ತಮಿಳುನಾಡಿನ ಮೇಲೆ ದ್ವೇಷವಿಲ್ಲ, ಮೇಕೆದಾಟು ಯೋಜನೆಯಿಂದ ಆ ರಾಜ್ಯಕ್ಕೂ ಒಳಿತಾಗಲಿದೆ; ಡಿಕೆ ಶಿವಕುಮಾರ್
ನಮಗೆ ತಮಿಳುನಾಡಿನ ಮೇಲೆ ದ್ವೇಷ ಮಾಡುವ, ಯುದ್ಧ ಮಾಡುವ ಉದ್ದೇಶವಿಲ್ಲ. ಅಲ್ಲಿರುವವರು ನಮ್ಮ ಅಣ್ಣತಮ್ಮಂದಿರೇ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಬೆಂಗಳೂರು: ಮೇಕೆದಾಟು ಯೋಜನೆಯಿಂದ (Mekedatu Project) ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬದಲಾಗಿ ಆ ರಾಜ್ಯಕ್ಕೂ ಒಳಿತಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ ನಂತರ ರಾಜ್ಯ ಬಜೆಟ್ನಲ್ಲಿ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ ಅದನ್ನು ಖರ್ಚು ಮಾಡಿಲ್ಲ ಎಂದರು.
ನಮಗೆ ತಮಿಳುನಾಡಿನ ಮೇಲೆ ದ್ವೇಷ ಮಾಡುವ, ಯುದ್ಧ ಮಾಡುವ ಉದ್ದೇಶವಿಲ್ಲ. ಅಲ್ಲಿರುವವರು ನಮ್ಮ ಅಣ್ಣತಮ್ಮಂದಿರೇ. ನಮಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ. ಮೇಕೆದಾಟು ನಮ್ಮ ಯೋಜನೆ. ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಸಮುದ್ರಕ್ಕೆ ಹೋಗುವ ನೀರು ತಡೆದು ಅದನ್ನು ಕಾವೇರಿ ಭಾಗದ ಜನರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಕಾವೇರಿ ನದಿಗೆ ಆಣೆಕಟ್ಟುಗಳ ಬೀಗ ಕೇಂದ್ರ ಸರ್ಕಾರದ ಕೈಯಲ್ಲಿದೆ. ಅವರಿಗೆ ಯಾವಾಗ ಎಷ್ಟು ನೀರು ಬಿಡಬೇಕು ಎಂದು ಅವರು ತೀರ್ಮಾನಿಸಿ ಬಿಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸುವುದರಿಂದ ಅವರಿಗೆ ಆಗುವ ತೊಂದರೆ ಏನು? ನಮ್ಮಲ್ಲಿ ನೀರು ಸಂರಕ್ಷಣೆ ಮಾಡಿಕೊಂಡು ಕುಡಿಯುವ ನೀರು ಪೂರೈಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹೀಗಾಗಿ ತಮಿಳುನಾಡಿನವರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: State Education Policy: ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಪಡೆಯಲಿದೆ ಎಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಈ ಯೋಜನೆಯಿಂದ ಯಾವುದೇ ತೊಂದರೆ ಇಲ್ಲ, ಹೀಗಾಗಿ ತಮಿಳುನಾಡಿನವರಿಗೆ ಹೃದಯ ಶ್ರೀಮಂತಿಕೆ ಇರಲಿ. ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ನಾವು ಜಗಳವಾಡಿ ಕೋರ್ಟ್ ಕಚೇರಿ ಅಲೆದಿದ್ದು ಸಾಕು. ಸೌಹಾರ್ದತೆಯಿಂದ ಕುಡಿಯುವ ನೀರು ಹಾಗೂ ತಮಿಳುನಾಡಿನ ರೈತರಿಗೆ ಅನುಕೂಲವಾಗುವ ಯೋಜನೆಗೆ ಸಹಕರಿಸಿ ಎಂದು ಡಿಕೆ ಶಿವಕುಮಾರ್ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಸಿದ್ಧತೆ ನಡೆಸುವಂತೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ತಮಿಳುನಾಡು ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರು ನೆರೆಯ ರಾಜ್ಯವನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ತಮಿಳುನಾಡಿನ ಜಲಸಂಪನ್ಮೂಲ ಸಚಿವ ಮುರುಗನ್ ಹೇಳಿದ್ದರು. ಇದಕ್ಕೆ ಇದೀಗ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ