TV9 Kannada News Live: ಜಿಬಿಎ ವ್ಯಾಪ್ತಿಯಲ್ಲಿ ಮೊದಲ ದಿನ SIRನಲ್ಲಿ 60,368 ಜನರು ಭಾಗಿ
Karnataka News Today Live Updates: ಕರ್ನಾಟಕದಲ್ಲಿ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭವಾಗಿದೆ. ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದೆ. ಅಯೋಧ್ಯೆಯ ರಾಮ ಮಂದಿರ ದೇಣಿಗೆ ಹಗರಣ ಕುರಿತ ಅಪ್ಡೇಟ್ಗಳೂ ಸೇರಿದಂತೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ, ಕ್ರೀಡೆ, ಸಿನಿಮಾದ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯ.

LIVE NEWS & UPDATES
-
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಬಿಗ್ ಫಿಲ್ಟರ್
ರಾಜ್ಯದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತಿರುವ ಗ್ಯಾರಂಟಿ ಯೋಜನೆಗಳಲ್ಲಿ ಆಗುತ್ತಿರುವ ಅಕ್ರಮಗಳು ಮತ್ತು ಅನರ್ಹರ ಪಾಲಾಗುತ್ತಿರುವುದನ್ನು ತಡೆಯಲು ಕರ್ನಾಟಕ ಸರ್ಕಾರ ಈಗ ಅಂತಿಮ ಅಸ್ತ್ರ ಪ್ರಯೋಗಿಸಿದೆ. ಇನ್ಮುಂದೆ ಕರ್ನಾಟಕ ರಾಜ್ಯದ ಅಧಿಕೃತ ಮತದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗಲಿದೆ ಎಂಬ ಬಿಗಿ ನಿಯಮ ಜಾರಿಗೆ ಬರುತ್ತಿದೆ.
-
ಜುಲೈ 1ರಿಂದ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದ್ದು, ಈಗಾಗಲೇ ಗೃಹಲಕ್ಷ್ಮೀ ಯೋಜನೆಗೆ ಹೊಸ ಅರ್ಜಿ ಸಲ್ಲಬೇಕೆಂದು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಇದೀಗ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯಕ್ಕೆ ನಿರ್ಧರಿಸಲಾಗಿದ್ದು, ನಾಳೆ ಅಂದರೆ ಜುಲೈ 1ರಿಂದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ ಪರಿಶೀಲನೆ ನಡೆಯಲಿದೆ. ಎಸ್ಕಾಂಗಳ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.
ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದು, ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ವನ್ನು ತೋರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
-
-
ರೇಣುಕಾಸ್ವಾಮಿ ಹತ್ಯೆ ಕೇಸ್ನ 17ನೇ ಸಾಕ್ಷಿಗೆ ಭದ್ರತೆ ಒದಗಿಸಲು ಕೋರ್ಟ್ ಸೂಚನೆ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 17ನೇ ಸಾಕ್ಷಿಗೆ ಭದ್ರತೆ ಒದಗಿಸಲು ತನಿಖಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.ನಾವು ಹೇಳಿದಂತೆ ಸಾಕ್ಷ್ಯ ನುಡಿಯುವಂತೆ ಕೆಲವರಿಂದ ಕರೆ ಬಂದಿರುವುದಾಗಿ ಕೋರ್ಟ್ಗೆ 17ನೇ ಸಾಕ್ಷಿ ಮಾಹಿತಿ ನೀಡಿದ್ದು, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸಾಕ್ಷಿಗೆ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಸಾಕ್ಷ್ಯ ನಾಶಕ್ಕೆ ಯತ್ನಿಸುವವರ ವಿರುದ್ಧ ಕ್ರಮ ಎಂದು ಎಚ್ಚರಿಸಿದೆ.
-
ಜಿಬಿಎ ವ್ಯಾಪ್ತಿಯಲ್ಲಿ ಇಂದು SIRನಲ್ಲಿ 60,368 ಜನರು ಭಾಗಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮೊದಲ ದಿನದ SIR ಪ್ರಕ್ರಿಯೆಯಲ್ಲಿ 60,368 ಜನರು ಭಾಗಿಯಾಗಿದ್ದಾರೆ.ಇಂದು 60,368 ಗಣತಿ ನಮೂನೆಗಳ ವಿತರಣೆ ಹಾಗೂ ಸ್ವೀಕಾರವಾಗಿದೆ. ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ವಿತರಿಸಲಾದ ನಮೂನೆಗಳ ಸಂಖ್ಯೆ 12,122, ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ವಿತರಿಸಲಾದ ನಮೂನೆಗಳ ಸಂಖ್ಯೆ 23,221, ದಕ್ಷಿಣ ಪಾಲಿಕೆ ವ್ಯಾಪ್ತಿಯ ವಿತರಿಸಿದ ನಮೂನೆಗಳ ಸಂಖ್ಯೆ 10,620.
-
ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜೂನ್ 30) ಬೆಂಗಳೂರಿಗೆ ಬಂದಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ಗೆಹ್ಲೋಟ್, ಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸ್ವಾಗತಿಸಿದರು.
-
-
ಹಿಂದೂ-ಮುಸ್ಲಿಂ ಗಲಾಟೆ, ನರೇಗಲ್ ಗ್ರಾಮಕ್ಕೆ ವಿಜಯೇಂದ್ರ ಭೇಟಿ
ಕಾರಹುಣ್ಣಿಮೆ ವೇಳೆ ಹೋರಿ ಓಡಿಸುವಾಗ ಹಿಂದೂಗಳ ಮೇಲೆ ಮುಸ್ಲಿಮರಿಂದ ಹಲ್ಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು (ಜೂನ್ 3) ಹಾವೇರಿಯ ನರೇಗಲ್ ಗ್ರಾಮಕ್ಕೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದು, ಗಾಯಗೊಂಡಿರುವ ಹಿಂದೂಗಳ ಮನೆಗಳಿಗೆ ತೆರಳಿ ಕುಟುಂಬದವರ ಜೊತೆ ಚರ್ಚಿಸಿದರು.
-
ಪಕ್ಷ ಸೂಚಿಸಿದ್ರೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಎಂದ ವಿಶ್ವನಾಥ್
ಸಂಸದ ಸುಧಾಕರ್ ಹಾಗೂ ಎಸ್ಆರ್ ವಿಶ್ವನಾಥ್ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡಿರುವ ಸುಧಾಕರ್, ಕೆ.ಸುಧಾಕರ್ ನಡುವಿನ ಮನಸ್ತಾಪ ಬಗೆಹರಿದಿಲ್ಲ. ಸುಧಾಕರ್ ಕರೆಸಿ ಮಾತನಾಡುವುದಾಗಿ ನಾಯಕರು ಹೇಳಿದ್ದಾರೆ. ಪಕ್ಷ ಸೂಚಿಸಿದ್ರೆ ನಾನು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡುತ್ತೇನೆ. ನನ್ನ ಕ್ಷೇತ್ರ ಯಲಹಂಕ, ಪಕ್ಷ ಎಲ್ಲಿ ಸೂಚಿಸುತ್ತೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಎಲ್ಲೇ ಸ್ಪರ್ಧೆ ಮಾಡಿದ್ರೂ ಗೆದ್ದು ತೋರಿಸುತ್ತೇನೆ ಎಂದು ಸುಧಾಕರ್ಗೆ ತಿರುಗೇಟು ನೀಡಿದರು.
-
-
ಬಾಕಿ ಹಣ ಬಿಡುಗಡೆಗೆ ರಾಜ್ಯ ಗುತ್ತಿಗೆದಾರರ ಸಂಘ ಮನವಿ
ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಂದು (ಜೂನ್ 30) ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಬಾಕಿ ಹಣ ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.ಸುಮಾರು 30 ಸಾವಿರ ಕೋಟಿಯಷ್ಟು ಇರುವ ಬಾಕಿ ಹಣ ಬಿಡುಗಡೆ ಮಾಡುವಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ನಿಯೋಗ ಮನವಿ ಮಾಡಿದ್ದು, ಇದಕ್ಕೆ ಸಿಎಂ ಸಹ ಸ್ಪಂದಿಸಿ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
-
ನಾಳೆಯಿಂದ ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರ ಸೂಚನೆ ಮೇರೆಗೆ ನಾಳೆಯಿಂದ (ಜುಲೈ 01) ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯ ಶುರುವಾಗಲಿದೆ. ಪೊಲೀಸರು, ಪಾಲಿಕೆ ಇಲಾಖೆ ಸಮನ್ವಯದಲ್ಲಿ ಕಾರ್ಯಚರಣೆ ನಡೆಯಲಿದ್ದು, ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ರೆ ದಂಡದ ಎಚ್ಚರಿಕೆ ನೀಡಲಾಗಿದೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಒತ್ತುವರಿ ತೆರವು ಜತೆಗೆ ಫುಟ್‌ಪಾತ್ ದುರಸ್ತಿ ಕಾರ್ಯ ಸಹ ನಡೆಯಲಿದೆ.
-
ಬಾಲ್ಯವಿವಾಹ ತಡೆದ ಅಂಗನವಾಡಿ ಕಾರ್ಯಕರ್ತೆ ಹತ್ಯೆಗೆ ಯತ್ನ
ಬಾಲ್ಯವಿವಾಹ ತಡೆದ ಅಂಗನವಾಡಿ ಕಾರ್ಯಕರ್ತೆ ಕೊಲೆಗೆ ಯತ್ನ ನಡೆದಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಜೆ.ಕುರುಬರಹಳ್ಳಿ ನಡೆದಿದೆ.ಬಾಲಕಿ ಮದುವೆ ತಡೆದಿದ್ದ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅವರು ಬಾಲ್ಯವಿವಾಹ ತಡೆದು KGFನ ಮಸ್ಕಾಂನಲ್ಲಿರುವ ಬಾಲಮಂದಿರಕ್ಕೆ ಬಾಲಕಿ ಸೇರಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಬಾಲಕಿ ಪೋಷಕರು, ಪದ್ಮಾವತಿ ಮೇಲೆ ತೀವ್ರ ಹಲ್ಲೆ ಮಾಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಪುನಾರಂಭಕ್ಕೆ ಸಿಎಂ ಸೂಚನೆ
ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಪುನಾರಂಭಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಇಂದು (ಜೂನ್ 30) ವಿಧಾನಸೌಧದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರವಾಸಿಗರ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಸಫಾರಿ ಚಟುವಟಿಕೆ ಆರಂಭಿಸುವಂತೆ ತಿಳಿಸಿದ್ದಾರೆ.
-
ಬೆಂಗಳೂರಿನ ಅಪಾರ್ಟ್ಮೆಂಟ್ ಫ್ಲ್ಯಾಟ್ನಲ್ಲಿ ಬೆಂಕಿ
ಅಪಾರ್ಟ್ಮೆಂಟ್ ಫ್ಲ್ಯಾಟ್ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಬೆಂಗಳೂರಿನ ಅಶೋಕನಗರ ಗರುಡಮಾಲ್ ಬಳಿ ನಡೆದಿದೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ಒಂದರ ಫ್ಲಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ, ಆದ್ರೆ, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
-
ಘಟನೆ ಬಗ್ಗೆ ವಿವರಿಸಿ ಸಿದ್ದರಾಮಯ್ಯ ಮುಂದೆ ಕಣ್ಣೀರಿಟ್ಟ ಪ್ರದೀಪ್ ಈಶ್ವರ್
ಮೊನ್ನೆ ಚಿಕ್ಕಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ವೇಳೆ ಶಾಸಕ ಪ್ರದೀಪ್ ಈಶ್ವರ್ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರದೀಪ್ ಈಶ್ವರ್ ಅವರನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಪ್ರದೀಪ್ ಈಶ್ವರ್ ಅವರು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ ತಮ್ಮ ಹಾಗೂ ತಮ್ಮ ಕುಟುಂಬವನ್ನು ನಿಂದಿಸಿದ್ದನ್ನು ವಿವರಿಸಿ ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯನವರು, ಪ್ರದೀಪ್ ಈಶ್ವರ್ ಅವರಿಗೆ ಧೈರ್ಯ ತುಂಬಿದ್ದು, ಇದರಿಂದ ಧೃತಿಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.
ಅಲ್ಲದೇ ಸಿದ್ದರಾಮಯ್ಯನವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ದೂರವಾಣಿ ಕರೆ ಮಾಡಿ ಪ್ರಕರಣದ ಬಗ್ಗೆ ಚರ್ಚಿಸಿದ್ದು, ಪೊಲೀಸರ ಸಮ್ಮುಖದಲ್ಲೇ ಅದರಲ್ಲೂ ಆಡಳಿತ ಪಕ್ಷದ ಶಾಸಕರಿಗೆ ಈ ರೀತಿ ಆಗಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದಾರೆ. ಮತ್ತಷ್ಟು ಓದಿ
-
ರಾಮನನ್ನು ದ್ವೇಷಿಸುತ್ತಿದ್ದವರು ಈಗ ಅಯೋಧ್ಯೆಗೆ ಹೊರಟಿದ್ದಾರೆ: ಯೋಗಿ ಆದಿತ್ಯನಾಥ್ ಕಿಡಿ
ಅಯೋಧ್ಯೆ ರಾಮ ಮಂದಿರ ದೇಣಿಗೆ ವಿಚಾರವಾಗಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಸಮಾಜವಾದಿ ಪಕ್ಷ ಹಾಗೂ ಪ್ರತಿಪಕ್ಷಗಳ ಇತರ ನಾಯಕರ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತೀವ್ರ ವಾಗ್ದಾಳಿ ನಡೆಸಿದರು. ರಾಮಪುರದಲ್ಲಿ ಮಾತನಾಡಿದ ಅವರು, ಭಗವಾನ್ ರಾಮನಿಗೆ ಯಾರು ಸರಿ ಮತ್ತು ಯಾರು ತಪ್ಪು ಎಂಬುದು ತಿಳಿದಿದೆ ಎಂದು ಹೇಳಿದರು. ಭಗವಾನ್ ರಾಮನ ಅಸ್ತಿತ್ವವನ್ನು ಕಾಂಗ್ರೆಸ್ ನಿರಾಕರಿಸಿತ್ತು. ರಾಮನನ್ನು ದ್ವೇಷಿಸಿದ್ದವರು ಈಗ ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. 2017 ಕ್ಕಿಂತ ಮೊದಲು ‘‘ಜೈ ಶ್ರೀ ರಾಮ್’’ ಎಂದು ಹೇಳಿದ್ದಕ್ಕಾಗಿ ಜನರನ್ನು ಹೊಡೆಯುತ್ತಿದ್ದವರು ಈಗ ರಾಮನ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಗುಂಡು ಹಾರಿಸಿದವರು ಈಗ ನಂಬಿಕೆಯನ್ನು ಪ್ರಶ್ನಿಸುತ್ತಿದ್ದಾರೆ. ರಾಮನ ಶತ್ರುಗಳು ಈಗ ಅವನ ಹೆಸರನ್ನು ಕರೆಯುತ್ತಿದ್ದಾರೆ ಎಂದು ಯೋಗಿ ಕಿಡಿಕಾರಿದರು.
-
ಎಸ್ಐಆರ್ ಬಗ್ಗೆ ಭಯ ಬೇಡವೆಂದ ಬಾನು ಮುಷ್ತಾಕ್
ಹಾಸನದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್, ಜನರಿಗೆ ಧೈರ್ಯ ಹೇಳಿದ್ದಾರೆ. ರಾಜಕೀಯ ಕಾರ್ಯಕರ್ತರ ಮತ್ತು ಪ್ರಮುಖರ ಮಾತಿನಿಂದಾಗಿ ಇದೊಂದು ಕಠಿಣ ಪ್ರಕ್ರಿಯೆ ಎಂಬ ಫೋಬಿಯಾ ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ. ಆದರೆ ವಾಸ್ತವ ಹಾಗಿಲ್ಲ. ಇದೊಂದು ಸರಳ ಪ್ರಕ್ರಿಯೆ ಎಂದು ಅವರು ಹೇಳಿದ್ದಾರೆ. ಮತ್ತಷ್ಟು ಓದಿ
-
ಜುಲೈ 3 ರಿಂದ ಪವಿತ್ರ ಅಮರನಾಥ ಯಾತ್ರೆ
ಪವಿತ್ರ ಅಮರನಾಥ ಯಾತ್ರೆ ಜುಲೈ 3 ರಿಂದ ಶುರುವಾಗಲಿದೆ. ಯಾತ್ರೆ ಆರಂಭದ ಪೂರ್ವಭಾವಿಯಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜ್ಯೇಷ್ಠ ಪೌರ್ಣಮಿಯ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ಪ್ರಥಮ ಪೂಜೆಯನ್ನು ನೆರವೇರಿಸಿ, ಬಾಬಾ ಬರ್ಫಾನಿ ಯಾತ್ರೆಯನ್ನು ಉದ್ಘಾಟಿಸಿದ್ದಾರೆ. ಮತ್ತಷ್ಟು ಓದಿ
-
ಧರ್ಮಸ್ಥಳದಲ್ಲೂ ಹೆಚ್ಕೆ ಸುರೇಶ್ ಪ್ರಮಾಣ
ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬೇಲೂರು ಬಿಜೆಪಿ ಶಾಸಕ ಹೆಚ್ಕೆ ಸುರೇಶ್, ದೇವರ ಮುಂದೆ ಮುಷ್ಟಿ ಕಾಣಿಕೆ ಹಾಕಿ ತಾನು ಅಡ್ಡ ಮತದಾನ ಮಾಡಿಲ್ಲ ಎಂದು ಪ್ರಮಾಣ ಮಾಡಿದರು. ನಾನು ತಪ್ಪು ಮಾಡಿಲ್ಲ ಎಂದು ಮಂಜುನಾಥ ಸ್ವಾಮಿಯ ಎದುರು ಪ್ರಾರ್ಥನೆ ಸಲ್ಲಿಸಿದರು. ನಾನು ಹೃದಯ ಪೂರ್ವಕವಾಗಿ ಬಿಜೆಪಿಗೆ ಕೆಲಸ ಮಾಡ್ತಾ ಇದೇನೆ. ನಾನು ಈಗಲೂ ಬಿಜೆಪಿ, ಮುಂದೆಯೂ ಬಿಜೆಪಿಯೇ. ಆ ವಿಶ್ವಾಸ ನಂಬಿಕೆ ಉಳಿಸಿಕೊಳ್ಳಲು ಮಂಜುನಾಥ ಸ್ವಾಮಿ ಸಹಾಯ ಮಾಡಬೇಕು. ಚುನಾಯಿತನಾದ ಬಳಿಕ ಕಾಯಾವಾಚ ಮನಸ ಬಿಜೆಪಿ ಪರ ಕೆಲಸ ಮಾಡಿದ್ದೇನೆ. ನಾನು ಅಡ್ಡ ಮತದಾನ ಮಾಡಿಲ್ಲ, ಯಾವುದೇ ತಪ್ಪು ಮಾಡಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದರು.
-
ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡ್ತೇನೆಂದ ಹೆಚ್ಕೆ ಸುರೇಶ್
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿಲ್ಲ ಎಂದು ಈಗಾಗಲೇ ಬೇಲೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಆಣೆ-ಪ್ರಮಾಣ ಮಾಡಿರುವ ಬಿಜೆಪಿ ಶಾಸಕ ಹೆಚ್ಕೆ ಸುರೇಶ್ ಇದೀಗ, ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡುತ್ತೇನೆ ಎಂದಿದ್ದಾರೆ.
-
ಶಾಸಕ ಪ್ರದೀಪ್ ಈಶ್ವರ್ಗೆ ಧೈರ್ಯ ತುಂಬಿದ ಸಿಎಂ ಡಿಕೆಶಿ
ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಸೋಮವಾರ ರಾತ್ರಿ 11.30ಕ್ಕೆ ಫೋನ್ ಮಾಡಿ ಮಾತುಕತೆ ನಡೆಸಿದ್ದಾರೆ. ಧೈರ್ಯವಾಗಿ ಇರಿ. ನಿಮ್ಮ ಜೊತೆಗೆ ನಾವು ಇದ್ದೇವೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಇಂದು ಪ್ರದೀಪ್ ಈಶ್ವರ್ ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಸಿಎಂ ಭೇಟಿಯಾಗಿ ಚರ್ಚೆ ನಡೆಸಿದರು.
-
ಸಿಎಂ ಡಿಕೆ ಶಿವಕುಮಾರ್ ಮನೆಯಿಂದಲೇ ಎಸ್ಐಆರ್ ಪ್ರಾರಂಭ
ಬೆಂಗಳೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಮನೆಯಿಂದಲೇ ಎಸ್ಐಆರ್ ಪ್ರಾರಂಭ ಮಾಡಲಾಯಿತು. ಇದೇ ವೇಳೆ, ‘ಹೇಗೆ ಲಾಗಿನ್ ಮಾಡಬೇಕು ಹೇಳಿ, ಡೌನ್ ಲೋಡ್ ಮಾಡಿ’ ಎಂದು ಸಿಎಂ ಸೂಚಿಸಿದರು. ‘ನನ್ನ ಫೋನ್ನಲ್ಲೇ ಹೇಗೆ ಮಾಡುವುದು ತಿಳಿಸಿಕೊಡಿ’ ಎಂದು ಅವರು ಸೂಚಿಸಿದರು. ಅಧಿಕಾರಿಗಳ ಅವರ ಫೋನ್ನಲ್ಲೇ ಆ್ಯಪ್ ಡೌನ್ಲೋಡ್ ಮಾಡಿ ತಿಳಿಸಿಕೊಟ್ಟರು. ಫೋನ್ನಲ್ಲಿ ಆ್ಯಪ್ ಯೂಸ್ ಮಾಡವುದು ಸ್ವಲ್ಪ ಜನರಿಗೆ ಗೊತ್ತಾಗಬೇಕು, ಸ್ವಲ್ಪ ಕನ್ಫ್ಯೂಸ್ ಆಗುತ್ತದೆ ಎಂದು ಸಿಎಂ ಹೇಳಿದರು.
-
ಮೋದಿ ಕೈ ಕತ್ತರಿಸುತ್ತೇವೆಂದು ಪರೋಕ್ಷವಾಗಿ ಪಾಕ್ ಬೆದರಿಕೆ
ಸಿಂಧೂ ನದಿ ಹಂಚಿಕೆ ವಿಚಾರವಾಗಿ ಪಾಕಿಸ್ತಾನ ಮತ್ತೆ ಉದ್ಧಟತನ ಮೆರೆದಿದೆ. ‘ನಮಗೆ ಸೇರಬೇಕಾದ ನೀರು ತಡೆದವರ ಕೈ ಕತ್ತರಿಸುತ್ತೇವೆ’ ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಬೆದರಿಕೆ ಹಾಕಿದ್ದಾರೆ. ಮತ್ತಷ್ಟು ಓದಿ
-
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಲಿಂಡರ್ ಸ್ಫೋಟ
ಚಿಗಟೇರಿಯಲ್ಲಿರುವ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಆಪರೇಷನ್ ಥಿಯೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಯಿತು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
-
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಇಂದು ಉನ್ನತಾಧಿಕಾರ ಸಮಿತಿ ಸಭೆ
ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದ ಸಂಬಂದ ಇಂದು ಮಹಾರಾಷ್ಟ್ರ ಸಿಎಂ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಯಲಿದೆ.
-
ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಮಂಗಳೂರಿನ ಆಳ ಸಮುದ್ರದಲ್ಲಿ ಐಎಫ್‌ಬಿ ಮಂಜುಮಾತಾ ಮೀನುಗಾರಿಕಾ ಬೋಟ್ ಒಂದು ಮುಳುಗಿ ಅವಘಡ ಸಂಭವಿಸಿದೆ. ಸದ್ಯ ಭಾರತೀಯ ಕರಾವಳಿ ರಕ್ಷಣಾ ಪಡೆ ಆರು ಜನ ಮೀನುಗಾರರ ರಕ್ಷಣೆ ಮಾಡಿದೆ. Indian Coast Guardಗೆ ಸೇರಿದ ಐಸಿಜಿಎಸ್ ಸಚೇತ್ (ICGS Sachet) ಹಡಗಿನಿಂದ ರಕ್ಷಣಾ ಕಾರ್ಯ ನೆರವೇರಿದೆ. ಪ್ರಕ್ಷುಬ್ಧ ವಾತಾವರಣ ಹಿನ್ನೆಲೆ ಸಮುದ್ರದಲ್ಲಿ ಅವಘಡ ನಡೆದು ಬೋಟ್ಗೆ ನೀರು ನುಗ್ಗಿ ಅನಾಹುತವಾಗಿದೆ.
-
ಉಚಿತ ಸಮವಸ್ತ್ರವೇ ಹೊರೆ!
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಸಮವಸ್ತ್ರವೇ ಈಗ ಹೊರೆಯಾಗಿ ಪರಿಣಮಿಸಿದೆ. ಅದಕ್ಕೆ ಕಾರಣ, ಹೊಲಿಗೆ ವೆಚ್ಚವೇ ಹೆಚ್ಚಾಗಿರುವುದು. ಪ್ರಸ್ತುತ ಬೆಂಗಳೂರಿನಲ್ಲಿ ಒಂದು ಜೊತೆ ಶರ್ಟ್ ಹಾಗೂ ಪ್ಯಾಂಟ್ ಅಥವಾ ಚಡ್ಡಿ ಹೊಲಿಸಲು ಕನಿಷ್ಠ 1,300 ರಿಂದ 1,500 ರೂಪಾಯಿಗೂ ಅಧಿಕ ಹಣವಿದೆ. ಹೀಗಾಗಿ, ಬಟ್ಟೆ ಕೊಡುವ ಬದಲು ನಮಗೆ ದುಡ್ಡು ಕೊಟ್ಟರೆ ರೆಡಿಮೇಡ್ ಬಟ್ಟೆಯೇ ಖರೀದಿಸುತ್ತೇವೆ ಎಂಬ ಮಾತು ಪೋಷಕರಿಂದ ಕೇಳಿಬಂದಿದೆ.
ಪೋಷಕರಿಗೆ ಉಚಿತ ಸಮವಸ್ತ್ರವೇ ಹೊರೆ!#GovernmentSchool #SchoolUniform #BengaluruNews #EducationDepartmenthttps://t.co/peGYwLfP7X
— TV9 Kannada (@tv9kannada) June 30, 2026
-
ಪ್ಯಾರಿಸ್‌ನಲ್ಲಿ ಸುದೀಪ್ ‘ಈಗ’ ಚಿತ್ರಕ್ಕೆ ಭಾರಿ ಪ್ರಶಂಸೆ
ಕಿಚ್ಚ ಸುದೀಪ್ ಅಭಿನಯದ ‘ಈಗ’ ಚಿತ್ರದ ದೃಶ್ಯವೊಂದಕ್ಕೆ ಪ್ಯಾರಿಸ್‌ನಲ್ಲಿ ಪ್ರೇಕ್ಷಕರು ಹುಚ್ಚೆದ್ದು ಸಂಭ್ರಮಿಸಿದ್ದಾರೆ. ಪ್ಯಾರಿಸ್‌ನಲ್ಲಿ ‘ಈಗ’ ಸಿನಿಮಾದ ಪ್ರದರ್ಶನ ನಡೆದಿದ್ದು, ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಫ್ರೆಂಚ್ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮತ್ತಷ್ಟು ಓದಿ
-
ಭಾರತ vs ಇಂಗ್ಲೆಂಡ್ ಟಿ20 ಸರಣಿ ನಾಳೆಯಿಂದ ಶುರು
ಭಾರತ vs ಇಂಗ್ಲೆಂಡ್ ಟಿ20 ಸರಣಿ ಜುಲೈ ಒಂದರಿಂದ ಶುರುವಾಗಲಿದೆ. ಇದೇ ಸಂದರ್ಭದಲ್ಲಿ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಮಾಜಿ ನಾಯಕ ಸುನಿಲ್ ಗಾವಸ್ಕರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಗೆ ಪೆಡ್ಲರ್ಸ್ ಮೈದಾನದಲ್ಲಿ ಆಡಲು ಅವಕಾಶ ನೀಡದಿರುವುದು ಮ್ಯಾನೇಜ್‌ಮೆಂಟ್ ಮಾಡಿದ “ದೊಡ್ಡ ತಪ್ಪು” ಎಂದು ಗಾವಸ್ಕರ್ ಗುಡುಗಿದ್ದಾರೆ. ಮತ್ತಷ್ಟು ಓದಿ
-
ಇಂದಿನಿಂದ ಕರ್ನಾಟಕದಾದ್ಯಂತ SIR ಆರಂಭ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಇಂದಿನಿಂದ (ಜೂನ್ 30) ಶುರುವಾಗಿದೆ. ಜುಲೈ 29ರವರೆಗೆ ಮೊದಲ ಹಂತದ ಪ್ರಕ್ರಿಯೆ ನಡೆಯಲಿದೆ. ಮತ್ತಷ್ಟು ಓದಿ
ಕರ್ನಾಟಕದಲ್ಲಿ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಪಾರದರ್ಶಕತೆಗಾಗಿ ಚುನಾವಣಾ ಆಯೋಗ ಹಾಗೂ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿವೆ. ಬೆಂಗಳೂರಿನಲ್ಲಿ ಸಾರ್ವಜನಿಕರ ನೆರವಿಗಾಗಿ ಕಂಟ್ರೋಲ್ ರೂಂ, ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯಾದ್ಯಂತ ಇದೇ ಕ್ರಮ ಅನುಸರಿಸಲಾಗುವುದು ಎಂದು ಆಯೋಗ ತಿಳಿಸಿದೆ. ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ವೈರಲ್ ಆಗಿರುವ ಆಡಿಯೋ ಬಿಸಿಬಿಸಿ ರಾಜಕೀಯ ಚರ್ಚೆಗಳಿಗೆ ಗ್ರಾಸವಾಗಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ, ವೆನೆಜುವೆಲಾದ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,719ಕ್ಕೆ ಏರಿಕೆಯಾಗಿದೆ. ಪ್ಯಾರಿಸ್‌ನಲ್ಲಿ ಸುದೀಪ್ ‘ಈಗ’ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದರೆ, ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ನಾಳೆಯಿಂದ (ಜುಲೈ 1) ಶುರುವಾಗಲಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಲೇಟೆಸ್ಟ್ ಅಪ್ಡೇಟ್ಸ್ಗಾಗಿ ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Published On - Jun 30,2026 9:17 AM




