ಎಲ್ಲ ಆರೋಗ್ಯ ಕೇಂದ್ರಗಳಿಗೂ ಸೌರ ವಿದ್ಯುತ್ ಸೌಲಭ್ಯ ಕಲ್ಪಿಸಿದ ಭಾರತದ ಮೊದಲ ಜಿಲ್ಲೆ ರಾಯಚೂರು
ರಾಯಚೂರು ಜಿಲ್ಲೆಯು ಎಲ್ಲ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯಿಂದ ವಿದ್ಯುತ್ ಪೂರೈಸುವ ಮೂಲಕ ಭಾರತದಲ್ಲೇ ಮೊದಲ ಸಾಧನೆ ಮಾಡಿದೆ. ಇದರಿಂದ ವಿದ್ಯುತ್ ಬಿಲ್‌ಗಳು ಶೇ 70 ರಷ್ಟು ಕಡಿಮೆಯಾಗಿ, ಕರ್ನಾಟಕ ಸರ್ಕಾರಕ್ಕೆ ವಾರ್ಷಿಕವಾಗಿ 86.4 ಲಕ್ಷ ರೂಪಾಯಿ ಉಳಿತಾಯವಾಗಿದೆ. ಈ ಯಶಸ್ವಿ ಮಾದರಿಯನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ.
ಬೆಂಗಳೂರು, ನವೆಂಬರ್ 25: ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಬಳಸಿ ಸಂಪೂರ್ಣ ವಿದ್ಯುತ್ ಪೂರೈಸುತ್ತಿರುವ ಭಾರತದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ರಾಯಚೂರು ಪಾತ್ರವಾಗಿದೆ. ಜಿಲ್ಲೆಯ 191 ಉಪ ಕೇಂದ್ರಗಳು, 51 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 257 ಆರೋಗ್ಯ ಸೌಲಭ್ಯ ಘಟಕಗಳಿಗೆ ಗರಿಷ್ಠ ಸರಾಸರಿ 1,000 ಕಿಲೋವ್ಯಾಟ್ ಸೌರ ವಿದ್ಯುತ್ ಮೇಲೆ ಅವಲಂಬಿತವಾಗಿವೆ.
ಕರ್ನಾಟಕ ಸರ್ಕಾರಕ್ಕೆ 86.4 ಲಕ್ಷ ರೂ. ಉಳಿತಾಯ
ನವೀಕರಿಸಬಹುದಾದ ಇಂಧನದತ್ತ ಆಗಿರುವ ಈ ಪರಿವರ್ತನೆಯು ಗಮನಾರ್ಹ ಪ್ರಯೋಜನಗಳನ್ನು ತಂದಿದೆ. ಪರಿಣಾಮವಾಗಿ ಈ ಕೇಂದ್ರಗಳ ವಿದ್ಯುತ್ ಬಿಲ್‌ಗಳು ಶೇ 70 ರಷ್ಟು ಕಡಿಮೆಯಾಗಿದೆ. ಈ ಉಪಕ್ರಮವು ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ ಸರಿಸುಮಾರು 86.4 ಲಕ್ಷ ರೂಪಾಯಿಗಳನ್ನು ಉಳಿಸುತ್ತಿದೆ. ಶುದ್ಧ ಇಂಧನ ಪರ್ಯಾಯಗಳು ಹೇಗೆ ಆರ್ಥಿಕ ಮತ್ತು ಪರಿಸರದ ಲಾಭಗಳಿಗೆ ಕಾರಣವಾಗಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
2021ರಲ್ಲಿ ಆರಂಭವಾದ ಯೋಜನೆ
ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಆಧಾರಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು 2021 ರಲ್ಲಿ ಆರಂಭಿಸಲಾಗಿತ್ತು. ಸ್ವಯಂಸೇವಾ ಸಂಸ್ಥೆ ಸೆಲ್ಕೋ (SELCO) ಸಹಯೋಗದೊಂದಿಗೆ ರಾಜ್ಯ ಆರೋಗ್ಯ ಇಲಾಖೆಯು ಈ ಯೋಜನೆಯನ್ನು ಆರಂಭಿಸಿತ್ತು. ಈ ವರ್ಷ, ಈ ಯೋಜನೆಯನ್ನು ಕರ್ನಾಟಕದಾದ್ಯಂತ 5,000 ಆರೋಗ್ಯ ಸೌಲಭ್ಯ ಘಟಕಗಳಿಗೆ ವಿಸ್ತರಿಸಲಾಗಿದೆ. ಇದು ಗ್ರಾಮೀಣ ಪ್ರದೇಶದ 3 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುತ್ತಿದೆ.
ಆರಂಭದಲ್ಲಿ ಈ ಉಪಕ್ರಮವನ್ನು ರಾಯಚೂರಿನಲ್ಲಿ ಪ್ರಾರಂಭಿಸಲಾಯಿತು. ಆ ಪ್ರದೇಶದ ಪ್ರಗತಿಯ ಅಗತ್ಯತೆ ಮತ್ತು ಸಾಕಷ್ಟು ಬಿಸಿಲಿನಂತಹ ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಇದಕ್ಕೆ ಪ್ರಮುಖ ಕಾರಣ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಸೌರ ವಿದ್ಯುತ್ ಸಂಪರ್ಕ ಉಪಕ್ರಮವನ್ನು ಇತ್ತೀಚೆಗೆ 5,000 ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ, ಯೋಜನೆಯು ಇಡೀ ರಾಜ್ಯವನ್ನು ತಲುಪಬೇಕು ಎಂಬ ಗುರಿಯನ್ನು ಹೊಂದಿದ್ದೇವೆ. ಇದರೊಂದಿಗೆ, ಪ್ರತಿ ತಿಂಗಳು 60 ಲಕ್ಷ ರೂಪಾಯಿ ವರೆಗೆ ಉಳಿತಾಯದ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ವಾರ್ಷಿಕವಾಗಿ ಸುಮಾರು 6-7 ಕೋಟಿ ರೂಪಾಯಿಗಳಷ್ಟು ಉಳಿತಾಯವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ತಮ್ಮ ಸತ್ತ ಎಂದ ಅಣ್ಣ, ನಾನು ಬದುಕಿದ್ದೇನೆ ಅಂತ ತಮ್ಮ ದಿಢೀರ್ ಪ್ರತ್ಯಕ್ಷ
ರಾಯಚೂರು ಜಿಲ್ಲೆಯು ಆರು ಸಮುದಾಯ ಆರೋಗ್ಯ ಕೇಂದ್ರಗಳು, 51 ಪಿಎಚ್‌ಸಿಗಳು, 191 ಉಪ ಕೇಂದ್ರಗಳು, ನಾಲ್ಕು ಉಪ-ವಿಭಾಗೀಯ ಆಸ್ಪತ್ರೆಗಳು ಮತ್ತು ಐದು ನಗರ ಪಿಎಚ್‌ಸಿಗಳನ್ನು ಸೌರಶಕ್ತಿಯ ವಿದ್ಯುತ್ನಿಂದಲೇ ನಿರ್ವಹಿಸುತ್ತಿದೆ. ಸೌರಶಕ್ತಿ ನಿರ್ವಹಣೆಗಾಗಿ ವಿಶೇಷ ಕೇಂದ್ರವನ್ನೂ ಹೊಂದಿದೆ. ಎಲ್ಲವೂ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಡ್ಯಾಶ್‌ಬೋರ್ಡ್‌ಗಳ ಮೂಲಕ ಸಿಸ್ಟಮ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ