ಹಬ್ಬದ ಹೊತ್ತಲ್ಲೇ ಗ್ರಾಹಕರಿಗೆ ಕಹಿಯಾದ ಸಕ್ಕರೆ: ಮೂರೇ ದಿನದಲ್ಲಿ ಬರೋಬ್ಬರಿ 15ರೂ ಏರಿಕೆ; ಹಚ್ಚಳಕ್ಕೆ ಅಸಲಿ ಕಾರಣವೇನು?
Sugar Price Hike: ಮೂರೇ ದಿನದಲ್ಲಿ ಸಕ್ಕರೆ ಬೆಲೆ ಬರೋಬ್ಬರಿ 15ರೂ ಏರಿಕೆ ಕಂಡಿದೆ. ಹೀಗೆ ಹಬ್ಬದ ಹೊತ್ತಲ್ಲೇ ದಿಢೀರ್ ಏರಿಕೆಯಿಂದ ಗ್ರಾಹಕರಿಗೆ ಸಕ್ಕರೆ ಕಹಿಯಾಗಿ ಪರಿಣಮಿಸಿದೆ. ಗ್ರಹಾಕರು ಮಾತ್ರವಲ್ಲದೆ ಸಣ್ಣ ವ್ಯಾಪಾರಿಗಳ ಮೇಲೂ ಪರಿಣಾಮ ಬೀರಿದೆ. ಹಾಗಾದರೆ ದರ ಹಚ್ಚಳಕ್ಕೆ ಅಸಲಿ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.

ಕೊಪ್ಪಳ, ಆಗಸ್ಟ್ 22: ಸಿಹಿಯಾಗಿದ್ದ ಸಕ್ಕರೆ ಇದೀಗ ಗ್ರಾಹಕರಿಗೆ ಕಹಿ ಆಗುತ್ತಿದೆ. ಏಕೆಂದರೆ ಸಕ್ಕರೆ ದರದಲ್ಲಿ ಏಕಾಏಕಿ ಭಾರಿ ಏರಿಕೆಯಾಗಿದ್ದು (Sugar price hike), ಕೆಜಿಗೆ ಬರೋಬ್ಬರಿ 70 ರೂ.ಗೆ ತಲುಪಿದೆ. ಮೂರು ದಿನಗಳ ಹಿಂದಷ್ಟೇ 55 ರೂಪಾಯಿಗೆ ಮಾರಾಟವಾಗುತ್ತಿದ್ದ ಸಕ್ಕರೆ, ಇದೀಗ 68ರಿಂದ 70 ರೂ.ಗೆ ಏರಿಕೆ ಆಗಿದೆ. ಒಂದೇ ತಿಂಗಳಲ್ಲಿ ಸಕ್ಕರೆ ದರದಲ್ಲಿ ಭಾರೀ ಜಿಗಿತ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ಆತಂಕವು ವ್ಯಕ್ತವಾಗಿದೆ.
ಸಗಟು ಮಾರುಕಟ್ಟೆಯಲ್ಲೂ ದರ ಜಿಗಿತ: ವ್ಯಾಪಾರಿಗಳ ಕಂಗಾಲು
ಕೇವಲ ಚಿಲ್ಲರೆ ಅಂಗಡಿಗಳಲ್ಲಿ ಮಾತ್ರವಲ್ಲದೆ ಸಗಟು (ಹೋಲ್‌ಸೇಲ್) ಮಾರುಕಟ್ಟೆಯಲ್ಲೂ ಸಕ್ಕರೆ ಬೆಲೆ ತೀವ್ರ ಏರಿಕೆ ಕಂಡಿದೆ. ಕೊಪ್ಪಳ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಹದಿನೈದು ದಿನಗಳ ಹಿಂದೆ ಕ್ವಿಂಟಲ್‌ಗೆ 4,500 ರೂಪಾಯಿ ಇದ್ದ ದರ, ಇದೀಗ 6,000 ದಿಂದ 6,500 ರೂಪಾಯಿಗೆ ಜಿಗಿದಿದೆ. “ಕಳೆದ 25 ವರ್ಷಗಳಿಂದ ನಾವು ವ್ಯಾಪಾರ ಮಾಡುತ್ತಿದ್ದೇವೆ, ಆದರೆ ಇಷ್ಟೊಂದು ಅಲ್ಪಾವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಬೆಲೆ ಏರಿಕೆಯನ್ನು ಎಂದೂ ನೋಡಿರಲಿಲ್ಲ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ” ಎಂದು ಸ್ಥಳೀಯ ವ್ಯಾಪಾರಸ್ಥರಾದ ಗಿರೀಶ್ ಪಾನಘಂಟಿ ಹೇಳಿದ್ದಾರೆ.
ದಿಢೀರ್ ಬೆಲೆ ಏರಿಕೆಗೆ ಕಾರಣವೇನು?
ಸಕ್ಕರೆ ದರ ಏಕಾಏಕಿ ಹೆಚ್ಚಳವಾಗುವುದಕ್ಕೆ ಕಾರಣವೇನು ಎನ್ನುವುದಾದರೆ ಸಕ್ಕರೆ ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಕಬ್ಬು ಬೆಳೆಗೆ ಹಾನಿಯಾಗಿದ್ದು, ಉತ್ಪಾದನೆ ನಿರೀಕ್ಷೆಗಿಂತ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಸಕ್ಕರೆ ಪೂರೈಕೆ ಬಿಗಿಯಾಗಬಹುದು ಎಂಬ ನಿರೀಕ್ಷೆ ಬೆಲೆ ಏರಿಕೆಗೆ ಕಾರಣವಾಗಿದೆ.
ಇದನ್ನೂ ಓದಿ: ಹಬ್ಬದ ವೇಳೆ ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಕೇಂದ್ರ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ ಜಾರಿ
ಇದರ ಜೊತೆಗೆ ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿದಂತೆ ಹಬ್ಬದ ಸೀಸನ್ ಆರಂಭವಾಗಿರುವುದರಿಂದ ಸಕ್ಕರೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಳದ ನಡುವೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟಾಕ್ ಕಡಿಮೆಯಾಗಿರುವುದು ಕೂಡ ಬೆಲೆ ಏರಿಕೆಗೆ ಮತ್ತಷ್ಟು ಒತ್ತಡ ತಂದಿದೆ. ಅಲ್ಲದೆ ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ ಮಾಡುತ್ತಿದ್ದಾರೆ ಎನ್ನಲಾಗುದೆ. ಎಥೆನಾಲ್ಗೆ ಕಬ್ಬು ಅವಶ್ಯಕವಾಗಿದೆ, ಆ ಕಾರಣಕ್ಕೆ ಕಬ್ಬು ಎಲ್ಲವೂ ಆ ಕಡೆ ಹೋಗುತ್ತಿದೆಯಾ ಎನ್ನುವ ಅನುಮಾನವೂ ಇದೆ. ಅದೇ ಕಾರಣಕ್ಕೆ ಸಕ್ಕರೆ ಬೆಲೆ ದಿಢೀರ್ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ಚಹಾ ಕುಡಿಯುವುದನ್ನು ಬಿಡುವುದೇ ವಾಸಿ ಎಂದ ಗ್ರಾಹಕರು
ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ ಎನ್ನಲಾಗುತ್ತಿದೆ. ‘ಸಕ್ಕರೆ ದರ ಇಷ್ಟು ಹೆಚ್ಚಾದರೆ ನಾವು ಜನ ಸಾಮಾನ್ಯರು ಚಹಾ, ಕಾಫಿ ಕುಡಿಯುವುದನ್ನು ಬಿಡುವುದೇ ವಾಸಿ’ ಎಂದು ಗ್ರಾಹಕರಾದ ಪರಶುರಾಮ್ ಅವರ ಮಾತು.
ಇದನ್ನೂ ಓದಿ: ಹಬ್ಬದ ಸೀಸನ್‌ನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ದೊಡ್ಡ ಆಘಾತ
ಚಹಾ, ಕಾಫಿಯಿಂದ ಹಿಡಿದು ಸಿಹಿ ತಿಂಡಿ, ಬೇಕರಿ ಉತ್ಪನ್ನಗಳವರೆಗೆ ಸಕ್ಕರೆ ಬಳಕೆಯಾಗುತ್ತದೆ. ಹೀಗಾಗಿ ಸಕ್ಕರೆ ದರ ಏರಿಕೆಯ ಪರಿಣಾಮ ಗ್ರಾಹಕರ ಮೇಲೆ ಮಾತ್ರವಲ್ಲದೆ ಸಣ್ಣಪುಟ್ಟ ಹೋಟೆಲ್, ಬೇಕರಿ ಮತ್ತು ಸಿಹಿ ತಿಂಡಿ ವ್ಯಾಪಾರಿಗಳ ಮೇಲೂ ಬೀಳುವ ಸಾಧ್ಯತೆಯಿದೆ. ಈಗಾಗಲೇ ಕೆ.ಜಿಗೆ 70 ರೂ ತಲುಪಿರುವ ಸಕ್ಕರೆ ದರ ಮುಂದೆ 80, 90 ಶತಕ ಬಾರಿಸಿದರೂ ಅಚ್ಚರಿ ಇಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



