AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಐಆರ್ ಫಾರ್ಮ್-7 ಎಂದರೇನು? ಅರ್ಜಿ ಕೊಟ್ಟ ಕೂಡಲೇ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗುತ್ತಾ? ನೀವು ತಿಳಿಯಲೇಬೇಕಾದ ಅಂಶಗಳು

ಕರ್ನಾಟಕದಲ್ಲಿ ಸದ್ಯ ಎಸ್​ಐಆರ್ ಹಾಗೂ ಫಾರ್ಮ್-7 ವಿಚಾರ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿದೆ. ಅಲ್ಪಸಂಖ್ಯಾತರ ಹಾಗೂ ದಲಿತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರ್ಮ್-7 ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳಿವೆ. ಹಾಗಾದರೆ ಫಾರ್ಮ್-7 ಎಂದರೇನು? ಈ ಅರ್ಜಿ ಕೊಟ್ಟ ಕೂಡಲೇ ಬೇರೊಬ್ಬ ಮತದಾರನ ಹೆಸರು ಪಟ್ಟಿಯಿಂದ ಡಿಲೀಟ್ ಆಗುತ್ತಾ? ಫಾರ್ಮ್-7 ಅಡಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಇರುವ ನಿಯಮವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಎಸ್​ಐಆರ್ ಫಾರ್ಮ್-7 ಎಂದರೇನು? ಅರ್ಜಿ ಕೊಟ್ಟ ಕೂಡಲೇ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗುತ್ತಾ? ನೀವು ತಿಳಿಯಲೇಬೇಕಾದ ಅಂಶಗಳು
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
| Edited By: |

Updated on:Oct 06, 2026 | 12:37 PM

Share

ಮುಖ್ಯಾಂಶಗಳು

  • SIR ಫಾರ್ಮ್-7 ಎಂದರೇನು?
  • ಯಾವ ಕಾರಣಗಳಿಗೆ ಫಾರ್ಮ್-7 ಸಲ್ಲಿಸಬಹುದು?
  • ಯಾರು ಫಾರ್ಮ್-7 ಸಲ್ಲಿಸಬಹುದು?

ಕರ್ನಾಟಕದಲ್ಲಿ ಸದ್ಯ ಎಸ್​ಐಆರ್ ಹಾಗೂ ಫಾರ್ಮ್-7 ವಿಚಾರ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಆಕ್ಷೇಪಿಸಲು ಅಥವಾ ಕೆಲವು ನಿರ್ದಿಷ್ಟ ಕಾರಣಗಳ ಆಧಾರದ ಮೇಲೆ ಹೆಸರು ತೆಗೆಸಲು ಫಾರ್ಮ್-7 ಬಳಸಲಾಗುತ್ತದೆ. ಹಾಗಾದರೆ ಫಾರ್ಮ್-7 ಎಂದರೇನು? ಯಾರು ಅರ್ಜಿ ಸಲ್ಲಿಸಬಹುದು? ಯಾವ ಕಾರಣಗಳಿಗೆ ಹೆಸರು ತೆಗೆಯಲು ಮನವಿ ಮಾಡಬಹುದು? ಅರ್ಜಿ ಸಲ್ಲಿಸಿದ ತಕ್ಷಣವೇ ಹೆಸರು ಡಿಲೀಟ್ ಆಗುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಫಾರ್ಮ್-7 ಎಂದರೇನು?

ಫಾರ್ಮ್-7 ಎಂಬುದು ಚುನಾವಣಾ ಆಯೋಗದ ಅಧಿಕೃತ ಅರ್ಜಿ ನಮೂನೆ. ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ವ್ಯಕ್ತಿಯ ಹೆಸರನ್ನು ತೆಗೆದುಹಾಕಲು ಆಕ್ಷೇಪ ಸಲ್ಲಿಸುವುದು ಅಥವಾ ಪ್ರಸ್ತಾವಿತ ಸೇರ್ಪಡೆಯನ್ನು ಆಕ್ಷೇಪಿಸಲು ಈ ಫಾರ್ಮ್ ಬಳಸಲಾಗುತ್ತದೆ. ಮತದಾರರು ತಮ್ಮದೇ ಹೆಸರನ್ನು ಕೆಲವು ನಿರ್ದಿಷ್ಟ ಕಾರಣಗಳಿಂದ ಪಟ್ಟಿಯಿಂದ ತೆಗೆಸಿಕೊಳ್ಳಲು ಕೂಡ ಫಾರ್ಮ್-7 ಮೂಲಕ ಅರ್ಜಿ ಸಲ್ಲಿಸಬಹುದು.

ಎಸ್​ಐಆರ್ ಅಂದರೆ Special Intensive Revision ಅಥವಾ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ. ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಸರಿಯಾಗಿ ಇರುವಂತೆ ಹಾಗೂ ಅನರ್ಹ ಅಥವಾ ತಪ್ಪಾದ ನಮೂದುಗಳನ್ನು ಗುರುತಿಸುವ ಉದ್ದೇಶದಿಂದ ನಡೆಸುವ ವಿಶೇಷ ಪರಿಷ್ಕರಣೆ ಪ್ರಕ್ರಿಯೆ. ಈ ಸಂದರ್ಭದಲ್ಲಿ ಫಾರ್ಮ್-7 ಹೆಸರು ಅಳಿಸುವಿಕೆ ಅಥವಾ ಆಕ್ಷೇಪಕ್ಕೆ ಸಂಬಂಧಿಸಿದ ಪ್ರಮುಖ ಕಾನೂನುಬದ್ಧ ಮಾರ್ಗವಾಗಿದೆ.

ಯಾವ ಕಾರಣಗಳಿಗೆ ಫಾರ್ಮ್-7 ಸಲ್ಲಿಸಬಹುದು?

ಫಾರ್ಮ್-7 ಮೂಲಕ ಮತ್ತೊಬ್ಬರ ಹೆಸರಿನ ಬಗ್ಗೆ ಆಕ್ಷೇಪ ಸಲ್ಲಿಸುವಾಗ ನಿರ್ದಿಷ್ಟ ಕಾರಣವನ್ನು ನಮೂದಿಸಬೇಕು. ಮುಖ್ಯವಾಗಿ ಈ ಕಾರಣಗಳು ಅನ್ವಯಿಸುತ್ತವೆ:

  • ಮರಣ: ಮತದಾರ ಮೃತಪಟ್ಟಿದ್ದರೆ.
  • ಸ್ಥಳಾಂತರ: ಮತದಾರ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ.
  • ಅಪ್ರಾಪ್ತ ವಯಸ್ಸು: ಮತದಾರನಿಗೆ 18 ವರ್ಷ ಪೂರ್ಣವಾಗಿಲ್ಲದೇ ಇದ್ದು ಆತನ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ.
  • ಈಗಾಗಲೇ ನೋಂದಣಿ: ಅದೇ ವ್ಯಕ್ತಿಯ ಹೆಸರು ಬೇರೆಡೆ ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದರೆ.
  • ಭಾರತೀಯ ನಾಗರಿಕರಲ್ಲದಿರುವುದು: ವ್ಯಕ್ತಿ ಭಾರತೀಯ ನಾಗರಿಕನಲ್ಲದಿದ್ದರೆ.

ಸ್ವಂತ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಸಿಕೊಳ್ಳಲು ಕೂಡ ಫಾರ್ಮ್-7 ಬಳಸಬಹುದು. ಅಂತಹ ಸಂದರ್ಭದಲ್ಲಿ ಸ್ಥಳಾಂತರ, ಈಗಾಗಲೇ ಮತ್ತೊಂದು ಕಡೆ ನೋಂದಣಿಯಾಗಿರುವುದು ಅಥವಾ ಭಾರತೀಯ ನಾಗರಿಕನಲ್ಲದಿರುವುದು ಸೇರಿದಂತೆ ನಮೂನೆಯಲ್ಲಿ ಸೂಚಿಸಿರುವ ಕಾರಣಗಳಲ್ಲಿ ಸೂಕ್ತ ಕಾರಣವನ್ನು ಆಯ್ಕೆ ಮಾಡಬೇಕು.

ಯಾರು ಫಾರ್ಮ್-7 ಸಲ್ಲಿಸಬಹುದು?

ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರುವ ವ್ಯಕ್ತಿ, ಅದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಇನ್ನೊಬ್ಬರ ಹೆಸರಿನ ಸೇರ್ಪಡೆಗೆ ಆಕ್ಷೇಪ ಸಲ್ಲಿಸಲು ಅಥವಾ ಹೆಸರು ತೆಗೆಸಲು ಅರ್ಜಿ ಸಲ್ಲಿಸಬಹುದು. ಸ್ವಂತ ಹೆಸರನ್ನು ಅಳಿಸಲು ಕೂಡ ಅರ್ಜಿ ಸಲ್ಲಿಸುವ ಅವಕಾಶವಿದೆ. ಆದರೆ, ಕೇವಲ ಅನುಮಾನವಿದೆ ಎಂಬ ಕಾರಣಕ್ಕೆ ಹೆಸರು ತೆಗೆಸಲು ಸಾಧ್ಯವಿಲ್ಲ. ಅರ್ಜಿಯಲ್ಲಿ ನೀಡಿರುವ ಕಾರಣವನ್ನು ಸಮರ್ಥಿಸುವ ಹೊಣೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಮೇಲಿರುತ್ತದೆ.

ಫಾರ್ಮ್-7 ಹೇಗೆ ಸಲ್ಲಿಸಬೇಕು?

ಫಾರ್ಮ್-7 ಅನ್ನು ಭೌತಿಕವಾಗಿ ಸಲ್ಲಿಸಬಹುದು. ಸಂಬಂಧಪಟ್ಟ ಬೂತ್ ಲೆವೆಲ್ ಆಫೀಸರ್ (BLO) ಮೂಲಕ ಅರ್ಜಿ ನೀಡುವ ವ್ಯವಸ್ಥೆಯೂ ಇದೆ. ಆನ್‌ಲೈನ್ ಮೂಲಕವೂ ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್‌ನಲ್ಲಿ ಫಾರ್ಮ್-7 ಸಲ್ಲಿಸಲು ಅವಕಾಶವಿದೆ. ಅರ್ಜಿಯಲ್ಲಿ ಅರ್ಜಿ ಸಲ್ಲಿಸುವ ವ್ಯಕ್ತಿಯ ವಿವರಗಳು, ಎಪಿಕ್ ಅಥವಾ ವೋಟರ್ ಐಡಿ ಸಂಖ್ಯೆ ಹಾಗೂ ಆಕ್ಷೇಪಿಸಲಾಗುತ್ತಿರುವ ವ್ಯಕ್ತಿಯ ಹೆಸರು, ಎಪಿಕ್ ಸಂಖ್ಯೆ ಮತ್ತು ವಿಳಾಸದಂತಹ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಫಾರ್ಮ್-7 ಸಲ್ಲಿಸಿದ ತಕ್ಷಣ ಹೆಸರು ಡಿಲೀಟ್ ಆಗುತ್ತಾ?

ಖಂಡಿತವಾಗಿಯೂ ಇಲ್ಲ. ಫಾರ್ಮ್-7 ಸಲ್ಲಿಕೆಯಾದ ತಕ್ಷಣವೇ ಮತದಾರರ ಹೆಸರನ್ನು ಅಳಿಸಲಾಗುವುದಿಲ್ಲ. ಅರ್ಜಿಯಲ್ಲಿ ನೀಡಿರುವ ಕಾರಣ ಮತ್ತು ವಿವರಗಳನ್ನು ಪರಿಶೀಲಿಸುವ ಪ್ರಕ್ರಿಯೆ ಇರುತ್ತದೆ. ಅಗತ್ಯವಿದ್ದರೆ ಸ್ಥಳ ಪರಿಶೀಲನೆಯಂತಹ ಕ್ರಮಗಳ ಮೂಲಕ ಮಾಹಿತಿ ಪರಿಶೀಲಿಸಲಾಗುತ್ತದೆ. ನಂತರ ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿ (ERO) ಕಾನೂನುಬದ್ಧ ಪ್ರಕ್ರಿಯೆಯಂತೆ ನಿರ್ಧಾರ ಕೈಗೊಳ್ಳುತ್ತಾರೆ. ಅಂದರೆ, ಫಾರ್ಮ್-7 ಎನ್ನುವುದು ಹೆಸರು ಅಳಿಸುವ ಅಂತಿಮ ಆದೇಶವಲ್ಲ; ಹೆಸರು ಅಳಿಸುವಂತೆ ಆಕ್ಷೇಪ ಅಥವಾ ಅರ್ಜಿ ಸಲ್ಲಿಸುವ ಕಾನೂನುಬದ್ಧ ಪ್ರಕ್ರಿಯೆಯ ಆರಂಭ.

ಬಿಎಲ್​​ಒ ಪಾತ್ರವೇನು?

ಫಾರ್ಮ್-7ನಲ್ಲಿ ಮಾಡಿರುವ ಆಕ್ಷೇಪದ ಆಧಾರವನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಬೂತ್ ಲೆವೆಲ್ ಆಫೀಸರ್ ಪ್ರಮುಖ ಪಾತ್ರ ವಹಿಸುತ್ತಾರೆ. ಉದಾಹರಣೆಗೆ, ವ್ಯಕ್ತಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬ ಕಾರಣ ನೀಡಿದ್ದರೆ, ಆ ವ್ಯಕ್ತಿ ನೀಡಿರುವ ವಿಳಾಸದಲ್ಲಿ ವಾಸಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತಹ ಕಾರ್ಯ ನಡೆಯಬಹುದು. ಇದಾದ ಬಳಿಕ ಪ್ರಕರಣವನ್ನು ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿ ಮುಂದಿನ ಪ್ರಕ್ರಿಯೆಗೆ ತೆಗೆದುಕೊಳ್ಳುತ್ತಾರೆ.

ನೋಟಿಸ್, ವಿಚಾರಣೆ ಬಳಿಕವೇ ಅಂತಿಮ ನಿರ್ಧಾರ

ಮತದಾರರ ಹೆಸರಿನ ವಿರುದ್ಧ ಫಾರ್ಮ್-7 ಮೂಲಕ ಆಕ್ಷೇಪ ಬಂದಿರುವುದರಿಂದ ಮಾತ್ರ ಹೆಸರು ಅಳಿಸುವುದಿಲ್ಲ. ಹೆಸರು ಉಳಿಸಬೇಕೇ ಅಥವಾ ತೆಗೆದುಹಾಕಬೇಕೇ ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಬೇಕು. ಆಕ್ಷೇಪಕ್ಕೆ ಒಳಗಾದ ಮತದಾರರಿಗೆ ತಮ್ಮ ಪರವಾಗಿ ದಾಖಲೆಗಳು ಅಥವಾ ವಿವರಣೆ ನೀಡಲು ಅವಕಾಶವಿರುತ್ತದೆ. ವಿಚಾರಣೆ ಮತ್ತು ಪರಿಶೀಲನೆಯ ಬಳಿಕ ಇಆರ್​ಒ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಹೀಗಾಗಿ ಫಾರ್ಮ್-7 ಅರ್ಜಿ ಸಲ್ಲಿಕೆ ಮತ್ತು ಮತದಾರರ ಹೆಸರು ಅಳಿಸುವಿಕೆ ಎರಡು ಬೇರೆ ಹಂತಗಳು ಎಂಬುದನ್ನು ಮತದಾರರು ಅರ್ಥಮಾಡಿಕೊಳ್ಳಬೇಕು.

ತಪ್ಪಾಗಿ ಹೆಸರು ಅಳಿಸಿದರೆ ಏನು ಮಾಡಬಹುದು?

ಮತದಾರರ ಹೆಸರು ತಪ್ಪಾಗಿ ಅಳಿಸಲಾಗಿದೆ ಎಂದು ಅನಿಸಿದರೆ, ಕಾನೂನುಬದ್ಧ ಮೇಲ್ಮನವಿ ವ್ಯವಸ್ಥೆಯ ಮೂಲಕ ಪ್ರಶ್ನಿಸುವ ಅವಕಾಶವಿದೆ. ಅಂದರೆ, ಫಾರ್ಮ್-7 ಪ್ರಕ್ರಿಯೆಯಲ್ಲಿ ಅಂತಿಮ ನಿರ್ಧಾರಕ್ಕೆ ಬಂದ ನಂತರವೂ ಅದನ್ನು ಪ್ರಶ್ನಿಸಲು ಮೇಲ್ಮನವಿ ಮಾರ್ಗಗಳಿವೆ.

ಫಾರ್ಮ್-7 ದುರುಪಯೋಗವಾಗದಂತೆ ನಿಯಮಗಳಿವೆಯೇ?

ಫಾರ್ಮ್-7ನಲ್ಲಿ ಅರ್ಜಿ ಸಲ್ಲಿಸುವ ವ್ಯಕ್ತಿ ನೀಡುವ ಮಾಹಿತಿ ಸತ್ಯವಾಗಿದೆ ಎಂಬ ಘೋಷಣೆಯನ್ನು ಮಾಡಬೇಕು. ತಪ್ಪು ಮಾಹಿತಿ ಅಥವಾ ಸುಳ್ಳು ಘೋಷಣೆ ನೀಡುವುದು ಶಿಕ್ಷಾರ್ಹವಾಗಬಹುದು. ಫಾರ್ಮ್-7ನಲ್ಲೇ ಪ್ರಜಾಪ್ರತಿನಿಧಿ ಕಾಯ್ದೆ, 1950ರ ಸೆಕ್ಷನ್ 31ರ ಅಡಿಯಲ್ಲಿ ಸುಳ್ಳು ಹೇಳಿಕೆಗೆ ಶಿಕ್ಷೆಯ ಬಗ್ಗೆ ಉಲ್ಲೇಖವಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ವೈಯಕ್ತಿಕ ಅರ್ಜಿಗಳಿಗೆ ಒತ್ತು ನೀಡಲಾಗಿದ್ದು, ಒಟ್ಟಾಗಿ ಸಲ್ಲಿಸುವ ಬಲ್ಕ್ ಕ್ಲೇಮ್​​ಗಳು (bulk claims) ಅಥವಾ ಬಲ್ಕ್ ಆಬ್ಜೆಕ್ಷನ್ಸ್​ ಅನ್ನು ಸ್ವೀಕರಿಸಬಾರದು ಎಂಬ ಸೂಚನೆಯೂ ಇದೆ.

ಎಸ್​ಐಆರ್ ಸಂದರ್ಭದಲ್ಲಿ ಫಾರ್ಮ್-7 ಏಕೆ ಮುಖ್ಯ?

ಎಸ್​ಐಆರ್ ಸಂದರ್ಭದಲ್ಲಿ ಮತದಾರರ ಪಟ್ಟಿಯ ಪರಿಶೀಲನೆ ನಡೆಯುವುದರಿಂದ, ಅರ್ಹತೆ ಇಲ್ಲದ ಅಥವಾ ತಪ್ಪಾದ ನಮೂದುಗಳ ಬಗ್ಗೆ ಆಕ್ಷೇಪ ಸಲ್ಲಿಸುವ ವ್ಯವಸ್ಥೆ ಮಹತ್ವ ಪಡೆಯುತ್ತದೆ. ಆದರೆ, ಫಾರ್ಮ್-7 ಸಲ್ಲಿಕೆಯಾಗಿದೆ ಎಂದರೆ ಆ ಮತದಾರನ ಹೆಸರು ಅಳಿಸಲಾಗಿದೆ ಎಂದರ್ಥವಲ್ಲ. ಅರ್ಜಿ, ಪರಿಶೀಲನೆ, ಅಗತ್ಯವಿದ್ದರೆ ವಿಚಾರಣೆ ಮತ್ತು ಅಂತಿಮ ನಿರ್ಧಾರ ಎಂಬ ಹಂತಗಳ ಮೂಲಕ ಪ್ರಕ್ರಿಯೆ ಸಾಗುತ್ತದೆ.

(ಮಾಹಿತಿ: ಚುನಾವಣಾ ಆಯೋಗದ ವೆಬ್​ಸೈಟ್ ಮತ್ತು ಇತರ ಮೂಲಗಳು)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Tue, 6 October 26

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ