Oxygen Shortage | ಕರ್ನಾಟಕದಲ್ಲಿ ಅಮೂಲ್ಯ ಆಕ್ಸಿಜನ್​ಗಾಗಿ ಹಾಹಾಕಾರ.. ಜೀವವಾಯು ಇಲ್ಲದೆ ಉಸಿರು ಚೆಲ್ಲುತ್ತಿರುವ ಸೋಂಕಿತರು

ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ್ರು ಅನ್ನೋ ರೀತಿ ಕರ್ನಾಟಕ ಸರ್ಕಾರ, ಸಚಿವರು, ಅಧಿಕಾರಿಗಳು ನಡೆದುಕೊಳ್ತಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ನಡೆಯೋವರೆಗೆ ಸುಮ್ಮನಿದ್ದ ಸರ್ಕಾರ ಈಗ ಎದ್ನೋ ಬಿದ್ನೋ ಅಂತಾ ಆಕ್ಸಿಜನ್ ಕೊರತೆ ನೀಗಿಸಲು ಮುಂದಾಗಿದೆ. ಇಷ್ಟಾದ್ರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಎಲ್ಲೆಲ್ಲಿ ಕೊರತೆ ಇದೆ ಅನ್ನೋದರ ಡೀಟೈಲ್ ಇಲ್ಲಿದೆ.

  • TV9 Web Team
  • Published On - 12:57 PM, 4 May 2021
Oxygen Shortage | ಕರ್ನಾಟಕದಲ್ಲಿ ಅಮೂಲ್ಯ ಆಕ್ಸಿಜನ್​ಗಾಗಿ ಹಾಹಾಕಾರ.. ಜೀವವಾಯು ಇಲ್ಲದೆ ಉಸಿರು ಚೆಲ್ಲುತ್ತಿರುವ ಸೋಂಕಿತರು
ಆಕ್ಸಿಜನ್ ಸಿಲಿಂಡರ್​

ಬೆಂಗಳೂರು: ನಮ್ಮ ಸರ್ಕಾರಗಳು.. ಮೊದಲೇ ಬುದ್ಧಿ ಕಲಿಯೋದೇ ಇಲ್ಲ. ಏನಾದ್ರೂ ಒಂದು ಅನಾಹುತ, ದುರಂತ, ದುರ್ಘಟನೆ ಸಂಭವಿಸೋವರೆಗೆ ಕುಂಭಕರ್ಣ ನಿದ್ದೆಯಿಂದ ಮೇಲೇಳೋದೇ ಇಲ್ಲ. ಸರ್ಕಾರ ಕಣ್ಣು, ಕಿವಿಯನ್ನ ತೆರೆಸೋಕೆ ಜೀವ ಬಲಿ ಆಗಲೇಬೇಕು. ಆಗ ಮಾತ್ರ ಎದ್ನೋ ಬಿದ್ನೋ ಅಂತಾ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ವೆ. ಇದಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜೀವಗಳು ಬಲಿಯಾಗಿರೋದೇ ಬೆಸ್ಟ್ ಎಕ್ಸಾಂಪಲ್.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದೆ ಅಂತಾ ಮಾಧ್ಯಮಗಳು ಪದೇಪದೆ ಸರ್ಕಾರಕ್ಕೆ ಎಚ್ಚರಿಕೆ ಕೊಡ್ತಿದ್ರೂ ಬೆಳಗಾವಿ, ಕಲಬುರಗಿ.. ಕೋಲಾರ ಜಿಲ್ಲೆಯಲ್ಲಿ ಹಲವು ಜೀವಗಳು ಬಲಿಯಾಗಿ ಜನ ಬಾಯಿ ಬಾಯಿ ಬಡಿದುಕೊಳ್ತಿದ್ರೂ ಸರ್ಕಾರ ಗಾಧ ನಿದ್ರೆಯಲ್ಲಿತ್ತು ಅನ್ನೋದಕ್ಕೆ ಚಾಮರಾಜನಗರ ದುರಂತವೇ ಅತ್ಯುತ್ತಮ ಸಾಕ್ಷಿ. ಈಗ ನಿದ್ದೆಯಿಂದ ಎದ್ದಿರೋ ಸರ್ಕಾರ.. ಸದ್ಯಕ್ಕೆ ಕ್ರಮಗಳನ್ನ ಕೈಗೊಂಡು ಮತ್ತೆ ನಿದ್ರೆ ಜಾರೋ ಸಂಭವ ಜಾಸ್ತಿ ಇದೆ. ಮತ್ತೊಂದು ದುರಂತ ಆಗೋವರೆಗೆ ಎದ್ದೇಳಲ್ಲ. ವ್ಯವಸ್ಥೆ ಅಷ್ಟು ಜಡ್ಡುಗಟ್ಟಿ ಹೋಗಿದೆ. ಇದಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಉದಾಹರಣೆಗಳಿವೆ.

ಮಂಡ್ಯದಲ್ಲೂ ಮೆಡಿಕಲ್ ಆಕ್ಸಿಜನ್ಗೆ ಶುರು ಹಾಹಾಕಾರ!
ಚಾಮರಾಜನಗರ ಪಕ್ಕದ ಜಿಲ್ಲೆಗಳಲ್ಲಿ ಒಂದಾದ ಮಂಡ್ಯದಲ್ಲೂ ಮೆಡಿಕಲ್ ಆಕ್ಸಿಜನ್ಗೆ ಹಾಹಾಕಾರ ಶುರುವಾಗಿದೆ. ಚಾಮರಾಜನಗರದಂತೆ ಮಂಡ್ಯಕ್ಕೂ ಮೈಸೂರಿನಿಂದಲೇ ಆಕ್ಸಿಜನ್ ಸಪ್ಲೈ ಆಗ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಪ್ರತಿದಿನ 350-360 ಸಿಲಿಂಡರ್ಗಳು ಬೇಕು. ಆದ್ರೆ, ಈಗ 70ರಿಂದ 80 ಸಿಲಿಂಡರ್ಗಳು ಮಾತ್ರ ಪೂರೈಕೆಯಾಗ್ತಿವೆ.
ಏಪ್ರಿಲ್ ಆರಂಭದಿಂದ ಎರಡನೇ ವಾರದವರೆಗೆ ಮಂಡ್ಯದಲ್ಲಿ ಯಾವುದೇ ಪ್ರಾಬ್ಲಂ ಇರಲಿಲ್ಲ. ಆದ್ರೆ, ಮಂಡ್ಯದಲ್ಲಿ ಸೋಂಕಿತರು ಹೆಚ್ಚಾದ ಬಳಿಕ ಆಕ್ಸಿಜನ್ ಕೊರತೆ ಎದುರಾಗಿದೆ. ಹೀಗಾಗಿ ಎಲ್ಲೆಲ್ಲಿಂದ ಸಾಧ್ಯವೋ ಅಲ್ಲಿಂದೆಲ್ಲಾ ಸಿಲಿಂಡರ್ ಪೂರೈಕೆಗೆ ವ್ಯವಸ್ಥೆ ಮಾಡ್ತೀವಿ ಅಂತಾ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು, ಮಂಡ್ಯ ಜಿಲ್ಲೆಗೆ ಆಕ್ಸಿಜನ್ ಪೂರೈಸದಿದ್ದರೆ ಎಷ್ಟು ಜನ ಸಾಯ್ತಾರೋ ಹೇಳೋಕ್ಕಾಗುವುದಿಲ್ಲ. ಈ ಸಂಬಂಧ ನಾನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಜೊತೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ಆಗೋ ಅನಾಹುತಕ್ಕೆ ಅವರೇ ಹೊಣೆಯಾಗುತ್ತಾರೆ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಕಂಪನಿಗಳ ಬಿಗ್ ಶಾಕ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿದಿನ 15 ಟನ್‌ ಆಕ್ಸಿಜನ್ಗೆ ಬೇಡಿಕೆ ಇದೆ. ಈಗ ಇಲ್ಲಿರೋದು ಕೇವಲ 15 ಟನ್ ಆಕ್ಸಿಜನ್. ಅಂದ್ರೆ 24 ಗಂಟೆಗಾಗುವಷ್ಟು ಆಕ್ಸಿಜನ್ ಮಾತ್ರ. ಕೇರಳದ ಪಾಲಕ್ಕಾಡ್‌ ಮತ್ತು ಕಾರ್ನಾಡಿನಿಂದ ಆಕ್ಸಿಜನ್‌ ಸಪ್ಲೈ ಆಗ್ತಿತ್ತು. ಅದನ್ನ ಇದ್ದಕ್ಕಿದ್ದಂತೆ ನಿಲ್ಲಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಿಗೆ ಕೇರಳದಿಂದ ಬಂದ ಆಕ್ಸಿಜನ್‌ ರೀಫಿಲ್‌ ಆಗಿ ಸಪ್ಲೈ ಆಗ್ತಿತ್ತು. ಇದನ್ನ ಕೇರಳ ಕಂಪನಿಗಳು ಬಂದ್ ಮಾಡಿವೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ತಮ್ಮ ಪ್ರಭಾವ ಬಳಸಿ ಆಕ್ಸಿಜನ್‌ ತರಿಸುತ್ತಿದ್ರು. ಆದ್ರೆ ಈಗ ಅವರಿಗೂ ಕಂಪನಿಗಳು ಸಹಕಾರ ನೀಡ್ತಿಲ್ಲ. ಕರ್ನಾಟಕಕ್ಕೆ 20 ಟನ್‌ ಸಪ್ಲೈ ಮಾಡುವಂತೆ ಆದೇಶವಾಗಿದೆ. ಹೀಗಾಗಿ ನಿಮ್ಮ ಸರ್ಕಾರ ಆರ್ಡರ್ ಮಾಡಲಿ ಅಂತಾ ಹೇಳಿವೆಯಂತೆ.

ಕಲಬುರಗಿಯಲ್ಲಿ ಮತ್ತೊಂದು ಆಕ್ಸಿಜನ್ ದುರಂತ?
ಕಲಬುರಗಿ ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆ ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಆಕ್ಸಿಜನ್‌ ಕೊರತೆಯಿಂದಾಗಿಯೇ ಕಲಬುರಗಿಯ ಕೆಬಿಎನ್‌ ಆಸ್ಪತ್ರೆಯಲ್ಲಿ ಈಗಾಗಲೇ ಮೂವರು ಸೋಂಕಿತರು ಮೃತಪಟ್ಟಿದ್ರು. ಈ ಘಟನೆ ಮಾಸುವ ಮುನ್ನವೇ ಕಲಬುರಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಇದೀಗ ಆಕ್ಸಿಜನ್ ಕೊರತೆಿಯಿಂದ ಐವರು ಸೋಂಕಿತರು ಮೃತಪಟ್ಟಿರೋ ಮಾಹಿತಿ ಲಭ್ಯವಾಗಿದೆ. ಕಲಬುರಗಿ ಜಿಲ್ಲೆಗೆ ಪ್ರತಿನಿತ್ಯ 20KLಗೂ ಹೆಚ್ಚು ಆಕ್ಸಿಜನ್‌ ಅವಶ್ಯಕತೆ ಇದೆ. ಆದ್ರೆ ಜಿಲ್ಲೆಯಲ್ಲಿ ಎಲ್ಲಾ ಮೂಲಗಳಿಂದ ಪೂರೈಕೆಯಾಗ್ತಿರೋದು ಕೇವಲ 16ರಿಂದ 17KL ಮಾತ್ರ. ಜಿಲ್ಲೆಯಲ್ಲಿ 3ರಿಂದ 4 KL ಆಕ್ಸಿಜನ್‌ ಕೊರತೆಯಾಗ್ತಿದೆ. ಆಕ್ಸಿಜನ್‌ ಸ್ಟೋರ್ ಮಾಡಲು ಜಂಬೋ ಸಿಲಿಂಡರ್‌ ಕೊರತೆ ಕಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಉಸ್ತುವಾರಿ ಸಚಿವ ಮುರುಗೇಶ್‌ ನಿರಾಣಿ, ಆಕ್ಸಿಜನ್‌ ಕೊರತೆ ಇಲ್ಲ. ಅದನ್ನ ತರಲು ಮತ್ತು ಸ್ಟಾಕ್ ಮಾಡಲು ಸಮಸ್ಯೆ ಆಗ್ತಿದೆ. ಇದನ್ನ ಕೂಡಲೇ ಬಗೆಹರಿಸ್ತೀವಿ ಅಂತಿದ್ದಾರೆ.

ಬಾಡಿಗೆ ಹೆಚ್ಚಿಸಿದ್ದಕ್ಕೆ ಬೆಳಗಾವಿಗೆ ಬರ್ತಿದ್ದ ಟ್ಯಾಂಕರ್ಗೆ ಕೊಕ್ಕೆ
ಬೆಳಗಾವಿಯಲ್ಲಿ 700 ಜಂಬೋ ಆಕ್ಸಿಜನ್ ಸಿಲಿಂಡರ್ಗಳಿವೆ. ಮೂರು ಕಡೆ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ಗಳಿವೆ. 28 ಕೆಎಲ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಕೂಡ ಇದೆ. ಆದ್ರೆ, ಬಳ್ಳಾರಿಯಿಂದ ಜಿಲ್ಲೆಗೆ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಕೆ ಆಗ್ತಿತ್ತು. ಆದ್ರೆ, ಟ್ಯಾಂಕರ್ ಬಾಡಿಗೆ ಹೆಚ್ಚಿಗೆ ಕೇಳಿದ್ದಕ್ಕೆ ರೊಚ್ಚಿಗೆದ್ದ ಡಿಸಿ, ಬಳ್ಳಾರಿಯಿಂದ ಆಕ್ಸಿಜನ್ ಸಪ್ಲೈ ಮಾಡ್ತಿದ್ದ ಟ್ಯಾಂಕರ್ ಬಂದ್ ಮಾಡಿಸಿದ್ದಾರೆ. ಬಳ್ಳಾರಿಯಿಂದ ಬರ್ತಿದ್ದ ಟ್ಯಾಂಕರ್ ನಿಂತಿದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲಾಡಳಿತಕ್ಕೆ ಜನರ ಅಮೂಲ್ಯ ಜೀವಗಳಿಗಿಂತಾ ದುಡ್ಡೇ ಹೆಚ್ಚಾಯ್ತಾ ಅನ್ನೋ ಪ್ರಶ್ನೆ ಈಗ ಉದ್ಭವವಾಗಿದೆ.

ರಾಜ್ಯದಲ್ಲಿ ಮೆಡಿಕಲ್ ಆಕ್ಸಿಜನ್‌ಗೆ ಹೆಚ್ಚಾದ ಬೇಡಿಕೆ
ಸದ್ಯದ ಮಾಹಿತಿಯ ಪ್ರಕಾರ 1,51,300 ಲೀಟರ್ ಆಕ್ಸಿಜನ್‌ಗೆ ಆಸ್ಪತ್ರೆಗಳಿಂದ ತಾತ್ಕಾಲಿಕ ಬೇಡಿಕೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ನೇಮಕ ಮಾಡಿರುವ ಆಕ್ಸಿಜನ್ ನಿರ್ವಹಣಾಧಿಕಾರಿಯಿಂದ ಮಾಹಿತಿ ಸಿಕ್ಕಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವ ಶುರುವಾಗಿದೆ..

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದ್ದು.. ಸರ್ಕಾರ ಕೂಡಲೇ ಎಚ್ಚೆತ್ತು ಈ ಸಮಸ್ಯೆಯನ್ನ ನೀಗಿಸಬೇಕಿದೆ. ಇಲ್ಲವಾದ್ರೆ, ಇನ್ನಷ್ಟು ಅಮೂಲ್ಯ ಜೀವಗಳು ಬಲಿಯಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಇದನ್ನೂ ಓದಿ: ಆಕ್ಸಿಜನ್​ ಸಿಗದೆ ಬೆಳಗಾವಿಯಲ್ಲಿ ಮೂವರು ಸಾವು; ಆ್ಯಂಬುಲೆನ್ಸ್​ನಲ್ಲಿ ಒದ್ದಾಡಿ ಪ್ರಾಣಬಿಟ್ಟರೂ ಕೇಳುವವರಿಲ್ಲ