ರಾಯಚೂರು: ಭೀಕರ ಬರಗಾಲಕ್ಕೆ ಒಣಗಿದ 400 ಎಕರೆ ಕೆರೆ, ಸಾವಿರಾರು ಮೀನುಗಳ ಮಾರಣಹೋಮ
ಗಡಿ ಜಿಲ್ಲೆ ರಾಯಚೂರಿನಲ್ಲಿ ಭೀಕರ ಬರಗಾಲದಿಂದ ಜಲಕ್ಷಾಮ ಉಂಟಾಗಿದೆ. ಬರಗಾಲದ ಮಧ್ಯೆ ಕಂಗೆಡುವಂತೆ ಮಾಡಿರುವ ಬಿಸಿಲ ತಾಪಕ್ಕೆ 400 ಎಕರೆ ಬೃಹತ್ ಕೆರೆ ಬತ್ತಿ ಹೋಗಿದ್ದು ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ. ಮರ್ಚಡ್ನ ಬೃಹತ್ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗ್ತಿತ್ತು. ಮರ್ಚಡ್ ಗ್ರಾಮದ ಸುಮಾರು 80 ಕ್ಕೂ ಹೆಚ್ಚು ಕುಟುಂಬಗಳು ಈ 400 ಎಕರೆ ಪ್ರದೇಶದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡ್ತಿದ್ರು.
ರಾಯಚೂರು, ಮೇ.09: ಬರಗಾಲ (Drought) ಈ ಬಾರೀ ರೈತರ ಬದುಕನ್ನೇ ಕಸಿದುಕೊಂಡಿದೆ. ರಾಜ್ಯದಲ್ಲಿ ಕಂಡು ಕೇಳರಿಯದಂತ ಬರಗಾಲದಿಂದ ರೈತರು ಕಂಗಾಲಾಗಿದ್ದು, ಆರ್ಥಿಕವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಭೀಕರ ಬರಗಾಲದಿಂದ ಕುಡಿಯೋ ನೀರಿನ ಸಮಸ್ಯೆ ಕೂಡ ಎದುರಾಗಿದೆ. ಅದರಲ್ಲೂ ಗಡಿ ಜಿಲ್ಲೆ ರಾಯಚೂರಿನಲ್ಲಿ ತಾಪಮಾನ ಹೆಚ್ಚಾಗಿರೋದ್ರಿಂದ ಸಮಸ್ಯೆ ಹೆಚ್ಚಾಗ್ತಿದೆ.
ರಾಯಚೂರು ತಾಲೂಕಿನ ಮರ್ಚಡ್ ಗ್ರಾಮದಲ್ಲಿರುವ ಸುಮಾರು 400 ಎಕರೆ ವ್ಯಾಪ್ತಿಯ ಬೃಹತ್ ಕೆರೆ ಬತ್ತಿ ಹೋಗಿದೆ. ಬಿಸಿಲಿನ ತಾಪ ಒಂದು ಕಡೆ ಕೆರೆ ನೀರು ಬತ್ತಿರೋದು ಮತ್ತೊಂದು ಕಡೆ. ಇವೆಲ್ಲದರ ಕಾರಣದಿಂದ ಈ ಬೃಹತ್ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸತ್ತು ಹೋಗಿವೆ. ಬಿಸಿಲ ಹೊಡೆತಕ್ಕೆ ಮೀನುಗಳು ಒಣಗಿದ ಕೆರೆಯುದ್ಧಕ್ಕೂ ಸತ್ತು ಬಿದ್ದಿವೆ. ಕೆರೆ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿರೋದು ಕಣ್ಣೀರು ತರಿಸ್ತಿವೆ. ಅಲ್ಲಲ್ಲಿ ಬತ್ತಿ ಹೋಗಿರೊ ಕೆರೆಯಲ್ಲಿ ಮೀನು ಸತ್ತು ಬಿಸಿಲಿನ ಬೇಗೆಗೆ ಒಣಗಿ ಹೋಗಿರೊ ದೃಶ್ಯ ಕಲ್ಲು ಹೃದಯವನ್ನ ಕರುಗುವಂತೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರು: ಜೀವಜಲವಿಲ್ಲದೇ ಇಂಗಿ ಹೋದ 125ಕ್ಕೂ ಹೆಚ್ಚು ಕೆರೆಗಳು, ಇದಕ್ಕೆ ಯಾರು ಹೊಣೆ?
ದುರಂತ ಅಂದ್ರೆ ಇದೇ, ಮರ್ಚಡ್ನ ಬೃಹತ್ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗ್ತಿತ್ತು. ಮರ್ಚಡ್ ಗ್ರಾಮದ ಸುಮಾರು 80 ಕ್ಕೂ ಹೆಚ್ಚು ಕುಟುಂಬಗಳು ಈ 400 ಎಕರೆ ಪ್ರದೇಶದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡ್ತಿದ್ರು. ಹಂತ ಹಂತವಾಗಿ ಕೆರೆಯಲ್ಲಿ ಮರಿ ಮೀನುಗಳನ್ನ ಬಿಟ್ಟು ಮೀನು ಸಾಕಾಣಿಕೆ ಮಾಡಿ ಜೀವನ ನಡೆಸ್ತಿದ್ರು. ಇತ್ತೀಚೆಗೆ ಈ ಅವಧಿಯಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ಲಕ್ಷಾಂತರ ಮೀನು ಮರಿಗಳನ್ನ ತಂದು ಕೆರೆಗೆ ಬಿಟ್ಟಿದ್ರು. ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗಾಗಲೇ ಬಡ ಮೀನುಗಾರರಿಗೆ ಒಳ್ಳೆ ಆದಾಯ ಬರ್ತಿತ್ತು. ಆದ್ರೆ ಆಗಿದ್ದೇ ಬೇರೆ. ಬರಗಾಲಕ್ಕೆ ಕೆರೆ ಒಣಗಿದ್ದು ತಾಪಮಾನ ಹೆಚ್ಚಾಗ್ತಿರೋದ್ರಿಂದ ಮೀನುಗಳು ಸತ್ತು ಹೋಗ್ತಿವೆ. ಮೀನುಗಾರರು ಕಂಗಾಲಾಗಿದ್ದಾರೆ. ಈಗಾಗಲೇ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದು ಮೀನುಗಾರಿಕೆ ಮಾಡ್ತಿದ್ದ 80ಕ್ಕೂ ಹೆಚ್ಚು ಕುಟುಂಬಗಳು ಈಗ ಬೀದಿಗೆ ಬಿದ್ದಿವೆ. ಈ ಬಗ್ಗೆ ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಮೀನುಗಾರಿಕೆ ಕುಟುಂಬದವ್ರು ಆಗ್ರಹಿಸಿದ್ದಾರೆ.
ಕೆರೆ ಒಣಗಿ ಹೋಗಿರುವುದರಿಂದ ಬರೀ ಮೀನುಗಳ ಮಾರಣಹೋಮವಾಗಿಲ್ಲ, ಇದೇ ಕೆರೆ ನಂಬಿಕೊಂಡು ಕೃಷಿ ಮಾಡ್ತಿದ್ದ ರೈತರು ಕೂಡ ಕಂಗಾಳಾಗಿದ್ದಾರೆ. ಕೆರೆ ಒಣಗಿದ್ರಿಂದ ನೀರಿಲ್ಲದೇ ಕೆರೆ ಸುತ್ತ ಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಲಾಗದೇ ಕಣ್ಣೀರಿಡ್ತಿದ್ದಾರೆ. ಕೂಡಲೇ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಹಾರ ನೀಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:47 am, Thu, 9 May 24