SSLC–PUC ವಿದ್ಯಾರ್ಥಿಗಳ ಗಮನಕ್ಕೆ: ವಾರ್ಷಿಕ ಪರೀಕ್ಷೆಗೆ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆ
SSLC, PUC ವಿದ್ಯಾರ್ಥಿಗಳೇ ಗಮನಿಸಿ. ಶಿಕ್ಷಣ ಇಲಾಖೆಯು ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಮೂರು ಮುಖ್ಯ ಪರೀಕ್ಷೆ ನಡೆಸುತ್ತಿದ್ದ ಶಿಕ್ಷಣ ಇಲಾಖೆ, ಈ ವರ್ಷದಿಂದ ಎರಡು ಪರೀಕ್ಷೆಗಳಿಗೆ ಮಾತ್ರ ಅವಕಾಶ ನೀಡಲು ಮುಂದಾಗಿದೆ. ಅಂದ್ರೆ ಇನ್ಮುಂದೆ SSLC, PUC ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳ ಬದಲಿಗೆ ಎರಡೇ ಮುಖ್ಯ ಪರೀಕ್ಷೆ ಇರಲಿದೆ.

ಬೆಂಗಳೂರು, (ಅಕ್ಟೋಬರ್ 16): ಎಸ್ಎಸ್ಎಲ್ಸಿ ಹಾಗು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಮುಖ್ಯ ಪರೀಕ್ಷೆಗಳ ವ್ಯವಸ್ಥೆಗೆ ಈ ವರ್ಷದಿಂದ ಕೊಕ್ ನೀಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮೂರು ಮುಖ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದ್ರೆ ಈ ವರ್ಷದಿಂದ ಮೂರು ಪರೀಕ್ಷೆಗಳ ಬದಲಿಗೆ ಎರಡೇ ಮುಖ್ಯ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಕಳೆದ ವರ್ಷದ ಫಲಿತಾಂಶದ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪರೀಕ್ಷಾ ಸಿದ್ಧತೆಗೆ ಈಗಿನಿಂದಲೇ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಪರೀಕ್ಷೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇಲಾಖೆ ಸೂಚನೆ ನೀಡಿದೆ.. ಇನ್ಮುಂದೆ ಎರಡು ಮುಖ್ಯ ಪರೀಕ್ಷೆಗಳನ್ನೇ ಗಮನದಲ್ಲಿಟ್ಟುಕೊಂಡು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ಮೂರು ಬಾರಿ ಪರೀಕ್ಷೆ ಬರೆಯಬಹುದು ಎಂದು ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯಲ್ಲಿ ಯಾವುದೇ ನಿರ್ಲಕ್ಷ್ಯ ಮಾಡದಂತೆ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ವಿದ್ಯಾರ್ಥಿಗಳನ್ನು ಎರಡು ಪರೀಕ್ಷೆಗಳ ಮಾದರಿಗೆ ಅನುಗುಣವಾಗಿ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. ಕಳೆದ ವರ್ಷ ದಾಖಲೆಯ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ, ದ್ವಿತೀಯ ಪಿಯು ಪರೀಕ್ಷೆ 1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಪರ ವಿರೋಧದ ಚರ್ಚೆ
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದಕ್ಕೆ ಪರ ವಿರೋಧದ ಚರ್ಚೆಗಳು ಆಗಿದ್ದವು. ಮೂರು ಪರೀಕ್ಷೆಯಿಂದ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.ಪರೀಕ್ಷಾ ಮಂಡಳಿಗೆ ಮಾರ್ಚ್ನಿಂದ ಸೆಪ್ಟೆಂಬರ್ವರೆಗೂ ಪರೀಕ್ಷೆಯನ್ನೇ ನಡೆಸುವುದು ಕೆಲಸವಾಗಲಿದೆ. ಅಂದರೆ, ವರ್ಷದಲ್ಲಿ 7 ತಿಂಗಳು ಪರೀಕ್ಷೆ ನಡೆಸಬೇಕಾಗುತ್ತದೆ. ಈ ಪರೀಕ್ಷೆಗಳ ಜತೆಗೆ ಮರುಮೌಲ್ಯಮಾಪನ, ಅಂಕಗಳ ಮರು ಎಣಿಕೆ, ಅಂಕಪಟ್ಟಿ ವಿತರಣೆ ಕೆಲಸವಿದಂದ ಸಿಬ್ಬಂದಿ ಮೇಲೆ ಕಾರ್ಯದೊತ್ತಡ ಹೊರೆಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ಇನ್ನೊಂದೆಡೆ ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಹೆಚ್ಚಿನ ಅವಕಾಶಗಳು ದೊರೆತಂತಾಗುತ್ತದೆ ಅಂತೆಲ್ಲಾ ಚರ್ಚೆಗಳು ಆಗಿದ್ದವು. ಆದ್ರೆ, ಇದೀಗ ಶಿಕ್ಷಣ ಇಲಾಖೆ ಎರಡೇ ಪರೀಕ್ಷೆ ನಡೆಸಲಿದ್ದು, ಮೂರನೇ ಪರೀಕ್ಷೆಗೆ ಕೊಕ್ ನೀಡಿದೆ.
ಒಟ್ಟಿನಲ್ಲಿ SSLC–PUC ವಿದ್ಯಾರ್ಥಿಗಳಿಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದ್ದು.. ಮೂರು ಪರೀಕ್ಷೆಗಳ ಬದಲಿಗೆ ಎರಡೇ ಪರೀಕ್ಷೆ ನಡೆಸುವ ನಿರ್ಧಾರ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯ ಮೆಲೆ ಯಾವ ಪರಿಣಾಮ ಬೀರಲಿದೆ ಅಂತ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Fri, 16 October 26




