ಧ್ವಜ ಕೇಳೋರಿಲ್ಲ: ದೇಶದ ಏಕೈಕ ಹುಬ್ಬಳ್ಳಿಯ ಖಾದಿ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಇದೀಗ ಮುಚ್ಚುವ ಭೀತಿ
Bengeri Khadi Gramodyog: ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ದೇಶದ ಏಕೈಕ ಅಧಿಕೃತ ಖಾದಿ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ. ಆದರೆ, ಪಾಲಿಸ್ಟರ್ ಧ್ವಜಗಳ ಬಳಕೆಗೆ ಅವಕಾಶ ಹಿನ್ನೆಲೆ ಕೋಟ್ಯಂತರ ರೂ ಮೌಲ್ಯದ ಧ್ವಜಗಳು ಮಾರಾಟವಾಗದೆ ಉಳಿದಿವೆ. ಇದರಿಂದ ಸಂಸ್ಥೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮುಚ್ಚುವ ಭೀತಿ ಎದುರಾಗಿದೆ.

ಹುಬ್ಬಳ್ಳಿ, ಆಗಸ್ಟ್ 14: ದೇಶಾದ್ಯಂತ ಸ್ವಾತಂತ್ರ್ಯ ದಿನದ (Independence Day) ಸಂಭ್ರಮ ಜೋರಾಗಿದೆ. ಆದರೆ ರಾಷ್ಟ್ರಧ್ವಜಗಳು ಮಾರಾಟವಾಗದೇ ಇರುವುದರಿಂದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ ಸಿಬ್ಬಂದಿ ಕಂಗಾಲಾಗಿದ್ದಾರೆ. ರಾಷ್ಟ್ರದ ಅಧಿಕೃತ ಏಕೈಕ ರಾಷ್ಟ್ರಧ್ವಜ (National Flag) ತಯಾರಿಕೆ ಸಂಸ್ಥೆಯಲ್ಲಿ ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗದೆ ಹಾಗೆ ಉಳಿದಿವೆ. ಪಾಲಿಸ್ಟರ್ ಧ್ವಜಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದರಿಂದ, ಇದೀಗ ಖಾದಿಯಿಂದ ತಯಾರಾಗುವ ಧ್ವಜಗಳನ್ನು ಕೇಳುವರಿಲ್ಲದಂತಾಗಿದೆ. ಹಾಗಾಗಿ ಸಂಸ್ಥೆಯನ್ನೇ ಮುಚ್ಚುವ ಸ್ಥಿತಿ ಎದುರಾಗಿದೆ.
ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯತ್ತ ಮುಖ ಮಾಡಿದ ಜನರು
ಆಗಸ್ಟ್ 15 ಮತ್ತು ಜನವರಿ 26 ಭಾರತೀಯರ ಪಾಲಿಗೆ ಮರೆಯಲಾರದ ದಿನಗಳು. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನವನ್ನು ದೇಶಾದ್ಯಂತ ರಾಷ್ಟ್ರೀಯ ಹಬ್ಬಗಳನ್ನಾಗಿ ಆಚರಣೆ ಮಾಡಲಾಗುತ್ತದೆ. ಅಂದು ಎಲ್ಲಡೆ ರಾಷ್ಟ್ರಧ್ವಜವನ್ನು ಹಾರಿಸಿ, ದೇಶಭಕ್ತಿ ಮೆರೆಯಲಾಗುತ್ತದೆ. ದೆಹಲಿಯ ಕೆಂಪುಕೋಟೆಯಿಂದ ಹಿಡಿದು ಹಳ್ಳಿಯ ಶಾಲೆಯವರಗೆ ಹಾರಾಡುತ್ತಿರುವ ರಾಷ್ಟ್ರಧ್ವಜಗಳು ತಯಾರಾಗುವುದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ.
ಇದನ್ನೂ ಓದಿ: Indian Independence 2026: ತ್ರಿವರ್ಣ ಧ್ವಜದ ಮಧ್ಯದಲ್ಲಿ “ಅಶೋಕ ಚಕ್ರ”ದ ಕುತೂಹಲಕಾರಿ ಸಂಗತಿಗಳು
ದೇಶದಲ್ಲಿ ರಾಷ್ಟ್ರಧ್ವಜ ತಯಾರಿಕೆ ಮತ್ತು ಮಾರಾಟಕ್ಕೆ ಪರವಾನಗಿ ಪಡೆದ ದೇಶದ ಏಕೈಕ ಸಂಸ್ಥೆ ಎನ್ನುವ ಹೆಮ್ಮೆಯನ್ನು ಈ ಸಂಸ್ಥೆ ಪಡೆದಿತ್ತು. 1957 ರಿಂದ ಇಲ್ಲಿ ಖಾದಿ ಬಟ್ಟೆ ನೇಯುವ ಕೆಲಸ ನಡೆಯುತ್ತಿತ್ತು. ಬಳಿಕ ರಾಷ್ಟ್ರಧ್ವಜಗಳನ್ನು ಸಿದ್ಧ ಮಾಡಿ, ದೇಶಾದ್ಯಂತ ಕಳುಹಿಸಲಾಗುತ್ತಿತ್ತು. ಆಗಸ್ಟ್ 15, ಜನವರಿ 26 ಬಂದರೆ ಈ ಸಂಸ್ಥೆಯಲ್ಲಿ ಕಾಲಿಡಲಿಕ್ಕಾಗದಷ್ಟು ಜನರು. ಹೆಚ್ಚಿನ ಜನರು ಬಂದು ರಾಷ್ಟ್ರಧ್ವಜಗಳನ್ನು ಖರೀದಿಸುತ್ತಿದ್ದರು. ಆದರೆ ಎರಡ್ಮೂರು ವರ್ಷದಿಂದ ಈ ಸಂಸ್ಥೆಯತ್ತ ಜನರು ಮುಖ ಮಾಡುತ್ತಿಲ್ಲ. ಹೀಗಾಗಿ 17 ಎಕರೆ ವಿಸ್ತೀರ್ಣದಲ್ಲಿರುವ ಸಂಸ್ಥೆ ಇದೀಗ ಬಣಗುಡುತ್ತಿದೆ. ಹೀಗೆ ಆದರೆ ಕೆಲವೇ ವರ್ಷಗಳಲ್ಲಿ ಸಂಸ್ಥೆ ಮುಚ್ಚುವ ಹಂತಕ್ಕೆ ಹೋಗುತ್ತೆ ಅಂತಿದ್ದಾರೆ ಸಿಬ್ಬಂದಿ.
50 ಲಕ್ಷ ರೂ ಧ್ವಜಗಳು ಮಾರಾಟ
ಬೆಂಗೇರಿಯಲ್ಲಿರುವ ಈ ಸಂಸ್ಥೆಯಲ್ಲಿ ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳ ಮಾರಾಟ ಗಣನೀಯವಾಗಿ ಕುಸಿತವಾಗಿದೆ. ಈ ಮೊದಲು ವಾರ್ಷಿಕವಾಗಿ ಮೂರು ಕೋಟಿಗೂ ಹೆಚ್ಚು ಹಣವನ್ನು ಸಂಸ್ಥೆ ಕೇವಲ ರಾಷ್ಟ್ರಧ್ವಜಗಳ ಮಾರಾಟದಿಂದ ಗಳಿಸುತ್ತಿತ್ತು. ಆದರೆ ಕಳೆದ ವರ್ಷ ಕೇವಲ 50 ಲಕ್ಷ ರೂ ಮೌಲ್ಯದ ಧ್ವಜಗಳು ಮಾರಟವಾದರೆ, ಈ ವರ್ಷ ಕೂಡ 50 ಲಕ್ಷ ರೂ ಧ್ವಜಗಳು ಮಾತ್ರ ಮಾರಾಟವಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ ಅಂತ ಸಾವಿರಾರು ಧ್ವಜಗಳನ್ನು ಸಂಸ್ಥೆ ಸಿಬ್ಬಂದಿ ತಯಾರು ಮಾಡಿದ್ದರು. ಆದರೆ ಮಾರಾಟವಾಗದೇ ಇದ್ದಿದ್ದರಿಂದ ಅವೆಲ್ಲಾ ಇದೀಗ ಸಂಸ್ಥೆಯ ಗೂಡೌನ್ ಸೇರಿವೆ.
ಬೆಂಗೇರಿ ಖಾದಿ ಸಂಸ್ಥೆಯ ಮೇಲೆ ದೊಡ್ಡ ಪೆಟ್ಟು
ಇನ್ನು ಗಣನೀಯವಾಗಿ ಮಾರಾಟ ಕಡಿಮೆಯಾಗಲು ಕಾರಣ, ಕೇಂದ್ರ ಸರ್ಕಾರದ ಅದೊಂದು ತಿದ್ದುಪಡಿ. 2022ರಲ್ಲಿ ಆಜಾದಿಕಾ ಅಮೃತ್ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಹರಘರ್ ತಿರಂಗಾ ಅಭಿಯಾನಕ್ಕಾಗಿ, ಕೇಂದ್ರ ಸರ್ಕಾರವು ಧ್ವಜ ಸಂಹಿತೆ 2002ಕ್ಕೆ ತಿದ್ದುಪಡಿ ತಂದಿದ್ದು, ಅದಕ್ಕೂ ಮೊದಲು ಖಾದಿಯಿಂದ ಮಾಡಿದ ರಾಷ್ಟ್ರ ಧ್ವಜಗಳನ್ನು ಮಾತ್ರ ಬಳಸಬೇಕಾಗಿತ್ತು. ಆದರೆ ನೂತನ ನೀತಿಯಿಂದ ಪಾಲಿಸ್ಟರ್ ದ್ವಜಗಳನ್ನು ಕೂಡಾ ಬಳಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಕೇಂದ್ರ ಸರ್ಕಾರದ ನೂತನ ನೀತಿಯೇ ಖಾದಿಯಿಂದ ರಾಷ್ಟ್ರಧ್ವಜ ತಯಾರು ಮಾಡುತ್ತಿದ್ದ ಬೆಂಗೇರಿ ಖಾದಿ ಸಂಸ್ಥೆಯ ಮೇಲೆ ದೊಡ್ಡ ಪೆಟ್ಟು ನೀಡಿದೆ. ಎರಡು ಅಡಿ ಎತ್ತರ, ಮೂರು ಅಡಿ ಉದ್ದದ ಖಾದಿ ರಾಷ್ಟ್ರ ಧ್ವಜದ ಬೆಲೆ 1080 ರೂ ಇದ್ದರೆ, ಅದೇ ಪಾಲಿಸ್ಟರ್ ಧ್ವಜ ಕೇವಲ 200 ರಿಂದು 300 ರೂ ಮಾರಾಟವಾಗುತ್ತಿದೆ. ಹೀಗಾಗಿ ಹೆಚ್ಚಿನ ಜನರು ಬೆಲೆಯಲ್ಲಿ ಹೆಚ್ಚಾಗಿರುವ ಖಾದಿ ಧ್ವಜಗಳ ಖರೀದಿಗೆ ಮುಂದಾಗುತ್ತಿಲ್ಲವಂತೆ.
ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳಿಗೆ ಮಾತ್ರ ಅವಕಾಶ ನೀಡಬೇಕು: ಪ್ರೇಮಾ ಪೂಜಾರಿ
ಬೆಂಗೇರಿಯಲ್ಲಿ ಸಂಸ್ಥೆ, ರಾಷ್ಟ್ರ ಧ್ವಜ ನಿರ್ಮಾಣಕ್ಕೆ ದೇಶದಲ್ಲಿಯೇ ದೊಡ್ಡ ಹೆಸರು ಮಾಡಿತ್ತು. ಪ್ರತಿನಿತ್ಯ ಇಲ್ಲಿ 30 ಹೆಚ್ಚು ಸಿಬ್ಬಂದಿ ರಾಷ್ಟ್ರಧ್ವಜ ತಯಾರಿಕೆ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಬೇಡಿಕೆ ಗಣನೀಯವಾಗಿ ಕುಸಿತ ಹಿನ್ನೆಲೆ ಸಿಬ್ಬಂದಿ ರಾಷ್ಟ್ರಧ್ವಜವನ್ನು ತಯಾರಿಸುವುದನ್ನು ಬಿಟ್ಟು ಖಾದಿ ಚೀಲಗಳನ್ನು ತಯಾರು ಮಾಡುತ್ತಿದ್ದಾರೆ. ‘ಕೇಂದ್ರ ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಗೆ ನೀಡಿರುವ ಅನುಮತಿಯನ್ನು ರದ್ದು ಮಾಡಬೇಕು. ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳಿಗೆ ಮಾತ್ರ ಅವಕಾಶ ನೀಡಬೇಕು. ಇದರಿಂದ ಕೈಮಗ್ಗಗಳು ಸೇರಿದಂತೆ ಇದೇ ವೃತ್ತಿಯನ್ನು ನಂಬಿದವರಿಗೆ ಅನಕೂಲವಾಗುತ್ತದೆ’ ಎಂದು ಸಿಬ್ಬಂದಿ ಪ್ರೇಮಾ ಪೂಜಾರಿ ಅವರ ಮಾತು.
ಇದನ್ನೂ ಓದಿ: Independence Day 2026: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ
ಧ್ವಜ ಸಂಹಿತೆಗೆ ಬದಲಾವಣೆ ಮಾಡಿದ್ದರಿಂದ ಇದೀಗ ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳ ಮಾರಾಟ ಗಣನೀಯವಾಗಿ ಕುಸಿದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕಿದೆ. ಆ ಮೂಲಕ ದಶಕಗಳ ಇತಿಹಾಸ ಹೊಂದಿರುವ ಸಂಸ್ಥೆಯನ್ನು ಕಾಪಾಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



