Panchakshari Gawai Birthday : ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಇಲ್ಲವೆ 50 ರೂಪಾಯಿ ದಂಡ ಕಟ್ಟಬೇಕು
Artist and Honesty : “ಸಹೃದಯಿಗಳೇ, ನಮ್ಮ ಶಿಷ್ಯವೃಂದದಿಂದ ನಿಮಗೆ ಉಂಟಾದ ತೊಂದರೆಗೆ ವಿಷಾದಿಸುತ್ತೇನೆ. ನನಗೆ ತುಂಬ ಬೇಸರವಾಗಿರುವುದರಿಂದ ಈಗಲೇ ಇಲ್ಲಿಂದ ಹೊರಟು ಗದಗಿನಲ್ಲಿಯೆ ಶಿವಪೂಜೆ ಮಾಡುವೆವು. ನೀವು ನಾಟಕಕ್ಕೆ ಕೊಟ್ಟ ಪ್ರವೇಶಧನ ವಾಪಸು ಕೊಡುತ್ತೇವೆ.’’ ಎಂದರು. ಅಂದು ಸಂಗ್ರಹವಾದ ಧನ ಎಂಟುನೂರು ರೂಪಾಯಿ.
ಪಂಚಾಕ್ಷರಿ ಗವಾಯಿ | Panchakshai Gawai : ಹೂವಿಗಿಂತ ಮೃದುವಾಗಿದ್ದ ಪಂಚಾಕ್ಷರಿ ಗವಾಯಿಗಳ ಮನಸ್ಸು, ಕೊಟ್ಟ ಭಾಷೆ ತಪ್ಪಿದವರ ವಿಷಯದಲ್ಲಿ, ಎರಡು ಬಗೆದವರ ವಿಷಯದಲ್ಲಿ, ಅನ್ಯಾಯದಿಂದ ನಡೆದುಕೊಂಡವರ ವಿಷಯದಲ್ಲಿ ವಜ್ರಕ್ಕಿಂತ ಕಠೋರವಾದ ಪ್ರಸಂಗಗಳಿವೆ. ಗದಗಿನ ವರ್ತಕರೊಬ್ಬರು ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದರು. ಪಂಚಾಕ್ಷರಿ ಗವಾಯಿಗಳು ಅದನ್ನು ಪಡೆಯಲೋಸುಗ ಒಮ್ಮೆ ಅವರ ಮನೆಗೆ ಹೋದರು. ವರ್ತಕರು ಮನೆಯಲ್ಲಿರಲಿಲ್ಲ. ವರ್ತಕರ ಮಗ “ನನ್ನ ತಂದೆಗೆ ಬುದ್ದಿಯಿಲ್ಲ. ನಮ್ಮ ವ್ಯಾಪಾರವೆ ಚನ್ನಾಗಿರದಾಗ ದೇಣಿಗೆ ನೀಡುವುದಾಗಿ ಅದು ಹೇಗೆ ಮಾತು ಕೊಟ್ಟ ?” ಎಂದು ಬಿರುನುಡಿದ. ಮಗನು ತಂದೆಯ ಔದಾರ್ಯವನ್ನು ಜರೆದು ಮಾತಾಡಿದುದು ಪಂಚಾಕ್ಷರಿ ಗವಾಯಿಗಳಿಗೆ ದುಃಖವನ್ನುಂಟು ಮಾಡಿತು. ಇನ್ನು ಮುಂದೆ ನಾನು ಮಾತ್ರವಲ್ಲ ನನ್ನ ಬೆತ್ತ ಸಹ ನಿಮ್ಮ ಹೊಸ್ತಿಲ ತುಳಿಯುವುದಿಲ್ಲ” ಎಂದವರೆ ಅಲ್ಲಿ ಒಂದು ಕ್ಷಣವೂ ನಿಲ್ಲದೆ ಹೊರಟುಬಿಟ್ಟರು.
ಸದಾನಂದ ಕನವಳ್ಳಿ, ಲೇಖಕ, ಅನುವಾದಕ
*
ಪಂಚಾಕ್ಷರಿ ಗವಾಯಿಗಳು ಲಿಂಗೈಕ್ಯರಾದ ಹಲವು ವರ್ಷಗಳ ಬಳಿಕ ಪುಟ್ಟರಾಜ ಗವಾಯಿಗಳು ಆ ಮನೆಗೆ ಬಿನ್ನಹಕ್ಕೆ ಬಂದಿದ್ದರು. ಪಂಚಾಕ್ಷರಿ ಗವಾಯಿಗಳು ಆಶೀರ್ವದಿಸಿ ನೀಡಿದ ಬೆತ್ತವನ್ನು ಪುಟ್ಟರಾಜ ಗವಾಯಿಗಳು ಎಲ್ಲಿಗೆ ಹೋಗಲಿ ಬಿಟ್ಟು ಹೋದವರಲ್ಲ. ಅಂದು ಒಂದು ಆಶ್ಚರ್ಯ ಘಟಿಸಿತ್ತು. ವರ್ತಕರ ಮನೆ ತಲುಪಿದಾಗ ಬಂಡಿಯಲ್ಲಿ ಕೈಯಾಡಿಸುತ್ತಾರೆ, ಬೆತ್ತವೇ ಇಲ್ಲ. ಗುರುಗಳ ಬೆತ್ತವನ್ನು ಅಲಕ್ಷತನದಿಂದ ಕಳೆದುಕೊಂಡೆನಲ್ಲ ಎಂಬ ದುಗುಡ, ಬಿನ್ನಹ ತೀರಿಸಿಕೊಂಡು ವಾಪಸು ಹೋಗುವಾಗ ಹಾದಿಯಲ್ಲಿ ಬಿದ್ದಿದ್ದ ಬೆತ್ತ ಕಾಣಿಸಿತು. ಅದನ್ನು ನೋಡಿದ ಶಿಷ್ಯನೊಬ್ಬ ಪುಟ್ಟರಾಜ ಗವಾಯಿಗಳಿಗೆ ಅದನ್ನು ತಂದುಕೊಟ್ಟ. ಕಳೆದುಹೋದ ರತ್ನ ದೊರಕಿದಂತೆ ಖುಷಿಪಟ್ಟ ಪುಟ್ಟರಾಜ ಗವಾಯಿಗಳಿಗೆ ನನ್ನ ಬೆತ್ತ ಸಹ ನಿಮ್ಮ ಹೊಸ್ತಿಲ ದಾಟುವುದಿಲ್ಲ” ಎಂಬ ಪಂಚಾಕ್ಷರಿ ಗವಾಯಿಗಳ ಪ್ರತಿಜ್ಞೆ ಜ್ಞಾಪಕಕ್ಕೆ ಬಂತು.
ಶಿರಹಟ್ಟಿಯಲ್ಲೊಮ್ಮೆ ಪಂಚಾಕ್ಷರಿ ಗವಾಯಿಗಳ ನಾಟಕ ಕಂಪನಿ ಕ್ಯಾಂಪು ಮಾಡಿತ್ತು. ಅವರ ಬಿಡಾರದ ಬಳಿಯಲ್ಲಿಯೇ ಒಂದು ಸಾರ್ವಜನಿಕ ಬಾವಿಯಿತ್ತು. ನಾಟಕ ಕಂಪನಿ ಸಿಬ್ಬಂದಿ ಅಲ್ಲಿಯೇ ಸ್ನಾನ ಮಾಡುತ್ತಿದ್ದರು, ಬಟ್ಟೆ ಒಗೆಯುತ್ತಿದ್ದರು. ಇದರಿಂದ ಬಾವಿಯ ಸುತ್ತಲೂ ಕೊಳಚೆಯಾಯಿತು, ಪುರಸಭೆಯವರು ಪಂಚಾಕ್ಷರಿ ಗವಾಯಿಗಳಿಗೆ “ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು, ಇಲ್ಲವೆ 50 ರೂ. ದಂಡ ತೆರಬೇಕು” ಎಂದು ನೋಟೀಸು ಕೊಟ್ಟರು. ಪಂಚಾಕ್ಷರಿ ಗವಾಯಿಗಳು ಪುರಸಭೆ ಕಚೇರಿಗೆ ಹೋಗಿ ತಿಳಿಸಿಹೇಳಿ ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟರೂ ಅಧಿಕಾರಿಗಳು ಜಪ್ಪೆನ್ನಲಿಲ್ಲ.
ಅಂದು ರಾತ್ರಿ, ಇನ್ನೇನು ಪರದೆ ಸರಿಯಬೇಕು, ಪಾತ್ರಗಳು ಪ್ರವೇಶಿಸಬೇಕು. ಪರದೆ ಸರಿಯಿತು. ಆದರೆ ಪ್ರವೇಶಿಸಿದವರು ಪಂಚಾಕ್ಷರಿ ಗವಾಯಿಗಳು. “ಸಹೃದಯಿ ಸಾರ್ವಜನಿಕರೆ, ನಮ್ಮ ಶಿಷ್ಯವೃಂದ ನಿಮಗೆ ಉಂಟುಮಾಡಿದ ತೊಂದರೆಗೆ ವಿಷಾದಿಸುತ್ತೇನೆ. ನನಗೆ ತುಂಬ ಬೇಸರವಾಗಿರುವುದರಿಂದ ಇಲ್ಲಿ ನಾವು ನಾಟಕ ಆಡಲು ಇಷ್ಟಪಡುವುದಿಲ್ಲ. ಈಗಲೇ ಇಲ್ಲಿಂದ ಹೊರಟು ಗದಗಿನಲ್ಲಿಯೆ ಶಿವಪೂಜೆ ಮಾಡುವೆವು. ನೀವು ನಾಟಕಕ್ಕೆ ಕೊಟ್ಟ ಪ್ರವೇಶಧನ ವಾಪಸು ಕೊಡುತ್ತೇವೆ.’’ ಎಂದರು. ಅಂದು ಎಂಟುನೂರು ರೂ. ಸಂಗ್ರಹವಾಗಿತ್ತು.
ಹೀಗೇ ಒಮ್ಮೆ ನಿಡಗುಂದಿಕೊಪ್ಪದಲ್ಲಿರುವಾಗ ಪಂಚಾಕ್ಷರಿ ಗವಾಯಿಗಳ ಶಿಷ್ಯರು ಸ್ನಾನಕ್ಕೆಂದು ಬಾವಿಗೆ ಹೋಗಿದ್ದರು. ಈಜಾಟದಲ್ಲಿ ನಿರತರಾಗಿರುವಾಗ ಎಲಿವಾಳ ಬಸವಣ್ಣಯ್ಯನ ಲಿಂಗ ಕಳಚಿ ತಳ ಸೇರಿತು. ಎಲ್ಲ ಹುಡುಗರೂ ಎಷ್ಟು ಸಾರೆ ಮುಳುಗಿ ಹುಡುಕಿದರೂ ಸಿಗಲಿಲ್ಲ. ಲಿಂಗವಿಲ್ಲದೆ ಪ್ರಸಾದವಿಲ್ಲ. ಆ ಗುರುಗಳೇನೆನ್ನುವರು ಎನ್ನುವ ಭಯ. ಈ ವಾರ್ತೆ ತಿಳಿದು ಪಂಚಾಕ್ಷರಿ ಗವಾಯಿಗಳೇ ಬಾವಿಯ ಬಳಿಗೆ ಧಾವಿಸಿದರು. “ಏನ ಹೇಳತೀರಿ? ಭಕ್ತಿಯಿಂದ ಹುಡುಕಿದರೆ ದೀನಬಂಧು ಲಿಂಗಯ್ಯ ಸಿಗಲಾರನೆ? ಮುಳುಗಿರಿ ಈ ಸಲ, ನೋಡೋಣ” ಎಂದು ಹುರಿದುಂಬಿ ಸಿದರು, ಬಾವಿಯ ತಳದಲ್ಲಿದ್ದ ಲಿಂಗಯ್ಯ ಒಬ್ಬನ ಕೈಗೆ ಹತ್ತಿದ. ಶಿಷ್ಯರು ಗುರುವಿನ ಮಹಿಮೆಯನ್ನು ಕೊಂಡಾಡಿದರು.
ಒಮ್ಮೆ ಪಂಚಾಕ್ಷರಿ ಗವಾಯಿಗಳು ಭಿಕ್ಷಕ್ಕೆ ಬರುವುದಾಗಿ ಹೊಂಬಳ ಗ್ರಾಮದವರಿಗೆ ಹೇಳಿಕಳಿಸಿದರು. ಆಗ ಅಲ್ಲಿ ಅನಾವೃಷ್ಟಿ, ಜನ ಮುಗಿಲ ಮಾರಿಯನ್ನೇ ನೋಡುತ್ತಿದ್ದರು. ಹೊಂಬಳದ ಭಕ್ತರು “ತಾವು ದಯಮಾಡಿಸುವುದಾದರೆ ಜೊತೆಗೆ ಮಳೆರಾಯನನ್ನೂ ಕರೆದುಕೊಂಡು ಬರಬೇಕು. ಅಂದರೆ ಜನ ಹಾಡಿ ಹರಸುತ್ತಾರೆ’’ ಎಂದು ಅರಿಕೆ ಮಾಡಿಕೊಂಡರು. ಗವಾಯಿಗಳು “ಕುಮಾರೇಶನ ಕರುಣೆಯಿದ್ದರೆ ಮಳೆಗೇನು ಬರ. ಅದೂ ಆಗಬಹುದು” ಎಂದು ಪರಿವಾರದೊಡನೆ ಹೊಂಬಳಕ್ಕೆ ಹೊರಟರು ಅವರು ಬಂದ ರಾತ್ರಿಯೆ ಮಳೆ ರಪರಪ ಸುರಿಯಿತು.
ಆ ತಿಂಗಳ ಕೊನೆಯ ಪಾಡ್ಯದ ದಿನ “ಸಿದ್ಧರಾಮೇಶ್ವರ” ನಾಟಕ ಆಡುವುದೆಂದು ನಿರ್ಧರಿತವಾಗಿತ್ತು. ಮಳೆ ಬಿಟ್ಟಿರಲಿಲ್ಲ. ನಾಟಕ ಬೇಡವೆಂದರು ಗ್ರಾಮಸ್ಥರು. ಆಡಿಯೇ ತೀರುವುದೆಂದರು ಪಂಚಾಕ್ಷರಿ ಗವಾಯಿಗಳು. ಗದಗಿನಿಂದ ನಾಟಕದ ಸರಂಜಾಮು ಬಂತು. ನಾಟಕ ಆರಂಭವಾಯಿತು. ಸ್ವತಃ ಪಂಚಾಕ್ಷರಿ ಗವಾಯಿಗಳೆ ತಬಲಾಕ್ಕೆ ಕುಳಿತರು. ಪುಟ್ಟರಾಜ ಗವಾಯಿಗಳು ಹಾರ್ಮೋನಿಯಂ ಬಾರಿಸಿದರು. ಜನ ಕಿಕ್ಕಿರಿದಿತ್ತು. ಬೆಳಿಗ್ಗೆ ಮೂರು ಗಂಟೆಗೆ ನಾಟಕ ಮುಕ್ತಾಯವಾಯಿತು. ಊರ ಪ್ರಮುಖರು ಗವಾಯಿಗಳನ್ನು ಅಭಿನಂದಿಸಿದರು. ಆಗ ಗವಾಯಿಗಳು ಇನ್ನು ಕೂಡಲೆ ಮನೆ ಸೇರಿರಿ. ಮಳೆರಾಯ ನಾಟಕ ಮುಗಿಯುವ ದಾರಿಯನ್ನೇ ನೋಡುತಿದ್ದಾನೆ” ಎಂದು ನಕ್ಕು ಹೇಳಿದರು. ಎಲ್ಲರೂ ಮನೆ ಸೇರಿದ್ದರೋ ಇಲ್ಲವೋ, ಮಳೆ… ಧೋ ಎಂದು ಸುರಿಯಬೇಕೆ ?
ಪಂಚಾಕ್ಷರಿ ಗವಾಯಿಗಳು ಎರಡು ಕಾಯಕ ಮಾಡುತ್ತಿದ್ದರು. ಸಂಗೀತ ವಿದ್ಯಾದಾನ, ಎರಡು ಸಂಗೀತಶಾಲೆಗೆ ಧನಸಂಗ್ರಹ. ಒಮ್ಮೆ ನಾಟಕ ಕಂಪನಿ ಧಾರವಾಡ ಜಿಲ್ಲೆಯಲ್ಲಿ ಸಂಚರಿಸಬೇಕಿತ್ತು. ಒಬ್ಬ ಮಹನೀಯರು ದೇಣಿಗೆ ನೀಡುವುದಾಗಿ ವಚನವಿತ್ತಿದ್ದರು. ಅವರ ಊರಿಗೆ ಈ ಪಂಚಾಕ್ಷರಿ ಗವಾಯಿಗಳು ಹೋದರು. ಅವರು ಊರಲ್ಲಿರಲಿಲ್ಲ. ಕಿಸೆಯಲ್ಲಿ ಒಂದು ಒಡಕು ಕಾಸೂ ಇಲ್ಲ. ಇನ್ನು ಏನು ಮಾಡಬೇಕೆಂದು ಚಿಂತಾಕ್ರಾಂತರಾಗಿ ರೈಲ್ವೆ ನಿಲ್ದಾಣದ ಕಲ್ಲುಬೆಂಚಿನ ಮೇಲೆ ಕುಮಾರೇಶನನ್ನು ನೆನೆಯುತ್ತ ಕುಳಿತರು. ಒಬ್ಬ ವ್ಯಕ್ತಿ ಬಂದು, “ನೀವು ಪಂಚಾಕ್ಷರಿ ಗವಾಯಿಗಳಲ್ಲವ?” ಎಂದು ಕೇಳಿದ. “ಹೌದಪ್ಪಾ, ಏನಾಗಬೇಕಿತ್ತು ?” “ಬಳ್ಳಾರಿಯ ಒಬ್ಬ ಶ್ರೀಮಂತರು ಇನ್ನೂರು ರೂಪಾಯಿ ಕಳಿಸಿದ್ದಾರೆ. ದಯವಿಟ್ಟು ಸ್ವೀಕರಿಸಬೇಕು.” ಪಂಚಾಕ್ಷರಿ ಗವಾಯಿಗಳಿಗೆ ಹೋದ ಜೀವ ಮರಳಿದಂತಾಯಿತು. ಊರಿಗೆ ಬಂದ ತಕ್ಷಣ ಬಳ್ಳಾರಿಯ ಶ್ರೀಮಂತರಿಗೆ ಕೃತಜ್ಞತಾ ಪತ್ರ ಬರೆದರು. ಕೆಲವು ದಿನಗಳಾದ ಮೇಲೆ ಒಂದು ಆಶ್ಚರ್ಯ ಕಾದಿತ್ತು.
ಬಳ್ಳಾರಿಯಿಂದ ಉತ್ತರ ಬಂತು : ‘‘ಮಹನೀಯ ಪೂಜ್ಯರೇ, ನೀವು ಹಣಕ್ಕಾಗಿ ಬರೆದ ಪತ್ರ ತಲುಪಲಿಲ್ಲ. ನಾನು ಹಣ ಕಳಿಸಲಿಲ್ಲ. ನಮಗೆ ಹಣ ಬಂದಿದೆಯೆಂದು ಬರೆಯುತ್ತೀರಿ. ನಿಮಗೆ ನನ್ನ ಹೆಸರಿನಲ್ಲಿ ಯಾರು ಹಣ ಕೊಟ್ಟರೂ ಅದೂ ತಿಳಿಯದು.” ಹಣ ಕೊಟ್ಟವರಾರೆಂಬುದು ಕೊನೆಯವರೆಗೂ ನಿಗೂಢವಾಗಿಯೇ ಉಳಿಯಿತು, ಎಲ್ಲವೂ ಕುಮಾರೇಶನ ಕೃಪೆಯೆಂದು ಪಂಚಾಕ್ಷರಿ ಗವಾಯಿಗಳು ಬಗೆದರು.
ಮೊದಲು ರೇಷ್ಮೆ ವಸ್ತ್ರ ಧರಿಸುತ್ತಿದ್ದವರು ಗಾಂಧೀಜಿಯ ಪ್ರೇರಣೆಯಿಂದ (ಗಾಂಧೀಜಿ ಹುಬ್ಬಳ್ಳಿಗೆ ಬಂದಾಗ ದರ್ಶನ ಪಡೆದಿದ್ದರು) ಸೊಲ್ಲಾಪುರದ ಧನಶೆಟ್ಟಿ ಮಲ್ಲಪ್ಪನವರ ಪ್ರಭಾವದಿಂದ ಖಾದಿ ವಸ್ತ್ರಧಾರಿಗಳಾದರು. ಸ್ವದೇಶಾಭಿಮಾನಿಗಳಾದರು. ವಿದೇಶಿ ಔಷಧವನ್ನೆಂದೂ ಮುಟ್ಟಲಿಲ್ಲ. ಅವರು ಸ್ವಂತದ ಸುಖವನ್ನು ಒಂದಿನಿತೂ ಬಯಸಿದವರಲ್ಲ. ಕಾಡಶೆಟ್ಟಿಹಳ್ಳಿಯಲ್ಲಿ ಅವರಿಗಿದ್ದುದು ಪುತ್ರವರ್ಗದ ಮಠ. ಅದಕ್ಕೆ 16-18 ಕೂರಿಗಿ ಜಮೀನು. ಶಿಷ್ಯವರ್ಗದ ಮಠದಲ್ಲಿ ಶಿಷ್ಯರಿಗೆ ಅಧಿಕಾರವಿರುತ್ತದೆ. ಪುತ್ರವರ್ಗದ ಮಠದಲ್ಲಿ ಪುತ್ರರಿಗೆ, ಪಂಚಾಕ್ಷರಿ ಗವಾಯಿಗಳು ಅಧಿಕಾರಕ್ಕೆ ಬಂದ ಮೇಲೆ ೮ ಕೂರಿಗಿ ಜಮೀನನ್ನು ಶಿವಯೋಗ ಮಂದಿರದಲ್ಲಿ ಸ್ಥಾಪಿತವಾಗಲಿದ್ದ ಮುದ್ರಣಾಲಯಕ್ಕಾಗಿ, ಮಿಕ್ಕಿದ್ದನ್ನು ಸಂಸ್ಥೆಗಾಗಿ ದಾನ ಮಾಡಿದರು.
ಪಂಚಾಕ್ಷರಿ ಗವಾಯಿಗಳು ಹುಟ್ಟು ಕುರುಡರಾಗಿದ್ದರೂ ನಾದಜ್ಞಾನಚಕ್ಷುಗಳಾಗಿದ್ದರು. ಅವರ ಜೀವನ ಶ್ರುತಿಗೊಳಿಸಿದ ವೀಣೆಯಂತಿತ್ತು. ನಾದಯೋಗದಿಂದಲೇ ನಾದಬ್ರಹ್ಮನನ್ನು ಒಲಿಸಿಕೊಂಡರು. ನಾದಾಂತವನ್ನ ವೇದಾಂತವೆಂದು ನಂಬಿ ಪರಿಪೂರ್ಣದೆಡೆಗೆ ನಡೆದವರು ಪಂಚಾಕ್ಷರಿ ಗವಾಯಿಗಳು.
(ಮುಗಿಯಿತು)
ಹಿಂದಿನ ಭಾಗ : Panchakshari Gawai Birthday : ಪಂಡಿತರ ಪ್ರಶ್ನೆಗಳ ಸುರಿಮಳೆಗೆ ಮೂರುದಿನಗಳವರೆಗೆ ಉತ್ತರಿಸಿದರು ಗವಾಯಿಗಳು
Published On - 12:11 pm, Wed, 2 February 22