ಕೊರೊನಾ ಮಾದರಿಯಲ್ಲೇ ಡೆಂಗ್ಯೂ ನಿಯಂತ್ರಣ; ಒಂದೇ ಪ್ರದೇಶದಲ್ಲಿ 2ಕ್ಕೂ ಹೆಚ್ಚು ಪತ್ತೆಯಾದರೆ ಹಾಟ್‌ಸ್ಪಾಟ್
ಕರ್ನಾಟಕದಾದ್ಯಂತ ಆತಂಕ ಸೃಷ್ಟಿಸಿರುವ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೊರೊನಾ ಮಾದರಿಯಲ್ಲೇ ಡೆಂಘೀ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳೇನು? ಸಾರ್ವಜನಿಕರ ಮೇಲೆ ಅದು ಹೇಗೆ ಪರಿಣಾಮ ಬೀರಲಿದೆ? ವಿವರ ಇಲ್ಲಿದೆ.
ಬೆಂಗಳೂರು, ಜುಲೈ 16: ಮಳೆಗಾಲ ಶುರುವಾಗಿ ಬರದಿಂದ ಮುಕ್ತಿ ಸಿಕ್ಕಿತು ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ರಾಜ್ಯಕ್ಕೆ ಡೆಂಘೀ ದಿಗಿಲು ಜೋರಾಗಿದೆ. ಜಿಲ್ಲೆ ಜಿಲ್ಲೆಯಲ್ಲೂ ಇನ್ನಿಲ್ಲದಂತೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕರ್ನಾಟಕದಲ್ಲಿ ಡೆಂಘೀ ಕೇಸ್ಗಳ ಸಂಖ್ಯೆ 10 ಸಾವಿರ ಗಡಿದಾಟಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಸೋಂಕು ಜನರ ಜೀವ ಹಿಂಡುತ್ತಿದೆ. ಈ ವರ್ಷ ಬರೋಬ್ಬರಿ 68 ಸಾವಿರ ಶಂಕಿತ ಡೆಂಘೀ ಪ್ರಕರಣಗಳು ದಾಖಲಾಗಿವೆ ಅಂತ ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಪರಿಷತ್‌ಗೆ ಮಾಹಿತಿ ನೀಡಿದ್ದಾರೆ.
ಡೆಂಘೀ ತಡೆಗೆ ‘ಕೊರೊನಾ’ ಮಾದರಿ ಕ್ರಮ
ಕೊರೊನಾ ಸೋಂಕಿನಂತೆಯೇ ಡೆಂಘೀ ಜ್ವರವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ವಿಶೇಷ ಟಾಸ್ಕ್ ಫೋರ್ಸ್ ಆರೋಗ್ಯ ಇಲಾಖೆ ರಚಿಸಿದೆ. ಒಂದೇ ಏರಿಯಾದಲ್ಲಿ ಎರಡ್ಮೂರು ಕೇಸ್‌ಗಳು ಪತ್ತೆಯಾದ್ರೆ ಹಾಟ್‌ಸ್ಪಾಟ್ ಎಂದು ಗುರುತಿಸುವುದಾಗಿ ಹೇಳಿದೆ. ರಾಜ್ಯದ ಹಲವೆಡೆ ಫೀವರ್ ಕ್ಲಿನಿಕ್‌ಗಳನ್ನೂ ಸಹ ಸರ್ಕಾರ ತೆರೆದಿದೆ.
ರಾಜ್ಯ ಸರ್ಕಾರ ಹೀಗೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಸ್ತಿದ್ದು, ಸೆಪ್ಟೆಂಬರ್ವರೆಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೂ ಸಲಹೆ ನೀಡಿದೆ.
ಬೆಂಗಳೂರಿನಲ್ಲಿ ಒಂದೇ ದಿನ 363 ಡೆಂಗ್ಯೂ ಕೇಸ್
ಡೆಂಘೀ ಇಡೀ ಬೆಂಗಳೂರನ್ನೇ ಆವರಿಸಿದೆ. ಯಾವ ಆಸ್ಪತ್ರೆ ನೋಡಿದರೂ ರೋಗಿಗಳೇ ತುಂಬಿದ್ದಾರೆ. ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 435 ಡೆಂಘೀ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರು ಒಂದರಲ್ಲೇ 363 ಡೆಂಘೀ ಪ್ರಕರಣಗಳು ವರದಿಯಾಗಿವೆ. ಒಟ್ಟು ಕೇಸ್ಗಳ ಸಂಖ್ಯೆ 3487ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಇಲಿ ಜ್ವರವನ್ನು ಕಡೆಗಣಿಸಬೇಡಿ, ತಡೆಗಟ್ಟುವ ಕ್ರಮದ ಬಗ್ಗೆ ತಜ್ಞರ ಸಲಹೆ ಏನು?
ಹಾಸನದಲ್ಲಿ ಬಾಲಕ ಬಲಿ
ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಮತ್ತೊಂದು ಬಲಿಯಾಗಿದೆ. ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ 9 ವರ್ಷದ ಬಾಲಕ ರಾಜೇಶ್ ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಈವರೆಗೆ ಶಂಕಿತ ಡೆಂಘೀಗೆ 6 ಮಕ್ಕಳು ಬಲಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ