ಮಂಡ್ಯ ಎಂಪಿಗೆ ರಾಜೀನಾಮೆ ನೀಡ್ತಾರೆ, ಎಚ್ಡಿಕೆ ಚನ್ನಪಟ್ಟಣ ಬಿಟ್ಟು ಹೋಗಲ್ಲ: ಡಿಕೆ ಸುರೇಶ್ ಅಚ್ಚರಿ ಹೇಳಿಕೆ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ನರೇಂದ್ರ ಮೋದಿ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿರುವ ಎಚ್ಡಿ ಕುಮಾರಸ್ವಾಮಿ, ಇಂದು (ಜುನ್ 11) ದೆಹಲಿಯಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಆದ್ರೆ, ಇತ್ತ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್, ಕುಮಾರಸ್ವಾಮಿ ಮಂಡ್ಯಕ್ಕೆ ರಾಜಿನಾಮೆ ನೀಡುತ್ತಾರೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಬಿಟ್ಟು ಹೋಗಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಾಮನಗರ (ಜೂನ್ 11): ಚನ್ನಪಟ್ಟಣ (channapatna) ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶ ಮಾಡಿದ್ದಾರೆ. ಅಲ್ಲದೇ ನರೇಂದ್ರ ಮೋದಿ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಇನ್ನು ಈ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದು, ಮಂಡ್ಯದಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ. ಚನ್ನಪಟ್ಟಣ ಕ್ಷೇತ್ರವನ್ನ ಕುಮಾರಸ್ವಾಮಿ ಉಳಿಸಿಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಚನ್ನಪಟ್ಟಣದಲ್ಲಿಂದು ಮಾತನಾಡಿದ ಡಿಕೆ ಸುರೇಶ್, ಮಂಡ್ಯದಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ. ಚನ್ನಪಟ್ಟಣ ಕ್ಷೇತ್ರವನ್ನ ಕುಮಾರಸ್ವಾಮಿ ಉಳಿಸಿಕೊಳ್ಳುತ್ತಾರೆ. ಚನ್ನಪಟ್ಟಣಕ್ಕೆ ಇನ್ನೂ ಬೈ ಎಲೆಕ್ಷನ್ ಘೋಷಣೆ ಆಗಿಲ್ಲ. ಯಾಕಂದ್ರೆ ಹಾಲಿ ಶಾಸಕರು ಇನ್ನೂ ರಾಜೀನಾಮೆ ನೀಡಿಲ್ಲ. ನಮಗೆ ವಿಶ್ವಾಸ ಇದೆ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಚನ್ನಪಟ್ಟಣ ಬಿಟ್ಟು ಹೋಗಲ್ಲ. ಅವರಿಗೆ ಅಧಿಕಾರಕ್ಕಿಂತ ಕ್ಷೇತ್ರದ ಜನ, ಕಾರ್ಯಕರ್ತರು ಮುಖ್ಯ. ನಾನು ಸಾಕಷ್ಟು ಬಾರಿ ಅವರ ಮಾತುಗಳನ್ನ ಆಲಿಸಿದ್ದೇನೆ. ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳು ಅಂದಿದ್ರು. ಅಧಿಕಾರ ಇದ್ದಾಗ, ಇಲ್ಲದಿದ್ದಾಗ ಅವರ ಮಾತುಗಳನ್ನ ನೋಡಿದ್ದೇನೆ. ಅಲ್ಲದೇ ಅವರು ಹೃದಯವಂತರು ಕೂಡ. ಹಾಗಾಗಿ ಚನ್ನಪಟ್ಟಣ ಉಳಿಸಿಕೊಳ್ತಾರೆ ಅನ್ನೋ ವಿಶ್ವಾಸ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿಗೆ ಕೃಷಿ ಖಾತೆ ಮಿಸ್: ಜೋಶಿ, ಶೋಭಾ, ಸೋಮಣ್ಣಗೆ ಯಾವ ಖಾತೆ? ಇಲ್ಲಿದೆ ವಿವರ
ಚನ್ನಪಟ್ಟಣ ಬೈಎಲೆಕ್ಷನ್ನಲ್ಲಿ ಸ್ಪರ್ಧಿಸುವಂತೆ ಒತ್ತಾಯ
ರಾಮನಗರ ಜಿಲ್ಲೆಯ ಚನ್ನಪಟ್ಟಣ ಬೈಎಲೆಕ್ಷನ್ನಲ್ಲಿ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಸುರೇಶ್ಗೆ ಒತ್ತಾಯಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಭೆ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ಕಾರ್ಯಕರ್ತರು, ಡಿ.ಕೆ.ಸುರೇಶ್ ಕಾರಿಗೆ ಮುತ್ತಿಗೆ ಹಾಕಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಬಿಗಿಪಟ್ಟು ಹಿಡಿದರು.
ಚನ್ನಪಟ್ಟಣದಲ್ಲಿ ನಾವು ನಿರೀಕ್ಷೆಗೂ ಮೀರಿದ ಮತಗಳನ್ನು ಕೊಟ್ಟಿದ್ದೇವೆ. ಚನ್ನಪಟ್ಟಣ ಕ್ಷೇತ್ರದಲ್ಲಿ ನೀವು ಸ್ಪರ್ಧಿಸಿದ್ರೆ ಪಕ್ಷ ಸಂಘಟಿಸಬಹುದು. ಹಾಗಾಗಿ ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಡಿಕೆ ಸುರೇಶ್, ಚನ್ನಪಟ್ಟಣದಲ್ಲೇ ಸಮರ್ಥ ಅಭ್ಯರ್ಥಿ ಇದ್ದಾರೆ. ಬೈ ಎಲೆಕ್ಷನ್ಗೆ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.
ಚನ್ನಪಟ್ಟಣದಲ್ಲಿ ಸ್ಫರ್ಧೆಗೆ ಕಾರ್ಯಕರ್ತರ ಒತ್ತಾಯ ಮಾಡುತ್ತಿರುವ ಬಗ್ಗೆ ಮಾತನಾಡಿದ ಸುರೇಶ್, ಅವರು ಮೊದಲು ರಾಜೀನಾಮೆ ಕೊಟ್ಟಮೇಲೆ ತಾನೆ ಬೈ ಎಲೆಕ್ಷನ್ ಘೋಷಣೆಯಾಗುತ್ತೆ. ನಾನು ಈಗಾಗಲೇ ಸೋತಿದ್ದೇನೆ. ಜನ ನನ್ನನ್ನ ತಿರಸ್ಕಾರ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಅಚ್ಚರಿ ಅಭ್ಯರ್ಥಿಯನ್ನ ಚನ್ನಪಟ್ಟಣಕ್ಕೆ ಕೊಡುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Tue, 11 June 24