ಬರಿದಾಗುತ್ತಿರುವ ಕೆಆರ್ಎಸ್: ನಾಲೆಗಳಿಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ, ಬೆಳೆ ಬೆಳೆಯದಂತೆ ಕೃಷಿ ಸಚಿವರ ಸೂಚನೆ
ಜಲಾಶಯದಲ್ಲಿ ಇರುವ ನೀರಿನ ಲಭ್ಯತೆಯನ್ನ ನೋಡಿಕೊಂಡು, ಕುಡಿಯುವುದಕ್ಕೆ ಮೀಸಲು ಇಟ್ಟು, ಬೇಸಿಗೆ ಬೆಳೆಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ ಮಾಡಿದೆ. ಇನ್ನು ರೈತರು ಸಹಾ ಈ ಬಾರಿ ಬೆಳೆಗಳನ್ನ ಬೆಳೆಯದಂತೆ ಸಹಾ ಕೃಷಿ ಸಚಿವರು ಕೂಡ ಮನವಿ ಮಾಡಿದ್ದಾರೆ.
ಮಂಡ್ಯ, ಡಿಸೆಂಬರ್ 28: ಮಂಡ್ಯ ಜಿಲ್ಲೆಯ ರೈತರ (Mandya Farmers) ಜೀವನಾಡಿ ಕೆಆರ್ಎಸ್ ಜಲಾಶಯದಲ್ಲಿ (KRS Dam) ನೀರು ಬರಿದಾಗುತ್ತಿದೆ. ಈ ಜಲಾಶಯವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯದಲ್ಲಿ ನೀರು ಬರಿದಾಗುತ್ತಿರುವ ಕಾರಣ ಸರ್ಕಾರ ಇದೀಗ ಬೇಸಿಗೆ ಬೆಳೆಗೆ ನೀರು ಹರಿಸದಿರಲು ತಿರ್ಮಾನ ಮಾಡಿದ್ದು, ಬೇಸಿಗೆ ಬೆಳೆಗಳನ್ನು (Summer Crops) ಬೆಳೆಯದಂತೆ ರೈತರಿಗೆ ಸೂಚನೆ ನೀಡಿದೆ. ಇದು ಜಿಲ್ಲೆಯ ರೈತರನ್ನ ಸಂಕಷ್ಟಕ್ಕೆ ಸಿಲುಕಿದೆ.
ಈ ಬಾರಿ ಬೇಸಿಗೆ ಬೆಳೆಗೆ ನಾಲೆಗಳಿಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ ಮಾಡಿದ್ದು, ಮಂಡ್ಯ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ, ಜಿಲ್ಲೆಯ ರೈತರ ಜೀವನಾಡಿ. ಇದೇ ಜಲಾಶಯವನ್ನ ನಂಬಿಕೊಂಡು ಲಕ್ಷಾಂತರ ರೂ ರೈತರು ವ್ಯವಸಾಯ ಮಾಡುತ್ತಾರೆ. ಆದರೆ ಭೀಕರ ಬರ, ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ಜಲಾಯಶ ಭರ್ತಿಯಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಈಗ ಇದ್ದ ಬೆಳೆಗಳನ್ನ ಉಳಿಸಿಕೊಳ್ಳಲು ಕಟ್ ಪದ್ದತಿಯಂತೆ ನಾಲೆಗಳಿಗೆ ನೀರು ಹರಿಸಲಾಗಿತ್ತು. ಇದೀಗ ಬಹುತೇಕ ಕಬ್ಬು ಹಾಗೂ ಭತ್ತ ಕಟಾವು ಆದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸುವುದನ್ನ ಸ್ಥಗಿತ ಮಾಡಲಾಗಿದೆ.
ಜಲಾಶಯದಲ್ಲಿ ಇರುವ ನೀರಿನ ಲಭ್ಯತೆಯನ್ನ ನೋಡಿಕೊಂಡು, ಕುಡಿಯುವುದಕ್ಕೆ ಮೀಸಲು ಇಟ್ಟು, ಬೇಸಿಗೆ ಬೆಳೆಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ ಮಾಡಿದೆ. ಇನ್ನು ರೈತರು ಸಹಾ ಈ ಬಾರಿ ಬೆಳೆಗಳನ್ನ ಬೆಳೆಯದಂತೆ ಸಹಾ ಕೃಷಿ ಸಚಿವರು ಕೂಡ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ 124.80 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 96.92 ನೀರು ಸಂಗ್ರಹವಿದೆ. ಇನ್ನು ಟಿಎಂಸಿ ಲೆಕ್ಕದಲ್ಲಿ ನೋಡುವುದಾದರೇ 20.491 ಟಿಎಂಸಿ ನೀರು ಸಂಗ್ರಹವಿದ್ದು, ಅದರಲ್ಲಿ ಡೆಡ್ ಸ್ಟೋರೆಜ್ 4 ಟಿಎಂಸಿ ಆದರೆ ಉಳಿಯುವುದು 16 ಟಿಎಂಸಿ ಮಾತ್ರ. ಇನ್ನು ಇದರಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ನಗರಗಳಿಗೆ ಕುಡಿಯುವ ನೀರು ಒದಗಿಸಬೇಕು. ಇನ್ನು ಪ್ರತಿತಿಂಗಳು ಇಷ್ಟು ನಗರಗಳಿಗೆ 2 ಟಿಎಂಸಿ ನೀರು ಬೇಕಾಗುತ್ತದೆ. ಜೂನ್ ವರೆಗೂ ಸಹಾ ಬೇಕಾಗುತ್ತದೆ. ಹೀಗಾಗಿಯೇ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಮಾಡಿ, ಈ ಬಾರಿ ಬೇಸಿಗೆ ಬೆಳೆಗೆ ಕಾವೇರಿ ನೀರು ಕೊಡದಿರಲು ತೀರ್ಮಾನ ಮಾಡಿದೆ.
ಇದನ್ನೂ ಓದಿ: ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರ ಆಚರಣೆ: ಮಹಿಷ ರಂಗೋಲಿ ತುಳಿದಿದ್ದಕ್ಕೆ FIR ದಾಖಲು
ಸರ್ಕಾರದ ತೀರ್ಮಾನಕ್ಕೆ ಜಿಲ್ಲೆಯ ರೈತರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದು, ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಿ ಶೇಖರಣೆ ಮಾಡಿದ್ರೆ ರೈತರಿಗೆ ಅನುಕೂಲವಾಗುತ್ತಿತ್ತು. ಈ ಹಿಂದೆ ಜಲಾಶಯದಲ್ಲಿ 76 ಅಡಿ ಇದ್ದಾಗಲೂ ರೈತರಿಗೆ ನೀರು ಕೊಟ್ಟಿದ್ದರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಸರ್ಕಾರದ ಈ ನಿರ್ಧಾರ ಜಿಲ್ಲೆಯ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಬೆಳೆ ಬೆಳೆಯದೇ ಹೇಗೆ ಇರುವುದು ಎಂದು ಸರ್ಕಾರಕ್ಕೆ ರೈತರು ಪ್ರಶ್ನೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ