Karnataka rains: ರಾಜ್ಯಾದ್ಯಂತ ಧಾರಾಕಾರ ಮಳೆ: ಎಷ್ಟು ಸಾವಿರ ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ ಗೊತ್ತಾ?
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಹಾಳಾಗಿರುವ 1560 ಕೊಠಡಿಗಳ ದುರಸ್ಥಿಗೆ ಬರೋಬ್ಬರಿ 11 ಕೋಟಿ ರೂಪಾಯಿಗಳ ಅನುದಾನವನ್ನು ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆನ ಎಂದು ಜಯರಾಮರೆಡ್ಡಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅವರು ಟಿವಿ9 ಗೆ ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ನಡೆದ ಅವಾಂತರಗಳು ಒಂದಲ್ಲ, ಎರಡಲ್ಲ.. ಒಂದೆಡೆ ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳು ಜಲಾವೃತವಾಗಿ ಮಳೆಯ ರುದ್ರನರ್ತನ ದರ್ಶನವಾಗುತ್ತಿದ್ದರೆ, ಮತ್ತೊಂದಡೆ ರಾಜ್ಯಾದ್ಯಂತ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವ್ಯಾಪ್ತಿಗೆ ಬರುವ ಸುಮಾರು 40 ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿಗಳು ಮಳೆಯಿಂದ ಗಢಗಢ ನಡುಗುತ್ತಿವೆ. ಮಳೆಯಿಂದ ಸೋರುತ್ತಿರುವ ನೀರಿನ ಕೊಠಡಿಗಳಲ್ಲಿಯೇ ವಿದ್ಯಾರ್ಥಿಗಳು ಕುಳಿತು ಪಾಠ ಪ್ರವಚನ ಕೇಳುವಂತಾಗಿದೆ. ಈ ಕುರಿತು ಒಂದು ವರದಿ…
ಮಳೆಯಿಂದ ಸೋರುತ್ತಿರುವ ಸರ್ಕಾರಿ ಶಾಲಾ ಕೊಠಡಿಗಳ ಮೇಲ್ಛಾವಣಿಗಳು, ತೊಟ್ಟಿಕ್ಕಿತ್ತಿರುವ ಗೋಡೆಗಳು, ಮಳೆ ನೀರಿನಲ್ಲಿ ಒದ್ದೆಯಾಗಿರುವ ವಿದ್ಯಾರ್ಥಿಗಳ ಪುಸ್ತಕಗಳು ಇಂಥ ಕರುಣಾಜನಕ ಸ್ಥಿತಿ ಎದುರಾಗಿರುವುದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಲ್ಲಿ. ಹೌದು.. ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ 1560 ಶಾಲಾ ಕೊಠಡಿಗಳಿಗೆ ಹಾನಿಯಾಗಿ ಶಾಲೆಯ ಗೋಡೆಗಳು ಬಿರುಕುಬಿಟ್ಟಿವೆ. ಮೇಲ್ಚಾವಣಿಗಳಲ್ಲಿ ನೀರು ಸೋರುತ್ತಿದೆ.
ಸೋರುವ ಶಾಲೆಯಲ್ಲಿಯೇ ಕುಳಿತು ವಿದ್ಯಾರ್ಥಿಗಳು ಪಾಠ, ಪ್ರವಚನಗಳನ್ನು ಕೇಳುತ್ತಿದ್ದಾರೆ. ಕುಳಿತ ಡೆಸ್ಕ್ ಗಳ ಮೇಲೆ ನೀರು ಸೋರುತ್ತಿದೆ. ಪಠ್ಯಪುಸ್ತಕಗಳು ಒದ್ದೆಯಾಗುತ್ತಿವೆ. ಇನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಯನೀಯ ಸ್ಥಿತಿ ಕುರಿತು ನಮ್ಮ ಚಿಕ್ಕಬಳ್ಳಾಪುರ ಪ್ರತಿನಿಧಿ ಭೀಮಪ್ಪ ಪಾಟೀಲ್ ಒಂದು ವರದಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸ್ಥಿತಿಗತಿಯಾದರೆ, ಇಡೀ ರಾಜ್ಯಾದ್ಯಂತ ಬರೋಬ್ಬರಿ 42 ಸಾವಿರ ಕೊಠಡಿಗಳು ಮಳೆಗೆ ತತ್ತರಿಸಿ ಸೋರುತ್ತಿವೆ. 21 ಸಾವಿರ ಶಾಲಾ ಕೊಠಡಿಗಳಲ್ಲಿ ಮಳೆಯ ನೀರು ಜಿನುಗುತ್ತಿದೆ. ಜಿನುಗಿ ಅಪಾಯ ಎದುರಿಸುತ್ತಿವೆ. ಇನ್ನು 22 ಸಾವಿರ ಶಾಲಾ ಕೊಠಡಿಗಳಿಗೆ ದೊಡ್ಡಪ್ರಮಾಣದಲ್ಲಿ ಮಳೆಯಿಂದ ಹಾನಿಯಾಗಿದೆ. ಇದರಿಂದ ಎಚ್ಚೆತ್ತಿರುವ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, 42 ಸಾವಿರ ಕೊಠಡಿಗಳ ದುರಸ್ಥಿಗೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಹಾಳಾಗಿರುವ 1560 ಕೊಠಡಿಗಳ ದುರಸ್ಥಿಗೆ ಬರೋಬ್ಬರಿ 11 ಕೋಟಿ ರೂಪಾಯಿಗಳ ಅನುದಾನವನ್ನು ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆನ ಎಂದು ಜಯರಾಮರೆಡ್ಡಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅವರು ಟಿವಿ9 ಗೆ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳೆಂದರೆ ಪೋಷಕರು ಮೂಗು ಮುರಿಯುತ್ತಾರೆ. ತಮ್ಮ ಮಕ್ಕಳನ್ನು ಒಳ್ಳೆಯ ಮೂಲಭೂತ ಸೌಕರ್ಯವುಳ್ಳ ಖಾಸಗೀ ಶಾಲೆಗಳಿಗೆ ಸೇರಿಸುತ್ತಾರೆ. ಇನ್ನೂ ಇರುವ ಸರ್ಕಾರಿ ಶಾಲೆಗಳೇ ಗತಿಯೆಂದು ಕಡುಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ಸಹಾ ಸರ್ಕಾರಿ ಶಾಲೆಯಿಂದ ವಿಮುಖರಾಗುವುದಕ್ಕೂ ಮುಂಚೆ, ರಾಜ್ಯ ಸರ್ಕಾರ ಎಚ್ಚೆತ್ತು ಸೋರುತ್ತಿರುವ ಶಾಲೆಯ ಮಾಳಿಗೆಗಳನ್ನು ದುರಸ್ಥಿಗೊಳಿಸಿ ಸುಸ್ಥಿತಿಯಲ್ಲಿಡಬೇಕಾಗಿದೆ. – ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ
Published On - 1:52 pm, Fri, 9 September 22