ದೀಪಾವಳಿ: ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ ಸುತ್ತೋಲೆ
ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ಎರಡು ಪಟಾಕಿ ದುರಂತದಿಂದ ಸಾವು-ನೋವುಗಳಾಗಿದ್ದವು. ಇದರಿಂದ ಎಚ್ಚತ್ತ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಸುಪ್ರಿಂ ಕೋರ್ಟ್ನ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ಬೆಂಗಳೂರು ನ.10: ದೀಪಾವಳಿ (Deepavali) ಹಬ್ಬ ಹಿನ್ನೆಲೆಯಲ್ಲಿ ಪಟಾಕಿ (Firecrackers) ಅವಘಡ ತಡೆಯಲು ಸುಪ್ರೀಂಕೋರ್ಟ್ನ (Supreme Court) ಆದೇಶ ಪಾಲನೆ ಕಡ್ಡಾಯವಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಸಂಭವಿಸಬಹುದಾದ ಅಗ್ನಿ ಅಪಘಾತ ಹಾಗೂ ಇತರೆ ಅನಾಹುತಗಳನ್ನು ತಡೆಗಟ್ಟಲು ಹಾಗೂ ನಿಭಾಯಿಸಲು ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ.
ನಿಬಂಧನೆಗಳು ಮತ್ತು ಷರತ್ತುಗಳು
- ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.
- ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇರಬೇಕು ಹಾಗೂ ಕ್ಯೂಆರ್ ಕೋಡ್ ಸಹ ಇರಬೇಕು ಎಂದು
- ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.
- ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಧನಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದಾಗಿರಬಾರದು. ಸಾಧ್ಯವಾದರೆ ಬೆಂಕಿಯನ್ನು ತಡೆಗಟ್ಟುವ ಸಾಧನಗಳನ್ನೇ ನಿರ್ಮಾಣಕ್ಕೆ ಉಪಯೋಗಿಸಬೇಕು.
- ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಸಂದರ್ಭದಲ್ಲಿ ಮಳಿಗೆಗಳನ್ನು ಪರಿಸ್ಥಿತಿಗನುಗುಣವಾಗಿ ಪ್ರವೇಶಿಸಿ, ಒಳಗಿದ್ದವರನ್ನು ರಕ್ಷಿಸಬಹುದು ಹಾಗೂ ಅವಶ್ಯಕತೆ ಬಿದ್ದರೆ ಮಳಿಗೆಗಳನ್ನು ಒಡೆದು ಒಳ ಪ್ರವೇಶಿಸಬಹುದು.
- ಪ್ರತಿಯೊಂದು ಮಳಿಗೆಗಳ ಗಾತ್ರ 10 x 10 ಅಡಿಗೆ ಸೀಮಿತಗೊಳಿಸಿರಬೇಕು ಮತ್ತು ಒಳಗೆ ಯಾವುದೇ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು.
- ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 3 ಮೀಟರ್ ಅಂತರವಿರಬೇಕು ಹಾಗೂ ಮಾರಾಟ ಮಳಿಗೆಯು ಯಾವುದೇ ರಕ್ಷಿತ ಕಾರ್ಯದಿಂದ ಅಥವಾ ಸ್ಥಳದಿಂದ 50 ಮೀಟರ್ ದೂರದಲ್ಲಿರಬೇಕು.
- ಪ್ರತಿಯೊಂದು ಮಳಿಗೆಗಳಲ್ಲಿ ಕಚೇರಿಯಿಂದ ನೀಡಿರುವ ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು.
- ಕಚೇರಿಯಿಂದ ಪರವಾನಿಗೆ ಪತ್ರ ಪಡೆದಿರುವವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.
- ಮಾರಾಟ ಮಳಿಗೆಗಳಲ್ಲಿ ಭಾರತೀಯ ತಯಾರಿಕಾ ಕಂಪನಿಗಳ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವುದು. ವಿದೇಶಿ ತಯಾರಿಕ ಪಟಾಕಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿದೆ.
- ಪ್ರತಿಯೊಂದು ಮಳಿಗೆಗಳಲ್ಲಿ ಕೆಳಗೆ ಸೂಚಿಸಿರುವ ಅಗ್ನಿ ನಿವಾರಣಾ ಹಾಗೂ ಅಗ್ನಿಶಮನ ವ್ಯವಸ್ಥೆ ಇರಬೇಕು.
- ಪ್ರತಿಯೊಂದು ಮಳಿಗೆಯಲ್ಲಿ ಒಂದು 9 ಲೀಟರ್ ಸಾಮರ್ಥ್ಯದ ವಾಟರ್ ಪ್ರಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‌ಗಳಲ್ಲಿ ನೀರನ್ನು ಇಟ್ಟಿರಬೇಕು.
- ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್‌ನಲ್ಲಿ ಕನಿಷ್ಟ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು ಹಾಗೂ ಬೆಂಕಿ ನಂದಿಸಲು ಸಾಕಷ್ಟು ಮರಳನ್ನು ಶೇಖರಿಸಿ ಇಟ್ಟಿರಬೇಕು.
- ಮಳಿಗೆಯಲ್ಲಿ ಅಡಿಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು ಸಂಬಂಧಿತ ಸೂಚನಾ ಫಲಕವನ್ನು ಹಾಕಿರಬೇಕು.
- ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡುವುದು.
- ರಾತ್ರಿ ವೇಳೆ ಮಳಿಗೆಯಲ್ಲಿ ಯಾರು ಮಲಗದಂತೆ ನೋಡಿಕೊಳ್ಳತಕ್ಕದ್ದು.
- ಮಾರಾಟ ಮಳಿಗೆಗಳಲ್ಲಿ ಸೂಕ್ತ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಫಿಟಿಂಗ್ಸ್ ವ್ಯವಸ್ಥೆ ಮಾಡಿಕೊಳ್ಳುವುದು.
- ಪರವಾನಿಗೆದಾರರು ಕಚೇರಿಯಿಂದ ನೀಡಿರುವ ಪರವಾನಗಿಯಲ್ಲಿ ನಿಗಧಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಮಳಿಗೆ ಹಾಕಬಾರದು.
- ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ