ಕಲಬುರಗಿ: ಭೂಕಂಪನಕ್ಕೆ ತತ್ತರಿಸಿದ ಗ್ರಾಮಸ್ಥರು; ಎನ್ಜಿಆರ್ಐ ತಂಡದಿಂದ ಅಧ್ಯಯನ ಆರಂಭ
ಗ್ರಾಮಗಳಲ್ಲಿ ಕಟ್ಟಿರುವ ಮನೆಗಳಿಗೆ ಮೇಲ್ಛಾವಣಿಗಾಗಿ ಕಲ್ಲನ್ನು ಬಳಸಲಾಗಿದೆ. ಇನ್ನು ಗ್ರಾಮದಲ್ಲಿರುವ ಬಹುತೇಕ ಮನೆಗಳು ತುಂಬಾ ಹಳೆಯ ಮನೆಗಳಾಗಿವೆ. ಹೀಗಾಗಿ ಭೂಕಂಪನದ ತೀವ್ರತೆ ಹೆಚ್ಚಾದರೆ ಮನೆಗಳು ಬೀಳುವ ಆತಂಕ ಜನರನ್ನು ಕಾಡುತ್ತಿದೆ. ಹೀಗಾಗಿ ಬಹುತೇಕ ಜನರು ಮನೆಯೊಳಗೆ ಮಲಗದೇ ಮನೆ ಹೊರಗಿನ ರಸ್ತೆ ಮೇಲೆ ಮಲಗುತ್ತಿದ್ದಾರೆ.
ಕಲಬುರಗಿ: ಜಿಲ್ಲೆಯ ಗಡಿಕೇಶ್ವರ ಗ್ರಾಮದ ಜನರು ನಿತ್ಯ ಭಯದಲ್ಲಿಯೇ ಬದಕುತ್ತಿದ್ದಾರೆ. ನಿರಂತರವಾಗಿ ಉಂಟಾಗುತ್ತಿರುವ ಭೂಕಂಪನ ಮತ್ತು ಭೂಮಿಯಿಂದ ಬರುತ್ತಿರುವ ಸದ್ದಿನಿಂದ ಕಂಗಾಲಾಗಿದ್ದಾರೆ. ಬಹುತೇಕ ಮನೆಗಳು ಕಲ್ಲು ಮತ್ತು ಮಣ್ಣಿನಿಂದ ನಿರ್ಮಾಣ ಮಾಡಿರುವುದರಿಂದ ಭೂಕಂಪನದ ತೀವ್ರತೆ ಹೆಚ್ಚಾಗಿದೆ. ಮುಂದೇನು ಗತಿ ಎನ್ನುವ ಚಿಂತೆ ಕಾಡುತ್ತಿದೆ. ಇದರ ನಡುವೆ ಎನ್ಜಿಆರ್ಐ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ಕುರಿತು ಅಧ್ಯಯನ ಪ್ರಾರಂಭಿಸಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಸೇರಿದಂತೆ ಚಿಂಚೋಳಿ, ಕಾಳಗಿ ತಾಲೂಕಿನ ಹತ್ತಕ್ಕೂ ಹೆಚ್ಚು ಹಳ್ಳಿಯ ಜನರು ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮೇಲಿಂದ ಮೇಲೆ ಭೂಮಿಯಿಂದ ಬರುತ್ತಿರುವ ಭಾರೀ ಸದ್ದು ಮತ್ತು ನಿರಂತರವಾಗಿ ಉಂಟಾಗುತ್ತಿರುವ ಭೂಕಂಪನದಿಂದ ಕಂಗಾಲಾಗಿದ್ದಾರೆ. ಜನರ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣ, ಗಡಿಕೇಶ್ವರ ಸೇರಿದಂತೆ ಭೂಕಂಪನ ಪೀಡಿತ ಗ್ರಾಮಗಳಲ್ಲಿನ ಬಹುತೇಕ ಮನೆಗಳು ಕಲ್ಲು ಮತ್ತು ಮಣ್ಣಿನಿಂದ ನಿರ್ಮಾಣ ಮಾಡಲಾಗಿರುವುದೇ ಆಗಿದೆ.
ಗ್ರಾಮಗಳಲ್ಲಿ ಕಟ್ಟಿರುವ ಮನೆಗಳಿಗೆ ಮೇಲ್ಛಾವಣಿಗಾಗಿ ಕಲ್ಲನ್ನು ಬಳಸಲಾಗಿದೆ. ಇನ್ನು ಗ್ರಾಮದಲ್ಲಿರುವ ಬಹುತೇಕ ಮನೆಗಳು ತುಂಬಾ ಹಳೆಯ ಮನೆಗಳಾಗಿವೆ. ಹೀಗಾಗಿ ಭೂಕಂಪನದ ತೀವ್ರತೆ ಹೆಚ್ಚಾದರೆ ಮನೆಗಳು ಬೀಳುವ ಆತಂಕ ಜನರನ್ನು ಕಾಡುತ್ತಿದೆ. ಹೀಗಾಗಿ ಬಹುತೇಕ ಜನರು ಮನೆಯೊಳಗೆ ಮಲಗದೇ ಮನೆ ಹೊರಗಿನ ರಸ್ತೆ ಮೇಲೆ ಮಲಗುತ್ತಿದ್ದಾರೆ. ಅನೇಕರು ಗ್ರಾಮಗಳನ್ನು ಬಿಟ್ಟು ಸಂಬಂಧಿಕರ ಊರುಗಳಿಗೆ ಹೋಗಿದ್ದಾರೆ. ಇನ್ನು ಗ್ರಾಮದ ಜನರು ತಮ್ಮ ಮನೆಗಳು ಹಳೆಯದಾಗಿದ್ದು, ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಮನೆ ಸಮೀಪ ಪ್ರತಿಯೊಂದು ಕುಟುಂಬಕ್ಕೆ ಸರ್ಕಾರದಿಂದ ಟೀನ್ ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತ ಜನರು ಆತಂಕದಲ್ಲಿದ್ದರೇ ಮತ್ತೊಂದಡೆ ನಿರಂತರವಾಗಿ ಭೂಮಿಯಿಂದ ಸದ್ದು ಮತ್ತು ಭೂಕಂಪನದ ಬಗ್ಗೆ ಅಧ್ಯಯನ ಕೂಡಾ ನಡೆಸಲಾಗುತ್ತಿದೆ. ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಭೂಕಂಪನವಾಗುತ್ತಿರುವ ಕಾರಣ ಇಂದು ಹೈದರಾಬಾದ್ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ (ಎನ್.ಜಿ.ಆರ್.ಐ) ವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಕಂಪನದ ಅಲೆಯನ್ನು ಅಳೆಯಲು ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸಿಸ್ಮೋಮೀಟರ್ ಸ್ಥಾಪಿಸಿದೆ.
ಸಿಸ್ಮೋಮೀಟರ್ ಸ್ಥಾಪನೆ ಇಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದರಿಂದ ಗಡಿಕೇಶ್ವರ ಸುತ್ತಮುತ್ತ ಗ್ರಾಮಗಳಲ್ಲಿ ಭೂಕಂಪನಗಳು ಸಂಭವಿಸಿದಲ್ಲಿ ನೆಲದೊಳಗಿನ ಭೂಮಿಯ ಚಲನೆ ಇಲ್ಲಿ ದಾಖಲಾಗಿ ಮಾಹಿತಿಯು ನೇರವಾಗಿ ಹೈದರಾಬಾದ್ನ ಎನ್ಜಿಆರ್ಐ ಸಂಸ್ಥೆಗೆ ಹೋಗಲಿದೆ. ತದನಂತರ ಇದರ ಮಾಹಿತಿ ಆಧರಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳ ತಂಡ ನಿರ್ಧರಿಸಲಿದೆ. ಸಿಸ್ಮೋಮೀಟರ್ ಸ್ಥಾಪನೆಯ ನಂತರ ಡೆಮೋ ಸಹ ಪ್ರದರ್ಶಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಪಕ ಉಪಕರಣಗಳ ಕಾರ್ಯನಿರ್ವಹಣೆಯ ಕುರಿತು ವಿಜ್ಞಾನಿಗಳ ತಂಡ ಮಾಹಿತಿ ನೀಡಿತು.
ಎನ್ಜಿಆರ್ಐ ಸಂಸ್ಥೆಯ ಭೂ ವಿಜ್ಞಾನಿ ಡಾ.ಸುರೇಶ, ಡಾ.ಶಶಿಧರ ಇವರೊಂದಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಹಿರಿಯ ಭೂ ವಿಜ್ಞಾನಿ ಡಾ.ರಮೇಶ, ಕಿರಿಯ ವಿಜ್ಞಾನಿ ಡಾ.ಅಭಿನಯ, ಸಹಾಯಕ ವಿಜ್ಞಾನಿ ಅಣವೀರಪ್ಪ ಬಿರಾದರ ಅವರು ಗಡಿಕೇಶ್ವರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂದಡೇ ಭೂಕಂಪದ ಬಗ್ಗೆ ಅಧ್ಯಯನಗಳು ಪ್ರಾರಂಭವಾಗಿವೆ. ಆದರೆ ಗಡಿಕೇಶ್ವರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಇಂದು ಕೂಡಾ ಎರಡು ಬಾರಿ ಭೂಮಿಯಿಂದ ಮತ್ತೆ ಸದ್ದು ಬಂದಿದ್ದು, ಜನರಿಗೆ ಲಘು ಭೂಕಂಪದ ಅನುಭವವಾಗಿದೆ. ಹೀಗಾಗಿ ಜನರಿಗೆ ಆದಷ್ಟು ಬೇಗನೆ ಪರ್ಯಾಯ ಕ್ರಮಗಳನ್ನು ಕಲ್ಪಿಸಿ, ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.
ಇದನ್ನೂ ಓದಿ:
Kalaburagi Earthquake: ಕಲಬುರಗಿ: ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆಗೆ ಸಿದ್ಧತೆ: ಸಂಸದ ಡಾ.ಉಮೇಶ್ ಜಾಧವ್
Vijayapura Earthquake: ವಿಜಯಪುರದ ಬಸವನಬಾಗೇವಾಡಿಯಲ್ಲಿ ಮತ್ತೆ ಭೂಕಂಪನ; ಇನ್ನೆರಡು ದಿನಗಳಲ್ಲಿ ತಜ್ಞರ ಭೇಟಿ
Published On - 10:19 am, Mon, 18 October 21