ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ.. ಕರ್ನಾಟಕದಲ್ಲಿ ಶುರುವಾಯ್ತು ಐಸಿಯು ಬೆಡ್​ಗಳ ಕೊರತೆ

ಈ ಬಾರಿಗೆ ಹೋಲಿಸಿದರೆ ಮೊದಲ ಅಲೆಯ ವೇಳೆಗೆ ಐಸಿಯುಗಳಿಗೆ ದಾಖಲಾಗಿದ್ದ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಆದರೆ, ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು ಅತಿ ಹೆಚ್ಚು ಜನರನ್ನು ಐಸಿಯುಗೆ ದಾಖಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ.. ಕರ್ನಾಟಕದಲ್ಲಿ ಶುರುವಾಯ್ತು ಐಸಿಯು ಬೆಡ್​ಗಳ ಕೊರತೆ
ಸಂಗ್ರಹ ಚಿತ್ರ
Follow us
|

Updated on: Apr 12, 2021 | 9:36 AM

ಬೆಂಗಳೂರು: ದೇಶದಾದ್ಯಂತ ಕೊರೊನಾ ಎರಡನೇ ಅಲೆ ಭೀತಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ಪರಿಸ್ಥಿತಿ ಕೈ ಮೀರುವಂತೆ ಗೋಚರಿಸುತ್ತಿದ್ದು, ಈಗಾಗಲೇ ಐಸಿಯುಗಳಿಗಾಗಿ ಪರದಾಟ ಆರಂಭವಾಗಿದೆ. ರಾಜ್ಯದ 26 ಜಿಲ್ಲೆಗಳಲ್ಲಿ ಈಗಾಗಲೇ ಕೊರೊನಾ ಸೋಂಕಿತರು ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ರಾಜ್ಯಾದ್ಯಂತ ಕೇವಲ 4 ಜಿಲ್ಲೆಗಳನ್ನು ಹೊರತುಪಡಿಸಿ ಮತ್ತೆಲ್ಲಾ ಕಡೆಗಳಲ್ಲಿ ಐಸಿಯುಗೆ ಪರದಾಟ ಶುರುವಾಗಿರುವುದು ಆರೋಗ್ಯ ಇಲಾಖೆಗೆ ತಲೆನೋವು ತಂದಿಟ್ಟಿದೆ.

ಈ ಬಾರಿಗೆ ಹೋಲಿಸಿದರೆ ಮೊದಲ ಅಲೆಯ ವೇಳೆಗೆ ಐಸಿಯುಗಳಿಗೆ ದಾಖಲಾಗಿದ್ದ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಆದರೆ, ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು ಅತಿ ಹೆಚ್ಚು ಜನರನ್ನು ಐಸಿಯುಗೆ ದಾಖಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾದಗಿರಿ, ‌ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇದುವರೆಗೂ ಸೋಂಕಿತರನ್ನು ಐಸಿಯುಗೆ ದಾಖಲಿಸಬೇಕಾದ ಪರಿಸ್ಥಿತಿ ಬಂದಿಲ್ಲ ಎಂಬುದನ್ನು ಹೊರತುಪಡಿಸಿದರೆ ಮತ್ತೆಲ್ಲಾ ಜಿಲ್ಲೆಗಳಲ್ಲೂ ಪರಿಸ್ಥಿತಿ ಗಂಭೀರವಾಗಿದೆ.

ಅದರಲ್ಲೂ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಐಸಿಯು ಬೆಡ್​ಗಳ ಕೊರತೆ ಉಂಟಾಗುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ. ಬೆಂಗಳೂರು, ಕಲಬುರಗಿ, ಕೋಲಾರ, ಮೈಸೂರು, ತುಮಕೂರಿನಲ್ಲಿ‌ ಐಸಿಯು ದಾಖಲಾತಿ ಹೆಚ್ಚಳವಾಗುತ್ತಿದೆ. ಸದ್ಯ ಯಾವ ಯಾವ ಜಿಲ್ಲೆಗಳಲ್ಲಿ ಐಸಿಯು ಸೋಂಕಿತು ಹೆಚ್ಚಿದ್ದಾರೆ ಎಂದು ಗಮನಿಸುವುದಾದರೆ ಬೆಂಗಳೂರು ಜಿಲ್ಲೆಯಲ್ಲಿ 177 ಸೋಂಕಿತರು, ಕಲಬುರಗಿ ಜಿಲ್ಲೆಯಲ್ಲಿ 44 ಸೋಂಕಿತರು, ಕೋಲಾರದಲ್ಲಿ 33 ಮಂದಿ ಸೋಂಕಿತರು, ಮೈಸೂರು ಜಿಲ್ಲೆಯಲ್ಲಿ 23 ಸೋಂಕಿತರು, ತುಮಕೂರು ಜಿಲ್ಲೆಯಲ್ಲಿ 20 ಸೋಂಕಿತರು, ದಕ್ಷಿಣ ‌ಕನ್ನಡ‌ದಲ್ಲಿ 15 ಸೋಂಕಿತರು, ಹಾಸನದಲ್ಲಿ 14 ಸೋಂಕಿತರು, ಬೀದರ್ ಜಿಲ್ಲೆಯಲ್ಲಿ 13 ಸೋಂಕಿತರು, ಉಡುಪಿ ಜಿಲ್ಲೆಯಲ್ಲಿ 10 ಸೋಂಕಿತರು ಹಾಗೂ ವಿಜಯಪುರದಲ್ಲಿ 10 ಸೋಂಕಿತರು ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವರ್ಷದ ಪರಿಸ್ಥಿತಿ ಮರುಕಳಿಸದಿರಲಿ ಕಳೆದ ವರ್ಷ ಈ ಸಂದರ್ಭದಲ್ಲಿ ಕೊರೊನಾ ಹೆಚ್ಚಳವಾಗುತ್ತಿತ್ತು. ಒಂದೆಡೆ ಭಯದ ವಾತಾವರಣ, ಇನ್ನೊಂದೆಡೆ ರೋಗವನ್ನು ಎದುರಿಸಲು ಸಜ್ಜಾಗಿರದ ವ್ಯವಸ್ಥೆ.. ಹೀಗೆ ಹಲವು ಸಮಸ್ಯೆಗಳ ಜೊತೆಗೆ ಬದುಕು ನರಕಸದೃಶವಾಗಿತ್ತು. ಕೊರೊನಾ ಸೋಂಕಿನಿಂದ ತೀರಿಕೊಂಡವರಿಗೆ ಸೂಕ್ತ ಅಂತ್ಯ ಸಂಸ್ಕಾರವೂ ಇರದೇ ಮಣ್ಣು ಮಾಡಲಾಗುತ್ತಿತ್ತು. ಅದೆಷ್ಟೋ ಮಂದಿ ಆಸ್ಪತ್ರೆಗೆ ಹೋಗದೇ ಅಥವಾ ಆಸ್ಪತ್ರೆಗೆ ಹೋದರೂ ವ್ಯವಸ್ಥೆಯ ಕೊರತೆಯಿಂದಾಗಿ ಆರಂಭಿಕ ಹಂತದಲ್ಲೇ ಪ್ರಾಣ ಬಿಟ್ಟಿದ್ದರು. ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಆ ಗಂಭೀರತೆ ಮತ್ತೆ ಮರುಕಳಿಸುತ್ತಿದೆಯಾ ಎಂಬ ಭಯ ಮೂಡುತ್ತಿದೆ. ಹೀಗಾಗಿ ಜನ ಸಾಮಾನ್ಯರು ಈಗಿನಿಂದಲೇ ಎಚ್ಚೆತ್ತುಕೊಂಡು ಕಳೆದ ವರ್ಷದ ದುರವಸ್ಥೆ ಎದುರಾಗದಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ: ರೆಮ್​ಡೆಸಿವಿರ್ ಔಷಧ, ಇಂಜೆಕ್ಷನ್ ರಫ್ತು ನಿಷೇಧ: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳ 

ದೆಹಲಿಯಲ್ಲಿ ಕೊವಿಡ್ ಪರಿಸ್ಥಿತಿ ಗಂಭೀರ, ಲಾಕ್​ಡೌನ್ ಇದಕ್ಕೆ ಪರಿಹಾರವಲ್ಲ: ಅರವಿಂದ್ ಕೇಜ್ರಿವಾಲ್