ತಿಲಕರಿಂದ ಸ್ಫೂರ್ತಿಗೊಂಡು ಉತ್ತರ ಕರ್ನಾಟಕದಲ್ಲೇ ಮೊದಲು ಶುರುವಾಯ್ತು ಸಾರ್ವಜನಿಕ ಗಣೇಶೋತ್ಸವ

Ganesh festival 2021: ಮಹಾರಾಷ್ಟ್ರದ ಬಾವ್ ಸಾಹೇಬ್ ಲಕ್ಷ್ಮಣ್ ಜವೇಲ್ ಎನ್ನುವವರು 1892 ರಲ್ಲಿ ಮೊದಲಿಗೆ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರು. ಆದರೆ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದ್ದು, ಅದರ ಮುಂದಿನ ವರ್ಷ, ಅಂದರೆ 1893 ರಲ್ಲಿ.

ತಿಲಕರಿಂದ ಸ್ಫೂರ್ತಿಗೊಂಡು ಉತ್ತರ ಕರ್ನಾಟಕದಲ್ಲೇ ಮೊದಲು ಶುರುವಾಯ್ತು ಸಾರ್ವಜನಿಕ ಗಣೇಶೋತ್ಸವ
ಸ್ವಾತಂತ್ರ ಸಂಗ್ರಾಮಕ್ಕೆ ಗಣೇಶನ ಹಬ್ಬ ಬಳಸಿಕೊಂಡ ತಿಲಕ್
TV9kannada Web Team

| Edited By: preethi shettigar

Sep 07, 2021 | 5:26 PM

ಧಾರವಾಡ: ವಿಘ್ನವಿನಾಶಕ ಗಣೇಶನ ಹಬ್ಬ ಮತ್ತೆ ಬಂದಿದೆ. ಕೊವಿಡ್ ಹಾವಳಿಯಿಂದಾಗಿ ಕಳೆದ ವರ್ಷ ಗಣೇಶೋತ್ಸವಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಈ ಬಾರಿ ಕೆಲವು ಷರತ್ತುಗಳನ್ನು ವಿಧಿಸಿ ಗಣೇಶೋತ್ಸವಕ್ಕೆ ಸರಕಾರ ಅವಕಾಶ ಕೊಟ್ಟಿದೆ. ಸರಕಾರ ಈ ಬಾರಿಯೂ ಗಣೇಶೋತ್ಸವಕ್ಕೆ ಅವಕಾಶವನ್ನು ನಿರಾಕರಿಸುತ್ತೆ ಎನ್ನಲಾಗಿತ್ತು. ಇದರಿಂದಾಗಿ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ನಿತ್ಯವೂ ಪ್ರತಿಭಟನೆ ನಡೆಯುತ್ತಲೇ ಇದ್ದವು. ಈ ಬಾರಿ ಯಾವುದೇ ಕಾರಣಕ್ಕೂ ಗಣೇಶೋತ್ಸವಕ್ಕೆ ಸರಕಾರ ನಿರ್ಬಂಧ ಹೇರಬಾರದು ಎಂದು ಸಾಕಷ್ಟು ಒತ್ತಡವೂ ಬಂತು. ಇದರಿಂದಾಗಿ ಸರಕಾರ ಜನರ ಆಗ್ರಹಕ್ಕೆ ಮಣಿದು, ಕೆಲ ನಿಬಂಧನೆಗಳನ್ನು ವಿಧಿಸಿ, ಗಣೇಶೋತ್ಸವಕ್ಕೆ ಅವಕಾಶ ನೀಡಿದೆ.

ಈ ವೇಳೆ ಒಂದು ವಿಷಯವನ್ನು ಗಮನಿಸಬೇಕು. ರಾಜ್ಯದ ಅನೇಕ ಕಡೆಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶವನ್ನು ನೀಡಬೇಕೆಂದು ಆಗ್ರಹಿಸಿದರೂ, ಆ ಕೂಗು ಹೆಚ್ಚು ಕೇಳಿ ಬಂದಿದ್ದು ಉತ್ತರ ಕರ್ನಾಟಕದಲ್ಲಿ. ಏಕೆಂದರೆ ಉತ್ತರ ಕರ್ನಾಟಕಕ್ಕೂ ಈ ಗಣೇಶೋತ್ಸವಕ್ಕೂ ಅವಿನಾಭಾವ ಸಂಬಂಧವಿದೆ. ಮಹಾರಾಷ್ಟ್ರದಲ್ಲಿ ಗಣೇಶನ ಹಬ್ಬವನ್ನು ಭಾರೀ ಅದ್ಧೂರಿಯಾಗಿ ಆಚರಿಸುತ್ತಾರೆ. ಆ ರಾಜ್ಯದಲ್ಲಿ ಅದೊಂದು ಪ್ರಮುಖ ಹಬ್ಬ. ನಮ್ಮ ರಾಜ್ಯಕ್ಕೆ ಬಂದರೆ, ಉತ್ತರ ಕರ್ನಾಟಕದಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸಾರ್ವಜನಿಕ ಗಣಪತಿಗೆ ಹೆಚ್ಚಿನ ಆದ್ಯತೆಯನ್ನೂ ನೀಡಲಾಗುತ್ತದೆ. 5, 11, 21 ದಿನಗಳ ಕಾಲ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಗಣೇಶನ ಹಬ್ಬ ಉತ್ತರ ಕರ್ನಾಟಕದಲ್ಲಿ ಇಷ್ಟು ಅದ್ಧೂರಿಯಾಗಿ ಆಚರಿಸಲು ಕಾರಣವೇನು ಎನ್ನುವುದರ ಹಿಂದೆ ದೊಡ್ಡ ಇತಿಹಾಸವೇ ಇದೆ.

ಸಾರ್ವಜನಿಕ ಗಣೇಶೋತ್ಸದ ಪರಿಕಲ್ಪನೆಯ ಜನಕ ಬಾಲಗಂಗಾಧರ ತಿಲಕ್ ಆಷಾಢ ಮಾಸದ ಬಳಿಕ ಬರುವ ಶ್ರಾವಣ ಮಾಸ ಸಾಲು ಸಾಲು ಹಬ್ಬಗಳನ್ನು ಹೊತ್ತು ತರುತ್ತದೆ. ಈ ಮಾಸದಲ್ಲಿ ಕೃಷ್ಣಾಷ್ಟಮಿ ಮುಗಿದ ಬಳಿಕ ಭಾದ್ರಪದ ಮಾಸದ ಚತುರ್ಥಿಯಂದು ಗಣೇಶನ ಹಬ್ಬ ಬರುತ್ತದೆ. ಈ ಹಬ್ಬದ ಆಚರಣೆ ತುಂಬಾನೇ ಹಳೆಯದ್ದು. ಕೆಲವರ ಮನೆಯಲ್ಲಿ ಒಂದು ದಿನ, ಐದು ದಿನ, ಹನ್ನೊಂದು ದಿನಗಳ ಕಾಲ ಗಣೇಶನನ್ನು ಇಡಲಾಗುತ್ತದೆ. ಬಳಿಕ ನೀರಿನಲ್ಲಿ ಗಣೇಶನ ಮಣ್ಣಿನ ವಿಗ್ರಹವನ್ನು ಲೀನಗೊಳಿಸಲಾಗುತ್ತದೆ. ಬಾಲಗಂಗಾಧರ ತಿಲಕ್ ಅವರಿಗೆ ಈ ಗಣೇಶನ ಹಬ್ಬವನ್ನೇ ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಬಂತು.

ಸಾಮಾನ್ಯ ಜನರಿಗೆ ದೇವರ ಮೇಲೆ ಭಕ್ತಿ ಹೆಚ್ಚು. ಅದನ್ನೇ ಸ್ವಾತಂತ್ರ ಸಂಗ್ರಾಮದ ಗುರಾಣಿಯನ್ನಾಗಿ ಬಳಸಿಕೊಳ್ಳಲು ಬಾಲಗಂಗಾಧರ ತಿಲಕ್ ಯೋಚಿಸಿದರು. ಮೊದಲನೇ ಸ್ವಾತಂತ್ರ ಸಂಗ್ರಾಮ ವಿಫಲವಾದ ಬಳಿಕ ಹಲವಾರು ವರ್ಷಗಳು ಉರುಳಿದರೂ ಮತ್ತೊಂದು ಸಂಗ್ರಾಮ ನಡೆಯಲೇ ಇಲ್ಲ. ಜನರಲ್ಲಿ ಒಗ್ಗಟ್ಟು ಬರುವತನಕ ಸ್ವಾತಂತ್ರ ಹೋರಾಟ ಸಫಲವಾಗುವುದಿಲ್ಲ ಎನ್ನುವುದನ್ನು ಹೋರಾಟದ ಮುಂಚೂಣಿಯಲ್ಲಿದ್ದ ಬಾಲಗಂಗಾಧರ ತಿಲಕ್ ಅರಿತುಕೊಂಡಿದ್ದರು. ಹೀಗಾಗಿ ಎಲ್ಲಾ ಸಮಾಜದ ಜನರನ್ನು ಒಂದೇ ವೇದಿಕೆಯಡಿ ತರಲು ಗಣೇಶನ ಹಬ್ಬ ಸೂಕ್ತ ಎನ್ನುವುದನ್ನು ಅವರು ಮನಗಂಡರು. ಅದುವರೆಗೂ ಮನೆಯಲ್ಲಿಯೇ ಉಳಿದಿದ್ದ ಗಣೇಶನನ್ನು ಸಾರ್ವಜನಿಕವಾಗಿ ಹೊರಗೆ ತಂದು ಪ್ರತಿಷ್ಟಾಪಿಸುವ ಹೊಸ ಪರಂಪರೆಯನ್ನು ಆರಂಭಿಸಿದರು.

ಸ್ವಾತಂತ್ರ ಸಂಗ್ರಾಮಕ್ಕೆ ಗಣೇಶನ ಹಬ್ಬ ಬಳಸಿಕೊಂಡ ತಿಲಕ್ ಅದುವರೆಗೂ ಸ್ವಾತಂತ್ರ ಚಳುವಳಿ ಎನ್ನುವುದು ಕೆಲವೇ ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು. ವಿದ್ಯಾರ್ಥಿಗಳು, ವಕೀಲರು ಈ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಸಾಮಾನ್ಯ ಜನರು, ಅನಕ್ಷರಸ್ಥರಿಗೆ ಈ ಚಳುವಳಿ ಬಗ್ಗೆ ಹೆಚ್ಚಿನ ಮಾಹಿತಿಯಾಗಲಿ, ಒಲವಾಗಲಿ ಇರಲೇ ಇಲ್ಲ. ಇದು ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಭಾರೀ ಹಿನ್ನೆಡೆಯುಂಟು ಮಾಡುತ್ತಿತ್ತು. ಇದೇ ಕಾರಣಕ್ಕೆ ಸಮಾಜದ ಎಲ್ಲ ಜನರು ಈ ಹೋರಾಟದಲ್ಲಿ ಪಾಲ್ಗೊಂಡಾಗ ಮಾತ್ರವೇ ಉದ್ದೇಶ ಈಡೇರುತ್ತದೆ ಎನ್ನುವುದನ್ನು ಅರಿತುಕೊಂಡ ತಿಲಕ್, ಗಣೇಶ ಹಬ್ಬವನ್ನು ಎಲ್ಲರನ್ನು ಒಗ್ಗೂಡಿಸುವ ವೇದಿಕೆಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು.

ಮಹಾರಾಷ್ಟ್ರದ ಬಾವ್ ಸಾಹೇಬ್ ಲಕ್ಷ್ಮಣ್ ಜವೇಲ್ ಎನ್ನುವವರು 1892 ರಲ್ಲಿ ಮೊದಲಿಗೆ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರು. ಆದರೆ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದ್ದು, ಅದರ ಮುಂದಿನ ವರ್ಷ, ಅಂದರೆ 1893 ರಲ್ಲಿ. ಅಷ್ಟೊತ್ತಿಗಾಗಲೇ ಅವರು ಕೇಸರಿ ಪತ್ರಿಕೆಯನ್ನು ತಂದಿದ್ದರು. ಕೇಸರಿ ಪತ್ರಿಕೆ ಮೂಲಕ ತಿಲಕರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಅನೇಕ ಲೇಖನಗಳನ್ನು ಬರೆದರು. 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಬಾಲಗಂಗಾಧರ ತಿಲಕರ ಈ ಪರಿಕಲ್ಪನೆ ಜನರನ್ನು ಸೆಳೆಯಿತು. ಜನರು ಜಾತಿ-ಮತ ಬೇಧವೆನ್ನದೇ ಈ ಗಣೇಶೋತ್ಸವಕ್ಕೆ ಸ್ಪಂದಿಸಿದರು. ಅವತ್ತು ತಿಲಕರ ಮುಂದಾಳತ್ವದಲ್ಲಿ ಮಹಾರಾಷ್ಟ್ರದಲ್ಲಿ ಆರಂಭವಾದ ಗಣೇಶೋತ್ಸವ ಇವತ್ತು ಅನೇಕ ರಾಜ್ಯಗಳಲ್ಲಿ ಹರಡಿಕೊಂಡಿದೆ. ಭಕ್ತಿ ಹಾಗೂ ಭಾವೈಕ್ಯತೆಯ ಪರಿಕಲ್ಪನೆಯಲ್ಲಿ ಹುಟ್ಟಿದ ಗಣೇಶ ಹಬ್ಬವು ಇಂದು ಎಲ್ಲರ ಅಚ್ಚುಮೆಚ್ಚಿನ ಹಬ್ಬವಾಗಿದೆ. ಈ ಹಬ್ಬ ಮುಂದಿನ ದಿನಗಳಲ್ಲಿ ದೇಶಾದ್ಯಂತ ಏಕತೆಯ ಮಂತ್ರವಾಗಿ, ಬ್ರಿಟಿಷರಿಗೆ ಬಿಸಿಯನ್ನು ಮುಟ್ಟಿಸಿದ್ದು ಇತಿಹಾಸ.

ಎಲ್ಲ ವರ್ಗದ ಜನರ ನಡುವೆ ಐಕ್ಯತೆ ಮೂಡಿಸುವ ಉದ್ದೇಶ ಆರಂಭದಲ್ಲಿ ಈ ಹಬ್ಬ ಮೇಲ್ವರ್ಗ ಹಾಗೂ ಕೆಳವರ್ಗದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಆರಂಭಿಸಿದ ಹಬ್ಬ ಎಂದುಕೊಳ್ಳಲಾಗಿತ್ತು. ಆದರೆ ಲೋಕಮಾನ್ಯ ತಿಲಕರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆಯೇ ಯೋಚಿಸಿದ್ದರು. ಮೇಲ್ವರ್ಗ ಹಾಗೂ ಕೆಳ ವರ್ಗದ ಜನರ ನಡುವೆ ಐಕ್ಯತೆ ಮೂಡಿಸುವ ಉದ್ದೇಶ ಮೇಲ್ನೋಟದಲ್ಲಿ ಸ್ಪಷ್ಟವಾಗಿ ಕಂಡು ಬಂದರೂ, ಈ ಹಬ್ಬದ ಹಿಂದಿನ ಯೋಚನೆಯೇ ಬೇರೆಯಾಗಿತ್ತು. ಎಲ್ಲರನ್ನೂ ಒಂದು ಆಚರಣೆಯಲ್ಲಿ ಸೆರೆ ಹಿಡಿದು, ಅದನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವುದು ತಿಲಕರ ಉದ್ದೇಶವಾಗಿತ್ತು.

ಬ್ರಿಟಿಷರ ವಿರುದ್ಧ ಹೋರಾಡಲು ಎಲ್ಲರನ್ನು ಒಗ್ಗೂಡಿಸಲು ಈ ಹಬ್ಬವನ್ನು ಅವರು ಕೇಂದ್ರವಾಗಿರಿಸಿಕೊಂಡಿದ್ದು ಅವರ ದೂರಾಲೋಚನೆಯ ಶಕ್ತಿ. ಏಕೆಂದರೆ ಗಣೇಶ ಎಲ್ಲ ಜಾತಿಗಳಿಗೂ ಅಚ್ಚುಮೆಚ್ಚಿನ ದೇವರಾಗಿದ್ದ. ಹೀಗಾಗಿ ಇದನ್ನೇ ಬಳಸಿಕೊಂಡ ತಿಲಕರು, ಹಬ್ಬದ ಮೂಲಕ ನಿಧಾನವಾಗಿ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಿದ್ದರು. ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಇದು ಬಹು ಮುಖ್ಯ ಹಬ್ಬವಾಗಿತ್ತು. ಈ ಹಬ್ಬಕ್ಕೆ ಸಾರ್ವಜನಿಕ ಸ್ವರೂಪ ನೀಡಿದರ ಪರಿಣಾಮ ಸ್ವಾತಂತ್ರ ಸಂಗ್ರಾಮ ಸಂಘಟಿತ ರೂಪ ಪಡೆಯಿತು. ಆರಂಭದಲ್ಲಿಯೇ ತಿಲಕರು ಗಣೇಶನ ಬೃಹತ್ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಎಲ್ಲ ವಿಗ್ರಹಗಳನ್ನು ಹತ್ತನೇ ದಿನಕ್ಕೆ ಸಾರ್ವಜನಿಕವಾಗಿ ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದರು. ಈ ಹತ್ತು ದಿನಗಳ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲ ಬಗೆಯ ಜನರನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶ ಸಾರ್ಥಕವಾಯಿತು.

ಮಹಾರಾಷ್ಟ್ರದ ಹಬ್ಬ ಉತ್ತರ ಕರ್ನಾಟಕಕ್ಕೆ ನಡೆದು ಬಂದ ಕಥೆ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕಕ್ಕೆ ಸಹಜವಾಗಿ ಈ ಹಬ್ಬ ನಡೆದುಕೊಂಡು ಬಂದು ಬಿಟ್ಟಿತು. ಅದರಲ್ಲೂ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಕುಂದಾ ನಗರಿ ಬೆಳಗಾವಿಯಲ್ಲಂತೂ ಈಗಲೂ ಮಹಾರಾಷ್ಟ್ರದಷ್ಟೇ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಅಂದು ಮಹಾರಾಷ್ಟ್ರದಲ್ಲಿ ಆರಂಭವಾದ ಹಬ್ಬವು ಬೆಳಗಾವಿ ಮೂಲಕ ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಪ್ರವೇಶ ಮಾಡಿತು. ಮುಂಬೈ ಕರ್ನಾಟಕ ಪ್ರಾಂತ್ಯದ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸಿತು. ಮಹಾರಾಷ್ಟ್ರ ಪ್ರಭಾವಿತ ಮುಂಬೈ ಕರ್ನಾಟಕದಲ್ಲಿ ಮಹಾರಾಷ್ಟ್ರದಂತೆಯೇ ಅದ್ಧೂರಿಯಾಗಿ ಗಣೇಶೋತ್ಸವ ಶುರುವಾಯಿತು. ಅದರ ಪ್ರಭಾವ ಇಂದಿಗೂ ಇದೆ. ಅಷ್ಟೇ ಅಲ್ಲದೇ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವದ ಉತ್ಸಾಹ ಹೆಚ್ಚುತ್ತಲೇ ಹೋಗುತ್ತಿದೆ. ಅಷ್ಟಕ್ಕೂ ಮಹಾರಾಷ್ಟ್ರದಲ್ಲಿ ತಿಲಕರು ಆರಂಭಿಸಿದ ಈ ಹಬ್ಬ ಉತ್ತರ ಕರ್ನಾಟಕಕ್ಕೆ ಹರಿದು ಬಂದಿದ್ದು ಕೂಡ ತುಂಬಾನೇ ವಿಶೇಷ. ಇದಕ್ಕೆ ಕಾರಣ ಮತ್ತದೇ ಲೋಕಮಾನ್ಯ ಬಾಲಗಂಗಾಧರ ತಿಲಕ್.

ಬೆಳಗಾವಿ, ಧಾರವಾಡದೊಂದಿಗೆ ತಿಲಕರ ಸಂಬಂಧ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಬೆಳಗಾವಿ, ಧಾರವಾಡ ಸೇರಿದಂತೆ ಈಗಿನ ಉತ್ತರ ಕರ್ನಾಟಕದ ಜಿಲ್ಲೆಗಳೆಂದರೆ ತುಂಬಾನೇ ಪ್ರೀತಿ. ಆ ವೇಳೆಯಲ್ಲಿ ಉತ್ತರ ಕರ್ನಾಟಕ ಅನೇಕ ಭಾಗ ಮುಂಬೈ ಪ್ರಾಂತ್ಯದಲ್ಲಿದ್ದವು. ಇದೇ ಕಾರಣಕ್ಕೆ ಇಂದಿಗೂ ಬೆಳಗಾವಿ, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳನ್ನೊಳಗೊಂಡ ಪ್ರದೇಶಕ್ಕೆ ಮುಂಬೈ ಕರ್ನಾಟಕ ಅಂತಾನೇ ಕರೆಯುತ್ತಾರೆ. ಬಾಲಗಂಗಾಧರ ತಿಲಕರು ಹತ್ತಾರು ಬಾರಿ ಈ ಭಾಗಕ್ಕೆ ಬಂದಿದ್ದಾರೆ. ಸ್ವಾತಂತ್ರ ಸಂಗ್ರಾಮದ ವೇಳೆ ಜನರನ್ನು ಸಂಘಟಿಸಲು ಅವರು ಈ ಭಾಗಕ್ಕೆ ಪದೇ ಪದೇ ಬರುತ್ತಿದ್ದರು. ಅದರಲ್ಲೂ ಬೆಳಗಾವಿ, ಅಖಂಡ ಧಾರವಾಡ ಜಿಲ್ಲೆಗೆ ಹತ್ತಾರು ಬಾರಿ ಬಂದಿದ್ದರು. ಅಲ್ಲದೇ ಈ ಪ್ರದೇಶದ ಆಡಳಿತ ಕಚೇರಿ ಮುಂಬೈ ಆಗಿದ್ದರಿಂದ ಇಲ್ಲಿನ ಶಾಸಕರು ಪದೇ ಪದೇ ಅಲ್ಲಿಗೆ ಹೋಗುತ್ತಿದ್ದರು.

ಜನರು ಕೂಡ ತಮ್ಮ ವೈಯಕ್ತಿಕ ಕೆಲಸಕ್ಕೆ ಮುಂಬೈಗೆ ಹೋಗುತ್ತಿದ್ದರು. ಹೀಗೆ ಈ ಪ್ರದೇಶಗಳಿಂದ ಹೋಗುತ್ತಿದ್ದ ಅನೇಕರೊಂದಿಗೆ ತಿಲಕರು ಸಂಪರ್ಕ ಇಟ್ಟುಕೊಂಡಿದ್ದರು. ಇಲ್ಲಿಂದ ಯಾರೇ ಹೋದರೂ ಅವರನ್ನು ಭೇಟಿ ಮಾಡುತ್ತಿದ್ದರು. ಹೀಗಾಗಿ ತಿಲಕರು ಈ ಪ್ರದೇಶದ ಜನರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. ಅದರಲ್ಲೂ ವಿದ್ಯಾರ್ಥಿಗಳು ಹಾಗೂ ವಕೀಲರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. ಅಲ್ಲದೇ ತಿಲಕರು ಕಾಂಗ್ರೆಸ್​ನ ಮುಖಂಡರೂ ಆಗಿದ್ದರು.

ಇದೇ ವೇಳೆ ಅವರು ಹೋಮ್ ರೂಲ್ ಲೀಗ್ ಎನ್ನುವ ಕಾಂಗ್ರೆಸ್​ನ ಒಂದು ಶಾಖೆಯನ್ನು ಆರಂಭಿಸಿದರು. ಇದರ ಮೂಲಕವೇ ಅವರು ಸ್ವಾತಂತ್ರ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ ಎನ್ನುವ ಘೋಷಣೆಯನ್ನು ಮಾಡಿದರು. ಇನ್ನು ಹೋಮ್ ರೂಲ್ ಲೀಗ್​ಗೆ ಕರ್ನಾಟಕದ ಗಂಗಾಧರ ದೇಶಪಾಂಡೆ ಎನ್ನುವವರನ್ನು ಈ ಭಾಗದ ಅಧ್ಯಕ್ಷರನ್ನಾಗಿ ಮಾಡಿದರು. ಗಂಗಾಧರ ದೇಶಪಾಂಡೆ ಅವರನ್ನು ಕರ್ನಾಟಕದ ಸಿಂಹ ಅಂತಾನೂ ಕರೆಯಲಾಗುತ್ತದೆ. ಇವರು ಕಾಂಗ್ರೆಸ್​ನ ಪ್ರಮುಖ ನಾಯಕರಾಗಿದ್ದರು. ಹೀಗಾಗಿ ಅವಕಾಶ ಸಿಕ್ಕಾಲೆಲ್ಲಾ ಕರ್ನಾಟಕಕ್ಕೆ ಬರುತ್ತಿದ್ದ ತಿಲಕರು ಗಂಗಾಧರ ದೇಶಪಾಂಡೆ ಅವರು ಸೇರಿದಂತೆ ಅನೇಕರನ್ನು ಭೇಟಿ ಮಾಡಿ, ಸ್ವಾತಂತ್ರ ಸಂಗ್ರಾಮದ ಬಗ್ಗೆ ಚರ್ಚಿಸುತ್ತಿದ್ದರು.

ಇದೇ ವೇಳೆ ಸಿದ್ಧಾರೂಢರನ್ನು ತಿಲಕರು ಭೇಟಿ ಮಾಡಿದ್ದರು. ಇನ್ನು ಕರ್ನಾಟಕ ವಿದ್ಯಾವರ್ಧಕ ಸಂಘದವರನ್ನು ಭೇಟಿ ಮಾಡಿ, ಸಂಗ್ರಾಮದ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಯಾವುದೇ ಚಳುವಳಿ ರೂಪಿಸಿದರೂ, ಯಾವುದೇ ಹೋರಾಟವಿದ್ದರೂ ತಿಲಕರು ಈ ಪ್ರದೇಶಕ್ಕೆ ತಪ್ಪದೇ ಬರುತ್ತಿದ್ದರು. ಹೀಗಾಗಿ ಇಲ್ಲಿನ ಜನರ ಮೇಲೆ ತಿಲಕರು ಸಾಕಷ್ಟು ಪರಿಣಾಮ ಬೀರಿದ್ದರು. ಅದಾಗಲೇ ಮಹಾರಾಷ್ಟ್ರದಲ್ಲಿ ಆರಂಭವಾಗಿದ್ದ ಸಾರ್ವಜನಿಕ ಗಣೇಶೋತ್ಸವವನ್ನು ಈ ಪ್ರದೇಶಕ್ಕೂ ತಂದರು.

ಹಬ್ಬವನ್ನು ಸ್ವಾತಂತ್ರ ಸಂಗ್ರಾಮಕ್ಕೆ ಬಳಸಿಕೊಳ್ಳುವ ಅವರ ಪರಿಕಲ್ಪನೆಗೆ ಮುಂಬೈ ಕರ್ನಾಟಕದಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಅದುವರೆಗೂ ಎಷ್ಟೋ ಜನರಿಗೆ ಸ್ವಾತಂತ್ರ ಸಂಗ್ರಾಮದ ಬಗ್ಗೆ ಗೊತ್ತೇ ಇರಲಿಲ್ಲ. ಸಮಾಜದ ಕೆಲ ವಲಯಗಳಿಗೆ ಮಾತ್ರ ಈ ಹೋರಾಟ ಸೀಮಿತವಾಗಿತ್ತು. ಅನಕ್ಷರಸ್ಥರಿಗೆ ಈ ಹೋರಾಟದ ಬಗ್ಗೆ ಅರಿವೇ ಇರಲಿಲ್ಲ. ಇಂಥವರನ್ನೆಲ್ಲಾ ಒಂದೇ ವೇದಿಕೆಯಡಿ ತರುವ ಅವರ ಯೋಚನೆ ಫಲ ಕೊಟ್ಟಿತ್ತು. ಹೀಗೆ ಪದೇ ಪದೇ ಅವರು ಬರುವುದರ ಜೊತೆಗೆ ಗಣೇಶೋತ್ಸವವನ್ನು ಕೂಡ ಈ ಪ್ರದೇಶಕ್ಕೆ ತಂದರು. ಅಂದು ನಿಧಾನವಾಗಿ ಆರಂಭವಾದ ಗಣೇಶೋತ್ಸವ ಇಂದಿಗೂ ಉತ್ತರ ಕರ್ನಾಟಕದಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುತ್ತದೆ.

ಮುಂಬೈ ಕರ್ನಾಟಕದಿಂದ ಹೈದ್ರಾಬಾದ್ ಕರ್ನಾಟಕಕ್ಕೆ ಹೇಗೆ ಗಣೇಶೋತ್ಸವ ಮಹಾರಾಷ್ಟ್ರದಿಂದ ಕರ್ನಾಟಕದ ಮುಂಬೈ ಪ್ರಾಂತ್ಯದ ಜಿಲ್ಲೆಗಳಿಗೆ ಬಂತೋ ಅದೇ ರೀತಿ ಆ ಜಿಲ್ಲೆಗಳಿಗೆ ನಿಧಾನವಾಗಿ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಿಗೂ ಹರಿದು ಬಂತು. ಮುಂಬೈ ಪ್ರಾಂತ್ಯದ ವಿಜಯಪುರ ಜಿಲ್ಲೆ ಕೂಡ ತನ್ನ ಗಡಿಯನ್ನು ಮಹಾರಾಷ್ಟ್ರದೊಂದಿಗೆ ಹಂಚಿಕೊಂಡಿದೆ. ಅತ್ತ ಹೈದ್ರಾಬಾದ್ ಕರ್ನಾಟಕದ ಕಲಬುರಗಿ, ಬೀದರ್ ಜಿಲ್ಲೆಗಳು ಕೂಡ ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಹೀಗಾಗಿ ಈ ಎಲ್ಲ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಪ್ರಭಾವ ಹೆಚ್ಚು. ಹೀಗೆ ಅನೇಕ ಜಿಲ್ಲೆಗಳ ಗಡಿ ಮೂಲಕ ಗಣೇಶೋತ್ಸವ ನಿಧಾನವಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಹರಿದು ಬಂತು. ಹಾಗೆ ಅವತ್ತು ನಡೆದು ಬಂದ ಹಬ್ಬ ಇವತ್ತಿಗೂ ಮುಂದುವರೆದಿದೆ. ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಗಣೇಶೋತ್ಸವ ಹೆಚ್ಚು ಪ್ರಚಲಿತಕ್ಕೆ ಬಂತು. ಅಷ್ಟೇ ಅಲ್ಲ, ಅದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಯಿತು. ಇನ್ನು ಮಹಾರಾಷ್ಟ್ರದಲ್ಲಿ ಆಚರಣೆಗಳ ಪ್ರಭಾವ ದಕ್ಷಿಣ ಕರ್ನಾಟಕದ ಭಾಗದ ಮೇಲೆ ಹೆಚ್ಚು ಆಗದೇ ಇರುವುದಕ್ಕೆ ಗಣೇಶೋತ್ಸವದ ಅಬ್ಬರವೂ ಅಲ್ಲಿ ಕಡಿಮೆಯೇ. ಸ್ವಾತಂತ್ರ ಸಂಗ್ರಾಮದ ಹಿನ್ನೆಲೆಯಲ್ಲಿ ಜನರಲ್ಲಿ ಒಗ್ಗಟ್ಟು ತರಲು ಆರಂಭಿಸಿದ ಈ ಹಬ್ಬ, ಮಹಾರಾಷ್ಟ್ರದ ಸಂಪರ್ಕಕಕ್ಕೆ ಬರುವ ಗಡಿ ಜಿಲ್ಲೆಗಳ ಮೂಲಕ ಕರ್ನಾಟಕವನ್ನು ಪ್ರವೇಶಿಸಿ, ಇಂದಿಗೂ ಜನಮಾನಸದಲ್ಲಿ ದೊಡ್ಡ ಹಬ್ಬವಾಗಿ ಆಚರಿಸಲ್ಪಡುತ್ತಿದೆ.

ಹಿರಿಯ ವರದಿಗಾರ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ:

ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು; ಕುನ್ನೂರ ಗಣಪನ ತಯಾರಿಕೆಯಲ್ಲಿ 50ಕ್ಕೂ ಅಧಿಕ ಕುಟುಂಬ ಭಾಗಿ

Ganesha Chaturthi 2021; ಸಂಕಷ್ಟಹರ ಗಣಪತಿಯ ಶಕ್ತಿಯುತ ಮಂತ್ರಗಳು ಮತ್ತು ಪ್ರಯೋಜನಗಳು ನಿಮಗೆ ಗೊತ್ತೇ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada