ಕೆಎಸ್‌ಆರ್‌ಟಿಸಿ ಸೇರಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳಲ್ಲಿವೆ 8786 ಬಿಎಸ್-3 ಬಸ್: ವಾಯುಮಾಲಿನ್ಯ ಹೆಚ್ಚಳಕ್ಕೂ ಕಾರಣ
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, NWKRTC ಹಾಗೂ KKRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 25,996 ಬಸ್‌ಗಳಿದ್ದು, ಈ ಪೈಕಿ 8,786 ಬಸ್‌ಗಳು ಬಿಎಸ್-3 ಮಾದರಿಯದ್ದಾಗಿವೆ. ಬಿಎಸ್-3 ಬಸ್‌ಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಆತಂಕದ ನಡುವೆ 15 ವರ್ಷ ಪೂರ್ಣಗೊಂಡ ಬಸ್‌ಗಳನ್ನು ಹಂತಹಂತವಾಗಿ ಗುಜರಿಗೆ ಹಾಕಲಾಗುತ್ತಿದೆ.

ಮುಖ್ಯಾಂಶಗಳು
- ನಾಲ್ಕು ನಿಗಮಗಳಲ್ಲಿ 8,786 ಬಿಎಸ್-3 ಬಸ್‌ಗಳು
- ಕೆಎಸ್‌ಆರ್‌ಟಿಸಿಯಲ್ಲಿ 4,135 ಬಿಎಸ್-3 ಬಸ್‌ಗಳು
- 5,451 ಹಳೆಯ ಬಸ್‌ಗಳು ಈಗಾಗಲೇ ಗುಜರಿಗೆ
ಬೆಂಗಳೂರು, ಸೆಪ್ಟೆಂಬರ್ 27: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿರುವ ಹಳೆಯ ಬಿಎಸ್-3 ಬಸ್‌ಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿಗಳಲ್ಲಿ ಒಟ್ಟು 25,996 ಬಸ್‌ಗಳಿದ್ದು, ಈ ಪೈಕಿ 8,786 ಬಸ್‌ಗಳು ಬಿಎಸ್-3 ಮಾದರಿಯದ್ದಾಗಿವೆ. ಬಿಎಸ್-6 ಬಸ್‌ಗಳಿಗೆ ಹೋಲಿಸಿದರೆ ಬಿಎಸ್-3 ಬಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟುಮಾಡುತ್ತವೆ ಎಂಬ ಕಾರಣಕ್ಕೆ ಹಳೆಯ ಬಸ್‌ಗಳನ್ನು ಹಂತಹಂತವಾಗಿ ಬದಲಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೆಎಸ್‌ಆರ್‌ಟಿಸಿಯಲ್ಲಿ 4,135 ಬಿಎಸ್-3 ಬಸ್‌ಗಳು
ನಾಲ್ಕು ಸಾರಿಗೆ ನಿಗಮಗಳ ಪೈಕಿ ಕೆಎಸ್‌ಆರ್‌ಟಿಸಿಯಲ್ಲಿ 4,135 ಬಿಎಸ್-3 ಬಸ್‌ಗಳಿವೆ. ಉಳಿದ ಬಿಎಸ್-3 ಬಸ್‌ಗಳು ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ನಿಗಮಗಳಲ್ಲಿವೆ.
ಬಿಎಂಟಿಸಿವೊಂದರಲ್ಲೇ ಇದೆ 700ಕ್ಕೂ ಹೆಚ್ಚು ಗುಜರಿಗೆ ಹಾಕುವ ಬಸ್ಸುಗಳು!
ಬಿಎಂಟಿಸಿಯಲ್ಲಿ ಒಟ್ಟು 6,929 ಬಸ್‌ಗಳಿದ್ದು, 1,779 ಎಲೆಕ್ಟ್ರಿಕ್ ಬಸ್‌ಗಳಿವೆ. ಇದರ ನಡುವೆ 700ಕ್ಕೂ ಹೆಚ್ಚು ಬಸ್‌ಗಳು ಗುಜರಿಗೆ ಹಾಕುವ ಹಂತದಲ್ಲಿವೆ ಎಂದು ತಿಳಿಸಲಾಗಿದೆ. ಹಳೆಯ ಬಸ್‌ಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಅವುಗಳನ್ನು ಶೀಘ್ರವೇ ಗುಜರಿಗೆ ಹಾಕಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
15 ವರ್ಷ ಪೂರ್ಣಗೊಂಡ ಬಸ್‌ಗಳು ಗುಜರಿಗೆ
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ 15 ವರ್ಷ ಪೂರ್ಣಗೊಂಡ ಬಸ್‌ಗಳನ್ನು ಹಂತ ಹಂತವಾಗಿ ಗುಜರಿಗೆ ಹಾಕಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ 5,451 ಬಸ್‌ಗಳನ್ನು ಈಗಾಗಲೇ ಗುಜರಿಗೆ ಹಾಕಲಾಗಿದೆ. ಇನ್ನು 2031-32ರ ವೇಳೆಗೆ 15 ವರ್ಷ ಪೂರ್ಣಗೊಳ್ಳಲಿರುವ 9,518 ಬಸ್‌ಗಳನ್ನು ಗುಜರಿಗೆ ಹಾಕಲು ನಾಲ್ಕು ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಹಳೆಯ ಬಸ್‌ಗಳ ಬದಲಾವಣೆಗೆ ಒತ್ತಾಯ
ಕಡಿಮೆ ಮಾಲಿನ್ಯ ಉಂಟುಮಾಡುವ ಬಸ್‌ಗಳಿಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಿಧಾನವಾಗಿ ಬದಲಾಗುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 2024ರಲ್ಲಿ ಸಾಮಾಜಿಕ ಕಾರ್ಯಕರ್ತರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದರು.
ಸದ್ಯ ಸಾವಿರಾರು ಬಿಎಸ್-3 ಬಸ್‌ಗಳು ರಸ್ತೆಗಿಳಿಯುತ್ತಿದ್ದು, ಹಳೆಯ ಬಸ್‌ಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳೆಯ ಬಸ್‌ಗಳನ್ನು ತ್ವರಿತವಾಗಿ ಗುಜರಿಗೆ ಹಾಕಿ, ಅವುಗಳ ಬದಲಿಗೆ ಕಡಿಮೆ ಮಾಲಿನ್ಯ ಉಂಟುಮಾಡುವ ಬಸ್‌ಗಳನ್ನು ಹೆಚ್ಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




