ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ
ರಾಯಚೂರಿನಲ್ಲಿ ಅಕ್ರಮ ಮರಳು ದಂಧೆ ಮಿತಿಮೀರಿದ್ದು, ಶಾಸಕಿ ಕರೆಮ್ಮಾ ಜಿ ನಾಯಕ್ ದೂರು ನೀಡಿದ ಬಳಿಕ ಜಿಲ್ಲಾಡಳಿತ ಎಚ್ಚೆತ್ತಿದೆ. ತುಂಗಭದ್ರಾ, ಕೃಷ್ಣಾ ನದಿಗಳಿಂದ ನಡೆಯುತ್ತಿರುವ ಮರಳು ಮಾಫಿಯಾ ವಿರುದ್ಧ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಕ್ರಮ ತಡೆಗೆ ಸಮಿತಿ ರಚಿಸಲಾಗಿದ್ದು, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಜ್ಜಾಗಿದೆ.

ರಾಯಚೂರು, ಫೆಬ್ರವರಿ 15: ಗಡಿ ಜಿಲ್ಲೆ ರಾಯಚೂರಿನಲ್ಲಿ ಅಕ್ರಮ ಮರಳು ದಂಧೆಗೆ (Illegal Sand Mining) ಜನ ರೋಸಿ ಹೋಗಿದ್ದು, ಸರಣಿ ಅಕ್ರಮಗಳು ಬಿಚ್ಚಿಕೊಳ್ಳುತ್ತಿವೆ. ಈ ಬಗ್ಗೆ ಇತ್ತೀಚೆಗೆ ಖುದ್ದು ಶಾಸಕಿ ಕರೆಮ್ಮಾ ಜಿ ನಾಯಕ್ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ದೂರು ನೀಡಿದ್ದರು. ಇದೇ ಕಾರಣಕ್ಕೆ ಇದೀಗ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಅಲರ್ಟ್ ಆಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೇ ಶಿಸ್ತುಕ್ರಮಕ್ಕೆ ಸಜ್ಜಾಗಿದೆ.
ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿ ಹರಿಯುತ್ತವೆ. ಎರಡು ನದಿಗಳ ಒಡಲನ್ನ ಬಗೆದು ಅಕ್ರಮ ಮರಳುಗಾರಿಕೆ ನಡೆಸೋದು ಜಿಲ್ಲೆಯಲ್ಲಿ ಮಾಮೂಲಾಗಿದೆ. ಅಕ್ರಮ ಮರಳು ದಂಧೆ ಮಿತಿಮೀರಿ ಹೋಗಿರುವ ಹಿನ್ನೆಲೆ ಸಾರ್ವಜನಿಕರು ಕೂಡ ಈ ಅಕ್ರಮದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ
ನದಿ ಒಡಲನ್ನ ಮನಸೋ ಇಚ್ಛೆ ಬಗೆದು ಮರಳುಗಾರಿಕೆ ನಡೆಸೋದರ ವಿರುದ್ಧ ಸರಣಿ ಆರೋಪಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗೆ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್, ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ರು. ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಸಲ್ಲಿಸಿದ್ದರು. ಇದಾದ ಬಳಿಕವೂ ಅಕ್ರಮ ಮರಳು ದಂಧೆ ಸೈಲೆಂಟ್ ಆಗಿ ಚಾಲ್ತಿಯಲ್ಲಿದೆ. ಹೀಗಾಗಿ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಮುಂದಾಗಿದೆ.
60ಕ್ಕೂ ಹೆಚ್ಚು ಕೇಸ್ ದಾಖಲು
ಸದ್ಯ ಜಿಲ್ಲೆಯಲ್ಲಿ 2026ರಲ್ಲಿ ಈವರೆಗೆ ಸುಮಾರು 60ಕ್ಕೂ ಹೆಚ್ಚು ಅಕ್ರಮ ಮರಳು ದಂಧೆ ಸಂಬಂಧ ದೇವದುರ್ಗ, ಮಾನ್ವಿ ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇಷ್ಟಿದ್ದರೂ ಭಯ ಇಲ್ಲದೇ ದಂಧೆಕೋರರು ಅಕ್ರಮ ಮರಳು ಸಾಗಿಸುತ್ತಿರೋ ಆರೋಪಗಳು ಕೇಳಿಬರ್ತಿರೋದ್ರಿಂದ ಈಗ ಇಡೀ ಅಕ್ರಮದ ವಿರುದ್ಧ ಹದ್ದಿನ ಕಣ್ಣಿಡಲು ಜಿಲ್ಲಾಡಳಿತ ಮುಂದಾಗಿದೆ.
ಈ ದಂಧೆ ಮಟ್ಟಹಾಕಲು ಕಮಿಟಿ ರಚಿಸಲಾಗಿದ್ದು, ಇದರಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್ಟಿಓ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮರಳುಗಾರಿಕೆಗೆ ಕಾನೂನಿನ್ವಯ ಅನುಮತಿ ಕೊಡೋದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಆದರೆ ರಾಯಚೂರಿನಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡಯುತ್ತಿದ್ರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತ್ತಿರುವ ಗಂಭೀರ ಆರೋಪವಿದೆ.
ಅಧಿಕಾರಿಗಳ ವಿರುದ್ಧವೇ ಕ್ರಮ
ಎಲ್ಲಾ ಜವಾಬ್ದಾರಿಯನ್ನ ಪೊಲೀಸ್ ಇಲಾಖೆ ಹೆಗಲಿಗೆ ಹಾಕಿ ಕೈಕಟ್ಟಿ ಫಿಲ್ಡ್ ವರ್ಕ್ ಅಂತ ಸಾರ್ವಜನಿಕರಿಗೆ ಹೇಳುತ್ತಾ ಓಡಾಡ್ತಿದ್ದಾರಂತೆ. ಅಸಲಿಗೆ ಅಕ್ರಮ ಮರಳು ದಂಧೆಯನ್ನ ಗುರುತು ಮಾಡಬೇಕಿರುವ ಗಣಿ ಮತ್ತು ಭೂ ವಿಜ್ಣಾನ ಇಲಾಖೆ. ಆದರೆ ಈ ಕೆಲಸವನ್ನ ಪೊಲೀಸ್ ಇಲಾಖೆ ಮಾಡ್ತಿದೆ. ಈ ಬಗ್ಗೆಯೂ ಪ್ರಸ್ತಾಪಿಸಿರೋ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್, ಸಮನ್ವಯದಿಂದ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗತ್ತೆ. ಅಂಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ತಾರೆ ಅಂತ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಧಮ್ಕಿ
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸಜ್ಜಾಗಿದ್ದು ಇದಕ್ಕೆ ಅಧಿಕಾರಿಗಳ ಹಂತದಲ್ಲಿ ಹೇಗೆ ಸ್ಪಂದನೆ ಸಿಗತ್ತೆ ಅನ್ನೋದು ಪ್ರಶ್ನೆ. ಏಕೆಂದರೆ ದಂಧೆಕೋರರಿಗೆ ಕೆಳ ಹಂತದ ಕೆಲ ಅಧಿಕಾರಿಗಳೇ ಸಾಥ್ ಕೊಡ್ತಿರೋ ಆರೋಪಿಗಳು ಇರೋದ್ರಿಂದ ಇದನ್ನ ಜಿಲ್ಲಾಡಳಿತ ಹೇಗೆ ಎದುರಿಸತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.