ಎಲೆ ಚುಕ್ಕಿ ರೋಗಕ್ಕೆ ಅಡಿಕೆ ಕೃಷಿಕರು ಕಂಗಾಲು; ಟಾಸ್ಕ್ಫೋರ್ಸ್ ಅಧ್ಯಕ್ಷರ ಭೇಟಿ, ಪರಿಹಾರದ ಭರವಸೆ
ಎಲೆ ಚುಕ್ಕಿ ರೋಗಕ್ಕೆ ವಿಜ್ಞಾನಿಗಳು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕಂಡುಕೊಳ್ಳದಿದ್ದರೇ ಸಣ್ಣ ಮತ್ತು ಮಧ್ಯಮ ಪ್ರಮಾಣದ ಅಡಿಕೆ ಕೃಷಿಕರು ಬೀದಿಗೆ ಬರುವುದು ಗ್ಯಾರಂಟಿ ಎಂಬ ಆತಂಕ ಎದುರಾಗಿದೆ.
ಶಿವಮೊಗ್ಗ/ ಉತ್ತರ ಕನ್ನಡ ಸದ್ಯ ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಕೊರೊನಾ ನಡುವೆ ತತ್ತರಿಸಿರುವ ಬೆಳೆಗಾರರಿಗೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಅಡಿಕೆ ಕೃಷಿ ಮಾಡಿದ ರೈತರಿಗೆ ಎಲೆ ಚುಕ್ಕಿ ಎನ್ನುವ ಹೊಸ ರೋಗವು ಬೆಂಬಿಡದೇ ಕಾಡುತ್ತಿದೆ. ಹೊಸ ರೋಗದಿಂದ ಅಡಿಕೆ ಸಸಿಗಳು ಹಾಳಾಗುತ್ತಿವೆ. ಅಡಿಕೆ ಸಸಿಗಳಿಗೆ ಎಲೆಚುಕ್ಕಿ ಹೊಡೆತ ಕುರಿತು ಒಂದು ವರದಿ ಇಲ್ಲಿದೆ.
ಮಲೆನಾಡಿನ ಬಹುತೇಕರು ಅಡಿಕೆ ಕೃಷಿಯನ್ನೇ ಹೆಚ್ಚು ಅವಲಂಬನೆ ಮಾಡಿದ್ದಾರೆ. ಕಳೆದ ಒಂದು ತಿಂಗಳನಿಂದ ಅಡಿಕೆ ಸಸಿಗಳಿಗೆ ಎಲೆ ಚುಕ್ಕಿ ರೋಗ ಶುರುವಾಗಿದೆ. ಬೆಳೆಯುವ ಅಡಿಕೆ ಸಸಿ ಎಲೆ ತುಂಬೆಲ್ಲಾ ಚುಕ್ಕೆಗಳು ಕಂಡು ಬಂದಿವೆ. ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಇದ್ದ ಈ ರೋಗವು ಈಗ ಹಂತಹಂತವಾಗಿ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚಾಗಿದೆ. ಸದ್ಯ ನೂರಾರು ಹೆಕ್ಟೇರ್ ಅಡಿಕೆ ತೋಟದಲ್ಲಿ ಈ ರೋಗವು ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಮತ್ತು ಅಡಿಕೆ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ಇಂದು ತೀರ್ಥಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು. ಗೃಹ ಸಚಿವರ ಜೊತೆ ತೋಟಗಾರಿಕೆ ಉಪನಿರ್ದೇಶಕರು, ಕೃಷಿ ವಿವಿಯ ವಿಜ್ಞಾನಿಗಳು ಸಾಥ್ ಕೊಟ್ಟಿದ್ದರು. ಸದ್ಯ ಸಾವಿರಾರು ಅಡಿಕೆ ಬೆಳೆಗಾರರು ಈ ಎಲೆ ಚುಕ್ಕಿ ರೋಗಕ್ಕೆ ಬೆಚ್ಚಿಬಿದ್ದಿದ್ದಾರೆ. ಗೃಹ ಸಚಿವರಿಗೆ ಈ ರೋಗದಿಂದ ತಮ್ಮ ಅಡಿಕೆ ಸಸಿ ಮತ್ತು ಗಿಡಗಳನ್ನು ಬಚಾವ್ ಮಾಡಿ ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಇಂದು ಅಧಿಕಾರಿಗಳ ಜೊತೆ ಭೇಟಿ ನೀಡಿ ಚುಕ್ಕಿ ರೋಗ ಮಲೆನಾಡಿನಲ್ಲಿ ಉಲ್ಬಣಗೊಂಡಿದ್ದು ಅಡಿಕೆ ಟಾಸ್ಕ್ಫೋರ್ಸ್ ಅಧ್ಯಕ್ಷರ ಗಮನಕ್ಕೂ ಬಂದಿದೆ. ರೋಗದಿಂದ ಹಾಳಾಗಿರುವ ಕೃಷಿಕರಿಗೆ ಸೂಕ್ತ ಪರಿಹಾರ ನೀಡುತ್ತೇವೆ. ರೋಗ ತಡೆಯಲು ಈಗಾಗಲೇ ಅಗತ್ಯದ ಕ್ರಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಲೆನಾಡಿನ ಭಾಗದಲ್ಲಿ ಹವಾಮಾನ ವೈಪರೀತ್ಯದಿಂದ ಈ ವರ್ಷ ಅಡಿಕೆ ಕೃಷಿಗೆ ಚುಕ್ಕೆ ರೋಗ ಬರಲು ಶುರುವಾಗಿದೆ. ಕೃಷಿಕರು ಎಷ್ಟೇ ಚುಕ್ಕೆರೋಗ ತಡೆಯಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಇದು ವೇಗವಾಗಿ ಅಡಿಕೆ ಸಸಿ ಮತ್ತು ಮರಗಳಿಗೆ ಅಂಟಿಕೊಳ್ಳುತ್ತಿದೆ. ಗಾಳಿಯಲ್ಲಿ ವೇಗವಾಗಿ ಮರದಿಂದ ಮರಕ್ಕೆ ಇದು ಹಬ್ಬುತ್ತಿದೆ. ಪರಿಣಾಮ ಅಡಿಕೆ ಮರದ ಹೆಡೆಗಳಲ್ಲಿ ಚುಕ್ಕಿ ಕಾಣಿಸಿಕೊಂಡು ನಂತರ ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ಅಡಿಕೆ ಹೆಡೆಗಳು ನೆಲಕ್ಕೆ ಬೀಳುವ ಜತೆಗೆ ಅಡಿಕೆ ಕಾಯಿಗಳು ಉದುರುತ್ತಿವೆ. ಇನ್ನೂ ಕೆಲವು ಭಾಗದಲ್ಲಿ ಅಡಿಕೆ ಮರಗಳಿಗೆ ಹಾನಿಯಾಗುತ್ತಿದೆ. ಇದರಿಂದ ಅಡಿಕೆ ಫಸಲು ಮತ್ತು ಅಡಿಕೆ ಮರಕ್ಕೆ ತುಂಬಲಾರದ ನಷ್ಟವಾಗುತ್ತಿದೆ. ಹೊಸನಗರ ತಾಲೂಕಿನ ನಗರ ಭಾಗದಲ್ಲಿ ಅತೀ ಹೆಚ್ಚು ಚುಕ್ಕಿ ರೋಗವು ಕಂಡು ಬಂದಿದೆ. ಸದ್ಯ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಎಷ್ಟೇ ಔಷಧಿ ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ರೀತಿ ಹವಾಮಾನ ವೈಪರೀತ್ಯದಿಂದ ಈ ಎಲೆಚುಕ್ಕೆ ರೋಗವು ಕಂಡು ಬರುತ್ತದೆ. ಈ ಎಲೆಚುಕ್ಕಿ ರೋಗವನ್ನು ಶಿಲೀಂದ್ರ (ಫಂಗಸ್) ಎಂದು ಕರೆಯುತ್ತಾರೆ. ಫಂಗಸ್ ರೋಗವನ್ನು ಅರಂಭದಲ್ಲೇ ಮಟ್ಟ ಹಾಕಬೇಕಿದೆ. ಇಲ್ಲದಿದ್ದರೇ ರೋಗ ಹೆಚ್ಚಾದಂತೆ ಅದು ಹೆಚ್ಚು ನಷ್ಟ ಮಾಡುತ್ತದೆ ಎನ್ನುವುದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮಲೆನಾಡಿನಲ್ಲಿ ಅಡಿಕೆ ಸಸಿ ಮತ್ತು ಫಲವತ್ತಾದ ಗಿಡಗಳಿಗೆ ಎಲೆ ಚುಕ್ಕೆ ರೋಗವು ಆವರಿಸಿಕೊಂಡಿದೆ. ಈ ರೋಗವು ನಿಯಂತ್ರಣಕ್ಕೆ ಬಾರದೇ ಇರುವುದು ಅಡಿಕೆ ಬೆಳೆಗಾರರ ಚಿಂತೆ ಡಬಲ್ ಮಾಡಿದೆ. ಟಾಸ್ಕ ಫೋರ್ಸ್ ಅಧ್ಯಕ್ಷರು ಟೀಂ ಸಮೇತ ರೋಗಗ್ರಸ್ಥ ಅಡಿಕೆ ತೋಟಗಳಿಗೆ ಭೇಟಿ ನೀಡಿದ್ದಾರೆ. ಆದ್ರೆ ಅಡಿಕೆ ಕೃಷಿಕರಿಗೆ ದಿನಗಳು ಉರುಳಿದಂತೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಎಲೆ ಚುಕ್ಕಿ ರೋಗಕ್ಕೆ ವಿಜ್ಞಾನಿಗಳು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕಂಡುಕೊಳ್ಳದಿದ್ದರೇ ಸಣ್ಣ ಮತ್ತು ಮಧ್ಯಮ ಪ್ರಮಾಣದ ಅಡಿಕೆ ಕೃಷಿಕರು ಬೀದಿಗೆ ಬರುವುದು ಗ್ಯಾರಂಟಿ ಎಂಬ ಆತಂಕ ಎದುರಾಗಿದೆ.
ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ
ಇದನ್ನೂ ಓದಿ:
ಮುಂಗಾರು ದುರ್ಬಲಗೊಂಡರೂ ಮಲೆನಾಡು, ಕರಾವಳಿ ಭಾಗವನ್ನು ಬಿಡದ ಮಳೆ; ಅಡಿಕೆ ಬೆಳೆಗೆ ಕೊಳೆ ರೋಗ, ರೈತರು ಕಂಗಾಲು
Published On - 7:00 pm, Mon, 4 October 21