Chitradurga: ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಪರದಾಡಿದ ಜನರು: ಕ್ಯಾರೆ ಎನ್ನದ ಜನಪ್ರತಿನಿಧಿಗಳು
ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಶಿವನಕೆರೆ ಬಳಿ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಇಲ್ಲವೆಂದು ಅನೇಕ ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದೇ ರೊಚ್ಚಿಗೆದ್ದ ಜನರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಶಿವನಕೆರೆ ಬಳಿಯ ಎ.ಕೆ.ಕಾಲೋನಿ ಬಡಾವಣೆಯ ಕೃಷ್ಣಮೂರ್ತಿ (55) ಜ.5 ರಂದು ಅನಾರೋಗ್ಯದಿಂದ ನಿಧನರಾಗಿದ್ದು, ಅಂತ್ಯ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಇಲ್ಲದೇ ಪರದಾಡುವಂತಾಗಿತ್ತು. ಹೀಗಾಗಿ ಗ್ರಾಮದ ಜನರು ಹೊಳಲ್ಕೆರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಅಂತ್ಯ ಸಂಸ್ಕಾರ ಮಾಡಲು ಜಾಗವನ್ನ ನೀಡಿ, ಇಲ್ಲದಿದ್ದರೆ ತಾಲೂಕು ಕಚೇರಿ ಬಳಿಯೇ ತಂದು ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಕೆರೆಯ ಬಳಿ ನಾಲ್ಕು ಎಕರೆ ಸ್ಮಶಾನ ಭೂಮಿಯಾಗಿ ನೀಡಲಾಗಿತ್ತು. ಆದರೆ ಇತ್ತೀಚೆಗೆ ಶಿವನಕೆರೆ ಬಳಿ ರಸ್ತೆ ಅಗಲೀಕರಣ ಮಾಡಲಾಗಿದ್ದು ಕೆರೆ ಏರಿಯನ್ನ ಏರಿಸಲಾಗಿದೆ. ಹೀಗಾಗಿ ಭರ್ತಿಯಾದ ಕೆರೆ ನೀರು ಸ್ಮಶಾನ ಭೂಮಿಯನ್ನು ಆವರಿಸಿದ್ದು ಅಂತ್ಯ ಸಂಸ್ಕಾರಕ್ಕೆ ಜಾಗವೇ ಇಲ್ಲದಂತಾಗಿದೆ. ಇನ್ನು ಎ.ಕೆ.ಕಾಲೋನಿಯಲ್ಲಿ ವಾಸಿಸುವ ಮಾದಿಗ ಸಮುದಾಯದ ಬಗ್ಗೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ನಿರ್ಲಕ್ಷ ತೋರಿದ್ದೇ ಇಷ್ಟಕ್ಕೆಲ್ಲಾ ಕಾರಣ ಎಂದು ಕಾಲೋನಿಯ ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:ಪಂಪಹೌಸ್ ಸ್ಥಗಿತಗೊಳಿಸಿ SPML ಕಂಪನಿ ಸಿಬ್ಬಂದಿ ಪ್ರತಿಭಟನೆ, ಜೀವ ಜಲಕ್ಕಾಗಿ ಗದಗ ಬೆಟಗೇರಿ ಅವಳಿ ಜನರ ಪರದಾಟ
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ ಎ.ಕೆ.ಕಾಲೋನಿ ಜನರಿಗೆ ಅಂತ್ಯ ಸಂಸ್ಕಾರಕ್ಕೂ ಸ್ಥಳ ಇಲ್ಲದಂತಾಗಿದೆ. ಶಾಸಕ ಎಂ.ಚಂದ್ರಪ್ಪ ಹಾಗೂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಎ.ಕೆ.ಕಾಲೋನಿ ಜನರಿಗೆ ಸ್ಮಶಾನ ಭೂಮಿ ನೀಡಬೇಕೆಂಬುದು ಜನರ ಆಗ್ರಹಿಸಿದ್ದಾರೆ.
ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ