published On - 9:44 am, Tue, 14 September 21