ಶ್ರೀಗಂಧ ಬೆಳೆದ ರೈತರಿಗೆ ಆಘಾತ: ಬೆಳೆದ ಮರಕ್ಕೆ ಸೂಕ್ತ ಬೆಲೆ ನಿಗದಿಗೆ ಅರಣ್ಯ ಇಲಾಖೆ ವಿಫಲ
ಕೋಟ್ಯಂತರ ರೂಪಾಯಿ ಆಸೆ ಹುಟ್ಟಿಸಿ ಶ್ರೀಗಂಧ ಬೆಳೆಯಲು ಪ್ರೋತ್ಸಾಹಿಸಿದ್ದ ಅರಣ್ಯ ಇಲಾಖೆಯೇ ಈಗ ಶ್ರೀಗಂಧದ ಬೆಳೆಗೆ ಬೆಲೆ ಇಲ್ಲವೆಂದು ಹೇಳಿ ರೈತರಿಗೆ ಬಹುದೊಡ್ಡ ಆಘಾತ ತಂದೊಡ್ಡಿದೆ
ಕೋಲಾರ: ಅ ರೈತರೆಲ್ಲಾ ಕೋಟ್ಯಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿ ಶ್ರೀಗಂಧದ (Sandalwood) ಸಸಿಗಳನ್ನು ಬೆಳೆಯಲು ಮುಂದಾಗಿದ್ದರು. ಅದರಂತೆಯೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧವನ್ನು ಬೆಳೆದಿದ್ದಾರೆ. ಆದರೆ ಕೋಟ್ಯಂತರ ರೂಪಾಯಿ ಆಸೆ ಹುಟ್ಟಿಸಿ ಶ್ರೀಗಂಧ ಬೆಳೆಯಲು ಪ್ರೋತ್ಸಾಹಿಸಿದ್ದ ಅರಣ್ಯ ಇಲಾಖೆಯೇ ಈಗ ಶ್ರೀಗಂಧದ ಬೆಳೆಗೆ ಬೆಲೆ ಇಲ್ಲವೆಂದು ಹೇಳಿ ರೈತರಿಗೆ ಬಹುದೊಡ್ಡ ಆಘಾತ ತಂದೊಡ್ಡಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಶ್ರೀಗಂಧ ಬೆಳೆಯಲು ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಶ್ರೀಗಂಧ ಬೆಳೆದ ರೈತರು ಕೋಟ್ಯಾಧಿಪತಿಗಳಾಗುತ್ತಾರೆ ಎಂದು ಹೇಳಿ ನೀಲಗಿರಿ, ಅಕೇಶಿಯಾ, ಸಿಲ್ವರ್ಓಕ್, ತೇಗದ ಗಿಡಗಳನ್ನು ಬೆಳೆಯುತ್ತಿದ್ದ ಜಾಗದಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲು ಅರಣ್ಯ ಇಲಾಖೆ ಹಾಗೂ ಕೆಎಸ್ಡಿಎಲ್ ಉತ್ತೇಜನ ನೀಡಿದ ಪರಿಣಾಮ ಇಂದು ರಾಜ್ಯದಲ್ಲಿ ಸುಮಾರು 30 ಸಾವಿರ ರೈತರು ಶ್ರೀಗಂಧ ಬೆಳೆದಿದ್ದಾರೆ. ಕೆಲವು ರೈತರು ಬೆಳೆದಿರುವ ಶ್ರೀಗಂಧದ ಮರಗಳಿಗೆ ಈಗಾಗಲೇ 12 ವರ್ಷ ವಯಸ್ಸಾಗಿದೆ. ಬಹುತೇಕ ಗಿಡಗಳು ಇನ್ನೇನು ಕಟಾವು ಮಾಡುವ ಹಂತಕ್ಕೂ ಬಂದಿವೆ. ಈ ಹಂತದಲ್ಲಿ ಅರಣ್ಯ ಇಲಾಖೆಯು ರೈತರಿಗೆ ಆಘಾತ ತಂದೊಡ್ಡಿದೆ.
ಈ ಮೊದಲು ಶ್ರೀಗಂಧ ಮರಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇದೆ ಎಂದು ಹೇಳುತ್ತಿದ್ದ ಅರಣ್ಯ ಇಲಾಖೆ ಈಗ ಹತ್ತು ವರ್ಷ ಬೆಳೆದಿರುವ ಶ್ರೀಗಂಧದ ಮರಕ್ಕೆ ಕೇವಲ 1176 ರೂಪಾಯಿ ಬೆಲೆ ನಿಗದಿ ಮಾಡಿದೆ. ಈ ಮೊದಲು ಕೆಎಸ್ಡಿಎಲ್(ಕರ್ನಾಟಕ ಸೋಪ್ಸ್ ಅಂಡ್ ಡಿಚರ್ಜೆಂಟ್) ಶ್ರೀಗಂಧ ಬೆಳೆಯುವ ರೈತರಿಗೆ ಹತ್ತು ವರ್ಷದ ಒಂದು ಶ್ರೀಗಂಧದ ಮರಕ್ಕೆ ಸರಾಸರಿ 2,44,620 ರೂಪಾಯಿ ಬೆಲೆ ನಿಗದಿ ಮಾಡಿತ್ತು. ಆದರೆ ಈಗ ಅರಣ್ಯ ಇಲಾಖೆ ಮಾತ್ರ ಶ್ರೀಗಂಧದ ಮರಕ್ಕೆ ಬೆಲೆಯೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದೆ. ಇದರಿಂದ ಶ್ರೀಗಂಧ ಬೆಳೆದ ರೈತರಿಗೆ ಆಘಾತ ಎದುರಾಗಿದೆ.
‘ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣಪುಟ್ಟ ಮರಗಳಿಗೆ ಲಕ್ಷಾಂತರ ರೂಪಾಯಿ ಬೆಲೆ ಕಟ್ಟುತ್ತದೆ. ಅರಣ್ಯ ಇಲಾಖೆಯು ಶ್ರೀಗಂಧದ ಮರಗಳಿಗೆ ಮಾತ್ರ ಬೆಲೆಯೇ ಇಲ್ಲದಂತೆ ನಡೆದುಕೊಂಡು ರೈತರಿಗೆ ಮೋಸ ಮಾಡಲು ನಿಂತಂತೆ ಇದೆ’ ಎನ್ನುವುದು ಶ್ರೀಗಂಧ ಬೆಳೆದಿರುವ ಶ್ರೀನಿವಾಸರೆಡ್ಡಿ ಅವರ ಆರೋಪ. ಒಂದು ಶ್ರೀಗಂಧದ ಸಸಿಗೆ ಸುಮಾರು 200 ರೂಪಾಯಿ ಕೊಡಬೇಕು. ಹತ್ತು ವರ್ಷಗಳ ಕಾಲ ಅದನ್ನು ಸಾಕಿ ಬೆಳೆಸಿರುವ ರೈತರು ಗಿಡಕ್ಕಾಗಿ ಸಾಕಷ್ಟು ಶ್ರಮ ಮತ್ತು ಹಣವನ್ನು ಖರ್ಚು ಮಾಡಿರುತ್ತಾರೆ. ರಿಗೆ ಅದೆಷ್ಟು ಶ್ರಮ, ಅದೆಷ್ಟು ಖರ್ಚು ಬಂದಿರುತ್ತದೆ. ಹೀಗಿರುವಾಗ ಅರಣ್ಯ ಇಲಾಖೆಯ ಈ ನಿರ್ಧಾರ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಹೆದ್ದಾರಿ ರಸ್ತೆ ನಿರ್ಮಾಣ ವೇಳೆ ಶ್ರೀಗಂಧ ಮರಗಳು ರಸ್ತೆಗೆ ಹೋದರೆ ಅದಕ್ಕೆ ನೀಡುವ ಪರಿಹಾರ ಕೂಡಾ 1176 ರೂಪಾಯಿ ಎಂದು ನಿಗದಿ ಮಾಡಿದೆ.
ಅರಣ್ಯ ಇಲಾಖೆಯ ಈ ನಡೆಯನ್ನು ಕಂಡ ರೈತರು ಶ್ರೀಗಂಧದ ಬೆಳೆಯನ್ನು ಅರಣ್ಯ ಇಲಾಖೆಯಿಂದ ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ತನ್ನಿ ಎಂದು ಒತ್ತಾಯಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಯು ಎರಡು-ಮೂರು ವರ್ಷ ಬೆಳೆದ ಒಂದು ಗುಲಾಬಿ ಗಿಡಕ್ಕೆ ಸಾವಿರಾರು ರೂಪಾಯಿ ಪರಿಹಾರ ನೀಡುತ್ತದೆ. ಆದರೆ ಅರಣ್ಯ ಇಲಾಖೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರಕ್ಕೆ ಕೇವಲ 1176 ರೂಪಾಯಿ ನಿಗದಿ ಮಾಡಿದೆ. ಹಾಗಾಗಿ ಶ್ರೀಗಂಧದ ಬೆಳೆಯನ್ನು ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ತನ್ನಿ ಎಂದು ಶ್ರೀಗಂಧ ಬೆಳೆದ ರೈತರು ಆಗ್ರಹಿಸಿದ್ದಾರೆ.
ಹತ್ತು ವರ್ಷ ಬೆಳೆದಿರುವ ಶ್ರೀಗಂಧದ ಮರಗಳನ್ನು ಕಳ್ಳಕಾಕರಿಂದ ರಕ್ಷಣೆ ಮಾಡುವುದು ಸಹ ಕೂಡಾ ರೈತರಿಗೆ ದೊಡ್ಡ ಸವಾಲಾಗಿದೆ. ಶ್ರೀಗಂಧದ ಮರಗಳ ರಕ್ಷಣೆಗೆ ಸರ್ಕಾರದ ನೆರವು ನೀಡಬೇಕು. ಜೊತೆಗೆ ಶ್ರೀಗಂಧದ ಬೆಳೆಯನ್ನು ಸಹ ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ತಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುವಷ್ಟೇ ಬೆಲೆ ನೀಡಬೇಕು ಎಂದು ಸರ್ಕಾರದ ನಿರ್ಧಾರದ ವಿರುದ್ಧ ರೈತರು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಮೂಲಕ ಹೋರಾಟಕ್ಕೆ ಸಿದ್ದವಾಗುತ್ತಿದ್ದಾರೆ.
ಒಟ್ಟಾರೆ ಅರಣ್ಯ ಇಲಾಖೆಯು ಇಷ್ಟು ವರ್ಷಗಳ ಕಾಲ ಕೋಟ್ಯಂತರ ರೂಪಾಯಿ ಆಸೆ ತೋರಿಸಿ ಈಗ ಏಕಾಏಕಿ ರೈತರಿಗೆ ಆಘಾತ ತಂದೊಡ್ಡಿದೆ. ಕೂಡಲೇ ಅರಣ್ಯ ಇಲಾಖೆಯು ಶ್ರೀಗಂಧದ ಮರಗಳಿಗೆ ಮಾರುಕಟ್ಟೆ ಬೆಲೆ ನಿಗದಿ ಮಾಡುವ ಜೊತೆಗೆ ಶ್ರೀಗಂಧದ ಮರಗಳನ್ನು ಬೆಳೆದಿರುವ ರೈತರ ನೆರವಿಗೆ ನಿಲ್ಲಬೇಕು ಎನ್ನುವುದು ಶ್ರೀಗಂಧ ಬೆಳೆದ ರೈತರ ಆಗ್ರಹವಾಗಿದೆ.
ವರದಿ : ರಾಜೇಂದ್ರ ಸಿಂಹ
ಇದನ್ನೂ ಓದಿ: ಶಿವಮೊಗ್ಗ: ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಬೇಟೆ; 7 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ವಶ
ಇದನ್ನೂ ಓದಿ: ಶಿವಮೊಗ್ಗದ ಒಡಲಲ್ಲೇ ಶ್ರೀಗಂಧದ ದಂಧೆ, ಗೋದಾಮಿನಲ್ಲಿ ಅಡಗಿಸಿದ್ದ 910 ಕೆಜಿ ಜಪ್ತಿ
Published On - 7:46 pm, Tue, 22 February 22