ತಾಂಡಾಗಳಲ್ಲಿ ತಾಂಡವವಾಡುತ್ತಿದೆ ರಣಭೀಕರ ಬರ, ಹೊಟ್ಟೆಪಾಡಿಗಾಗಿ ದೊಡ್ಡ ನಗರಗಳಿಗೆ ಗುಳೆ ಹೋದ ಜನ

ಕುಣಿಕೇರಿ ತಾಂಡಾದಲ್ಲಿಯೇ ಒಂದೂವರೆ ಸಾವಿರ ಜನಸಂಖ್ಯೆಯಿದೆ. ಆದ್ರೆ ಸದ್ಯ ಇರೋದು ಕೇವಲ ನೂರಕ್ಕೂ ಹೆಚ್ಚು ಜನ ಮಾತ್ರ. ಉಳಿದವರು ಬೇರೆಡೆ ಕೆಲಸವನ್ನು ಅರಸಿಕೊಂಡು ಗುಳೆ ಹೋಗಿದ್ದಾರೆ. ಅನೇಕರು ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲು ದೊಡ್ಡ ದೊಡ್ಡ ನಗರಳಿಗೆ ಗುಳೆ ಹೋಗಿದ್ದಾರೆ. ಬಹುತೇಕ ಜನರು ಕೂಲಿ ಕೆಲಸ ಅರಸಿಕೊಂಡು ಮುಂಬೈ, ಬೆಂಗಳೂರು, ಹೈದ್ರಾಬಾದ್, ಮೈಸೂರು ನಂತಹ ದೊಡ್ಡ ದೊಡ್ಡ ನಗರಗಳಿಗೆ ಹೋಗಿದ್ದಾರೆ.

ತಾಂಡಾಗಳಲ್ಲಿ ತಾಂಡವವಾಡುತ್ತಿದೆ ರಣಭೀಕರ ಬರ, ಹೊಟ್ಟೆಪಾಡಿಗಾಗಿ ದೊಡ್ಡ ನಗರಗಳಿಗೆ ಗುಳೆ ಹೋದ ಜನ
ತಾಂಡಾಗಳಲ್ಲಿ ತಾಂಡವವಾಡುತ್ತಿದೆ ರಣಭೀಕರ ಬರ
Follow us
| Updated By: ಸಾಧು ಶ್ರೀನಾಥ್​

Updated on: Feb 27, 2024 | 1:55 PM

ಆ ಜಿಲ್ಲೆಯಲ್ಲಿನ ಬಹುತೇಕ ತಾಂಡಾಗಳು ಬಿಕೋ ಅಂತಿವೆ. ತಾಂಡಾದಲ್ಲಿ ಮಕ್ಕಳು, ವೃದ್ದರನ್ನು ಬಿಟ್ಟರೆ ದುಡಿಯೋ ಶಕ್ತಿ ಇರೋರು ಸಿಗೋದೆ ಅಪರೂಪವಾಗಿದೆ. ಬಹುತೇಕ ಮನೆಗಳಿಗೆ ಬೀಗ ಬಿದ್ದಿವೆ. ಹೌದು ಭೀಕರ ಬರಕ್ಕೆ (Drought) ತಾಂಡಾದ ಜನರು ತತ್ತರಿಸಿ ಹೋಗಿದ್ದು ಹೊಟ್ಟೆ ತುಂಬಿಸಿಕೊಳ್ಳಲು ದೂರದ ಊರುಗಳಿಗೆ ಗುಳೆ ಹೋಗಿದ್ದಾರೆ. ಬಿಕೋ ಅಂತಿರೋ ಗಲ್ಲಿಗಳು. ಕೆಲವು ಮನೆಗಳಿಗೆ ಬೀಗ ಹಾಕಿದ್ದರೆ, ಇನ್ನು ಕೆಲವು ಮನೆಗಳು ಓಪನ್ ಇದ್ರು ಕೂಡಾ ಜನರು ಕಾಣಸಿಗೋದು ಅತಿವಿರಳ. ಕೆಲವಡೆ ಮಕ್ಕಳು ಮತ್ತು ವೃದ್ದರನ್ನು ಹೊರತು ಪಡಿಸಿದ್ರೆ ಇನ್ನುಳಿದಂತೆ, ವಯಸ್ಸಿನವರು, ದುಡಿಯೋ ಶಕ್ತಿ ಇರೋರು ಇಡೀ ತಾಂಡಾ ಹುಡುಕಿದ್ರು ಸಿಗೋದು ಬೆರಳಣಿಕೆಯಷ್ಟು ಮಾತ್ರ ಜನ. ಹಗಲೊತ್ತಿನಲ್ಲಿಯೇ ನಿರ್ಜನ ಪ್ರದೇಶದಂತೆ ಇದೀಗ ತಾಂಡಾಗಳು ಕಾಣುತ್ತಿವೆ. ಇಂತಹದೊಂದು ದೃಶ್ಯಗಳು ಕಂಡುಬಂದಿದ್ದು ಕೊಪ್ಪಳ (Koppal) ತಾಲೂಕಿನ ಕುಣಿಕೇರಿ ತಾಂಡಾದಲ್ಲಿ. ಈ ರೀತಿಯ ದೃಶ್ಯಗಳು ಕೇವಲ ಇದೊಂದೇ ತಾಂಡಾದಲ್ಲಿ ಮಾತ್ರವಲ್ಲ. ಜಿಲ್ಲೆಯ ಬಹುತೇಕ ತಾಂಡಾದಲ್ಲಿ ಈ ರೀತಿಯ ದೃಶ್ಯಗಳು ಸಮಾನ್ಯವಾಗಿವೆ. ಅಷ್ಟಕ್ಕೂ ಇಂತಹದೊಂದು ಸ್ಥಿತಿಗೆ ಕಾರಣ ಗುಳೆ.

ಹೌದು ಕೊಪ್ಪಳ ಜಿಲ್ಲೆಯಾದ್ಯಂತ ಬರಗಾಲ ತಾಂಡವವಾಡುತ್ತಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿ ಕೆಲಸಗಳು ಬಂದ್ ಆಗಿವೆ. ಗ್ರಾಮೀಣ ಭಾಗದ ಹೆಚ್ಚಿನ ಜನರು ನೆಚ್ಚಿಕೊಂಡಿದ್ದು ಕೃಷಿ ಕೆಲಸಗಳನ್ನೇ. ಆದ್ರೆ ಭೀಕರ ಬರಗಾಲದಿಂದ ರೈತಾಪಿ ವರ್ಗ ತತ್ತರಿಸಿದೆ. ಕೂಲಿ ಕಾರ್ಮಿಕರೂ ಇದರಿಂದ ತತ್ತರಿಸಿದ್ದಾರೆ. ಹೌದು ಹೆಚ್ಚಿನ ತಾಂಡಾ ನಿವಾಸಿಗಳು ಸುತ್ತಮುತ್ತಲಿನ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೃಷಿ ಕೆಲಸ ಸಿಗದಂತಾಗಿದೆ. ಹಾಗಂತ ತಾಂಡಾದಲ್ಲಿಯೇ ಇದ್ದರೆ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡಬೇಕಾಗುತ್ತದೆ.

ಹೀಗಾಗಿ ಬಹುತೇಕ ಜನರು, ಕೂಲಿ ಕೆಲಸ ಅರಸಿಕೊಂಡು, ಮುಂಬೈ, ಬೆಂಗಳೂರು, ಹೈದ್ರಾಬಾದ್, ಮೈಸೂರು ನಂತಹ ದೊಡ್ಡ ದೊಡ್ಡ ನಗರಗಳಿಗೆ ಹೋಗಿದ್ದಾರೆ. ಕೆಲವರು ಕಬ್ಬು ಕಟಾವಿನಂತಹ ಕೃಷಿ ಕೆಲಸಕ್ಕೆ ಹೋದ್ರೆ ಇನ್ನು ಅನೇಕರು ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲು ದೊಡ್ಡ ದೊಡ್ಡ ನಗರಳಿಗೆ ಗುಳೆ ಹೋಗಿದ್ದಾರೆ. ಕುಣಿಕೇರಿ ತಾಂಡಾದಲ್ಲಿಯೇ ಒಂದೂವರೆ ಸಾವಿರ ಜನಸಂಖ್ಯೆಯಿದೆ. ಆದ್ರೆ ಸದ್ಯ ಇರೋದು ಕೇವಲ ನೂರಕ್ಕೂ ಹೆಚ್ಚು ಜನ ಮಾತ್ರ. ಉಳಿದವರು ಬೇರೆಡೆ ಕೆಲಸವನ್ನು ಅರಸಿಕೊಂಡು ಗುಳೆ ಹೋಗಿದ್ದಾರೆ.

Also Read: 30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು

ಇನ್ನು ಭೀಕರ ಬರಗಾಲದಿಂದ ತತ್ತರಿಸಿರುವ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಕೂಡಾ ಜಿಲ್ಲೆಯಲ್ಲಿ ಕೈ ಹಿಡಿದಿಲ್ಲ. ಜಿಲ್ಲೆಯ ಬಹುತೇಕ ಕಡೆ ಗ್ರಾಮ ಪಂಚಾಯತ್ ನಿಂದ ಕಾರ್ಮಿಕರಿಗೆ ಉದ್ಯೋಗ ನೀಡಬೇಕಿತ್ತು. ಆದ್ರೆ ಉದ್ಯೋಗವನ್ನು ನೀಡ್ತಿಲ್ಲವಂತೆ. ಇನ್ನು ಬರಗಾಲದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು 150 ಕ್ಕೆ ಹೆಚ್ಚಿಸಬೇಕಿತ್ತು. ಆದ್ರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂರ್ಘರ್ಷದಿಂದ ಈ ಕೆಲಸವು ಆಗ್ತಿಲ್ಲಾ.

ಸ್ಥಳೀಯ ಮಟ್ಟದಲ್ಲಿ ಕಾರ್ಮಿಕರಿಗೆ ಕೂಲಿ ಕೆಲಸ ಸರಿಯಾಗಿ ಸಿಗದೇ ಇರೋದರಿಂದ ಕಾರ್ಮಿಕರು ಗುಳೆ ಹೋಗಿದ್ದಾರೆ ಅಂತಿದ್ದಾರೆ ತಾಂಡಾ ನಿವಾಸಿಗಳು. ಇನ್ನು ಕೆಲವರು ಮನೆಯಲ್ಲಿ ವೃದ್ದರಿದ್ದರೇ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಮನೆಯಲ್ಲಿ ಯಾರು ನೋಡಿಕೊಳ್ಳಲಿಕ್ಕಾಗದೇ ಇರೋರು ಇದ್ರೆ ಮಕ್ಕಳನ್ನು ಕೂಡಾ ಶಾಲೆ ಬಿಡಿಸಿ ತಮ್ಮ ಜೊತೆ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರಂತೆ. ಹೀಗಾಗಿ ಸ್ಥಳೀಯವಾಗಿ ತಾಂಡಾ ನಿವಾಸಿಗಳಿಗೆ ಕೆಲಸ ಸಿಗುವಂತಹ ವ್ಯವಸ್ಥೆ ಮಾಡಬೇಕು ಅಂತ ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.

ಭೀಕರ ಬರಗಾಲದಿಂದ ಗ್ರಾಮೀಣ ಭಾಗದ ಜನರು, ತಾಂಡಾ ನಿವಾಸಿಗಳು ಸಾಕಷ್ಟು ತೊಂದರೆಗೆ ಸಿಲುಕುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡುವದರ ಜೊತೆಗೆ, ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಸಿಗುವಂತಹ ಕೌಶಲ್ಯ ತರಬೇತಿ ನೀಡಿ, ಅವರು ಸ್ವಯಂ ಉದ್ಯೋಗ ಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ