ದೇಶದಲ್ಲಿ ಹೊಸ ಸಂವಿಧಾನ ತರುವ ಸಂಚು ನಡೆಯುತ್ತಿದೆ: ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಭಾರತದಲ್ಲಿ ಹೊಸ ಸಂವಿಧಾನ ರಚನೆಯ ಸಂಚು ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ತಿರಸ್ಕರಿಸಿ ಹಿಂದೂ ರಾಷ್ಟ್ರಕ್ಕೆ ಹೊಸ ಸಂವಿಧಾನ ತರುವ ಯತ್ನಿಸಲಾಗುತ್ತಿದೆ. ಈ ಸಂಚಿನಿಂದ ದೇಶಕ್ಕೆ ಅಪಾಯವಿದೆ ಎಂದು ಹೇಳಿ ಜನರಲ್ಲಿ ಜಾಗೃತಿ ಮೂಡಿಸಬೇಕು.ವೇದ ಅಧ್ಯಯನ ಮಾಡಿದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಹೇಳಿದರು.
![ದೇಶದಲ್ಲಿ ಹೊಸ ಸಂವಿಧಾನ ತರುವ ಸಂಚು ನಡೆಯುತ್ತಿದೆ: ಸ್ವಾಮೀಜಿ](https://images.tv9kannada.com/wp-content/uploads/2025/01/panditaradhya-shivacharya-swamiji.jpg?w=1280)
ಚಿತ್ರದುರ್ಗ, ಜನವರಿ 29: ನಮ್ಮ ದೇಶದಲ್ಲಿ ಹೊಸ ಸಂವಿಧಾನ (Constitution) ತರುವ ಸಂಚು ನಡೆಯುತ್ತಿದೆ. ಡಾ. ಬಿಆರ್ ಅಂಬೇಡ್ಕರ್ (BR Ambedkar) ಸಂವಿಧಾನವನ್ನು ಹಿಂದೆ ಹಾಕಿ ಹೊಸ ಸಂವಿಧಾನ ತರುವ ಸಂಚು ರೂಪಿಸಲಾಗುತ್ತಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ (Panditaradhya Shivacharya Swamiji) ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆದ ನಮ್ಮ ನಡೆ ಸರ್ವೋದಯದೆಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚು ಜಾರಿಗೆ ಬರುವ ಮುನ್ನ ನಾವೆಲ್ಲರೂ ಜಾಗೃತರಾಗಬೇಕಿದೆ. ಜಾಗೃತರಾಗದಿದ್ದರೆ ನಾಳೆ ನಮ್ಮ ನಾಡಿಗೆ ಖಂಡಿತ ಉಳಿಗಾಲವಿಲ್ಲ ಎಂದರು.
ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ಧ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಹಾಗಾದರೆ ಈಗಿರುವ ಸಂವಿಧಾನ ಏನು ಮಾಡ್ತೀರಿ. ಹೊಸ ಸಂವಿಧಾನ ತರೋದಾದರೇ ಹಳೇ ಸಂವಿಧಾನ ಸುಟ್ಟು ಹಾಕಬೇಕಾ? ನಾಶಪಡಿಸಿ ಬಹಿಷ್ಕಾರ ಹಾಕಬೇಕಾ ಎಂದು ಗಂಭೀರವಾಗಿ ಯೋಚಿಸಬೇಕಿದೆ. ಆ ಸಂವಿಧಾನದ ಸತ್ವ ಇದರಲ್ಲಿ ಇದೆಯಾ ಎಂದು ನೋಡಿದ್ರೆ ಖಂಡಿತ ಇಲ್ಲ ಎಂದು ಹೇಳಿದರು.
ಸನಾತನ ಪರಂಪರೆಯನ್ನು ಉಳಿಸಬೇಕು ಎಂದು ತಿಳಿಸಲಾಗಿದೆ. ವೇದ ಅಧ್ಯಯನ ಮಾಡಿದವರು ಮಾತ್ರ ಚುನಾವಣೆಗೆ ಬರಬೇಕು ಎಂದಿದೆ. ನಾವು ಯಾರೂ ವೇದ ಓದಿಲ್ಲ. ಲಿಂಗಾಯತ, ಬಸವ ಧರ್ಮದವರು ಸನಾತನ ಪರಂಪರೆ ವಿರೋಧಿಸಿದ್ದವರು. ಹಾಗಾದರೆ ನಾವು ಯಾರೂ ಚುನಾವಣೆಯಲ್ಲಿ ಭಾಗವಹಿಸುವ ಹಾಗಿಲ್ವಾ? ಎಂದು ಪ್ರಶ್ನಿಸಿದರು.
ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿದ್ದು ನಿಮಗೆ ಗೊತ್ತಿದೆ. ಪೀಠಾಧಿಪತಿಗಳ ಒಪ್ಪಿಗೆ ಬಳಿಕ ಸಂವಿಧಾನ ರಚಿಸಲು ಹೇಳಿದ್ದಾರೆ. ಹಾಗಾದರೆ ನಾಲ್ಕು ಪೀಠಗಳು ಯಾವವು? ನಾವು ಯಾರು ಅಲ್ವಾ? ಜಗತ್ತಿನಲ್ಲಿ ಅವು ನಾಲ್ಕು ಪೀಠಗಳು ಮಾತ್ರ ಇರೋದಾ? ಸರಿಯಾಗಿ ಯೋಚಿಸದಿದ್ರೆ ನಾಳೆ ತಲೆ ಬೋಳಿಸಿಕೊಳ್ಳಬೇಕಾಗುತ್ತೆ. ನಮ್ಮ ಬದುಕು ನರಕವಾಗಿ ಬಿಡುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಿಂಗಾಯತ, ಇಸ್ಲಾಂ ಈ ವಿಷಯಗಳಲ್ಲಿ ಒಂದೇ ಎಂದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ!
ಬಸವಣ್ಣನವರು ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದಿದ್ದಾರೆ. ಆದರೆ ಇಲ್ಲಿ ಜ್ಞಾನಕ್ಕೆ ಅವಕಾಶವೇ ಇಲ್ಲದಂತಾಗಿದೆ. ಹಿಂದೂ ರಾಷ್ಟ್ರಕ್ಕೆ ಹೊಸ ಸಂವಿಧಾನ ತರುವ ಸಿದ್ಧತೆ ನಡೆದಿದೆ. ಇಡೀ ರಾಷ್ಟ್ರದಲ್ಲಿ ಇದರ ವಿರುದ್ಧ ಒಂದು ಹೋರಾಟ ನಡೆಯಬೇಕಿದೆ. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಒಂದುಕಡೆ ಹೇಳುತ್ತೀರಿ. ಆದರೆ ದಯೆ ಹೀನರಾಗಿ ಇಂತಹ ಸಂವಿಧಾನ ರಚನೆ ಮಾಡುತ್ತೀರಿ. ಇದರ ಬಗ್ಗೆ ನಮ್ಮ ಜನ ಧ್ವನಿ ಎತ್ತಬೇಕಿದೆ. ಚಿಂತಕರು ಧ್ವನಿ ಎತ್ತದಿದ್ದರೆ ನಿಮ್ಮ ಧ್ವನಿ ಅಡಗುವ ಸ್ಥಿತಿ ಬರಲಿದೆ ಎಂದರು.