ಕ್ರೀಡಾಂಗಣಗಳನ್ನು ದೀರ್ಘಾವಧಿಗೆ ಬಾಡಿಗೆ ಕೊಡುವಂತಿಲ್ಲ: ಸರ್ಕಾರದಿಂದ ಬಂದಿದೆ ಹೊಸ ನಿಯಮ
ಕರ್ನಾಟಕ ಸರ್ಕಾರವು ಕ್ರೀಡಾಂಗಣಗಳ ದೀರ್ಘಾವಧಿ ಬಾಡಿಗೆ ಅಥವಾ ಪರಭಾರೆಯನ್ನು ನಿಷೇಧಿಸಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುತ್ತೋಲೆಯ ಪ್ರಕಾರ, 50 ಲಕ್ಷ ರೂ.ಗಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ವಾರ್ಷಿಕ 100 ಲಕ್ಷ ರೂ.ಗಿಂತ ಹೆಚ್ಚಿನ ಖರ್ಚಿಗೆ ಸರ್ಕಾರದ ಅನುಮತಿ ಕಡ್ಡಾಯ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು, ಮಾರ್ಚ್ 5: ಕ್ರೀಡಾಂಗಣಗಳನ್ನು (Stadiums) ಅನುಮತಿ ಇಲ್ಲದೆ ದೀರ್ಘಾವಧಿಗೆ ಬಾಡಿಗೆ ನೀಡುವಂತಿಲ್ಲ. ಅಥವಾ ಇತರೆ ರೀತಿಯಲ್ಲಿ ಕ್ರೀಡಾಂಗಣಗಳನ್ನು ಪರಭಾರೆ ಮಾಡುವಂತಿಲ್ಲ ಎಂದು ಕರ್ನಾಟಕ ಸರ್ಕಾರ (Karnataka Government) ಆದೇಶಿಸಿದೆ. ಈ ಸಂಬಂಧ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ (The Department of Youth Empowerment & Sports) ಸುತ್ತೋಲೆ ಹೊರಡಿಸಲಾಗಿದ್ದು, ಸರ್ಕಾರದ ಆದೇಶದನ್ವಯ ಕ್ರೀಡಾಂಗಣ ಬಳಕೆ ನೀತಿಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಉಲ್ಲೇಖಿಸಿದೆ.
ಸರ್ಕಾರದ ಆದೇಶದನ್ವಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣಗಳ ದೈನಂದಿನ ನಿರ್ವಹಣೆಗೆ ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣಾ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿದ್ದು, ಸಾಮಾನ್ಯ ಮಾರ್ಗಸೂಚಿಗಳ ಕುರಿತು ಗಮನ ಸೆಳೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾರ್ಗಸೂಚಿಯಲ್ಲೇನಿದೆ?
- ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ಗುತ್ತಿಗೆ/ಹೊರಗುತ್ತಿಗೆ ಸೇರಿದಂತೆ ಯಾವುದೇ ನೇಮಕಾತಿಗಳನ್ನು ಮಾಡುವಂತಿಲ್ಲ.
- ಜಿಲ್ಲೆಯ ಯಾವುದೇ ಇಲಾಖಾ ಕ್ರೀಡಾಂಗಣದಲ್ಲಿ 50 ಲಕ್ಷ ರೂ. ವೆಚ್ಚ ಮೀರಿದ ಯಾವುದೇ ಒಂದು ಅಭಿವೃದ್ಧಿ ಕಾರ್ಯವನ್ನು ಅಥವಾ ವಾರ್ಷಿಕ ಒಟ್ಟು 100 ಲಕ್ಷ ರೂ. ಮಿತಿ ಮೇಲ್ಪಟ್ಟ ಕಾಮಗಾರಿ/ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
- ಕ್ರೀಡಾಂಗಣದ ಆಸ್ತಿಗಳನ್ನು ವಾರ್ಷಿಕ ಬಾಡಿಗೆಗೆ ನೀಡುವ ಅಥವಾ ಹೊರಗುತ್ತಿಗೆ ನೀಡುವ ಸಂದರ್ಭದಲ್ಲಿ ಇಲಾಖೆಯ ಪೂರ್ವಾನುಮತಿ ಪಡೆಯತಕ್ಕದ್ದು.
- ಇಲಾಖೆಯ ಕ್ರೀಡಾಂಗಣಗಳನ್ನು ಹಾಗೂ ಇಲಾಖಾ ಆಸ್ತಿಗಳನ್ನು ಇಲಾಖೆಯ ಪೂರ್ವಾನುಮತಿ ಇಲ್ಲದೇ ಇತರೆ ಇಲಾಖೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ತಾತ್ಕಾಲಿಕವಾಗಿಯಾಗಲೀ ಅಥವಾ ಶಾಶ್ವತವಾಗಿಯಾಗಲೀ ಪರಭಾರೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
- ಆದೇಶಗಳು ಜಾರಿಗೆ ಬಂದ ನಂತರ ಸದರಿ ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ ಸಂಬಂಧಪಟ್ಟ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು ನಿಯಮಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿವರಗಳನ್ನು ದಿನಾಂಕ: 15-03-2025 ರೊಳಗೆ ಒದಗಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.
ಕ್ರೀಡಾ ಇಲಾಖೆ ಸುತ್ತೋಲೆಯ ಪ್ರತಿ
ಇಲಾಖಾ ಆಸ್ತಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಚಟುವಟಿಕೆಗಳು ನಡೆದಲ್ಲಿ ಅಥವಾ ಇಲಾಖಾ ಆಸ್ತಿಗಳನ್ನು ಇತರರು ಅತಿಕ್ರಮಿಸಿದಲ್ಲಿ ದುರ್ಬಳಕೆ ಮಾಡಿಕೊಂಡಲ್ಲಿ ಅವುಗಳನ್ನು ತಡೆಯುವುದು ಹಾಗೂ ತಕ್ಷಣ ಇಲಾಖಾ ಮುಖ್ಯಸ್ಮರ ಗಮನಕ್ಕೆ ತರುವುದು ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ. ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಮುದಾಯದ ಶಾಸಕರ ಸಭೆ: ಸಿದ್ಧವಾಯ್ತು ಬೇಡಿಕೆಗಳ ಪಟ್ಟಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:31 am, Wed, 5 March 25