ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರಿನ 8 ಮಂದಿ ಭಕ್ತರು ಸಾವು
Mantralaya Accident: ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರಿನ ಭಕ್ತರ ಬೊಲೆರೊ ವಾಹನಕ್ಕೆ ಟ್ಯಾಂಕರ್ ಡಿಕ್ಕಿಯಾಗಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಯಚೂರು, ಏಪ್ರಿಲ್ 16: ಆಂಧ್ರಪ್ರದೇಶದ (Andhra Pradesh) ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ಕರ್ನಾಟಕದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಮೂಲದ ಭಕ್ತರು ರಾಯರ ದರ್ಶನಕ್ಕಾಗಿ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ವಿವರ
ಚಿಕ್ಕಮಗಳೂರು ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲುದೇವಕುಂಟ ಬಳಿ ಎದುರುಗಡೆಯಿಂದ ಬಂದ ಸಿಮೆಂಟ್ ಮತ್ತು ಜಲ್ಲಿಕಲ್ಲು ತುಂಬಿದ್ದ ಟ್ಯಾಂಕರ್, ಬೊಲೆರೊ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆರು ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಉಳಿದ 13 ಭಕ್ತರನ್ನು ತಕ್ಷಣವೇ ಎಮಿಗನೂರು ಮತ್ತು ಕರ್ನೂಲ್ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದಾಗಿ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂತ್ರಾಲಯ ಅಪಘಾತದಲ್ಲಿ ಮೃತಪಟ್ಟವರ ವಿವರ
ಮೃತಪಟ್ಟವರನ್ನು ಚಿಕ್ಕಮಗಳೂರು ಮೂಲದ ಕುಮಾರ್(50), ದೀಪಿಕಾ, ವೀಣಾ(42), ಸುನೀಲ್ (40), ಪುಟ್ಟಮ್ಮ(55), ಲೋಲಾಕ್ಷಿ, ಯಶೋಧಾ(60) ಹಾಗೂ ಬಾಲಕಿ ಬೆಳ್ಳಿ(5) ಎಂದು ಗುರುತಿಸಲಾಗಿದೆ. ಸದ್ಯ ಘಟನೆ ಸಂಬಂಧ ಟ್ಯಾಂಕರ್ ಚಾಲಕನನ್ನು ಮಂತ್ರಾಲಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು
ಸದ್ಯ ಘಟನೆ ಸಂಬಂಧ ಎಫ್ ಐಆರ್ ದಾಖಲು ಪ್ರಕ್ರಿಯೆ ಚುರುಕುಗೊಂಡಿದೆ. ಮತ್ತೊಂದೆಡೆ, ಎಮಗನೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಮರಣೋತ್ತರ ಪರೀಕ್ಷೆಗಾಗಿ ಮೃತರ ಕಡೆಯವರಿಗಾಗಿ ಪೊಲೀಸರು. ಕಾದು ಕುಳಿತಿದ್ದಾರೆ. ಮೃತರ ಕುಟುಂಬಸ್ಥರು ಚಿಕ್ಕಮಗಳೂರಿನಿಂದ ಆಂದ್ರಪ್ರದೇಶದ ಎಮಗನೂರಿಗೆ ಆಗಮಸುತ್ತಿದ್ದಾರೆ.
ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ನೀರವ ಮೌನ
ಒಂದೇ ಕುಟುಂಬದ 6 ಜನ ಸಾವಿನಿಂದ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪತ್ನಿ, ಅಳಿಯ ಇಬ್ಬರು ಮೊಮ್ಮಕ್ಕಳು, ಮರಿ ಮೊಮ್ಮಗಳನ್ನ ಕಳೆದುಕೊಂದ ವೃದ್ಧ ಕಂಗಾಲಾಗಿದ್ದಾರೆ. ರಾಮಯ್ಯ, ರಾಮಯ್ಯ ಪತ್ನಿ ಜಯಮ್ಮ, ಅಳಿಯ ಕುಮಾರ್, ಕುಮಾರ್ ಅವರ ಮಗ ಸುನೀಲ್, ಮಗಳು ದೀಪಿಕಾ, ವೀಣಾ , ವೀಣಾ ಮಗಳು ನಿಶ್ಚಿತ , ಕುಮಾರ್ ತಮ್ಮನ ಹೆಂಡತಿ ಲೋಲಾಕ್ಷಿ ಮೃತಪಟ್ಟವರು. ನಾಲ್ಕು ವರ್ಷಗಳ ಹಿಂದೆ ದೀಪಿಕಾ ವಿವಾಹವಾಗಿತ್ತು. ಕುಟುಂಬದವರು ಬಹು ವರ್ಷಗಳ ಆಸೆಯಂತೆ ಸ್ನೇಹಿತನ ಕುಟುಂಬದವರ ಜತೆ ಮಂತ್ರಾಲಯ ಯಾತ್ರೆ ಕೈಗೊಂಡಿದ್ದಾಗ ದುರಂತ ಸಂಭವಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Thu, 16 April 26



